ಮೈಸೂರು: ‘ಕೋಮು ಗಲಭೆಗಳಿಗೆ ಬಿಜೆಪಿಯವರೇ ಕಾರಣ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಿಸಿದರು.
ಇಲ್ಲಿನ ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ಪತ್ರಕರ್ತರೊಂದಿಗೆ ಶುಕ್ರವಾರ ಮಾತನಾಡಿದ ಅವರು, ‘ಬಿಜೆಪಿಯವರ ಪ್ರಚೋದನೆ ಕಾರಣದಿಂದಲೇ ಗಲಾಟೆಗಳು ನಡೆಯುತ್ತಿವೆ’ ಎಂದು ದೂರಿದರು.
‘ರಾಜ್ಯದಲ್ಲಿ 60ಸಾವಿರ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿತ್ತು. ಇದುವರೆಗೆ ಎರಡು ಕಡೆಯಷ್ಟೆ ಗಲಾಟೆ ನಡೆದಿದೆ. ದಾವಣಗೆರೆಯಲ್ಲಿ ಕಲ್ಲು ತೂರಾಟವಷ್ಟೆ ಆಗಿದೆ. ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ಅಂಗಡಿಗಳನ್ನು ಸುಟ್ಟು ಹಾಕಿದ್ದಾರೆ. ಆ ಘಟನೆಗಳ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ತಿಳಿಸಿದ್ದೇನೆ. ಮುಂಜಾಗ್ರತೆ ವಹಿಸುವಂತೆಯೂ ಸೂಚಿಸಿದ್ದೇನೆ. ನಾಗಮಂಗಲ ಗಲಭೆಗೆ ಸಂಬಂಧಿಸಿದಂತೆ ಅಲ್ಲಿನ ಡಿವೈಎಸ್ಪಿ ಹಾಗೂ ಇನ್ಸ್ಪೆಕ್ಟರ್ ಅಮಾನತು ಮಾಡಿದ್ದೇವೆ’ ಎಂದು ತಿಳಿಸಿದರು.
‘ಒಕ್ಕಲಿಗ ಸಮುದಾಯದ ಸಚಿವರು, ಕಾಂಗ್ರೆಸ್ ಶಾಸಕರ ನಿಯೋಗ ಬೆಂಗಳೂರಿನಲ್ಲಿ ಶುಕ್ರವಾರ ನನ್ನನ್ನು ಭೇಟಿಯಾಗಿ, ಶಾಸಕ ಮುನಿರತ್ನ ಅವರ ವಿರುದ್ಧ ದಾಖಲಾಗಿರುವ ಮೂರು ಪ್ರಕರಣಗಳ ತನಿಖೆಗೆ ಪೊಲೀಸರ ವಿಶೇಷ ತನಿಖಾ ತಂಡ (ಎಸ್ಐಟಿ) ರಚಿಸುವಂತೆ ಮನವಿ ಸಲ್ಲಿಸಿದ್ದಾರೆ. ಗೃಹ ಸಚಿವ ಜಿ.ಪರಮೇಶ್ವರ್ ಅವರೊಂದಿಗೆ ಚರ್ಚಿಸಿ ನಿರ್ಧಾರ ಕೈಗೊಳ್ಳುತ್ತೇವೆ ಎಂದು ಅವರಿಗೆ ತಿಳಿಸಿದ್ದೇನೆ’ ಎಂದು ಪ್ರತಿಕ್ರಿಯಿಸಿದರು.
‘ಕಾನ್ಸ್ಟೆಬಲ್ ನೇಮಕಾತಿ ವೇಳೆ ವಯೋಮಿತಿ ಹೆಚ್ಚಿಸುವಂತೆ (27 ವರ್ಷದಿಂದ 33 ವರ್ಷಕ್ಕೆ) ಬೇಡಿಕೆ ಬಂದಿರುವ ಬಗ್ಗೆ ‘ಒಂದು ಬಾರಿ ಅವಕಾಶ ಕೊಡುವ ನಿರ್ಧಾರ’ ಮಾಡುವಂತೆ ಗೃಹ ಸಚಿವರಿಗೆ ಸೂಚಿಸಿದ್ದೇನೆ. ಗೆಜೆಟೆಡ್ ಪ್ರೊಬೇಷನರಿ 384 ಹುದ್ದೆಗಳ ನೇಮಕಾತಿಗೆ ಎರಡು ತಿಂಗಳ ಒಳಗೆ ಮರು ಪರೀಕ್ಷೆ ನಡೆಸುವಂತೆ ಕರ್ನಾಟಕ ಲೋಕಸೇವಾ ಆಯೋಗಕ್ಕೆ (ಕೆಪಿಎಸ್ಸಿ) ತಿಳಿಸಿದ್ದೇನೆ. ಈ ಹುದ್ದೆಗಳ ನೇಮಕಾತಿಗೆ ನಡೆದ ಪೂರ್ವಭಾವಿ ಪರೀಕ್ಷೆ ವೇಳೆ, ಪ್ರಶ್ನೆಪತ್ರಿಕೆಗಳನ್ನು ಇಂಗ್ಲಿಷ್ನಿಂದ ಕನ್ನಡಕ್ಕೆ ಅನುವಾದ ಮಾಡುವಾಗ ಹಲವು ತಪ್ಪುಗಳು ಆಗಿದ್ದವು. ಆದ್ದರಿಂದ ಮರು ಪರೀಕ್ಷೆ ನಡೆಸುವಂತೆ ಹೇಳಿದ್ದೇನೆ’ ಎಂದು ಪ್ರತಿಕ್ರಿಯಿಸಿದರು.