ಸಂವಿಧಾನದ ಪೀಠಿಕೆಯನ್ನೇ ಬದಲಾಯಿಸಲು ಖಾಸಗಿ ಮಸೂದೆ ಮಂಡಿಸಲು ಮುಂದಾದ ಬಿಜೆಪಿ ಸಂಸದ!

Prasthutha: December 3, 2021

ರಾಜ್ಯಸಭೆಯಲ್ಲಿ ಅಪಾಯಕಾರಿ ಬೆಳವಣಿಗೆ!

ನವದೆಹಲಿ: ಸಂವಿಧಾನದ ಪೀಠಿಕೆಯನ್ನೇ ಬದಲಾಯಿಸಲು ಮುಂದಾದ ಅಪಾಯಕಾರಿ ಬೆಳವಣಿಗೆಯೊಂದು ಶುಕ್ರವಾರ ರಾಜ್ಯಸಭೆಯಲ್ಲಿ ನಡೆದಿದೆ.
ಸಂವಿಧಾನದ ಪೀಠಿಕೆಯನ್ನು ತಿದ್ದುಪಡಿ ಮಾಡಲು ಬಿಜೆಪಿ ಸಂಸದ ಕೆ.ಜೆ. ಅಲ್ಫೋನ್ಸ್ ಖಾಸಗಿ ಮಸೂದೆಯನ್ನು ಮಂಡಿಸಲು ಮುಂದಾಗಿದ್ದರು. ಈ ವೇಳೆ ವಿರೋಧ ಪಕ್ಷದ ಸಂಸದರು ಪ್ರತಿಭಟನೆ ನಡೆಸಿ ಆ ಮಸೂದೆ ಮಂಡನೆಯಾಗದಂತೆ ತಡೆದರು.

ಉಪ ಸಭಾಪತಿ ಹರಿವಂಶ್ ನಾರಾಯಣ್ ಸಿಂಗ್ ಆರಂಭದಲ್ಲಿ ಮಸೂದೆಯನ್ನು ಮಂಡಿಸಲು ಅನುಮತಿ ನೀಡಿದ್ದರು, ಆದರೆ ನಂತರ ಆರ್ ಜೆಡಿ ಸಂಸದ ಮನೋಜ್ ಝಾ ಮತ್ತು ಎಂಡಿಎಂಕೆಯ ವೈಕೊ ಅವರ ಪ್ರತಿಭಟನೆಯ ನಂತರ ಮಸೂದೆ ಮಂಡನೆಯ ಬಗ್ಗೆ ತಮ್ಮ ನಿರ್ಧಾರವನ್ನು ಉಪ ಸಭಾಪತಿ ಕಾಯ್ದಿರಿಸಿದರು.
ಶುಕ್ರವಾರ ಭೋಜನ ವಿರಾಮದ ಬಳಿಕ ಖಾಸಗಿ ಸದಸ್ಯರ ಕಲಾಪಕ್ಕಾಗಿ ಮೇಲ್ಮನೆ ಸಮಾವೇಶಗೊಂಡಾಗ, ಸಂವಿಧಾನ (ತಿದ್ದುಪಡಿ) ಮಸೂದೆ, 2021 (ಪೀಠಿಕೆಯ ತಿದ್ದುಪಡಿ) ಅನ್ನು ಸದನದಲ್ಲಿ ಮಂಡಿಸಲು ಅಲ್ಫೋನ್ಸ್ ಅವರಿಗೆ ಅವಕಾಶ ನೀಡಲಾಯಿತು.
ಉಪ ಸಭಾಪತಿಗಳು ಮಸೂದೆ ಮಂಡನೆಯ ಪ್ರಸ್ತಾವನೆಗೆ ಅನುಮತಿ ನೀಡಿದಾಗ, ಸಂಸದರಾದ ಝಾ ಮತ್ತು ವೈಕೊ ಅವರು ಎದ್ದುನಿಂತು, ಇಂತಹ ಕರಡು ಮಸೂದೆ ಮಂಡನೆಗೆ ರಾಷ್ಟ್ರಪತಿಯವರ ಪೂರ್ವಾನುಮತಿ ಅಗತ್ಯವಿದೆ ಎಂದು ಹೇಳಿ ಮಸೂದೆ ಮಂಡನೆಗೆ ವಿರೋಧ ವ್ಯಕ್ತಪಡಿಸಿ ಪ್ರತಿಭಟಿಸಿದರು.
ಆದಾಗ್ಯೂ, ಇಂತಹ ಮಸೂದೆಗೆ ರಾಷ್ಟ್ರಪತಿಯವರ ಅನುಮತಿ ಅಗತ್ಯವಿಲ್ಲ ಎಂದು ಉಪ ಸಭಾಪತಿ ಸ್ಪಷ್ಟನೆ ನೀಡಿದರು.
ಇದನ್ನು ವಿರೋಧಿಸಿದ ಸಂಸದ ಮನೋಜ್ ಝಾ ಅವರು, ಈ ಮಸೂದೆಯು ಸಂವಿಧಾನದ ಮೂಲ ಸಂರಚನೆಯ ಭಾಗವಾಗಿರುವ ಪೀಠಿಕೆಯ ತಿದ್ದುಪಡಿಯಾಗಿರುವುದರಿಂದ ಇದಕ್ಕೆ ಅನುಮತಿ ಬೇಕು ಎಂದು ಹೇಳಿದರು.
“ಪೀಠಿಕೆ ಸಂವಿಧಾನದ ಮೂಲ ರಚನೆಯ ಭಾಗವಾಗಿದೆ. ದಯವಿಟ್ಟು ಇದಕ್ಕೆ ಅನುಮತಿ ನೀಡಬೇಡಿ” ಎಂದು ಝಾ ಒತ್ತಾಯಿಸಿದರು.
ಅಲ್ಫೋನ್ಸ್ ಮಸೂದೆಯ ಬಗ್ಗೆ ಮಾತನಾಡಲು ಸಭಾಪತಿಯವರ ಅನುಮತಿಯನ್ನು ಕೋರಿದರು. ಆಗ ಉಪ ಸಭಾಪತಿ ಅನುಮತಿ ನಿರಾಕರಿಸಿದರು.
“ಈ ಸಂದರ್ಭದಲ್ಲಿ, ಮಸೂದೆಯ ಬಗ್ಗೆ ಚರ್ಚಿಸಲು ನಿಮಗೆ ಅನುಮತಿ ಇಲ್ಲ. ಏನಾದರೂ ಇದ್ದರೆ, ಈ ಬಗ್ಗೆ ಸದನ ನಿರ್ಧರಿಸಬೇಕೇ ಹೊರತು ಪೀಠ ಅಲ್ಲ” ಎಂದು ಉಪ ಸಭಾಪತಿ ಹೇಳಿದರು, ಅಂತಹ ಮಸೂದೆಯನ್ನು ಮಂಡಿಸುವ ಹಕ್ಕು ಸದಸ್ಯರಿಗೆ ಇದೆ ಎಂದು ಹೇಳಿದರು.
ಆದಾಗ್ಯೂ, ನಿಯಮಗಳನ್ನು ಉಲ್ಲೇಖಿಸಿದ ಝಾ ಅವರು, ಅಂತಹ ಮಸೂದೆಗಳು ಸಂವಿಧಾನದ ಅನುಚ್ಛೇದ 117 ರ ಅಡಿಯಲ್ಲಿ ರಾಷ್ಟ್ರಪತಿಗಳ ಶಿಫಾರಸುಗಳಿಗೆ ಒಳಪಟ್ಟಿರುತ್ತವೆ ಎಂದು ಸ್ಪಷ್ಟಪಡಿಸಿದರು.
“ಸಂವಿಧಾನದ ಪೀಠಿಕೆ ತಿದ್ದುಪಡಿಯು ಸಂವಿಧಾನದ ಸಂರಚನೆಯ ಮೇಲಿನ ದಾಳಿಯಾಗಿದೆ. ಮೇಲ್ಮನೆಯಲ್ಲಿ ನಾವು ಸರ್ವನಾಶಕ್ಕೆ ಅನುಮತಿಸುತ್ತಿದ್ದೇವೆಯೇ ಎಂದು?” ಎಂದು ಝಾ ಖಾರವಾಗಿ ಪ್ರಶ್ನಿಸಿದರು.
ಬಳಿಕ ಉಪಸಭಾಪತಿ, ನಾನು ನಿಯಮಗಳನ್ನು ನೋಡಿ ತೀರ್ಪು ನೀಡುತ್ತೇನೆ ಎಂದರು.
“ಈ ಮಸೂದೆಗೆ ರಾಷ್ಟ್ರಪತಿಯವರ ಒಪ್ಪಿಗೆ ಅಗತ್ಯವಿಲ್ಲ ಎಂದು ನಾನು ನಿಮಗೆ ಸ್ಪಷ್ಟಪಡಿಸುತ್ತಿದ್ದೇನೆ. ಈ ಬಗ್ಗೆ ಸದನ ನಿರ್ಧಾರ ತೆಗೆದುಕೊಳ್ಳಬೇಕೇ ಹೊರತು ನಾನಲ್ಲ” ಎಂದು ಅವರು ಹೇಳಿದರು.
ಬಳಿಕ ಸಂಸದೀಯ ವ್ಯವಹಾರಗಳ ರಾಜ್ಯ ಸಚಿವ ವಿ.ಮುರಳೀಧರನ್ ಅವರ ಸಲಹೆಯಂತೆ, ಉಪಸಭಾಪತಿ ತನ್ನ ತೀರ್ಪನ್ನು ಕಾಯ್ದಿರಿಸಿದರು.

