ಬಿಜೆಪಿ ಕೆಲವರ ಭಾವಚಿತ್ರಗಳನ್ನು ಪ್ರಚಾರಕ್ಕಾಗಿ ದುರ್ಬಳಕೆ ಮಾಡಿದೆ: ಮಧು ಬಂಗಾರಪ್ಪ ಆರೋಪ

Prasthutha|

ಬೆಂಗಳೂರು: ಬಿಜೆಪಿ ಪಕ್ಷವು ತನ್ನ ಪ್ರಚಾರಕ್ಕಾಗಿ ದೇವರಾಜ ಅರಸು, ವಿರೇಂದ್ರ ಪಾಟೀಲ್, ಬಂಗಾರಪ್ಪನವರ ಭಾವಚಿತ್ರವನ್ನು ದುರ್ಬಳಕೆ ಮಾಡಿಕೊಂಡಿದೆ ಎಂದು ಕಾಂಗ್ರೆಸ್ ಮುಖಂಡ ಮಧು ಬಂಗಾರಪ್ಪ ಆರೋಪಿಸಿದ್ದಾರೆ.

- Advertisement -

ಇಂದು ಬೆಂಗಳೂರಿನಲ್ಲಿ ನಡೆದ ಜಂಟಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಬಿಜೆಪಿಯ ಮಾಧ್ಯಮಗಳಲ್ಲಿನ ಜಾಹೀರಾತು ಪ್ರಚಾರದಲ್ಲಿ ಬಿಜೆಪಿ ಚಿಹ್ನೆ ಇದೆ. ಆದರೆ ಅದರಲ್ಲಿರುವ ನಾಯಕರಾರೂ ಬಿಜೆಪಿಯವರಲ್ಲ. ಈ ಎಲ್ಲ ನಾಯಕರು ಈ ರಾಜ್ಯವನ್ನು ಆಳಿರುವ ಪ್ರಬಲ ಕಾಂಗ್ರೆಸ್ ನಾಯಕರಾಗಿದ್ದಾರೆ ಎಂದು ತಿಳಿಸಿದ್ದಾರೆ.

ದೇವರಾಜ ಅರಸು, ವಿರೇಂದ್ರ ಪಾಟೀಲ್, ಬಂಗಾರಪ್ಪನವರ ಭಾವಚಿತ್ರವನ್ನು ಬಿಜೆಪಿ ಬಳಸಿಕೊಂಡಿದ್ದು, ಇವರನ್ನು ಮುಖ್ಯಮಂತ್ರಿಗಳನ್ನಾಗಿ ಮಾಡಿದ್ದು ಕಾಂಗ್ರೆಸ್ ಪಕ್ಷ. ಇವರು ತಮ್ಮ ರಾಜಕೀಯ ಜೀವನದಲ್ಲಿ ಕೆಲವು ನಿರ್ಧಾರ ತೆಗೆದುಕೊಂಡಿರುತ್ತಾರೆ. ಆದರೆ ಬಿಜೆಪಿಯವರು ಇದನ್ನು ದುರ್ಬಳಕೆ ಮಾಡಿಕೊಂಡಿದೆ ಎಂದು ಆರೋಪಿಸಿದರು.

- Advertisement -

ಈ ನಾಯಕರು ಹಿಂದುಳಿದ ವರ್ಗಕ್ಕೆ ಸೇರಿದ್ದು, ಇವರು ಬಡವರು ಹಾಗೂ ಹಿಂದುಳಿದವರಿಗೆ ಶಕ್ತಿ ತುಂಬುವ ಕೆಲಸ ಮಾಡಿದ್ದಾರೆ. ಭಾರತ ಜೋಡೋ ಯಾತ್ರೆ ಆರಂಭವಾದ ನಂತರ ನಾವು ಬಿಜೆಪಿಗೆ ಕೆಲವು ಪ್ರಶ್ನೆಗಳನ್ನು ಕೇಳುತ್ತಿದ್ದೇವೆ. ಅವರು ಕೊಟ್ಟ ಭರವಸೆಗಳ ಬಗ್ಗೆಯೇ ಪ್ರಶ್ನೆ ಮಾಡುತ್ತಿದ್ದೇವೆ. ಆದರೆ ಅವರು ಇಂದು ನಮಗೆ ಪ್ರಶ್ನೆ ಹಾಕಿದ್ದು, ರಾಹುಲ್ ಗಾಂಧಿ ಅವರ ಮಾತು ಭೂತದ ಬಾಯಲ್ಲಿ ಭಗವದ್ಗೀತೆ ಎಂದು ಹೇಳಿರುವುದು ವಿಷಾಧನೀಯ ಎಂದರು.

