ನವದೆಹಲಿ: ಬಿಜೆಪಿ ಸಂಸದ ಜಗದಾಂಬಿಕ ಪಾಲ್ ಅವರು ವಕ್ಫ್ ತಿದ್ದುಪಡಿ ಮಸೂದೆ 2024ರ ಜಂಟಿ ಸಂಸದೀಯ ಸಮಿತಿಯ (ಜೆಪಿಸಿ) ಅಧ್ಯಕ್ಷರಾಗಿ ಆಯ್ಕೆಯಾದರು.
ಸಂಸತ್ತಿನ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರು ಆಗಸ್ಟ್ 8ರಂದು ಲೋಕಸಭೆಯಲ್ಲಿ ವಕ್ಫ್ ತಿದ್ದುಪಡಿ ಮಸೂದೆಯನ್ನು ಮಂಡಿಸಿದರು. ಸದನವು ಈ ಮಸೂದೆಯ ಉದ್ದೇಶಿತ ತಿದ್ದುಪಡಿಗಳ ಕುರಿತು ಸಂಕ್ಷಿಪ್ತ ಚರ್ಚೆಯನ್ನು ನಡೆಸಿತು. ಹೆಚ್ಚಿನ ಪರಿಶೀಲನೆಗಾಗಿ ಮಸೂದೆಯನ್ನು ಜಂಟಿ ಸಂಸದೀಯ ಸಮಿತಿಗೆ ಕಳುಹಿಸಲಾಗಿತ್ತು.
ಅಧ್ಯಕ್ಷರಾಗಿ ಜಗದಾಂಬಿಕ ಪಾಲ್ ನೇಮಕವಾಗಿದ್ದು, ಜೆಪಿಸಿಯ ಸದಸ್ಯರಾಗಿ ನಿಶಿಕಾಂತ್ ದುಬೆ, ತೇಜಸ್ವಿ ಸೂರ್ಯ, ಅಪರಾಜಿತಾ ಸಾರಂಗಿ, ಅಭಿತ್ ಗಂಗೋಪಾಧ್ಯಾಯ, ಸಂಜಯ್ ಜೈಸ್ವಾಲ್, ದಿಲೀಪ್ ಸೈಕಿಯಾ, ಡಿಕೆ ಅರುಣಾ ಆಯ್ಕೆಯಾಗಿದ್ದಾರೆ. ಇವರೆಲ್ಲರೂ ಲೋಕಸಭಾ ಸದಸ್ಯರಾಗಿದ್ದು, ಇವರೆಲ್ಲರೂ ಬಿಜೆಪಿಯವರು.
ಕಾಂಗ್ರೆಸ್ ಸದಸ್ಯರಾದ ಗೌರವ್ ಗೊಗೊಯ್, ಇಮ್ರಾನ್ ಮಸೂದ್ ಮತ್ತು ಮೊಹಮ್ಮದ್ ಜಾವೇದ್ ಕೂಡ ಈ ಸಮಿತಿಯಲ್ಲಿದ್ದಾರೆ. ಮೊಹಿಬುಲ್ಲಾ (ಸಮಾಜವಾದಿ ಪಕ್ಷ), ಕಲ್ಯಾಣ್ ಬ್ಯಾನರ್ಜಿ (ತೃಣಮೂಲ ಕಾಂಗ್ರೆಸ್), ಎ. ರಾಜಾ (ಡಿಎಂಕೆ), ಲವು ಶ್ರೀ ಕೃಷ್ಣ ದೇವರಾಯಲು (ತೆಲುಗು ದೇಶಂ ಪಕ್ಷ), ದಿಲೇಶ್ವರ್ ಕಾಮೈತ್ (ಜೆಡಿಯು), ಅರವಿಂದ್ ಸಾವಂತ್ (ಶಿವಸೇನೆ-ಯುಬಿಟಿ), ಸುರೇಶ್ ಮ್ಹಾತ್ರೆ (ಎನ್‌ಸಿಪಿ-ಶರದ್ ಪವಾರ್), ನರೇಶ್ ಮ್ಹಾಸ್ಕೆ (ಶಿವಸೇನೆ), ಅರುಣ್ ಭಾರತಿ (ಲೋಕ ಜನಶಕ್ತಿ ಪಕ್ಷ-ರಾಮ್ ವಿಲಾಸ್), ಮತ್ತು ಅಸಾದುದ್ದೀನ್ ಓವೈಸಿ (ಎಐಎಂಐಎಂ) ಈ ಸಮಿತಿಯ ಇತರ ಸದಸ್ಯರಾಗಿದ್ದಾರೆ.
ಸಮಿತಿಯಲ್ಲಿರುವ ರಾಜ್ಯಸಭೆಯ ಸದಸ್ಯರ ಪೈಕಿ ಬಿಜೆಪಿ ಮತ್ತು ಪ್ರತಿಪಕ್ಷದಿಂದ ತಲಾ ನಾಲ್ವರು ಸದಸ್ಯರಿದ್ದು, ಒಬ್ಬರು ನಾಮನಿರ್ದೇಶಿತ ಸದಸ್ಯರಾಗಿದ್ದಾರೆ. ರಾಜ್ಯಸಭೆಯಿಂದ ಸೇರ್ಪಡೆಗೊಂಡವರು ಬ್ರಿಜ್ ಲಾಲ್ (ಬಿಜೆಪಿ), ಮೇಧಾ ವಿಶ್ರಮ್ ಕುಲಕರ್ಣಿ (ಬಿಜೆಪಿ), ಗುಲಾಮ್ ಅಲಿ (ಬಿಜೆಪಿ), ರಾಧಾ ಮೋಹನ್ ದಾಸ್ ಅಗರವಾಲ್ (ಬಿಜೆಪಿ), ಸೈಯದ್ ನಸೀರ್ ಹುಸೇನ್ (ಕಾಂಗ್ರೆಸ್), ಮೊಹಮ್ಮದ್ ನಾದಿಮುಲ್ ಹಕ್ (ತೃಣಮೂಲ ಕಾಂಗ್ರೆಸ್), ವಿ. ವಿಜಯಸಾಯಿ ರೆಡ್ಡಿ (ವೈಎಸ್‌ಆರ್‌ಸಿಪಿ), ಎಂ. ಮೊಹಮದ್ ಅಬ್ದುಲ್ಲಾ (ಡಿಎಂಕೆ), ಸಂಜಯ್ ಸಿಂಗ್ (ಎಎಪಿ) ಮತ್ತು ನಾಮನಿರ್ದೇಶಿತ ಸದಸ್ಯ ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಕೂಡ ಇದ್ದಾರೆ.