►ಗಾಯಾಳುವನ್ನು ಆಸ್ಪತ್ರೆಗೆ ಸಾಗಿಸಲು ಹಿಂದೇಟು ಹಾಕಿದ MLCಯನ್ನು ತರಾಟೆಗೆ ತೆಗೆದುಕೊಂಡ ಸಾರ್ವಜನಿಕರು
ಕೋಲಾರ: ವಿಧಾನ ಪರಿಷತ್ ಬಿಜೆಪಿ ಸದಸ್ಯ ಎನ್.ರವಿಕುಮಾರ್ ಪ್ರಯಾಣಿಸುತ್ತಿದ್ದ ಕಾರು ಬೈಕೊಂದಕ್ಕೆ ಡಿಕ್ಕಿಹೊಡೆದಿದ್ದು, ಗಾಯಾಳು ಬೈಕ್ ಸವಾರನನ್ನು ಆಸ್ಪತ್ರೆಗೆ ಸಾಗಿಸಲು ಹಿಂದೇಟು ಹಾಕಿದ ರವಿಕುಮಾರ್ ಅವರನ್ನು ಸಾರ್ವಜನಿಕರು ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ.
ಭಾನುವಾರ ಕೋಲಾರ ತಾಲ್ಲೂಕಿನ ಲಕ್ಷ್ಮಿ ಸಾಗರ ಗೇಟ್ ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ಬೈಕ್‌ಗೆ ಡಿಕ್ಕಿ ಹೊಡೆದಿದ್ದು, ಗಾಯಗೊಂಡ ಬೈಕ್ ಸವಾರನನ್ನು ಆಸ್ಪತ್ರೆಗೆ ಕರೆದೊಯ್ಯಲು ಹಿಂದೇಟು ಹಾಕಿದ್ದಾರೆ ಎಂದು ವರದಿಯಾಗಿದೆ.
ರವಿಕುಮಾರ್ ಅವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಸಾರ್ವಜನಿಕರು, ‘ನೀವು ಯಾವ ಸೀಮೆ ಎಂಎಲ್‌ಸಿ? ನಿನಗೆ ಮಾನ ಮರ್ಯಾದೆ ಇದೆಯಾ? ಎಂಎಲ್‌ಸಿ, ಎಂಎಲ್‌ಎಯಾದರೆ ಏನು ಬೇಕಾದರೂ ಮಾಡಬಹುದಾ? ಚೂರಾದರೂ ಮಾನವೀಯತೆ, ಸೌಜನ್ಯ ಇರಬೇಕಲ್ಲವೇ’ ಎಂದು ಪ್ರಶ್ನಿಸಿದ್ದಾರೆ.
ಅಪಘಾತ ನಡೆದ ವೇಳೆ ಕಾರಿನಲ್ಲೇ ಕುಳಿತಿದ್ದ ರವಿಕುಮಾರ್ ಅವರನ್ನು ‘ಇಳಿಯಯ್ಯಾ ಕೆಳಗೆ, ಪೊಲೀಸರೇನು ನಿನ್ನ ಜೇಬಿನಲ್ಲಿದ್ದಾರಾ?’ ಎಂದು ಕೇಳಿ ಸಾರ್ವಜನಿಕರು ಕಾರಿನಿಂದ ಕೆಳಗಿಳಿಸಿದ್ದಾರೆ.
ನಂತರ ಬೈಕ್ ಸವಾರ ಹೊಸಕೋಟೆ ತಾಲ್ಲೂಕಿನ ಶಿವನಾಪುರ ಗ್ರಾಮದ ಗೋಪಾಲ್ ಎಂಬುವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ವಿಧಾನ ಪರಿಷತ್ ಸದಸ್ಯರ ನಡೆಗೆ ಸಾಮಾಜಿಕ ಜಾಲತಾಣದಲ್ಲೂ ಆಕ್ರೋಶ ವ್ಯಕ್ತವಾಗಿದೆ.