ಬಿಜೆಪಿಯವರು ಒಂದು ವಿಚಾರ ಅರ್ಥ ಮಾಡಿಕೊಳ್ಳಬೇಕು. ಮಂಗಳೂರು ಹಾಗೂ ಕರಾವಳಿ ಭಾಗದಲ್ಲಿ ಮೈಮೇಲೆ ಭೂತ ದೇವರು ಬಂದಾಗ ಭವದ್ಗೀತೆ ಅತ್ಯುತ್ತಮವಾಗಿ ಬರುತ್ತದೆ. ಕಾಂಗ್ರೆಸ್ ಪಕ್ಷ ಬಂಗಾರಪ್ಪ, ವೀರೇಂದ್ರ ಪಾಟೀಲ್, ದೇವರಾಜ ಅರಸು ಅವರನ್ನು ಮೂಲೆಗೆ ಕೂರಿಸಿದ್ದಾರೆ ಎಂದು ಪತ್ರಿಕೆಗಳಲ್ಲಿ ಸುಳ್ಳು ಜಾಹೀರಾತು ನೀಡಿದ್ದು, ಅವರು ಮತ್ತೊಂದು ಜಾಹೀರಾತು ನೀಡಿ, ಬಿಜೆಪಿ ಪಕ್ಷ ಕಟ್ಟಿದ ಲಾಲ ಕೃಷ್ಣ ಆಡ್ವಾಣಿ, ಮುರಳಿ ಮನೋಹರ್ ಜೋಷಿ, ಗೋವಿಂದ ಆಚಾರ್ಯ, ಬಿ.ವಿ ಶಿವಪ್ಪ, ಸಂಜಯ್ ಸಿಂಗ್ ಸೇರಿದಂತೆ ಹಲವು ನಾಯಕರನ್ನು ಎಲ್ಲಿ ಕೂರಿಸಿದ್ದಾರೆ ಎಂಬ ಬಗ್ಗೆ ಜಾಹೀರಾತು ನೀಡಲಿ ಎಂದು ಅವರು ಸವಾಲು ಹಾಕಿದರು.

ಬಿಜೆಪಿಯವರು ನಮ್ಮ ತಂದೆ ಅವರ ಫೋಟೋ ಹಾಕುವ ಮುನ್ನ ಒಂದು ವಿಚಾರ ಅರಿಯಬೇಕು. ಬಿಜೆಪಿಗೆ ಇಂದು ಇಷ್ಟು ಶಕ್ತಿ ಬರಬೇಕು ಎಂದರೆ ಅವರು ಬಿಜೆಪಿಗೆ 9 ತಿಂಗಳು ಇದ್ದಿದ್ದಕ್ಕೆ ಎಂದು ಜನರು, ರಾಜಕೀಯ ವಿಶ್ಲೇಷಕರು ಎಲ್ಲರೂ ಹೇಳಿದ್ದಾರೆ. ಆದರೂ ಅವರು 9 ತಿಂಗಳು ಬಿಜೆಪಿ ಪಕ್ಷದಲ್ಲಿ ಇರಲು ಆಗಲಿಲ್ಲ. ನಂತರ ಅವರದೇ ಆದ ಹಾದಿ ಹಿಡಿದರು. ಯಾರಾದರೂ ಹೆಸರು ಬಳಸಿಕೊಳ್ಳುವಾಗ ಈ ರಾಜ್ಯಕ್ಕೆ ಅವರು ಕೊಟ್ಟಿರುವ ಕೊಡುಗೆ ಅರ್ಥ ಮಾಡಿಕೊಳ್ಳಬೇಕು ಎಂದು ಕಿಡಿಕಾರಿದರು.

