ಚುನಾವಣೆ ಸಮೀಪಿಸುತ್ತಿರುವಾಗ ರಾಜ್ಯದ ಬೊಕ್ಕಸ ಲೂಟಿ ಮಾಡುತ್ತಿರುವ ಬಿಜೆಪಿ: ಸಿದ್ದರಾಮಯ್ಯ

Prasthutha|

ಬೆಂಗಳೂರು: ಚುನಾವಣೆ ಸಮೀಪಿಸುತ್ತಿರುವಾಗ ರಾಜ್ಯ ಬಿಜೆಪಿ ಸರ್ಕಾರ ರಾಜ್ಯದ ಬೊಕ್ಕಸವನ್ನು ಯದ್ವಾತದ್ವಾ ಲೂಟಿ ಮಾಡಲು ಆರಂಭ ಮಾಡಿದೆ. ಚುನಾವಣೆಗೆ ಇನ್ನು ಕೆಲವೇ ದಿನಗಳು ಬಾಕಿ ಇದ್ದು ಚುನಾವಣೆಗೆ ದುಡ್ಡು ಮಾಡಿಕೊಳ್ಳುವ ಉದ್ದೇಶದಿಂದ ಬೇಕಾಬಿಟ್ಟಿ ಟೆಂಡರ್’ಗೆ ಅನುಮತಿ ನೀಡುತ್ತಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ.
ಕೆಪಿಸಿಸಿ ಅಧ್ಯಕ್ಷರೊಂದಿಗೆ ಜಂಟಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಯಾವೆಲ್ಲ ಶಾಸಕರಿಗೆ ಮಂತ್ರಿ ಆಗದೆ ಇರುವುದರಿಂದ ಅಸಮಧಾನ ಇದೆ ಅವರಿಗೆ ದುಡ್ಡು ಮಾಡಿಕೊಡಲು ತರಾತುರಿನಲ್ಲಿ ಕೆಬಿಜೆ’ಎಲ್ ನಲ್ಲಿ, ವಿಶ್ವೇರಯ್ಯ ನೀರಾವರಿ ನಿಗಮದಲ್ಲಿ, ಕರ್ನಾಟಕ ನೀರಾವರಿ ನಿಗಮದಲ್ಲಿ ಸಭೆಯನ್ನು ಕರೆದು ಯೋಜನೆಗಳಿಗೆ ಅನುಮೋದನೆ ಪಡೆಯುತ್ತಿದ್ದಾರೆ, ಇದರಲ್ಲಿ ಪಾರದರ್ಶಕತೆ ಇಲ್ಲ. ಟೆಂಡರ್ ಹಣವನ್ನು ಕೂಡ ಎರಡು, ಮೂರು ಪಟ್ಟು ಹೆಚ್ಚಿಗೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದರು.
ರಾಜ್ಯದಲ್ಲಿ ಜನಜನಿತವಾಗಿರುವ 40% ಕಮಿಷನ್’ನ ಮುಂದುವರೆದ ಭಾಗವಿದು. ಜನರ ತೆರಿಗೆ ಹಣವನ್ನು ರಕ್ಷಣೆ ಮಾಡಬೇಕಾಗಿರುವುದು ನಮ್ಮೆಲ್ಲರ ಜವಾಬ್ದಾರಿ. ಟೆಂಡರ್ ಹಣವನ್ನು ಹೆಚ್ಚು ಮಾಡಿದ್ದಾರೆ, ಯಾರು ಹೆಚ್ಚು ಕಮಿಷನ್ ನೀಡುತ್ತಾರೆ ಅವರಿಗೆ ಕಾಮಗಾರಿ ಕೊಡುತ್ತಿದ್ದಾರೆ, ತಮಗೆ ಬೇಕಾದ ಗುತ್ತಿಗೆದಾರರನ್ನು ಹುಡುಕಿ ಕೆಲಸ ನೀಡುತ್ತಿದ್ದಾರೆ. ಹೀಗೆ ಮಾಡಿ ಕಮಿಷನ್ ವಸೂಲಿ ಮಾಡಿಕೊಳ್ಳುತ್ತಿದ್ದಾರೆ. ಲೋಕೋಪಯೋಗಿ, ನೀರಾವರಿ, ಬಿಬಿಎಂಪಿ, ಗ್ರಾಮೀಣಾಭಿವೃದ್ಧಿ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳಲ್ಲಿ ಸುಮಾರು 20,000 ಕೋಟಿ ರೂ. ಬಾಕಿ ಬಿಲ್ ಇದೆ. 10% ಕಮಿಷನ್ ಕೊಟ್ಟವರಿಗೆ ಕೆಲಸ ಮಾರಾಟ ಮಾಡುವ ನಡೆಯುತ್ತಿದೆ, ಇದು ಮುಖ್ಯಮಂತ್ರಿ ಕಚೇರಿಯಿಂದಲೇ ಆರಂಭವಾದುದ್ದು. ಇದನ್ನು ತಡೆಗಟ್ಟಬೇಕಾದುದ್ದು ಅಗತ್ಯ. ಇದನ್ನು ಸದನದಲ್ಲಿ ಕೂಡ ಪ್ರಸ್ತಾಪ ಮಾಡುತ್ತೇವೆ ಎಂದರು.
