ಲಖಿಂಪುರ ಖೇರಿ ಅತ್ಯಾಚಾರ, ಕೊಲೆ ಪ್ರಕರಣಕ್ಕೆ ಬಿಜೆಪಿ, ಆರೆಸ್ಸೆಸ್ ಕೋಮು ಬಣ್ಣ ನೀಡುತ್ತಿದೆ: ಕಾಂಗ್ರೆಸ್ ಆರೋಪ

Prasthutha|

ನವದೆಹಲಿ: ಉತ್ತರ ಪ್ರದೇಶದ ಲಖಿಂಪುರ ಖೇರಿಯಲ್ಲಿ ದಲಿತ ಸಹೋದರಿಯರಿಬ್ಬರ ಮೇಲಿನ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಬಿಜೆಪಿ ಮತ್ತು ಆರೆಸ್ಸೆಸ್ ಕೋಮುಬಣ್ಣ ನೀಡುತ್ತಿದೆ ಎಂದು ಆರೋಪಿಸಿದ ಕಾಂಗ್ರೆಸ್, ಈ ಪ್ರಕರಣದಲ್ಲಿ ಶೀಘ್ರವಾಗಿ ನ್ಯಾಯ ದೊರಕಿಸಿಕೊಡುವಂತೆ ಆಗ್ರಹಿಸಿದೆ.

- Advertisement -

ಎಸ್.ಸಿ/ ಎಸ್.ಟಿ ಕಾಯ್ದೆಯನ್ನು ಮೋದಿ ಸರ್ಕಾರವು ಪೂರ್ಣ ಪ್ರಮಾಣದಲ್ಲಿ ಜಾರಿಗೊಳಿಸಬೇಕು ಎಂದು ವಿಪಕ್ಷ ಒಕ್ಕೊರಳಿನಿಂದ ಆಗ್ರಹಿಸಿದೆ.

ಈ ಕುರಿತು ಕಾಂಗ್ರೆಸ್’ನ ಪ್ರಧಾನ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪಕ್ಷದ ಪರಿಶಿಷ್ಠ ಜಾತಿ ವಿಭಾಗದ ಮುಖ್ಯಸ್ಥ ರಾಜೇಶ್ ಲಿಲೋಥಿಯಾ, ಇಬ್ಬರು ಸಹೋದರಿಯರ ಅತ್ಯಾಚಾರ, ಹತ್ಯೆಯನ್ನು ಪ್ರತ್ಯೇಕ ಘಟನೆಯಾಗಿ ನೋಡಬಾರದು ಮತ್ತು ದಲಿತರ ಮೇಲಿನ ದೌರ್ಜನ್ಯಗಳು ಹೆಚ್ಚುತ್ತಿವೆ ಎಂದು ಆರೋಪಿಸಿದರು.

- Advertisement -

ಇಬ್ಬರು ಹದಿಹರೆಯದ ಸಹೋದರಿಯರು ತಮ್ಮ ಮನೆಯಿಂದ ಒಂದು ಕೀ.ಮೀ ದೂರದಲ್ಲಿರುವ ಕಬ್ಬಿನ ತೋಟದಲ್ಲಿ ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಈ ಇಬ್ಬರು ಬಾಲಕಿಯರನ್ನು ಅತ್ಯಾಚಾರ ನಡೆಸಿದ ಬಳಿಕ ಕೊಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶ ಪೊಲೀಸರು ಆರು ಮಂದಿಯನ್ನು ಬಂಧಿಸಿದ್ದರು.

2021ರವರೆಗೆ ದಲಿತರ ಮೇಲಿನ ದೌರ್ಜನ್ಯದ 70,818 ಪ್ರಕರಣಗಳು ತನಿಖೆಗೆ ಬಾಕಿ ಉಳಿದಿದೆ ಎಂದು ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋದ ಅಂಕಿಅಂಶಗಳು ಬಹಿರಂಗಪಡಿಸಿವೆ ಎಂದು ಅವರು ತಿಳಿಸಿದ್ದಾರೆ.

ಒಂದೆಡೆ ಮೋದಿ ಸರ್ಕಾರ ದಲಿತರ ಕಲ್ಯಾಣಕ್ಕಾಗಿ ಕೆಲಸ ಮಾಡುತ್ತಿದೆ ಎಂದು ಬೊಗಳೆ ಬಿಡುತ್ತಿದೆ. ಮತ್ತೊಂದೆಡೆ ದಲಿತರ ಮೇಲಿನ ದೌರ್ಜನ್ಯಗಳ ಅಂಕಿಅಂಶಗಳು ನಮ್ಮ ಮುಂದೆ ಇದೆ ಎಂದು ಲಿಲೋಥಿಯಾ ತಿಳಿಸಿದ್ದಾರೆ.

2020 ರ ಹತ್ರಾಸ್ ಅತ್ಯಾಚಾರ ಪ್ರಕರಣದಲ್ಲಿ ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ಸರ್ಕಾರವು ನ್ಯಾಯ ಒದಗಿಸಿಲ್ಲ ಎಂದು ಕಾಂಗ್ರೆಸ್ ನಾಯಕ ಆರೋಪಿಸಿದ್ದಾರೆ.

Join Whatsapp