ಬಿಜೆಪಿಯವರಿಗೆ ಮಾನ ಮರ್ಯಾದೆ ಇದ್ದರೆ ದೇವರಾಜ ಅರಸು, ವಿರೇಂದ್ರ ಪಾಟೀಲ್ ಹಾಗೂ ಬಂಗಾರಪ್ಪನವರ ಕೆಲಸಗಳ ಬಗ್ಗೆ ಜಾಹೀರಾತು ನೀಡಿದ್ದರೆ, ಅವರಿಗೆ ಸ್ವಲ್ಪ ಹೆಸರಾದರೂ ಬರುತ್ತಿತ್ತು. ಆಸ್ರಯ, ಆರಾಧನಾ, ಗ್ರಾಮೀಣ ಕೃಪಾಂಕದಂತಹ ಯೋಜನೆ ತಂದಿದ್ದರು. ಇವರು ವಿದ್ಯುತ್ ಬಿಲ್ ನೀಡುವುದಿಲ್ಲ, ಭೂಹಕ್ಕು ವಾಪಸ್ ಪಡೆಯುವುದಿಲ್ಲ ಎಂಬ ನಿರ್ಧಾರ ಮಾಡಲಿ ನೋಡೋಣ. ಅರಣ್ಯ ಹಕ್ಕು ಕಾಯ್ದೆಯಲ್ಲಿ ರೈತರನ್ನು ಭೂಗಳ್ಳರು ಎಂದು ನ್ಯಾಯಾಲಯಕ್ಕೆ ಅಲೆಯುವಂತೆ ಮಾಡಿದ್ದಾರೆ ಎಂದು ಆರೋಪಿಸಿದರು.

ಭ್ರಷ್ಟಾಚಾರದ ಹಣದಲ್ಲಿ ಜನರಿಗೆ ತಪ್ಪು ಸಂದೇಶ ನೀಡತ್ತಿದ್ದಾರೆ. ಇದು ಬಿಜೆಪಿಯ ನೀಚ ಬುದ್ಧಿ. ಬೇರೆಯವರ ಬಗ್ಗೆ ಮಾತನಾಡುವ ಬಿಜೆಪಿ ಯಡಿಯೂರಪ್ಪನವರ ಬಗ್ಗೆ ಯಾಕೆ ಹಾಕಿಲ್ಲ. ಅವರು ಕೆಜೆಪಿ ಪಕ್ಷ ಕಟ್ಟಿದಾಗ ಅವರ ವಿರುದ್ಧ ಹೇಗೆ ಬಿಜೆಪಿ ನಾಯಕರು ಮಾತನಾಡಿದ್ದಾರೆ ಒಮ್ಮೆ ಯೋಚಿಸಲಿ. ಅವರ ವಿರುದ್ಧ ಕೇಸುಗಳನ್ನು ಹಾಕಿದವರು ಯಾರು? ಅವರನ್ನು ಅಧಿಕಾರದಿಂದ ಕೆಳಗೆ ಇಳಿಸಿದ್ದು ಯಾರು? ಬಿಜೆಪಿ ಕೀಳು ಮಟ್ಟದ ರಾಜಕೀಯ ಬಿಟ್ಟು ತಮ್ಮ ಸರ್ಕಾರದ ಸಾಧನೆ ಬಗ್ಗೆ ಮಾತನಾಡಲಿ ಎಂದು ಸವಾಲೆಸೆದರು.

