ನವದೆಹಲಿ: ಪ್ರಧಾನಿ ಮೋದಿ ಯನ್ನು ‘ರಾವಣ’ ಎಂದು ಸಂಬೋಧಿಸಿದ ತಮ್ಮ ಹೇಳಿಕೆಯನ್ನು ಬಿಜೆಪಿ ರಾಜಕೀಯ ಲಾಭಕ್ಕಾಗಿ ದುರುಪಯೋಗ ಪಡಿಸಿಕೊಳ್ಳುತ್ತಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದ್ದಾರೆ.
ಈ ಕುರಿತು ಮಾಡಿದ ಅವರು, ಬಿಜೆಪಿ ಮತ್ತು ಪ್ರಧಾನಿಯವರ ರಾಜಕೀಯ ಶೈಲಿಯು ಪ್ರಜಾಪ್ರಭುತ್ವದ ಮನೋಭಾವವನ್ನು ಹೊಂದಿರುವುದಿಲ್ಲ. ಅವರ ಪ್ರಚಾರದ ಶೈಲಿಯ ಬಗ್ಗೆ ನಾನು ಹಲವಾರು ಉದಾಹರಣೆಗಳನ್ನು ನೀಡಿದ್ದೇನೆ. ಅವರು ಗುಜರಾತ್ ಚುನಾವಣಾ ಲಾಭಕ್ಕಾಗಿ ನನ್ನ ಹೇಳಿಕೆಯನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ನಾನು ಯಾವುದೇ ವ್ಯಕ್ತಿಯ ಬಗ್ಗೆ ಪ್ರತಿಕ್ರಿಯಿಸುವುದಿಲ್ಲ ಅಥವಾ ವೈಯಕ್ತಿಕ ಟೀಕೆಗಳನ್ನು ಮಾಡುವುದಿಲ್ಲ. ಏಕೆಂದರೆ, ನನಗೆ 51 ವರ್ಷಗಳ ಸಂಸದೀಯ ರಾಜಕೀಯದ ಅನುಭವವಿದೆ. ನಾನು ಅಭಿವೃದ್ಧಿ, ಹಣದುಬ್ಬರ, ನಿರುದ್ಯೋಗ, ಬಡತನದ ವಿಷಯಗಳ ಬಗ್ಗೆ ಬಿಜೆಪಿ ಸರ್ಕಾರವನ್ನು ಟೀಕಿಸಿದ್ದೇನೆ ಎಂದರು.
ರಾಜಕೀಯವೆಂಬುದು ವೈಯಕ್ತಿಕವಾಗಿ ನಡೆಯುವಂತಹದ್ದಲ್ಲ, ಪಾಲಿಸಿಗಳ ಆಧಾರದ ಮೇಲೆ ನಡೆಯುವಂತಹದ್ದು ಎಂದು ಅವರು ಹೇಳಿದ್ದಾರೆ.
ಗುಜರಾತ್ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷದ (ಎಎಪಿ) ನಿರೀಕ್ಷೆಗಳ ಕುರಿತು ಮಾತನಾಡಿದ ಅವರು, ಕಾಂಗ್ರೆಸ್ನ ಮತಗಳನ್ನು ವಿಭಜಿಸಲು ಯಾರದ್ದೋ ಇಚ್ಛೆಯ ಮೇರೆಗೆ ಅದು ಕೆಲಸ ಮಾಡುತ್ತಿದೆ ಎಂದು ಆರೋಪಿಸಿದರು.
ಇತ್ತೀಚಿಗೆ ಅಹಮದಾಬಾದ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ, ಎಲ್ಲಾ ಚುನಾವಣೆಗಳಲ್ಲಿ ತಮ್ಮ ಮುಖವನ್ನು ನೋಡಿಕೊಂಡು ಮತ ಚಲಾಯಿಸುವಂತೆ ಪ್ರಧಾನಿ ಮೋದಿ ಕೇಳುತ್ತಾರೆ. ಹಾಗಾದರೆ, ನೀವು ರಾವಣನಂತೆ 100 ತಲೆಯುಳ್ಳವರಾ? ಎಂದು ಖರ್ಗೆ ಪ್ರಶ್ನಿಸಿದ್ದರು.
ಪ್ರಧಾನಿ ಬಗ್ಗೆ ಖರ್ಗೆಯವರ ಈ ಹೇಳಿಕೆ ಇಡೀ ಗುಜರಾತಿಗರಿಗೆ ಮಾಡಿದ ಅಪಮಾನ ಎಂದು ಬಿಜೆಪಿ ಆಪಾದಿಸಿತ್ತು.