ಜೂಜಾಟದ ವಿಚಾರದಲ್ಲಿ ಸ್ನೇಹಿತರಾದ ಸುನೀಲ್, ಮುಬಾರಕ್ ನಡುವೆ ಹಲ್ಲೆ: ಶಾಸಕ ಬಿ.ಕೆ.ಸಂಗಮೇಶ್ವರ್ ಸ್ಪಷ್ಟನೆ

Prasthutha|

►ವೈಯಕ್ತಿಕ ಜಗಳವನ್ನು ಕೋಮು ದ್ವೇಷಕ್ಕೆ ಬಳಸುತ್ತಿರುವ ಬಿಜೆಪಿ

ಶಿವಮೊಗ್ಗ: ಭದ್ರಾವತಿಯಲ್ಲಿ ನಡೆದ ಹಲ್ಲೆ ಪ್ರಕರಣ ಕೋಮು ಹಿನ್ನೆಲೆಯಿಂದ ನಡೆದಿಲ್ಲ. ಅದು ಸ್ನೇಹಿತರಿಬ್ಬರ ನಡುವೆ ನಡೆದ ಜಗಳವಾಗಿದೆ ಎಂದು ಭದ್ರಾವತಿ ಕಾಂಗ್ರೆಸ್ ಶಾಸಕ ಬಿ. ಕೆ. ಸಂಗಮೇಶ್ವರ್ ಹೇಳಿದ್ದಾರೆ.

- Advertisement -

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆದರೆ ಈ ಹಲ್ಲೆ ಪ್ರಕರಣಕ್ಕೆ ಬಿಜೆಪಿ ಕೋಮು ಬಣ್ಣ ಬಳಿಯುತ್ತಿದೆ. ಯುವಕರಾದ ಸುನೀಲ್ ಮತ್ತು ಆರೋಪಿ ಮುಬಾರಕ್ ಇಬ್ಬರೂ ಸ್ನೇಹಿತರು. ಜೂಜಾಟದ ವಿಚಾರವಾಗಿ ಸುನೀಲ್ ಮೇಲೆ ಮುಬಾರಕ್ ಹಲ್ಲೆ ನಡೆಸಿದ್ದಾನೆ. ಸುನೀಲ್ ಮೂಗಿಗೆ ಸಣ್ಣಪುಟ್ಟ ಗಾಯವಾಗಿದ್ದು ಬಿಟ್ಟರೆ ಯಾವುದೇ ಗಂಭೀರ ಗಾಯವಾಗಿಲ್ಲ ಎಂದು ಸ್ಪಷ್ಟಪಡಿಸಿದರು.

 ಭದ್ರಾವತಿಯಲ್ಲಿ ಶಾಂತಿ ಕದಡಲು ಹಿಂದಿನಿಂದಲೇ ಪ್ರಯತ್ನಿಸುತ್ತಿದ್ದ ಬಿಜೆಪಿ ಮತ್ತು ಬಜರಂಗದಳ ಈ ವಿಷಯವನ್ನು ಮುಂದಿಟ್ಟು ಭದ್ರಾವತಿಯಲ್ಲಿ ಕೋಮು ಗಲಭೆಗೆ ಸಂಚು ರೂಪಿಸಿದೆ. ಆದರೆ, ಇಲ್ಲಿ ಎಲ್ಲಾ ಧರ್ಮದವರು ಶಾಂತಿಯುತವಾಗಿ ವಾಸಿಸುತ್ತಿರುವುದರಿಂದ  ಇಲ್ಲಿ ಬಿಜೆಪಿಯವರ ಬೇಳೆ ಬೇಯುವುದಿಲ್ಲ ಎಂದು ಹೇಳಿದರು.

ಆತ್ಮಸಾಕ್ಷಿ ಎಂಬುದು ಇದ್ದರೆ ಬಿಜೆಪಿಯವರು ಭದ್ರಾವತಿಯಲ್ಲಿ ವೈಯುಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ನಡೆದ ಗಲಾಟೆಯನ್ನ ಕೋಮುಗಲಭೆ ಅಂತ ಸಾಬೀತುಪಡಿಸಲಿ. ಒಂದು ವೇಳೆ ಸಾಬೀತು ಪಡಿಸಿದರೆ  ತಾನು ರಾಜಕೀಯದಿಂದ ನಿವೃತ್ತಿ ಕೈಗೊಳ್ಳುವುದಾಗಿ ಶಾಸಕ ಸಂಗಮೇಶ್ವರ್ ತಿಳಿಸಿದರು. 

ಬಿಜೆಪಿ ಮತ್ತು ಬಜರಂಗದಳ ನಾಯಕರು ಸುನಿಲ್ ನನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲು ಬಿಡುತ್ತಿಲ್ಲ ಎಂದು ಆರೋಪಿಸಿದ ಅವರು, ಶಿವಮೊಗ್ಗ ಶಾಸಕ ಕೆ ಎಸ್ ಈಶ್ವರಪ್ಪ ಅವರು ಸುನೀಲ್ ಅವರನ್ನು ಮೆಗ್ಗಾನ್ ಆಸ್ಪತ್ರೆಗೆ ಸ್ಥಳಾಂತರಿಸುವಂತೆ ವೈದ್ಯರಿಗೆ ಮನವಿ ಮಾಡಿದ್ದಾರೆ ಎಂದರು.

- Advertisement -