ಬೆಂಗಳೂರು, ಜು 26: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಬಿಜೆಪಿ ನಾಯಕರು ಹಿಂದಿನಿಂದ ಇರಿದಿದ್ದಾರೆ. ಅವರ ಬೆನ್ನಿಗೆ ಚೂರಿ ಹಾಕುವ ಕೆಲಸ ಮಾಡಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಸಚಿವ ಕೆ.ಎಸ್. ಈಶ್ವರಪ್ಪ ರಾಜ್ಯಪಾಲರಿಗೆ ದೂರು ಕೊಡುತ್ತಾರೆ. ಮತ್ತೊಬ್ಬ [ಸಿ.ಪಿ. ಯೋಗೇಶ್ವರ್] ಪರೀಕ್ಷೆ ಬರೆದಿದ್ದೀನಿ ಎಂದರು, ಮಗದೊಬ್ಬರು [ಬಸನಗೌಡ ಯತ್ನಾಳ್] ಅವರ ವಿರುದ್ಧ ಹಾದಿ-ಬೀದಿಯಲ್ಲಿ ಟೀಕೆ ಮಾಡುತ್ತಾ ಮಾನ ಕಳೆದಿದ್ದಾಗಿ ಯಡಿಯೂರಪ್ಪ ಪರ ಡಿ.ಕೆ. ಶಿವಕುಮಾರ್ ಅನುಕಂಪ ತೋರಿದರು.
ರಾಜೀನಾಮೆ ವಿಚಾರ ಪ್ರಸ್ತಾಪಿಸಿ ಯಡಿಯೂರಪ್ಪ ಕಣ್ಣೀರಿಟ್ಟಿದ್ದು, ಇದು ಕೇವಲ ಒಬ್ಬ ವ್ಯಕ್ತಿಯ ಕಣ್ಣೀರಲ್ಲ. ರಾಜ್ಯವನ್ನು ಪ್ರತಿನಿಧಿಸುವ ಮುಖ್ಯಮಂತ್ರಿಯ ಕಣ್ಣೀರು. ಇದರ ಹಿಂದಿನ ನೋವೇನು? ಆ ನೋವು ಕೊಟ್ಟವರಾರು?’ ಎಂಬುದನ್ನು ರಾಜ್ಯದ ಜನರಿಗೆ ತಿಳಿಸಬೇಕು ಎಂದರು.
ಮುಖ್ಯಮಂತ್ರಿ ಸ್ಥಾನಕ್ಕೆ ಯಡಿಯೂರಪ್ಪ ರಾಜೀನಾಮೆ ಬಗ್ಗೆ ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದ ಅವರು, ‘ಯಡಿಯೂರಪ್ಪ ಅವರ ರಾಜೀನಾಮೆ ಹಿಂದೆ ಸಂತೋಷ ಕಾಣುತ್ತಿಲ್ಲ. ಬದಲಿಗೆ ಅವರ ನಿರ್ಧಾರದಲ್ಲಿ ನೋವು ಇಣುಕುತ್ತಿದೆ. ಆ ನೋವು ಏನು? ಆ ನೋವು ಕೊಟ್ಟವರು ಯಾರು ಎಂಬುದನ್ನು ಮುಖ್ಯಮಂತ್ರಿಗಳು ರಾಜ್ಯದ ಜನರಿಗೆ ಸ್ಪಷ್ಟಪಡಿಸಬೇಕು ಎಂದು ಒತ್ತಾಯಿಸಿದರು.