ಬಾಡಿಗೆದಾರರೊಬ್ಬರ ಮೇಲೆ ಹಲ್ಲೆ ನಡೆಸಿದ ಆರೋಪದಲ್ಲಿ 30 ಗೂಂಡಾಗಳ ಜೊತೆಗೆ ಬಿಜೆಪಿ ಮುಖಂಡೆ ಉಪಾಸನಾ ಮೋಹಾಪಾತ್ರ ವಿರುದ್ಧ ಪ್ರಕರಣ ದಾಖಲಾಗಿದೆ.
ತನ್ನ 30 ಮಂದಿ ಬೆಂಬಲಿಗರೊಂದಿಗೆ ಐಆರ್ ಸಿ ಹಳ್ಳಿಯ ಬಾಡಿಗೆದಾರ ಪ್ರಣಬ್ ರೇ ಮೇಲೆ ದಾಳಿ ನಡೆಸಿದ್ದರು. ಅಲ್ಲದೇ, ಆತನನ್ನು ಮನೆಯಿಂದ ಹೊರಗೆ ಎಳೆದು ತಂದು ಹಣ ಮತ್ತು ಬೆಲೆ ಬಾಳುವ ವಸ್ತುಗಳನ್ನು ಲೂಟಿ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ನಾಯಪಲ್ಲಿಯ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಮನೆಯ ಮೇಲೆ ದಾಳಿ ನಡೆಸಿದ ಉಪಾಸನಾ ಮತ್ತು ಅವರ 30 ರಿಂದ 40 ಬೆಂಬಲಿಗರು, ಬಾಡಿಗೆದಾರನ ಮೇಲೆ ಹಲ್ಲೆ ನಡೆಸಿ, ಹಣ ಹಾಗೂ ಬೆಲೆಬಾಳುವ ವಸ್ತುಗಳನ್ನು ದೋಚಿದ್ದಾರೆ. ನಂತರ ಮನೆ ಬಿಟ್ಟು ತೆರಳುವಂತೆ ಧಮ್ಕಿ ಹಾಕಿದ್ದಾರೆ ಎಂದು ದೂರು ನೀಡಲಾಗಿದೆ ಎಂದು ಭುವನೇಶ್ವರ್ ಡಿಸಿಪಿ ಉಮಾಶಂಕರ್ ದಾಸ್ ತಿಳಿಸಿದ್ದಾರೆ.
ಗಲಾಟೆಯ ಸುದ್ದಿ ತಿಳಿಯುತ್ತಿದ್ದಂತೆ ಭುವನೇಶ್ವರ್ ಡಿಸಿಪಿ ಮತ್ತಿತರ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ, ಮುಂದೆ ಯಾವುದೇ ಅಹಿತಕರ ಘಟನೆಯಾಗದಂತೆ ತಡೆಗಟ್ಟಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈವರೆಗೂ 17 ಜನರನ್ನು ಪೊಲೀಸರು ಬಂಧಿಸಿದ್ದಾರೆ. ಉಪಸನಾ ಈ ಪ್ರಕರಣದ ಪ್ರಮುಖ ಆರೋಪಿಯಾಗಿದ್ದರೂ ಇನ್ನೂ ಬಂಧನವಾಗಲಿಲ್ಲ ಎಂದು ತಿಳಿದುಬಂದಿದೆ.
ಬಿಜಯ್ ನಾಯಕ್ ಅವರ ಮನೆಯಲ್ಲಿ ಪ್ರಣಬ್ ರೇ ವಾಸಿಸುತ್ತಿದ್ದರು. ರೇ ಅವರಿಗೆ ಮನೆ ಮಾರಾಟ ಮಾಡುವುದಾಗಿ ಆಗಾಗ್ಗೆ ಹೇಳುತ್ತಿದ್ದ ಬಿಜಯ್, ತದನಂತರ ಉಪಾಸನಾ ಪತಿಗೆ ಮನೆ ಮಾರಾಟ ಒಪ್ಪಂದ ಮಾಡಿಕೊಂಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಣಬ್ ರೇ, ಮನೆಯ ಆಂತರಿಕ ವಿನ್ಯಾಸಕ್ಕಾಗಿ 48 ಲಕ್ಷ ರೂ. ವೆಚ್ಚ ಮಾಡಿದ್ದ ನಂತರ ಬಿಜಯ್ , ತನ್ನ ಮನೆಯನ್ನು ಮಾರಾಟ ಮಾಡಲು ಮುಂದಾಗಿದ್ದಾರೆ.
ಈ ಪ್ರಕರಣದ ವಿಚಾರಣೆ ಮುಂದುವರೆದಿದ್ದು, ತಲೆಮರೆಸಿಕೊಂಡಿರುವ ಇತರ ಆರೋಪಿಗಳ ಹುಡುಕಾಟದ ಪ್ರಯತ್ನ ನಡೆಸಲಾಗುತ್ತಿದೆ ಎಂದು ದಾಸ್ ತಿಳಿಸಿದ್ದಾರೆ.