ರಾಜ್ಯ ಸರ್ಕಾರದಿಂದ ಮುಸ್ಲಿಮರ ಕಡೆಗಣನೆ: ಬಿಜೆಪಿ ಮುಖಂಡ ಅನ್ವರ್ ಮಾಣಿಪ್ಪಾಡಿ ಆಕ್ರೋಶ

Prasthutha|

ಬೆಂಗಳೂರು: ರಾಜ್ಯದಲ್ಲಿ ಮುಸ್ಲಿಮರಿಗೆ ಕಿರುಕುಳ ನೀಡಲಾಗುತ್ತಿದೆ. ಮುಸ್ಲಿಮರಿಗೆ ಖಬರಸ್ತಾನಕ್ಕೆ ಭೂಮಿ ಪಡೆಯುವುದೂ ಕಷ್ಟಕರವಾಗಿ ಪರಿಣಮಿಸಿದೆ ಎಂದು ಬಿಜೆಪಿ ಮುಖಂಡ ಮತ್ತು ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಆಯೋಗದ ಮಾಜಿ ಅಧ್ಯಕ್ಷ ಅನ್ವರ್ ಮಾಣಿಪ್ಪಾಡಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಬರೆದ ಪತ್ರದಲ್ಲಿ ಬರೆದು ಬಿಜೆಪಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

- Advertisement -


ನಮ್ಮ ಪಕ್ಷ ಹಾಗೂ ನಮ್ಮ ಸರ್ಕಾರ ಮುಸ್ಲಿಮರನ್ನು ಕಡೆಗಣಿಸುತ್ತಿದೆ ಮತ್ತು ಕೀಳಾಗಿ ಕಾಣುತ್ತಿದೆ. ಮುಸ್ಲಿಂ ಸಮುದಾಯವನ್ನು ತೀವ್ರ ಸಂಕಷ್ಟಕ್ಕೆ ತಳ್ಳುವ ಮೂಲಕ ನಿರ್ಲಕ್ಷಿಸಲಾಗುತ್ತಿದೆ ಎಂದು ಪತ್ರದಲ್ಲಿ ಮಾಣಿಪ್ಪಾಡಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.


ವಕ್ಫ್ ಮಂಡಳಿಯ ಕಾರ್ಯವೈಖರಿಯ ವಿಚಾರದಲ್ಲಿ ಮಾಣಿಪ್ಪಾಡಿ, ಸರ್ಕಾರವನ್ನು ತರಾಟೆಗೆ ತೆಗದುಕೊಂಡಿದ್ದಾರೆ. “ಸರ್ಕಾರದ ಅನುದಾನವನ್ನು ಮತ್ತು ವಕ್ಫ್ ಆಸ್ತಿಗಳನ್ನು ಕಬಳಿಸಿದ ಆರೋಪ ಎದುರಿಸುತ್ತಿರುವ ಅಧಿಕಾರಿಗಳನ್ನು ಬೆಂಬಲಿಸುವ ಮೂಲಕ ಸರ್ಕಾರ ನಮ್ಮ ಸಮೃದ್ಧ ವಕ್ಫ್ ಮಂಡಳಿಯನ್ನು ಬಡತನಕ್ಕೆ ತಳ್ಳುತ್ತಿದೆ. ಇವರು ಖಚಿತವಾಗಿ ಮಂಡಳಿಯನ್ನು ಮತ್ತು ಸಂಪತ್ತನ್ನು ಲೂಟಿ ಮಾಡುತ್ತಾರೆ” ಎಂದು ಅಭಿಪ್ರಾಯಪಟ್ಟಿದ್ದಾರೆ.

- Advertisement -


ಪ್ರಧಾನಿ ನರೇಂದ್ರ ಮೋದಿಯವರ ಸಬ್ಕಾ ಸಾಥ್ ಸಬ್ಕಾ ವಿಕಾಸ್ ತತ್ವವನ್ನು ರಾಜ್ಯ ಅನುಸರಿಸದಿರುವುದು ಖೇದಕರ. ಕರ್ನಾಟಕದ ಎಲ್ಲೆಡೆ ಮುಸ್ಲಿಮರು ಸಂಕಷ್ಟ ಅನುಭವಿಸುತ್ತಿದ್ದಾರೆ ಎನ್ನುವುದು ನಿಜಕ್ಕೂ ನೋವಿನ ಸಂಗತಿ ಎಂದಿದ್ದಾರೆ.

Join Whatsapp