ಮುಂಬೈ: NCP ಹಿರಿಯ ನಾಯಕ, ರಾಜ್ಯ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ನವಾಬ್ ಮಲಿಕ್ ಭೂಗತ ಜಗತ್ತಿನೊಂದಿಗೆ ಸಂಪರ್ಕ ಹೊಂದಿದ್ದಾರೆ ಎಂದು ಮಹಾರಾಷ್ಟ್ರದ ವಿರೋಧ ಪಕ್ಷದ ನಾಯಕ ದೇವೇಂದ್ರ ಫಡ್ನವಿಸ್ ಗಂಭೀರ ಆರೋಪ ಹೊರಿಸಿದ್ದಾರೆ.
ಈ ಸಂಬಂಧ ಅಧಿಕೃತ ಅಧಿಕಾರಿಗಳಿಗೆ ಸೂಕ್ತ ದಾಖಲೆಗಳನ್ನು ಸಲ್ಲಿಸಲಾಗುವುದು ಮತ್ತು ಸಮಗ್ರ ತನಿಖೆಗೆ ಒತ್ತಾಯಿಸಲಾಗುವುದೆಂದು ತಿಳಿಸಿದ್ದಾರೆ.
ಪಾಕಿಸ್ತಾನದ ನಿಯಂತ್ರಣದಲ್ಲಿರುವ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಗ್ಯಾಂಗ್ ನೊಂದಿಗೆ ಸಂಪರ್ಕದಲ್ಲಿರುವ ಸರ್ದಾರ್ ಶಾ ವಾಲಿ ಖಾನ್, ಮುಹಮ್ಮದ್ ಸಲೀಮ್ ಇಶಾಕ್ ಪಟೇಲ್ ಅಲಿಯಾಸ್ ಸಲೀಮ್ ಪಟೇಲ್ ಎಂಬವರೊಂದಿಗೆ ನವಾಬ್ ಮಲಿಕ್ ನಂಟು ಹೊಂದಿದ್ದಾರೆ ಎಂದು ಅವರು ಗಂಭೀರವಾಗಿ ಆರೋಪಿಸಿದ್ದಾರೆ.
ಸರ್ದಾರ್ ಖಾನ್ ಮಾರ್ಚ್ 12, 1993 ರ ಸ್ಫೋಟದ ಮಾಸ್ಟರ್ ಮೈಂಡ್ ಟ್ರೈಗರ್ ಮೆಮನ್ ಅವರ ನಿಕಟವರ್ತಿಯಾಗಿದ್ದರು ಮತ್ತು ವಿಶೇಷ ಟಾಡಾ ನ್ಯಾಯಾಲಯದಿಂದ ಜೀವಾವಧಿ ಶಿಕ್ಷೆಗೊಳಗಾಗಿದ್ದರು. ಇದನ್ನು ಸುಪ್ರೀಮ್ ಕೋರ್ಟ್ ಎತ್ತಿಹಿಡಿದಿತ್ತು. ಸಲೀಮ್ ಪಟೇಲ್ ದಾವೂದ್ ಇಬ್ರಾಹಿಂ ನ ದಿವಂಗತ ಸಹೋದರಿ ಹಸೀನಾ ಪರ್ಕರ್ ಅವರ ಅಂಗರಕ್ಷಕ ಮತ್ತು ಚಾಲಕರಾಗಿದ್ದರು.
ಸಾಲಿಡಸ್ ಇನ್ವೆಸ್ಟ್ ಮೆಂಟ್ ಎಂಬ ಕಂಪೆನಿ ನವಾಬ್ ಮಲಿಕ್ ಸೇರಿದ್ದು, ಭೂಗತ ಪಾತಕಿಗಳಿಂದ ಭೂಮಿಯನ್ನು ಖರೀದಿಸಲಾಗಿದೆ. ಕುರ್ಲಾದ ಎಲ್.ಬಿ.ಎಸ್ ರಸ್ತೆಯಲ್ಲಿ ಸುಮಾರು 3 ಎಕ್ರೆ ಭೂಮಿಯನ್ನು ಕೇವಲ 20 ಲಕ್ಷಕ್ಕೆ ಖರೀದಿಸಲಾಗಿದೆ. ಇಂದು ಅದರ ಮೌಲ್ಯ 3 ಕೋಟಿ ಎಂದು ಫಡ್ನವಿಸ್ ತಿಳಿಸಿದ್ದಾರೆ.
ಈ ಸಂಬಂಧ ಎನ್.ಸಿ.ಪಿ ಮುಖ್ಯಸ್ಥ ಶರದ್ ಪವಾರ್ ಅವರಿಗೆ ದಾಖಲೆಗಳನ್ನು ಹಸ್ತಾಂತರಿಸುವುದಾಗಿ ಫಡ್ನವಿಸ್ ತಿಳಿಸಿದ್ದಾರೆ.
ಫಡ್ನವಿಸ್ ಅವರ ಈ ಗಂಭೀರ ಆರೋಪದ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನವಾನ್ ಮಲಿಕ್ ಮಾಜಿ ಮುಖ್ಯಮಂತ್ರಿಯ ಹೇಳಿಕೆ ನಿರಾಧಾರ ಎಂದು ಬಣ್ಣಿಸಿದ್ದಾರೆ .
ನವಾಬ್ ಮಲಿಕ್ ಅವರು ಆಯೋಜಿಸಿದ ಸುದ್ದಿಗೋಷ್ಠಿಯ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.