ಕೋಲ್ಕತ್ತ: ಪಶ್ಚಿಮ ಬಂಗಾಳದ ವಿಧಾನಸಭೆಯಲ್ಲಿ ರಾಜ್ಯಪಾಲ ಜಗದೀಪ್ ಧನಕರ್ ಅವರ ಭಾಷಣಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ಬಿಜೆಪಿ ಶಾಸಕರಾದ ಸುದೀಪ್ ಮುಖೋಪಾಧ್ಯಾಯ ಮತ್ತು ಮಿಹಿರ್ ಗೋಸ್ವಾಮಿ ಅವರನ್ನು ಬಜೆಟ್ ಅಧಿವೇಶನದ ಉಳಿದ ಅವಧಿಗೆ ಅಮಾನತುಗೊಳಿಸಲಾಗಿದೆ ಎಂದು ತಿಳಿದು ಬಂದಿದೆ.
ಅಮಾನತು ಮಾಡುವ ಸಂಬಂಧ ಸಂಸದೀಯ ವ್ಯವಹಾರಗಳ ಸಚಿವ ಪಾರ್ಥ ಚಟರ್ಜಿ ಅವರು ಮಂಡಿಸಿದ ಪ್ರಸ್ತಾವನೆಯನ್ನು ಸ್ಪೀಕರ್ ಬಿಮನ್ ಬ್ಯಾನರ್ಜಿ ಮತ ಹಾಕಿದರು. ಧ್ವನಿ ಮತದ ಮೂಲಕ ಪ್ರಸ್ತಾವನೆಯನ್ನು ಅಂಗೀಕರಿಸಲಾಯಿತು.
ಮಾರ್ಚ್ 7ರಂದು ರಾಜ್ಯಪಾಲರು ಭಾಷಣ ಮಾಡುವ ವೇಳೆ ಈ ಇಬ್ಬರು ಶಾಸಕರು ಸೇರಿದಂತೆ ವಿರೋಧ ಪಕ್ಷವಾದ ಬಿಜೆಪಿ ಸದಸ್ಯರು ಗದ್ದಲವನ್ನುಂಟು ಮಾಡಿದ್ದರು. ಇದರಿಂದ ಬೇಸರಗೊಂಡ ರಾಜ್ಯಪಾಲರು ತಮ್ಮ ಭಾಷಣದ ಮೊದಲ ಮತ್ತು ಕೊನೆ ಸಾಲನ್ನು ಮಾತ್ರ ಓದಿ ಸದನದಿಂದ ಹೊರ ನಡೆದಿದ್ದರು.ಈ ಹಿನ್ನೆಲೆಯಲ್ಲಿ ಇಬ್ಬರು ಬಿಜೆಪಿ ಶಾಸಕರನ್ನು ಅಧಿವೇಶನದಿಂದ ಅಮಾನತು ಮಾಡಲಾಗಿದೆ.