ಜನಸಂಖ್ಯೆ ಕುರಿತು ಬಿಜೆಪಿ-ಆರೆಸ್ಸೆಸ್ ಸುಳ್ಳು ಪ್ರಚಾರ; ನಿಜವಾಗಿ ಭಾರತದಲ್ಲಿ ಮುಸ್ಲಿಂ ಜನಸಂಖ್ಯೆ ಕಡಿಮೆಯಾಗುತ್ತಿದೆ: ದಿಗ್ವಿಜಯ ಸಿಂಗ್

Prasthutha|

ಭೋಪಾಲ್: ಮುಸ್ಲಿಂ ಜನಸಂಖ್ಯೆ ಹೆಚ್ಚುತ್ತಿರುವುದಾಗಿಯೂ, ಹಿಂದೂ ಜನಸಂಖ್ಯೆ ಕಡಿಮೆಯಾಗುತ್ತಿರುವುದಾಗಿಯೂ ಬಿಜೆಪಿ ಮತ್ತು ಆರೆಸ್ಸೆಸ್ ಮಾಡುತ್ತಿರುವ ಪ್ರಚಾರ ಹಸಿ ಸುಳ್ಳು. ನಿಜವಾಗಿ ಭಾರತದಲ್ಲಿ ಮುಸ್ಲಿಮರ ಜನಸಂಖ್ಯೆ ಕಡಿಮೆ ಆಗುತ್ತಿದೆ ಎಂದು ಕಾಂಗ್ರೆಸ್ ನಾಯಕ, ಮಧ್ಯ ಪ್ರದೇಶದ ಮಾಜಿ ಮುಖ್ಯಮಂತ್ರಿ ದಿಗ್ವಿಜಯ ಸಿಂಗ್ ಹೇಳಿದ್ದಾರೆ.

- Advertisement -


ಆಳುವ ಬಿಜೆಪಿಯವರು ಇದನ್ನು ಖಂಡಿಸಿ ದಿಗ್ವಿಜಯರು ಸುಳ್ಳು ಹೇಳುತ್ತ ತುಷ್ಟೀಕರಣ ರಾಜಕೀಯದಲ್ಲಿ ತೊಡಗಿದ್ದಾರೆ ಎಂದು ಹೇಳಿದ್ದಾರೆ.
ಮಧ್ಯ ಪ್ರದೇಶದ ಸಾಗರದಲ್ಲಿ ದಿಗ್ವಿಜಯ ಸಿಂಗ್ ಅವರು ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸುತ್ತ ಹೀಗೆ ಹೇಳಿದರು.
“ಮುಸ್ಲಿಂ ಜನಸಂಖ್ಯೆ ಹೆಚ್ಚುತ್ತಿರುವುದಾಗಿ ಬಿಜೆಪಿ ಮತ್ತು ಆರೆಸ್ಸೆಸ್ ಮಾಡುತ್ತಿರುವ ಪ್ರಚಾರವು ಬರೇ ಸುಳ್ಳು, ತಪ್ಪು ಮತ್ತು ವಿಶ್ಲೇಷಣೆ ಮಾಡಿದ್ದಲ್ಲ. ಭಾರತದಲ್ಲಿ ಹಿಂದೂಗಳಿಗಿಂತ ಅಲ್ಪಸಂಖ್ಯಾತರ ಸಂಖ್ಯೆಯು ಗಣನೀಯವಾಗಿ ಇಳಿಯುತ್ತಿದೆ. ನಾನಿದನ್ನು ದೃಢೀಕರಿಸಬಲ್ಲೆ” ಎಂದು ದಿಗ್ವಿಜಯ್ ಸವಾಲು ಹಾಕಿದ್ದಾರೆ.