ಸರ್ಕಾರಕ್ಕೆ, ಗುತ್ತಿಗೆದಾರರಿಗೆ, ಅಧಿಕಾರಿಗಳಿಗೆ ಮಾಧ್ಯಮಗಳ ಮೂಲಕ ಎಚ್ಚರಿಕೆ ನೀಡುತ್ತಿದ್ದೇವೆ, ಮುಂದೆ ಕಾನೂನುಬಾಹಿರವಾಗಿ ಈ ರೀತಿ ಮಾಡಿದರೆ ನೀವು ಸಿಕ್ಕಿಹಾಕಿಕೊಳ್ಳುತ್ತೀರ, ಈ ವಿಚಾರವನ್ನು ತಾತ್ವಿಕ ಅಂತ್ಯ ಕಾಣಿಸುವವರೆಗೆ ನಾವು ಬಿಡುವುದಿಲ್ಲ. ನ್ಯಾಯಾಲಯದಲ್ಲಿ ಇವರ ವಿರುದ್ಧ ನಾವು ಸಿವಿಲ್ ಮತ್ತು ಕ್ರಿಮಿನಲ್ ಮೊಕದ್ದಮೆ ದಾಖಲಿಸುತ್ತೇವೆ, ಇಂದು ರಾಜ್ಯದಲ್ಲಿ ಕಾಂಗ್ರೆಸ್ ಪರವಾದ ಗಾಳಿ ಬೀಸಲು ಆರಂಭವಾಗಿದೆ, ಹೀಗಾಗಿ ಮುಂದೆ ಮತ್ತೆ ನಾವು ಅಧಿಕಾರಕ್ಕೆ ಬಂದೇ ಬರುತ್ತೇವೆ, ನಾವು ತನಿಖಾ ಆಯೋಗ ರಚನೆ ಮಾಡಿ ಎಲ್ಲವನ್ನೂ ತನಿಖೆ ಮಾಡಿಸಿ, ಯಾರ ಮೇಲೆ ಭ್ರಷ್ಟಾಚಾರದ ಆರೋಪಗಳಿವೆ ಅವೆಲ್ಲವನ್ನೂ ಬಯಲಿಗೆಳೆಯುತ್ತೇವೆ. ಇದಕ್ಕೆ ಪೂರಕವಾಗಿ ಗೂಳಿಹಟ್ಟಿ ಶೇಖರ್ ಅವರು ಜಲಸಂಪನ್ಮೂಲ ಇಲಾಖೆಯ ಅಪರ ಮುಖ್ಯಕಾರ್ಯದರ್ಶಿ ಅವರಿಗೆ ಪತ್ರ ಬರೆದು ಕೆಬಿಜೆಎನ್‌ಎಲ್, ವಿಜಿಜೆಎಎನ್‌ಎಲ್, ಕೆಎನ್‌ಎನ್‌ಎಲ್ ಹೀಗೆ ಹಲವು ನೀರಾವರಿ ನಿಗಮಗಳಲ್ಲಿ ಅಕ್ರಮವಾಗಿ ನಡವಳಿಕೆಗಳನ್ನು ಮಾಡಿಕೊಂಡು ಒಂದೇ ದಿನ ಸುಮಾರು 18,000 ಕೋಟಿಗೆ ನೀಡಿರುವ ಟೆಂಡರ್, ವರ್ಕ್ ಆರ್ಡರ್ ಗೆ ನೀಡಿರುವ ರದ್ದುಪಡಿಸಿ ಮರು ಟೆಂಡರ್ ಗೆ ಆದೇಶ ನೀಡಿರುವುದನ್ನು ರದ್ದು ಮಾಡಬೇಕು ಎಂದು ಪತ್ರ ಬರೆದಿದ್ದಾರೆ. ಈ ರೀತಿ ಎಲ್ಲಾ ಶಾಸಕರು ಹೇಳಿದ್ದಾರೆ, ಚುನಾವಣೆ ಕಾಲ ಬಂದಿರುವುದರಿಂದ ಹಣ ಸಂಗ್ರಹ ಮಾಡಿಕೊಳ್ಳಲು ರಾಜ್ಯದ ಖಜಾನೆಯನ್ನು ಲೂಟಿ ಮಾಡಲು