ಬೆಂಗಳೂರು: ದೇಶದ್ರೋಹಿ ಹೇಳಿಕೆ ನೀಡಿ ಜನರ ಕೆಂಗಣ್ಣಿಗೆ ಗುರಿಯಾಗಿರುವ ಸಚಿವ ಕೆ.ಎಸ್. ಈಶ್ವರಪ್ಪ ಅವರು, ತನ್ನ ವ್ಯಕ್ತಿತ್ವಕ್ಕೆ ಧಕ್ಕೆ ಉಂಟಾಗುತ್ತಿದೆ ಎಂದರಿತು ಶಿವಮೊಗ್ಗದಲ್ಲಿ ಅಶಾಂತಿ ಸೃಷ್ಟಿಸಲು ಹೊರಟಿದ್ದಾರೆ. ಹಾಗಾಗಿ ಬಿಜೆಪಿ ರಾಜಕೀಯ ಒಳ ಜಗಳದ ಭಾಗವಾಗಿ ಒಬ್ಬ ಹಿಂದೂ ಸಂಘಟನೆ ಕಾರ್ಯಕರ್ತ ಬಲಿಯಾಗಿರುವುದನ್ನು ಮುಸ್ಲಿಮರ ಮತ್ತು ಎಸ್.ಡಿ.ಪಿ.ಐ ತಲೆಗೆ ಕಟ್ಟಿಹಾಕಿ ಪರಿಸ್ಥಿತಿಯನ್ನು ಇನ್ನಷ್ಟು ಪ್ರಕ್ಷುಬ್ದಗೊಳಿಸಿ ತನ್ನ ವಿರುದ್ಧ ನಡೆಯುತ್ತಿರುವ ಹೋರಾಟದ ಗಮನವನ್ನು ಬೇರೆ ಕಡೆ ತಿರುಗಿಸುವ ಹತಾಶ ಪ್ರಯತ್ನ ಇದಾಗಿದೆ ಎಂದು ಎಸ್ ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಮೈಸೂರು ಹೇಳಿದ್ದಾರೆ.
ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ರಾಜ್ಯದಲ್ಲಿ ಬಿಜೆಪಿ ಸರಕಾರವೇ ಅಧಿಕಾರದಲ್ಲಿರುವಾಗ ಕೊಲೆಗಳ ಸಂಖ್ಯೆ ಹೆಚ್ಚಾಗುತ್ತಿದೆ ಎಂದರೆ ಇದು ಯಾರ ವೈಫಲ್ಯ ಎಂದು ಅರ್ಥ ಮಾಡಿಕೊಳ್ಳುವಷ್ಟು ಪ್ರಜ್ಞಾವಂತಿಕೆ ಕನ್ನಡಿಗರಿಗೆ ಇದೆ ಎನ್ನುವುದನ್ನು ಈಶ್ವರಪ್ಪನವರು ಅರ್ಥ ಮಾಡಿಕೊಳ್ಳಬೇಕು. ಅದೇ ರೀತಿ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಡುವುದಕ್ಕೆ ಗೃಹ ಸಚಿವ ಆರಗ ಜ್ಞಾನೇಂದ್ರ, ಪ್ರಚೋದನಾಕಾರಿ ಹೇಳಿಕೆ ನೀಡುತ್ತಿರುವ ಮುಖ್ಯಮಂತ್ರಿ ಬೊಮ್ಮಾಯಿ ಹಾಗೂ ಸರಕಾರವೇ ಇದಕ್ಕೆ ನೇರಹೊಣೆ. ಎಸ್.ಡಿ.ಪಿ.ಐ ಯ ಹೆಸರು ಎಳೆದು ತಂದು ರಾಜಕೀಯ ಬೇಳೆ ಬೇಯಿಸುವ ಬಿಜೆಪಿಯ ಯಾವುದೇ ಪ್ರಯತ್ನ ನಡೆಯುವುದಿಲ್ಲ ಎಂದು ಎಸ್.ಡಿ.ಪಿ.ಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಮೈಸೂರು ಹೇಳಿದ್ದಾರೆ.