“ಜನಗಣತಿಯ ಅಂಕಿ ಅಂಶಗಳನ್ನು ಹೊರಗಿಡುವಾಗ ಓಬಿಸಿ- ಇತರೆ ಹಿಂದುಳಿದ ವರ್ಗಗಳವರೊಂದಿಗೆ ಪರಸ್ಪರ ತುಲನೆಯನ್ನೂ ಹೇಳಬೇಕು ಎನ್ನುವುದು ನನ್ನ ನಿಲುವು. ಈಗಲೂ ಬರೇ 2011ರ ಜನಗಣತಿಯ ಮೇಲ್ನೋಟದ ಅಂಕಿ ಮಾತ್ರ ಲಭ್ಯವಿದೆ. ಅನಂತರದ ಇಲ್ಲವೇ ಈಗಿನ ಸೆನ್ಸಸ್ ನ ಮಾಹಿತಿ ಹೊರಗಿಟ್ಟಿಲ್ಲ. ಸರಿಯಾದ ಜನಗಣತಿ ಆಗಬೇಕಾಗಿದೆ” ಎಂದು ಮಾಜಿ ಮುಖ್ಯಮಂತ್ರಿ ಹೇಳಿದರು.
ಜಾತೀವಾರು ಜನಗಣತಿ ಅಗತ್ಯ ಎಂದು ಕಾಂಗ್ರೆಸ್ ಪಕ್ಷವು ತನ್ನ ಪ್ರಣಾಳಿಕೆಯಲ್ಲಿ ಕೇಳುತ್ತದೆಯೇ ಎಂದು ಪತ್ರಕರ್ತರು ಕೇಳಿದಾಗ ದಿಗ್ವಿಜಯ್ ಸಿಂಗ್, ಅದರ ಅಗತ್ಯ ಇಲ್ಲ. ಅದು ಕಾನೂನು ನಿಯಮಾವಳಿಯಲ್ಲೇ ಇದೆ ಎಂದರು.
ಬಿಹಾರದ ಜಾತಿ ಆಧಾರಿತ ಜನಗಣತಿ ಬಗ್ಗೆ ಕೇಳಲಾಗಿ ದಿಗ್ವಿಜಯ್, ಅದು ದೇಶ ಮಟ್ಟದಲ್ಲಿ ಆಗಬೇಕು ಎಂದರು.

- Advertisement -


ದಿಗ್ವಿಜಯ್ ಸಿಂಗ್ ಸಮಾಜ ಒಡೆಯುತ್ತಿದ್ದಾರೆ, ಸುಳ್ಳು ಹೇಳಿ ಮೆಚ್ಚಿಸುವ ರಾಜಕೀಯ ಮಾಡುತ್ತಿದ್ದಾರೆ ಎಂದು ಮಧ್ಯಪ್ರದೇಶದ ವೈದ್ಯಕೀಯ ಶಿಕ್ಷಣ ಸಚಿವ ವಿಶ್ವಾಸ್ ಸಾರಂಗ್ ಟೀಕಿಸಿದ್ದಾರೆ.
“ಯಾವ ಮತ ರಾಜಕೀಯವೂ ಇಲ್ಲ. ಕಾಂಗ್ರೆಸ್ ಪಕ್ಷವು 1952ರಿಂದಲೂ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಜನಸಾಮಾನ್ಯರ ಏಳಿಗೆಯ ಕೆಲಸ ಮಾಡುತ್ತಲೇ ಇದೆ. ಯಾವುದೇ ಒಂದು ವರ್ಗಕ್ಕಾಗಿ ಕಾಂಗ್ರೆಸ್ ಇಲ್ಲ” ಎಂದೂ ದಿಗ್ವಿಜಯರು ತಿರುಗೇಟು ನೀಡಿದರು.


