ಹೊಸದಿಲ್ಲಿ: ದೇಶದ ಜನಸಂಖ್ಯಾ ನಿಯಂತ್ರಣಕ್ಕಾಗಿ ‘ಎರಡು ಮಕ್ಕಳ’ ಮಸೂದೆಯನ್ನು ಸಂಸತ್ತಿನಲ್ಲಿ ಮಂಡಿಸಲು ಅನುಮತಿ ಕೋರಿದ ಬಿಜೆಪಿ ಸಂಸದನಿಗೆ ನಾಲ್ಕು ಮಕ್ಕಳು!
ಉತ್ತರ ಪ್ರದೇಶದ ಗೋರಖ್‌ಪುರದ ಸಂಸದ ರವಿ ಕಿಶನ್, ಜನಸಂಖ್ಯಾ ನಿಯಂತ್ರಣ ಕುರಿತ ಮಸೂದೆಯನ್ನು ಮಂಡಿಸಲು ಅನುಮತಿ ಕೋರಿದ್ದಾರೆ. ಲೋಕಸಭೆಯ ವೆಬ್‌ಸೈಟ್‌ನಲ್ಲಿ ಪೋಸ್ಟ್ ಮಾಡಿದ ಪ್ರೊಫೈಲ್ ಪ್ರಕಾರ, ಅವರಿಗೆ ಮೂವರು ಪುತ್ರಿಯರು ಮತ್ತು ಒಬ್ಬ ಪುತ್ರ ಸೇರಿದಂತೆ ನಾಲ್ಕು ಮಕ್ಕಳಿದ್ದಾರೆ ಎಂದು ತಿಳಿದುಬಂದಿದೆ. ಎರಡು ಮಕ್ಕಳಿಗಿಂತ ಹೆಚ್ಚು ಮಕ್ಕಳಿರುವವರಿಗೆ ಸರ್ಕಾರಿ ಸೌಲಭ್ಯಗಳನ್ನು ನೀಡಬಾರದು ಎಂಬ ಮಸೂದೆಯನ್ನು ರವಿಕಿಶನ್ ಸಂಸತ್ ನಲ್ಲಿ ಮಂಡಿಸಲಿದ್ದಾರೆ.
ಈ ನಡುವೆ ಜನಸಂಖ್ಯಾ ನಿಯಂತ್ರಣಕ್ಕಾಗಿ ನಾಲ್ಕು ಮಕ್ಕಳ ತಂದೆಯು ಮಸೂದೆ ಮಂಡಿಸಲು ಹೊರಟಿರುವುದು ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.