ಬಿಜೆಪಿ ನಾಯಕಿ ಸೋನಾಲಿ ಪೋಗಟ್ ಲಾಕರ್, ಡೈರಿ ಪೊಲೀಸ್ ವಶ

Prasthutha|

ನವದೆಹಲಿ: ಬಿಜೆಪಿ ನಾಯಕಿ ಸೊನಾಲಿ ಪೋಗಟ್​ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಗೋವಾ ಪೊಲೀಸರು ಸೊನಾಲಿ ಅವರ ಎಲ್ಲ ಲಾಕರ್​ಗಳು ಮತ್ತು ಆಕೆಯ ಕೋಣೆಯಲ್ಲಿ ಪತ್ತೆಯಾದ ಮೂರು ಡೈರಿಗಳನ್ನು ವಶಕ್ಕೆ ಪಡೆದುಕೊಂಡು ತನಿಖೆಯನ್ನು ತೀವ್ರಗೊಳಿಸಿದ್ದಾರೆ.

- Advertisement -

ಹರಿಯಾಣದ ಹಿಸಾರ್​ ಜಿಲ್ಲೆಯ ಸ್ಯಾಂಟ್​ ನಗರದಲ್ಲಿರುವ ಸೊನಾಲಿ ನಿವಾಸಕ್ಕೆ ನಿನ್ನೆ ಗೋವಾ ಪೊಲೀಸರು ಭೇಟಿ ನೀಡಿದರು. ಸೊನಾಲಿ ಅವರ ಬೆಡ್​ರೂಮ್​, ವಾರ್ಡ್​ರೋಬ್​ ಮತ್ತು ಪಾಸ್​ವರ್ಡ್​ ಸಂರಕ್ಷಿತ ಲಾಕರ್​ಗಳನ್ನು ಗೋವಾ ಪೊಲೀಸ್​ ತನಿಖಾ ತಂಡ ಪರಿಶೀಲನೆ ನಡೆಸಿದೆ.

ಮೇಲ್ನೋಟಕ್ಕೆ ಆಸ್ತಿ ವಹಿವಾಟು ಮತ್ತು ಇತರ ವಿವರಗಳನ್ನು ಸೋನಾಲಿ ಅವರು ತಮ್ಮ ಡೈರಿಗಳಲ್ಲಿ ಬರೆದಿದ್ದಾರೆ ಎಂದು ಹೇಳಲಾಗಿದೆ.

- Advertisement -

ಗೋವಾ ಪೊಲೀಸ್ ಇನ್ಸ್ ಪೆಕ್ಟರ್ ಥೆರಾನ್ ಡಿಕೋಸ್ಟಾ ಅವರು ತಮ್ಮ ತಂಡದೊಂದಿಗೆ ತನಿಖೆಗಾಗಿ ಕೆಲವು ದಿನಗಳ ಹಿಂದೆ ಹಿಸಾರ್‌ಗೆ ತಲುಪಿದರು. ಸೊನಾಲಿ ಅವರಿಗೆ ಸಂಬಂಧಿಸಿದ ಲಾಕರ್‌ಗಳನ್ನು ವಶಪಡಿಸಿಕೊಂಡ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಡಿಕೋಸ್ಟಾ, ನಾವು ಇನ್ನೂ ಪ್ರಕರಣವನ್ನು ತನಿಖೆ ಮಾಡುತ್ತಿದ್ದೇವೆ ಮತ್ತು ಪರಿಶೀಲಿಸುತ್ತಿದ್ದೇವೆ. ನಾವು ತನಿಖೆಯನ್ನು ಪೂರ್ಣಗೊಳಿಸಿದ ನಂತರ ಮಾತ್ರ ತೀರ್ಮಾನವನ್ನು ತೆಗೆದುಕೊಳ್ಳಬಹುದು ಎಂದು ಹೇಳಿದ್ದಾರೆ.

ತನಿಖೆಯ ನಂತರ ಸೋನಾಲಿಯ ಸಹೋದರ ವತನ್ ಢಾಕಾ ಮಾತನಾಡಿ, ನಮ್ಮ ಸ್ಯಾಂಟ್​ ನಗರ ಅಪಾರ್ಟ್​ಮೆಂಟ್​ ಅನ್ನು ಪರಿಶೀಲಿಸುವುದಾಗಿ ಗೋವಾ ಪೊಲೀಸರಿಂದ ನನಗೆ ಕರೆ ಬಂದಿತ್ತು. ಶುಕ್ರವಾರ ಸುಮಾರು ಮೂರು ಗಂಟೆಗಳ ಕಾಲ ಪರಿಶೀಲನೆ ನಡೆಸಿ ಮೂರು ಡೈರಿಗಳನ್ನು ತೆಗೆದುಕೊಂಡು ಹೋಗಿದ್ದಾರೆ ಎಂದು ಹೇಳಿದರು.

ಡಿಜಿಟಲ್ ಲಾಕರ್ ತೆರೆಯಲು ವಿಫಲವಾದ ಕಾರಣ  ಅದನ್ನು ಪೊಲೀಸರು ವಶಪಡಿಸಿಕೊಂಡರು ಎಂದು ಸೋನಾಲಿ ಪೋಗಟ್ ಅವರ ಸೋದರ ಮಾವ ಅಮನ್ ಪುನಿಯಾ ಹೇಳಿದ್ದಾರೆ.



Join Whatsapp