ಹೊರಟಿದ್ದಾರೆ. ಪ್ರತೀ ಓಟಿಗೆ 6000 ರೂ. ನೀಡುತ್ತೇವೆ ಎಂದು ಬಹಿರಂಗವಾಗಿ ಹೇಳುತ್ತಿದ್ದಾರೆ. ಇಂಥ ಕೆಟ್ಟ ರಾಜಕೀಯವನ್ನು ನಾನು ಎಂದೂ ನೋಡಿರಲಿಲ್ಲ. ಇದನ್ನು ತಡೆಗಟ್ಟದೆ ಹೋದರೆ ರಾಜ್ಯ ಉಳಿಯುವುದಿಲ್ಲ. ಹೀಗಾಗಿ ಮಾಧ್ಯಮಗಳ ಮೂಲಕ ಅಧಿಕಾರಿಗಳಿಗೆ, ಸರ್ಕಾರಕ್ಕೆ ಎಚ್ಚರಿಕೆ ನೀಡಬೇಕು ಎಂದು ಸುದ್ದಿಗೋಷ್ಠಿ ಮಾಡಿದ್ದೇವೆ ಎಂದರು.
ಮಾತೆತ್ತಿದರೆ ದಾಖಲೆ ಕೊಡಿ ಎಂದು ಕೇಳುತ್ತಾರೆ, ಗೂಳಿಹಟ್ಟಿ ಶೇಖರ್ ಅವರು ಬರೆದಿರುವ ಪತ್ರ ದಾಖಲೆಯಲ್ಲವೇ? ಯತ್ನಾಳ್, ವಿಶ್ವನಾಥ್, ಮಠಾಧೀಶರು ಹೇಳುವ ಮಾತುಗಳು ದಾಖಲೆಯಲ್ವಾ? ಈ ಸರ್ಕಾರಕ್ಕೆ ಮಾನ ಮರ್ಯಾದಿ ಇದೆಯಾ? ಪ್ರತಿಯೊಂದಕ್ಕು ನಿಮ್ಮ ಸರ್ಕಾರದಲ್ಲಿ ಭ್ರಷ್ಟಾಚಾರ ನಡೆಯುತ್ತಿರಲಿಲ್ವಾ ಅನ್ನುತ್ತಾರೆ. ಇಂಥಾ ಭ್ರಷ್ಟ ಸರ್ಕಾರ ಯಾವ ಕಾಲದಲ್ಲೂ ಬಂದಿರಲಿಲ್ಲ. ಬಸವರಾಜ ಬೊಮ್ಮಾಯಿ ಅವರೇ ಈ ಸರ್ಕಾರದ ಮುಖ್ಯಸ್ಥರು. ಅವರ ಕಚೇರಿಯಿಂದಲೇ ಇವೆಲ್ಲ ಆರಂಭವಾಗುವುದು. ನಿಗಮಗಳ ಬೋರ್ಡ್ ಮೀಟಿಂಗ್ ಗಳು ನಡೆಯುವುದು ಅವರ ಅಧ್ಯಕ್ಷತೆಯಲ್ಲಿಯೇ. ಟೆಂಡರ್ ಕರೆದು ಅದರ ಮೊತ್ತವನ್ನು ಇವರೇ ಹೇಳಿಕೊಟ್ಟು ಹೆಚ್ಚು ಮಾಡಿಸಿ, ಲಂಚವನ್ನು ಪಡೆಯುತ್ತಿದ್ದಾರೆ ಎಂದು ಸಿದ್ದರಾಮಯ್ಯ ಆರೋಪಿಸಿದರು.
ರಾಜ್ಯ ಉಸ್ತುವಾರಿ, ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲಾ ಹಾಗೂ ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ ಶಿವಕುಮಾರ್ ಹಾಜರಿದ್ದರು.



Join Whatsapp