ಈ ಜಾಹೀರಾತಿನಲ್ಲಿ ನಮ್ಮ ತಂದೆ ಹೆಸರನ್ನು ತೆಗೆದುಕೊಳ್ಳುವ ಯೋಗ್ಯತೆ ಇಲ್ಲ ಎಂದು ಹೇಳಿರುವುದಾಗಿ ಬಿಜೆಪಿ ತಿಳಿಸಿದೆ. ನಮ್ಮ ತಂದೆಯವರ ಮೇಲೆ ಸಿಬಿಐ ಕೇಸು ದಾಖಲಿಸಲಾಗಿತ್ತು. ನಾವು 18 ವರ್ಷಗಳ ಕಾಲ ಹೋರಾಟ ಮಾಡಿದ್ದೆ. ಅವರು ನಿರಪರಾಧಿಯಾಗಿ ನಮ್ಮನ್ನು ಅಗಲಿದ್ದಾರೆ. ಈ ಹೇಳಿಕೆ ನೀಡಿದಾಗ ನಾನು ಜೆಡಿಎಸ್ ಪಕ್ಷದಲ್ಲಿದ್ದು, ಸದನದಲ್ಲಿ ಮಾತನಾಡುವಾಗ ಈ ಪ್ರಕರಣದಲ್ಲಿ ಬಂಗಾರಪ್ಪನವರ ಹೆಸರನ್ನು ತೆಗೆದುಕೊಳ್ಳಬಾರದು ಎಂದು ಹೇಳಿದ್ದೆ. ಆದರೆ ಬಿಜೆಪಿಯವರು ನನ್ನ ಹೇಳಿಕೆಯನ್ನು ತಪ್ಪಾಗಿ ಬಳಸಿದ್ದಾರೆ ಎಂದು ದೂರಿದರು.

ಕಾಂಗ್ರೆಸ್ ಸರ್ಕಾರ ಇದ್ದಾಗ ಸಿದ್ದರಾಮಯ್ಯ ಅವರು ನಾವು ಪ್ರಣಾಳಿಕೆಯಲ್ಲಿ ನೀಡಿದ ಭರವಸೆಗಳಲ್ಲಿ ಇಂತಿಷ್ಟು ಭರವಸೆ ಈಡೇರಿಸಿದ್ದೇವೆ. ರಾಜ್ಯದ ಜನರಿಗಾಗಿ ಇಂತಹ ಯೋಜನೆಗಳನ್ನು ಮಾಡಿದ್ದೇವೆ ಎಂಬ ಜಾಹೀರಾತುಗಳನ್ನು ಮಾಧ್ಯಮಗಳಲ್ಲಿ ನೀಡುತ್ತಿದ್ದೆವು. ಆದರೆ ಬಿಜೆಪಿಯವರು ತಮ್ಮ ಸಾಧನೆಗಳ ಬಗ್ಗೆ ಜಾಹೀರಾತು ನೀಡಲಾಗದೆ ಕಾಂಗ್ರೆಸ್ ಪಕ್ಷದ ವಿರುದ್ಧ ಸುಳ್ಳು ಜಾಹೀರಾತು ನೀಡಲಾಗುತ್ತಿದೆ. ಮಹಾನ್ ನಾಯಕರ ವೈಯಕ್ತಿಕ ವಿಚಾರಗಳನ್ನು ಮುಂದಿಟ್ಟುಕೊಂಡು ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪತ್ರಿಕಾಗೋಷ್ಟಿಯನ್ನುದ್ದೇಶಿಸಿ ಮಾತನಾಡಿದ ಮತ್ತೋರ್ವ ಮುಖಂಡ ಎನ್.ಎ ಹ್ಯಾರಿಸ್, ಇಂದು ರಾಜಕೀಯ ಬಹಳ ಕೀಳುಮಟ್ಟಕ್ಕೆ ಹೋಗುತ್ತಿದೆ. ಭಾರತ ಜೋಡೋ ಯಾತ್ರೆ ಎಷ್ಟರ ಮಟ್ಟಿಗೆ ಯಶಸ್ವಿಯಾಗುತ್ತಿದೆ. ಜನಬೆಂಬಲ ಸಿಗುತ್ತಿದೆ ಎಂದು ಬಿಜೆಪಿಯವರು ಈ ಜಾಹೀರಾತುಗಳು ಹೇಳುತ್ತಿವೆ. 2014ರಲ್ಲಿ ಬಿಜೆಪಿ ಸರ್ಕಾರ ಬಂದಾಗ ಬಿಜೆಪಿ ಹೈಕಮಾಂಡ್ ಅನ್ನೇ ಮೂಲೆಗುಂಪು ಮಾಡಿದ್ದಾರೆ. ಇವರು ಯಾರಿಗೆ ಬುದ್ಧಿ ಹೇಳುತ್ತಿದ್ದಾರೆ? ಇವರು ತಾವು ಏನು ಮಾಡಿದ್ದೇವೆ ಎಂದು ಅರಿತು ನಮ್ಮ ಬಗ್ಗೆ ಮಾತನಾಡಲಿ ಎಂದು ಕುಟುಕಿದರು.