ನಿಮ್ಮ ಚಂದಾ ಹಣ ಪಾವತಿಸಲು ಈ ಕೆಳಗಿನ ಬಟನ್ ಮೇಲೆ ಕ್ಲಿಕ್ ಮಾಡಿ.

ಜನಪರ ಪತ್ರಿಕೋದ್ಯಮವನ್ನು ಬೆಂಬಲಿಸಿ
ಪ್ರಸ್ತುತದ ಬೆಳವಣಿಗೆಯಲ್ಲಿ ಪಾಲುದಾರರಾಗಿ
ಜನಸಾಮಾನ್ಯರ ಜ್ವಲಂತ ಸಮಸ್ಯೆಗಳಿಗೆ ಸದಾ ಮಿಡಿಯುತ್ತಾ, ಧ್ವನಿ ಇಲ್ಲದ ಸಮುದಾಯಗಳ ಧ್ವನಿಯಾಗುತ್ತಾ ಮಾಧ್ಯಮ ಲೋಕದಲ್ಲಿ ಸ್ವತಂತ್ರವಾಗಿ ಕಾರ್ಯಾಚರಿಸುತ್ತಿರುವ ಪ್ರಸ್ತುತಕ್ಕೆ ನಿಮ್ಮ ಪ್ರೋತ್ಸಾಹ, ಬೆಂಬಲ ಯಾವತ್ತೂ ಇರಲಿ. ಪ್ರಸ್ತುತಕ್ಕೆ ದೇಣಿಗೆ ನೀಡಲು ಬಯಸುವವರು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಹಣವನ್ನು ಪಾವತಿಸಬಹುದು.

ಧನ್ಯವಾದಗಳು

ಟಾಪ್ ಸುದ್ದಿಗಳು

ವಿಶೇಷ ವರದಿ

error: Content is protected !!