‘ಏರೋ ಇಂಡಿಯಾ 2021’ ಏರ್ ಶೋ ಸಂದರ್ಭದಲ್ಲಿ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರು ಯುದ್ಧ ವಿಮಾನದಲ್ಲಿ ನಡೆಸಿದ ಸವಾರಿ ಪಕ್ಷದಲ್ಲಿ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಭಾರೀ ಟೀಕೆಗೆ ಗುರಿಯಾಗಿದೆ. ರಕ್ಷಣಾ ಇಲಾಖೆಯ ಯಾವುದೇ ಜವಾಬ್ದಾರಿ ಇಲ್ಲದ ತೇಜಸ್ವಿ ಸೂರ್ಯ ಅವರು ತಮ್ಮ ಕ್ಷೇತ್ರವಲ್ಲದಿದ್ದರೂ ಯಾಕೆ ಈ ಮೋಜಿನ ಸವಾರಿ ಮಾಡಿದರು ಎಂಬುದಾಗಿದೆ ಸಾಮಾಜಿಕ ಜಾಲತಾಣದಲ್ಲಿ ಕೇಳುತ್ತಿರುವ ಪ್ರಶ್ನೆ.
ತೇಜಸ್ವಿ ಸೂರ್ಯ ಬೆಂಗಳೂರು ದಕ್ಷಿಣದ ಸಂಸದ. ವೈಮಾನಿಕ ಪ್ರದರ್ಶನ ನಡೆದಿರುವುದು ಅವರ ಕ್ಷೇತ್ರದಲ್ಲಿ ಅಲ್ಲ. “ತೇಜಸ್ವಿ ಸೂರ್ಯ ಅವರು ರಕ್ಷಣಾ ಸಂಸದೀಯ ಸಮಿತಿಯ ಸದಸ್ಯರಾಗಿದ್ದರೆ, ಅವರು ಅಂತಹ ಪ್ರವಾಸವನ್ನು ಮಾಡುವುದರಲ್ಲಿ ಅರ್ಥವಿತ್ತು” ಎಂದು ಬಿಜೆಪಿಯ ಹಿರಿಯ ಮುಖಂಡರೊಬ್ಬರು ಪ್ರತಿಕ್ರಿಯಿಸಿದ್ದಾರೆ ಎಂದು ‘ದಿ ಪ್ರಿಂಟ್’ ವರದಿ ಮಾಡಿದೆ. ಸಂಸತ್ತಿಗೆ ದಿನಗಳವರೆಗೆ ಹಾಜರಾಗದೆ ಯುದ್ಧ ವಿಮಾನದಲ್ಲಿ ಸವಾರಿ ಮಾಡಿದ್ದಕ್ಕಾಗಿ ಬಿಜೆಪಿಯೊಳಗೂ ಟೀಕೆಗಳು ಕೇಳಿ ಬರುತ್ತಿದೆ. ಕೇವಲ ಇಬ್ಬರಿಗೆ ಮಾತ್ರ ಕುಳಿತುಕೊಳ್ಳಬಹುದಾದ ತೇಜಸ್ ಯುದ್ಧ ವಿಮಾನದಲ್ಲಿ ಒಮ್ಮೆ ಪ್ರಯಾಣ ಮಾಡಲು ಸರಾಸರಿ 8ರಿಂದ 10 ಲಕ್ಷ ರೂ. ಖರ್ಚು ಇದೆ. ಜನರ ತೆರಿಗೆ ಹಣದೊಂದಿಗೆ ಇಂತಹ ಐಷಾರಾಮಿ ಪ್ರವಾಸಗಳನ್ನು ಮಾಡುವುದು ಸರಿಯಲ್ಲ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಭಾರೀ ಟೀಕೆಗಳು ಕೇಳಿಬರುತ್ತಿದೆ.
ಈ ಸವಾರಿಗೆ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಇಲಾಖೆಯ ಅಧೀನದಲ್ಲಿರುವ ವಾಯುಯಾನ ಅಭಿವೃದ್ಧಿ ಸಂಸ್ಥೆ ಪರವಾನಗಿ ನೀಡುತ್ತದೆ. ಇಂತಹ ಸವಾರಿಗಳನ್ನು ಸಾಮಾನ್ಯವಾಗಿ ಪ್ರಮುಖ ಗಣ್ಯರು, ಹಿರಿಯ ಸರ್ಕಾರಿ ಅಧಿಕಾರಿಗಳು ಮತ್ತು ರಕ್ಷಣಾ ವರದಿಯ ಉಸ್ತುವಾರಿ ಹೊಂದಿರುವ ಮಾಧ್ಯಮ ಸಿಬ್ಬಂದಿಗಳಿಗೆ ನೀಡಲಾಗುತ್ತದೆ.