ಬೆಂಗಳೂರು: ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರು ಚೆನ್ನೈ ವಿಮಾನ ನಿಲ್ದಾಣದಲ್ಲಿ ವಿಮಾನದ ತುರ್ತು ನಿರ್ಗಮನದ ಬಾಗಿಲನ್ನು ಯಾವುದೇ ಅನುಮತಿಯಿಲ್ಲದೆ ತೆರೆದು, ವಿಮಾನಯಾನ ನಿಯಮಗಳ ಗಂಭೀರ ಉಲ್ಲಂಘನೆ ಮಾಡಿ ದುರ್ವರ್ತನೆ ತೋರಿದ ಆಘಾತಕಾರಿ ಘಟನೆ ನಡೆದಿದೆ. ಘಟನೆ ಕಳೆದ ವರ್ಷದ ಡಿಸೆಂಬರ್ 10 ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಪ್ರತ್ಯಕ್ಷದರ್ಶಿಯೊಬ್ಬರ ಹೇಳಿಕೆ ಇದನ್ನು ದೃಢಪಡಿಸಿದ್ದು, ಸಂಸದರ ನಡವಳಿಕೆಗೆ ವ್ಯಾಪಕ ಟೀಕೆ ವ್ಯಕ್ತವಾಗಿದೆ. ಈ ಬಗ್ಗೆ ನ್ಯೂಸ್ ಮಿನಿಟ್ ವಿಸ್ತೃತ ವರದಿ ಪ್ರಕಟಿಸಿದೆ.
ಘಟನೆಯ ನಂತರ ಎಲ್ಲಾ ಪ್ರಯಾಣಿಕರನ್ನು ವಿಮಾನದಿಂದ ಕೆಳಗಿಳಿಸಿ ಸುಮಾರು ಎರಡು ಗಂಟೆಗಳ ಕಾಲ ಪರಿಶೀಲನೆ ನಡೆಸಲಾಗಿದೆ. ಇದರ ನಂತರ ಸಂಸದರು ಲಿಖಿತ ಪತ್ರ ಬರೆದು ಕ್ಷಮೆಯಾಚಿಸಿದ್ದಾರೆ ಎಂದು ವರದಿ ಹೇಳಿದೆ.
. ವಿಮಾನದ ತುರ್ತು ನಿರ್ಗಮನದ ಬಾಗಿಲನ್ನು ತೆರೆಯುವುದು ಗಂಭೀರ ಉಲ್ಲಂಘನೆಯಾಗಿದ್ದು, ಶಿಕ್ಷಾರ್ಹ ಅಪರಾಧವಾಗಿದೆ. ಅದಾಗ್ಯೂ ತೇಜಸ್ವಿ ಸೂರ್ಯ ಅವರ ವಿರುದ್ಧ ಯಾವುದೆ ಪ್ರಕರಣ ದಾಖಲಿಸಲಾಗಿಲ್ಲ ಎಂದು ವರದಿ ಉಲ್ಲೇಖಿಸಿದೆ. ಇಷ್ಟೆ ಅಲ್ಲದೆ, ವಿಮಾನಯಾನ ಸಂಸ್ಥೆ ಇಂಡಿಗೋ ಈ ವಿಷಯದ ಬಗ್ಗೆ ಯಾವುದೇ ಹೇಳಿಕೆಯನ್ನು ಬಿಡುಗಡೆ ಮಾಡಲು ನಿರಾಕರಿಸಿದೆ.
ಚೆನ್ನೈ ವಿಮಾನ ನಿಲ್ದಾಣದ ಅಧಿಕಾರಿಗಳು ಮತ್ತು ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (ಡಿಜಿಸಿಎ) ಅಧಿಕಾರಿಗಳು ವಿಮಾನದ ತುರ್ತು ನಿರ್ಗಮನ ಬಾಗಿಲನ್ನು ಪ್ರಯಾಣಿಕರೊಬ್ಬರು ತೆರೆದಿದ್ದು ನಿಜ ಎಂದು ದೃಢಪಡಿಸಿದ್ದಾರೆ. ಆದರೆ ಆ ಪ್ರಯಾಣಿಕ ಸಂಸದ ತೇಜಸ್ವಿ ಸೂರ್ಯ ಹೌದೇ ಎಂಬ ಬಗ್ಗೆ ಖಚಿತಪಡಿಸಲು ಅವರು ನಿರಾಕರಿಸಿದ್ದಾರೆ.
ಸಂಸದ ಕ್ಷಮೆಯಾಚಿಸಿದ ನಂತರ, ಅವರಿಗೆ ಅದೇ ವಿಮಾನದಲ್ಲಿ ಪ್ರಯಾಣಿಸಲು ಅವಕಾಶ ನೀಡಲಾಯಿತು. ಆದರೆ ವಿಮಾನದ ಸಿಬ್ಬಂದಿ ಅವರ ಆಸನ ವ್ಯವಸ್ಥೆಯನ್ನು ಬದಲಾಯಿಸಲಾಯಿತು. ಅವರನ್ನು ತುರ್ತು ನಿರ್ಗಮನ ಬಾಗಿಲಿನ ಬಳಿಯ ಆಸನಗಳಿಂದ ಸ್ಥಳಾಂತರಿಸಿ, ಹಿಂಭಾಗದಲ್ಲಿ ಕುಳಿತುಕೊಳ್ಳಲು ಕೇಳಲಾಯಿತು” ಎಂದು ಮತ್ತೊಬ್ಬ ಪ್ರಯಾಣಿಕ ಮಾಹಿತಿ ನೀಡಿದ್ದಾರೆ.
ಇಂಡಿಗೋ ವಿಮಾನದಿಂದ ಎಲ್ಲಾ ಪ್ರಯಾಣಿಕರನ್ನು ಕೆಳಗಿಳಿಸಿದ ನಂತರ, ತೇಜಸ್ವಿ ಸೂರ್ಯ ಅವರನ್ನು ಲಿಖಿತವಾಗಿ ವಿವರಣೆ ನೀಡುವಂತೆ ಏರ್‌ಲೈನ್ ಅಧಿಕಾರಿಗಳು ಕೇಳಿದ್ದಾರೆ ಎಂದು ಚೆನ್ನೈ ವಿಮಾನ ನಿಲ್ದಾಣದ ಮೂಲಗಳು ಖಚಿತಪಡಿಸಿವೆ. ಆದರೆ ಯಾವುದೇ ಹೆಚ್ಚಿನ ತನಿಖೆ ನಡೆಸದೆ ಸಂಸದರಿಗೆ ಪ್ರಯಾಣಿಸಲು ಅವಕಾಶ ನೀಡಲಾಗಿದೆ.
ಸಂಸದರು ತುರ್ತು ನಿರ್ಗಮನದ ಬಾಗಿಲು ತೆರೆದಾಗ ಪ್ರಯಾಣಿಕರು ಭಯಭೀತರಾಗಿದ್ದರು ಎಂದು ಪ್ರಯಾಣಿಕರೊಬ್ಬರು ಹೇಳಿದ್ದಾರೆ.