ಪಾಟ್ನಾ : ತೋಟವೊಂದರಲ್ಲಿ ಆಟವಾಡುತ್ತಿದ್ದ ಮಕ್ಕಳನ್ನು ಓಡಿಸಲು ಗುಂಡು ಹಾರಿಸಿದ ಆರೋಪ ಹಿನ್ನೆಲೆ, ಬಿಹಾರದ ಸಚಿವರೊಬ್ಬರ ಮಗನಿಗೆ ಗ್ರಾಮಸ್ಥರು ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ನಡೆದಿದೆ. ಹಲ್ಲೆ ಮಾಡಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ವಿಡಿಯೋದಲ್ಲಿ ಗ್ರಾಮಸ್ಥರು ಸಚಿವರ ಮಗನಿಗೆ ಯದ್ವಾತದ್ವಾ ಥಳಿಸಿದ್ದಾರೆ. ಗುಂಡು ಹಾರಿಸಿದ್ದಾರೆ ಎನ್ನಲಾದ ಬಂದೂಕನ್ನು ಸಹ ಸಚಿವರ ಮಗನಿಂದ ಕಸಿದುಕೊಂಡಿರುವ ದೃಶ್ಯ ಈ ವಿಡಿಯೋದಲ್ಲಿ ಸೆರೆಯಾಗಿದೆ.
ಬಿಜೆಪಿ ನಾಯಕ ಹಾಗೂ ರಾಜ್ಯ ಪ್ರವಾಸೋದ್ಯಮ ಸಚಿವರಾಗಿರುವ ನಾರಾಯಣ್ ಶಾ ಅವರ ಮಗ ಬಬ್ಲು ಕುಮಾರ್ ಗ್ರಾಮಸ್ಥರಿಂದ ಹಲ್ಲೆಗೊಳಗಾದ ವ್ಯಕ್ತಿ. ಇವರು ತೋಟದಲ್ಲಿ ಆಟವಾಡುತ್ತಿದ್ದ ಮಕ್ಕಳನ್ನು ಬೆದರಿಸಲು ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಈ ವೇಳೆ ಮಕ್ಕಳು ಗಾಬರಿಯಿಂದ ಓಡಿ ಹೋಗಿದ್ದಾರೆ. ಪರಿಣಾಮ ಕಾಲ್ತುಳಿತದಿಂದಾಗಿ ಒಂದು ಮಗು ಸೇರಿದಂತೆ 6 ಮಕ್ಕಳು ಗಾಯಗೊಂಡಿದ್ದಾರೆ ಎಂದು ಸ್ಥಳೀಯರು ಹೇಳಿದ್ದಾರೆ.
ಸರ್ಕಾರಿ ವಾಹನದಲ್ಲಿ ಬಂದ ಸಚಿವರ ಮಗನನ್ನು ಗ್ರಾಮಸ್ಥರು ಅಟ್ಟಿಸಿಕೊಂಡು ಹೋಗಿದ್ದಾರೆ. ಜೊತೆಗೆ ಸಚಿವರ ಹೆಸರಿನ ನಾಮಕಫಲಕವನ್ನೂ ಸಹ ಗ್ರಾಮಸ್ಥರು ಒಡೆದು ಹಾಕಿದ್ದಾರೆ. ಇದನ್ನು ಕಂಡ ಸಚಿವರ ಮಗ ವಾಹನವನ್ನು ಬಿಟ್ಟು ಅಲ್ಲಿಂದ ಪರಾರಿಯಾಗಿದ್ದಾರೆ. ಈ ವಿಷಯವಾಗಿ ಪ್ರತಿಕ್ರಿಯೆ ನೀಡಿರುವ ಸಚಿವ ಶಾ, ತಮ್ಮ ಮಗನ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ. ಆರೋಪಗಳು ಆಧಾರ ರಹಿತವಾಗಿದ್ದು, ನನ್ನ ಮಾನಹಾನಿ ಮಾಡುವ ರಾಜಕೀಯ ಷಡ್ಯಂತ್ರ ಇದಾಗಿದೆ ಎಂದಿದ್ದಾರೆ