ಬೆಂಗಳೂರು: ಆಡಳಿತಾರೂಢ ಬಿಜೆಪಿಯ ಮೂಡಿಗೆರೆ ಶಾಸಕ ಎಂ.ಪಿ. ಕುಮಾರಸ್ವಾಮಿ ರಾಜ್ಯ ಸರ್ಕಾರದ ವಿರುದ್ಧವೇ ವಿಧಾನಸೌಧದ ಬಳಿ ಏಕಾಂಗಿ ಪ್ರತಿಭಟನೆ ನಡೆಸಿದ ಘಟನೆ ನಡೆದಿದೆ. ಎನ್ ಡಿಆರ್ ಎಫ್, ಎಸ್ ಡಿಆರ್ ಎಫ್ ಗೆ ಮೂಡಿಗೆರೆ ಕ್ಷೇತ್ರವನ್ನು ಸೇರಿಸಿ ಹಾಗೂ ಮನೆ, ಜಮೀನು ಮತ್ತು ಬೆಳೆಹಾನಿ ಆದವರಿಗೆ ಪರಿಹಾರ ನೀಡಿ ಮಾನ್ಯ ಮುಖ್ಯಮಂತ್ರಿಯವರೇ ಎಂಬ ಬ್ಯಾನರ್ ಹಿಡಿದು ಶಾಸಕ ಕುಮಾರಸ್ವಾಮಿಯವರು ವಿಕಾಸಸೌಧ ಮತ್ತು ವಿಧಾನಸೌಧದ ಮಧ್ಯೆ ಇರುವ ಗಾಂಧಿ ಪ್ರತಿಮೆ ಬಳಿ ಪ್ರತಿಭಟನೆ ನಡೆಸುತ್ತಿದ್ದಾರೆ.
https://www.youtube.com/watch?v=1QotW6U5tbo&feature=youtu.be
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ, ತಮ್ಮ ಕ್ಷೇತ್ರವನ್ನು ಸರ್ಕಾರ ಬಹಳ ನಿರ್ಲಕ್ಷ್ಯ ಮಾಡಿದೆ. ಏಕಾಏಕಿ ನಿನ್ನೆ ಕಂದಾಯ ಇಲಾಖೆ ಪಟ್ಟಿ ಮಾಡಿ ಮೂಡಿಗೆರೆ ಕ್ಷೇತ್ರವನ್ನು ಎನ್ ಡಿಆರ್ ಎಫ್, ಎಸ್ ಡಿಆರ್ ಎಫ್ ಪಟ್ಟಿಯಿಂದ ಕೈ ಬಿಟ್ಟಿದೆ. ಸಂಜೆಯವರೆಗೂ ನಾನು ಇಲ್ಲಿಯೇ ಏಕಾಂಗಿಯಾಗಿ ಕೂತು ಪ್ರತಿಭಟನೆ ನಡೆಸುತ್ತೇನೆ ಎಂದರು.
ಎನ್ ಡಿ ಆರ್ ಎಫ್ ಪಟ್ಟಿಯಲ್ಲಿ ಮೂಡಿಗೆರೆಯನ್ನು ಸೇರಿಸಬೇಕು. ನಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿ ಉಂಟಾದ ಪಾಕೃತಿಕ ವಿಕೋಪಗಳಿಗೆ ಪರಿಹಾರ ಕೊಡಬೇಕು. 2019 ರಲ್ಲಿ ತಾಲೂಕಿನಾದ್ಯಂತ ತೀವ್ರ ಅತಿವೃಷ್ಟಿಯಾಗಿತ್ತು. 6 ಜನ ಮನೆ ಸಮೇತ ಕೊಚ್ಚಿಹೋಗಿದ್ದರು. ಮನೆಗಳು, ಕಾಫಿತೋಟ ಸಂಪೂರ್ಣ ನಾಶವಾಗಿತ್ತು. ಆದರೂ ಪರಿಹಾರ ನೀಡದೇ ನಿರ್ಲಕ್ಷ್ಯ ಮಾಡಲಾಗಿದೆ ಎಂದು ಕುಮಾರಸ್ವಾಮಿ ಆರೋಪಿಸಿದರು.
ಶಿವಮೊಗ್ಗ ನಗರ ಎನ್ ಡಿ ಆರ್ ಎಫ್ ವ್ಯಾಪ್ತಿಗೆ ಸೇರುತ್ತದೆ. ಆದರೆ ಮೂಡಿಗೆರೆಯಲ್ಲಿ 900 ಸೆಂಟಿ ಮೀಟರ್ ಮಳೆಯಾಗಿದ್ದರೂ ಈ ಕ್ಷೇತ್ರವನ್ನು ಸೇರಿಸಿಲ್ಲ. ನಾನು 2018 ರಲ್ಲಿ ಶಾಸಕನಾದಾಗ ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದರು. ಕುಮಾರಸ್ವಾಮಿ ಸಿಎಂ ಆದಾಗ ನನ್ನ ಕ್ಷೇತ್ರಕ್ಕೆ ಅನುದಾನ ಬಿಡುಗಡೆ ಆಗಿತ್ತು. ಆದರೆ ನಮ್ಮದೇ ಸರ್ಕಾರ ಇದ್ದರೂ ನಿರ್ಲಕ್ಷ್ಯ ಮಾಡಲಾಗುತ್ತಿದೆ ಎಂದು ಎಂ.ಪಿ. ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.
ನಮ್ಮ ಧ್ವನಿಗೆ ನಮ್ಮ ಸರ್ಕಾರದಲ್ಲೇ ಬೆಲೆ ಸಿಗುತ್ತಿಲ್ಲ. ಮೀಸಲು ಕ್ಷೇತ್ರ ಎಂಬ ಕಾರಣಕ್ಕೆ ಕಡೆಗಣಿಸುತ್ತಿದ್ದಾರೆ. ನಮ್ಮ ಸರ್ಕಾರವೇ ಈ ರೀತಿಯ ತಾರತಮ್ಯ ಮಾಡಬಾರದು. ಆದಷ್ಟು ಬೇಗ ಜನರಲ್ ಕ್ಷೇತ್ರ ಆಗಲಿ. ಕಂದಾಯ ಸಚಿವ ಆರ್ ಅಶೋಕ್ ಅವರು ಈ ಅನ್ಯಾಯ ಮಾಡಿದ್ದಾರೆ ಎಂದು ನಾನು ಹೇಳಲಾರೆ. ಎಲ್ಲ ಉಸ್ತುವಾರಿ ಮಂತ್ರಿಗಳು ಕ್ಷೇತ್ರಕ್ಕೆ ಬರುತ್ತಾರೆ ಆದರೆ ಏನೂ ಮಾಡುವುದಿಲ್ಲ. ಇವರಿಗೆ ಬರಿ ಮಾತಲ್ಲಿ ಹೇಳಿದರೆ ಅರ್ಥ ಆಗುವುದಿಲ್ಲ. ಅದಕ್ಕಾಗಿ ನಾನು ಇಲ್ಲ ಕೂತು ಧರಣಿ ನಡೆಸಲು ನಿರ್ಧರಿಸಿದ್ದೇನೆ ಎಂದರು.