ರಾಜ್ಯ ಸಭಾ ಸದಸ್ಯರೂ ಆದ ದಿಗ್ವಿಜಯ ಸಿಂಗ್ ಅವರು, ಸೂಕ್ಷ್ಮ ವಿಷಯಗಳ ಬಗ್ಗೆ ಪ್ರಧಾನಿ ಮೋದಿಯವರ ಮೌನವನ್ನು ಪ್ರಶ್ನಿಸಿದರು. ಒಬ್ಬ ಕ್ರಿಕೆಟ್ ಆಟಗಾರ ಕೈ ಗಾಯ ಮಾಡಿಕೊಂಡರೆ ಬೊಬ್ಬೆಯಿಡುವ ಪ್ರಧಾನಿಯವರು ಇಡೀ ದೇಶವನ್ನು ಕೆಡಿಸುತ್ತಿರುವ ದ್ವೇಷ ಭಾಷಣ, ದ್ವೇಷ ಹರಡುವಿಕೆ ಬಗ್ಗೆ ಬಾಯಿ ತೆರೆಯುತ್ತಿಲ್ಲ ಏಕೆ ಎಂದು ದಿಗ್ವಿಜಯ್ ಪ್ರಶ್ನಿಸಿದರು.
ಈ ವರುಷಾಂತ್ಯದ ಮಧ್ಯ ಪ್ರದೇಶದ ವಿಧಾನ ಸಭಾ ಚುನಾವಣೆ ಮತ್ತು ಮುಂದಿನ ವರ್ಷದ ಲೋಕ ಸಭಾ ಚುನಾವಣೆ ಪಕ್ಷಕ್ಕೆ ಕಠಿಣವೇ ಎಂಬ ಪ್ರಶ್ನೆ ಎದುರಾಯಿತು. ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಮಾತ್ರ ಪೈಪೋಟಿ ಇದೆ. ಬಿಎಸ್ ಪಿ, ಎಐಎಂಐಎಂ, ಗೋಂಡ್ವಾನ ಗಣತಂತ್ರ ಪಕ್ಷ, ಎಎಪಿ ಇವೆಲ್ಲ ಪಕ್ಷಗಳು ಬಿಜೆಪಿಗೆ ಒಳಗಿಂದೊಳಗೆ ಸಹಾಯ ಮಾಡಲು ಸ್ಪರ್ಧೆಯಲ್ಲಿವೆ” ಎಂದೂ ಅವರು ಹೇಳಿದರು.
“ಅವುಗಳಿಗೆ ಅಧಿಕಾರ ದಕ್ಕದು. ಕಾಂಗ್ರೆಸ್ ಬಿಜೆಪಿ ನಡುವೆ ಹೋರಾಟ ಇದೆ ಅಷ್ಟೆ.” ಎಂದು ಹೇಳಿದರು.


ಜ್ಯೋತಿರಾಧಿತ್ಯ ಸಿಂಧ್ಯಾ ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರಿ ಕೇಂದ್ರದಲ್ಲಿ ಮಂತ್ರಿ ಆಗಿರುವುದರಿಂದ ಕಾಂಗ್ರೆಸ್ ದುರ್ಬಲ ಆಗಿಲ್ಲವೆ ಎಂದು ಪತ್ರಕರ್ತರು ಪ್ರಶ್ನಿಸಿದರು.
“ಆತ ಪಕ್ಷ ಬಿಟ್ಟ ಮೇಲೆ ಪಕ್ಷದಲ್ಲಿ ಶಾಂತಿ ಮತ್ತು ಒಗ್ಗಟ್ಟು ಇದೆ. ಈಗ ಬಿಜೆಪಿಯಲ್ಲಿ ಅಶಾಂತಿ ಮತ್ತು ಒಳ ಬಿರುಕು ಇದೆ.” ಎಂದ ದಿಗ್ವಿಜಯ್, ಮಧ್ಯ ಪ್ರದೇಶದ ಮುಖ್ಯಮಂತ್ರಿ ಶಿವರಾಜ ಸಿಂಗ್ ಚೌಹಾಣರನ್ನು ಟೀಕಿಸಿ “ಇಷ್ಟು ದಿನ ಜನರಿಗೆ ಏನೂ ಮಾಡದ ಬಿಜೆಪಿಯು ಈಗ ಚುನಾವಣೆ ಬರುವಾಗ ಲಾಡ್ಲಿ ಬೆಹನಾ ಮೊದಲಾದ ಕಾರ್ಯಕ್ರಮ ತರುತ್ತಿರುವುದೇಕೆ” ಎಂದು ಕೇಳಿದರು.
“ಇದು ಚೌಹಾಣರ ನಾಟಕ. ಉದ್ದ ಭಾಷಣ ಬಿಗಿಯುವುದು, ಘೋಷಣೆ ಮಾಡುವುದು ಅಷ್ಟೆ” ಎಂದೂ ಅವರು ಹಾಲಿ ಮುಖ್ಯಮಂತ್ರಿಯನ್ನು ಟೀಕಿಸಿದರು.



Join Whatsapp