ಬಿಜೆಪಿ ಇಂತಹ ಮಹಾನ್ ನಾಯಕರ ಬಗ್ಗೆ ಮಾತನಾಡುವ ಯೋಗ್ಯತೆಯೂ ಇಲ್ಲ. ಆದರೂ ಇವರ ಹೆಸರು ಬಳಸಿಕೊಂಡು ಸುಳ್ಳು ಪ್ರಚಾರ ಮಾಡುತ್ತಿದ್ದಾರೆ. ಇವರು 15 ಲಕ್ಷ ಹಣ ನೀಡುತ್ತೇವೆ ಎಂಬ ಸುಳ್ಳಿನ ಮೂಲಕ ಇವರು ಸುಳ್ಳಿನ ಸರಪಳಿ ಆರಂಭಿಸಿದರು. ಇವರು ಬೆಲೆ ಏರಿಕೆ ವಿರುದ್ಧ ಮಾತನಾಡಿ ಅಧಿಕಾರಕ್ಕೆ ಬಂದರು. ಆದರೆ ಈಗ ಅಡುಗೆ ಅನಿಲ ಸಬ್ಸಿಡಿ ಕಿತ್ತುಕೊಂಡು 350 ರೂ ಇದ್ದ ಸಿಲಿಂಡರ್ ಅನ್ನು 1000 ರೂ ಮಾಡಿದ್ದಾರೆ. ಇದರಿಂದ ಜನಸಾಮಾನ್ಯರ ಬದುಕು ದುಸ್ಥರವಾಗಿದೆ ಎಂದು ಅವರು ದೂರಿದರು.

ಬಂಗಾರಪ್ಪ ಹಾಗೂ ದೇವರಾಜ ಅರಸು ಅವರನ್ನು ಮುಖ್ಯಮಂತ್ರಿ ಮಾಡಿದ್ದು ಕಾಂಗ್ರೆಸ್ ಪಕ್ಷ. ವಿರೇಂದ್ರ ಪಾಟೀಲರನ್ನು ಎರಡು ಬಾರಿ ಮುಖ್ಯಮಂತ್ರಿ ಮಾಡಿದ್ದು ಕಾಂಗ್ರೆಸ್. ಇವರಿಗೂ ಬಿಜೆಪಿಗೂ ಏನು ಸಂಬಂಧ? ರಾಜಕೀಯ ಪಕ್ಷದಲ್ಲಿ ಕೆಲ ಸಮಯದಲ್ಲಿ ಭಿನ್ನಾಭಿಪ್ರಾಯದ ಮೇಲೆ ಪಕ್ಷ ಬಿಡುವುದು ಪ್ರಜಾಪ್ರಭುತ್ವ ವ್ಯವಸ್ಥೆ ಭಾಗ. ಬಿಜೆಪಿಯವರು ತಮ್ಮ ಸಾಧನೆ ಬಗ್ಗೆ ಜಾಹೀರಾತು ನೀಡುವ ಬದಲು ಕಾಂಗ್ರೆಸ್ ಪಕ್ಷದ ವಿಚಾರದಲ್ಲಿ ಜಾಹೀರಾತು ನೀಡುತ್ತಿರುವುದೇಕೆ? ಎಂದು ಖಾರವಾಗಿ ಪ್ರಶ್ನಿಸಿದರು.

