►ಮುಸ್ಲಿಮರ ವಿರುದ್ಧದ ಜನಾಂಗೀಯ ದ್ವೇಷ – ಸಂವಿಧಾನ ವಿರೋಧಿ ಮನೋಸ್ಥಿತಿಯ ಸ್ಪಷ್ಟ ನಿದರ್ಶನ – ಕ್ಯಾಂಪಸ್ ಫ್ರಂಟ್
ಉಡುಪಿ: ವಿದ್ಯಾರ್ಥಿನಿಯರು ತಮ್ಮ ಸಂವಿಧಾನಬದ್ಧ ಹಕ್ಕಿನ ಬಗ್ಗೆ ಧ್ವನಿ ಎತ್ತಿದರೆಂಬ ಕಾರಣಕ್ಕೆ ಬಿಜೆಪಿ ಮುಖಂಡ ಹಾಗೂ ಉಡುಪಿ ಸರಕಾರಿ ಪದವಿ ಪೂರ್ವ ಕಾಲೇಜಿನ ಉಪಾಧ್ಯಕ್ಷ ಯಶ್ಪಾಲ್ ಸುವರ್ಣ ಆ ವಿದ್ಯಾರ್ಥಿಗಳನ್ನು ಭಯೋತ್ಪಾದಕರೆಂದು ಕರೆದಿರುವುದು ಮುಸ್ಲಿಂ ಸಮುದಾಯದ ಮೇಲಿರುವ ಜನಾಂಗೀಯ ದ್ವೇಷ ಹಾಗೂ ಸಂವಿಧಾನ ವಿರೋಧಿ ಮನೋಸ್ಥಿತಿಯ ಸ್ಪಷ್ಟ ನಿದರ್ಶನವಾಗಿದೆ ಎಂದು ಕ್ಯಾಂಪಸ್ ಫ್ರಂಟ್ ಹೇಳಿದೆ.
ಉಡುಪಿ ಪದವಿಪೂರ್ವ ಕಾಲೇಜಿನ ಆರು ಮಂದಿ ವಿದ್ಯಾರ್ಥಿನಿಯರು ತಮ್ಮ ಹಕ್ಕುಗಳ ಬಗ್ಗೆ ಬೇಡಿಕೆಯಿಟ್ಟು ಸಂವಿಧಾನದ 32 ನೇ ಅನುಚ್ಛೇದದ ಅನುಸಾರವಾಗಿ ಹೈಕೋರ್ಟ್ ಮೆಟ್ಟಿಲೇರಿದ್ದು ಇದನ್ನು ಸಹಿಸದ ಕಾಲೇಜು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಯಶ್ಪಾಲ್ ಸುವರ್ಣ ಆ ವಿದ್ಯಾರ್ಥಿನಿಯರನ್ನು ಭಯೋತ್ಪಾದಕರೆಂದು ಕರೆದಿರುವುದು ಸಹಿಸಲು ಅಸಾಧ್ಯ. ಅವರ ಈ ಜನಾಂಗೀಯ ದ್ವೇಷದ ಹೇಳಿಕೆಯನ್ನು ಕಾನೂನು ರೀತಿಯಲ್ಲಿ ಎದುರಿಸಬೇಕಾಗಿದೆ ಎಂದು ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಕರ್ನಾಟಕ ರಾಜ್ಯಾಧ್ಯಕ್ಷ ಅಥಾವುಲ್ಲಾಪುಂಜಾಲಕಟ್ಟೆ ತಿಳಿಸಿದ್ದಾರೆ.
ಕಾಲೇಜು ಆಡಳಿತ ಸಮಿತಿಯ ಜವಾಬ್ದಾರಿಯುತ ಪದಾಧಿಕಾರಿಯೂ ಆದಂತಹ ಇಂತಹ ವ್ಯಕ್ತಿಗಳು ತಮ್ಮ ವಿದ್ಯಾರ್ಥಿಗಳ ಬಗ್ಗೆ ಈ ರೀತಿಯಾಗಿ ಹೇಳಿಕೆ ನೀಡಿರುವುದು ಅವರ ನೀಚ ಸಂಸ್ಕೃತಿಯನ್ನು ಎತ್ತಿ ತೋರಿಸುತ್ತಿದೆ. ಇವರ ಈ ದ್ವೇಷಭರಿತ ಹೇಳಿಕೆಯಿಂದ ಹಿಜಾಬ್ ವಿವಾದ ರಾಜ್ಯಾದ್ಯಂತ ಹುಟ್ಟು ಹಾಕಿ, ವಿದ್ಯಾರ್ಥಿಗಳ ಮಧ್ಯೆ ಕಂದಕ ಸೃಷ್ಟಿಸುವಲ್ಲಿ ಇವರ ಪತ್ರ ಎಷ್ಟರ ಮಟ್ಟಿಗೆ ಇದೆ ಎಂಬುದು ಸಹ ಗೋಚರಿಸುತ್ತದೆ.
ಪದವಿ ಪೂರ್ವ ಶಿಕ್ಷಣ ಇಲಾಖೆಯು ಇವರನ್ನು ತಕ್ಷಣವಾಗಿ ಈ ಸಮಿತಿಯಿಂದ ವಜಾಗೊಳಿಸಿ ಇವರ ಇಂತಹ ಹೇಳಿಕೆಗಳು ಸಮಾಜದ ಶಾಂತಿ ಸುವ್ಯವಸ್ಥೆಯನ್ನು ಹದೆಗೆಡುಸುತ್ತಿದ್ದು, ಇದೀಗಾಗಲೇ ಈ ಕುರಿತು ವಿಚಾರಣೆ ಉಚ್ಛ ನ್ಯಾಯಾಲಯದಲ್ಲಿ ನಡೆಯುತ್ತಿದ್ದು ಇದರ ನಡುವೆ ಇಂತಹ ಕೋಮು ಪ್ರಚೋದನೆಯ ಹೇಳಿಕೆಗಳು ಮಧ್ಯಂತರ ಆದೇಶದಉಲ್ಲಂಘನೆಯಾಗಿದ್ದು, ಇವರ ವಿರುಧ್ದ ಪೋಲಿಸ್ ಇಲಾಖೆಯು ಕಠಿಣ ಕಾನೂನು ಕ್ರಮ ಜರುಗಿಸಿ ಶೀಘ್ರ ಬಂಧಿಸಬೇಕೆಂದು ಅಥಾವುಲ್ಲಾ ಪುಂಜಾಲಕಟ್ಟೆ ಆಗ್ರಹಿಸಿದ್ದಾರೆ.