ರಾಜಸ್ಥಾನ ವಿಧಾನಸಭೆಗೆ ದನವನ್ನು ಕರೆತಂದ ಬಿಜೆಪಿ MLA: ಶಾಸಕ ಮಾತಾಡುತ್ತಿದ್ದಂತೆ ಓಡಿಹೋಯ್ತು!

Prasthutha|

ಜೈಪುರ: ಚರ್ಮದ ರೋಗದ ಬಗ್ಗೆ ರಾಜ್ಯ ಸರ್ಕಾರದ ಗಮನ ಸೆಳೆಯಲು ಬಿಜೆಪಿ ಶಾಸಕರೊಬ್ಬರು ಸೋಮವಾರ ವಿಧಾನಸಭೆಯ ಆವರಣದ ಹೊರಗೆ ದನವನ್ನು ಕರೆತಂದಿದ್ದು, ಶಾಸಕರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುತ್ತಿದ್ದಾಗ, ಅತಿಯಾದ ಶಬ್ದದಿಂದಾಗಿ ಕೋಪಗೊಂಡ ಹಸು ಸ್ಥಳದಿಂದ ಓಡಿಹೋದ ಘಟನೆ ನಡೆದಿದೆ.

- Advertisement -

ರಾಜಸ್ಥಾನ ವಿಧಾನಸಭೆಯ ಏಳನೇ ಅಧಿವೇಶನ ಸೋಮವಾರ ಪುನರಾರಂಭಗೊಂಡಿದ್ದು, ಪುಷ್ಕರ್ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಸುರೇಶ್ ಸಿಂಗ್ ರಾವತ್ ಹಸುವಿನೊಂದಿಗೆ ವಿಧಾನಸಭಾ ಆವರಣಕ್ಕೆ ಬಂದಿದ್ದರು. ಕೈಯಲ್ಲಿ ಕೋಲು ಹಿಡಿದು ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕರು, ಹಸುಗಳು ಗಡ್ಡೆ ಚರ್ಮ ರೋಗದಿಂದ ಬಳಲುತ್ತಿವೆ ಆದರೆ ರಾಜ್ಯ ಸರ್ಕಾರ ಗಾಢ ನಿದ್ರೆಯಲ್ಲಿದೆ, ಗಡ್ಡೆ ರೋಗದ ಬಗ್ಗೆ ಗಮನ ಸೆಳೆಯಲು, ನಾನು ಹಸುವನ್ನು ವಿಧಾನಸಭೆಗೆ ತಂದಿದ್ದೇನೆ ಎಂದು ರಾವತ್ ಹೇಳಿದರು.

- Advertisement -

ರಾವತ್ ಮಾಧ್ಯಮಗಳೊಂದಿಗೆ ಮಾತಾಡುವ ಸಂದರ್ಭದಲ್ಲಿ ದನ ಅಲ್ಲಿಂದ ಓಡಿ ಹೋಗಿದ್ದು, ಹಸು ಓಡಿಹೋಗುತ್ತಿದ್ದಂತೆ, ನೋಡಿ, ‘ಗೋಮಾತೆ’ ಕೂಡ ಸರ್ಕಾರದ ಮೇಲೆ ಕೋಪಗೊಂಡಿದ್ದಾಳೆ ಎಂದು ಹೇಳಿದರು. ರೋಗದಿಂದ ಬಾಧಿತವಾದ ಹಸುಗಳನ್ನು ನೋಡಿಕೊಳ್ಳಲು ಔಷಧಿಗಳು ಮತ್ತು ಲಸಿಕೆಗಳು ಇತ್ಯಾದಿಗಳಿಗೆ ವ್ಯವಸ್ಥೆ ಮಾಡಬೇಕು ಎಂದು ಅವರು ಸರ್ಕಾರವನ್ನು ಒತ್ತಾಯಿಸಿದರು.

ಸದನದ ಒಳಗೆ ರಾಷ್ಟ್ರೀಯ ಲೋಕತಾಂತ್ರಿಕ ಪಕ್ಷದ (ಆರ್ಎಲ್ಪಿ) ಮೂವರು ಶಾಸಕರು, ತಮ್ಮ ಕೈಗಳಲ್ಲಿ ‘ಗೋಮಾತಾ ಕರೇ ಪುಕಾರ್, ಹಮ್ ಬಚಾವೋ ಸರ್ಕಾರ್’ ಎಂಬ ಭಿತ್ತಿಪತ್ರಗಳನ್ನು ಹಿಡಿದು, ಸದನದ ಬಾವಿಯಲ್ಲಿ ಧರಣಿ ಕುಳಿತು ಘೋಷಣೆಗಳನ್ನು ಕೂಗಿದರು.

ಅಧಿವೇಶನ ಆರಂಭಕ್ಕೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್, ಕೇಂದ್ರ ಸರ್ಕಾರವು ಗಡ್ಡೆ ರೋಗವನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಬೇಕು, ಗಡ್ಡೆ ಚರ್ಮ ರೋಗದಿಂದ ಹಸುಗಳ ಜೀವವನ್ನು ಹೇಗೆ ಉಳಿಸುವುದು ಎಂಬುದು ನಮ್ಮ ಆದ್ಯತೆಯಾಗಿದೆ. ಕೇಂದ್ರವು ಲಸಿಕೆ ಮತ್ತು ಔಷಧಿಗಳನ್ನು ನೀಡಬೇಕು, ಆದ್ದರಿಂದ ಅಂತಹ ಪರಿಸ್ಥಿತಿಯಲ್ಲಿ ನಾವು ಇದನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸುವಂತೆ ಕೇಂದ್ರವನ್ನು ಒತ್ತಾಯಿಸುತ್ತಿದ್ದೇವೆ ಎಂದು ಹೇಳಿದರು.

Join Whatsapp