ರಾಹುಲ್ ಗಾಂಧಿ ಅವರ ಬಗ್ಗೆ ಕೆಟ್ಟ ಅಭಿಪ್ರಾಯ ಮೂಡಿಸಲು ಅವರು ಇಂತಹ ಪ್ರಯತ್ನ ಮಾಡುತ್ತಾ ಅಪಪ್ರಚಾರ ಮಾಡುತ್ತಾರೆ. ಅವರ ನಾಯಕರು ಕೂಡ ಕಾಶ್ಮೀರದಿಂದ ಪಾದಯಾತ್ರೆ ಮಾಡಲಿ, ಅವರು ಎಲ್ಲಿಯವರೆಗೂ ಮಾಡಲು ಸಾಧ್ಯ ನೋಡೋಣ. ಸರ್ಕಾರದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿರುವ ಕಾರಣ ನಾವು ಅದರ ಬಗ್ಗೆ ಮಾತನಾಡುತ್ತೇವೆ. ಇದನ್ನು ಬಿಜೆಪಿ ಕಾರ್ಯಕಾರಿ ಸಮಿತಿಯಲ್ಲಿ ಮುಖ್ಯಮಂತ್ರಿಗಳೇ ಒಪ್ಪಿಕೊಂಡಿದ್ದಾರೆ ಎಂದು ತಿಳಿಸಿದರು.

ಯಡಿಯೂರಪ್ಪ ಅವರನ್ನು ಯಾಕೆ ಅಧಿಕಾರದಿಂದ ಕೆಳಗೆ ಇಳಿಸಿದರು ಎಂದು ಹೇಳಲಿ. ನಾವು ವಿರೋಧ ಪಕ್ಷದಲ್ಲಿರುವಾಗ ನಾವು ನೆರಳಾಗಿ ಅವರ ತಪ್ಪನ್ನು ಪ್ರಶ್ನಿಸಬೇಕು. ಅದೇ ತಪ್ಪು ಎಂದರೆ ಹೇಗೆ? ಈ ಅಧಿಕಾರವನ್ನು ಕಸಿಯುವ ಪ್ರಯತ್ನ ಮಾಡಬಾರದು.ಭಾರತ ಜೋಡೋ ಬಗ್ಗೆ ಇವರು ಮಾತನಾಡಿದರೆ ನಾವು ಯಾವೆಲ್ಲ ವಿಚಾರವಾಗಿ ಮಾತನಾಡಬಹುದು. ನೋಟು ಅಮಾನ್ಯೀಕರಣ, ಜಿಎಸ್ ಟಿ ಬಗ್ಗೆ ಅವರು ಜಾಹೀರಾತು ನೀಡಲಿ ಎಂದು ಸವಾಲು ಹಾಕಿದರು.

ಇಂದು ಬಂಗಾರಪ್ಪ, ದೇವರಾಜ ಅರಸು ಹಾಗೂ ವಿರೇಂದ್ರ ಪಾಟೀಲರು ಎಂದರೆ ಅವರು ಹಾಗೂ ಕಾಂಗ್ರೆಸ್ ನಡುವಣ ಸಂಬಂಧವೇ ಕಣ್ಣಮುಂದೆ ಬರುತ್ತದೆ. ಆದರೆ ಬಿಜೆಪಿಯವರು ತಮ್ಮ ಪಕ್ಷಕ್ಕೆ ಸಂಬಂಧವೇ ಇಲ್ಲದ ವಿಚಾರವಾಗಿ ಜಾಹೀರಾತು ನೀಡುತ್ತಿರುವುದೇಕೆ? ಎಂದು ಅವರು ಪ್ರಶ್ನಿಸಿದರು.

Join Whatsapp