ವಕ್ಫ್ ಆಸ್ತಿ ಕಬಳಿಕೆ ಆರೋಪಿಗಳನ್ನು ರಕ್ಷಿಸಲು ಶತಪ್ರಯತ್ನ ನಡೆಸುತ್ತಿರುವ ಬೊಮ್ಮಾಯಿ: ಬಿಜೆಪಿ ಮುಖಂಡ ಅನ್ವರ್ ಮಾಣಿಪ್ಪಾಡಿ

Prasthutha|

►‘ಕುರಿಯ ವೇಷ ಹಾಕಿ ಒಳಗಿಂದೊಳಗೆ ನರಿ ಬುದ್ಧಿಯನ್ನು ಪ್ರದರ್ಶಿಸುವ ಮುಖ್ಯಮಂತ್ರಿ’

- Advertisement -

ಮಂಗಳೂರು: ವಕ್ಫ್ ಆಸ್ತಿಯನ್ನು ಕಬಳಿಸಿದ ಆರೋಪಿಗಳನ್ನು ರಕ್ಷಿಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶತಪ್ರಯತ್ನ ನಡೆಸುತ್ತಿದ್ದಾರೆ ಎಂದು ಬಿಜೆಪಿ ಮುಖಂಡ ಅನ್ವರ್ ಮಾಣಿಪ್ಪಾಡಿ ಅವರು ಗಂಭೀರ ಆರೋಪ ಮಾಡಿದ್ದಾರೆ.

ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಲೂಟಿಯಾದ 2200 ಕೋಟಿ ರೂಪಾಯಿ ಆಸ್ತಿಯನ್ನು ಮರಳಿ ಪಡೆಯಲು ವಕ್ಫ್ ಮಂಡಳಿ ನಡೆಸುವ ಹೋರಾಟವನ್ನು ತಾನು ಬೆಂಬಲಿಸುತ್ತೇನೆ ಎಂದು ಬೊಮ್ಮಾಯಿ ಹೇಳಿದ್ದರು. ವಕ್ಫ್ ಹಗರಣ 2200 ಕೋಟಿ ರೂಪಾಯಿ ಅಲ್ಲ, ಅದು ಎರಡು ಲಕ್ಷ ಮೂವತ್ತು ಸಾವಿರ (2,30,000) ಕೋಟಿ ರೂಪಾಯಿಗಳ ದೊಡ್ಡ ಹಗರಣ. ಕುರಿಯ ವೇಷ ಹಾಕಿ ಒಳಗಿಂದೊಳಗೆ ನರಿ ಬುದ್ಧಿಯನ್ನು ಪ್ರದರ್ಶಿಸಿ ಎರಡು ಲಕ್ಷ ಮೂವತ್ತು ಸಾವಿರ ಕೋಟಿ (2,30,000) ರೂಪಾಯಿ ವಕ್ಫ್ ಆಸ್ತಿಯ ಕಳ್ಳರನ್ನು ರಕ್ಷಿಸಲು ಯತ್ನಿಸುವುದು ಬೇಡ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

- Advertisement -

ಬೊಮ್ಮಾಯಿ ಅವರು ಇತ್ತೀಚೆಗೆ ನಡೆದ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಕಾರ್ಯಕ್ರಮವೊಂದರಲ್ಲಿ ವಕ್ಫ್ ಮಂಡಳಿಯು ಸರಿಯಾದ ದಾರಿಯಲ್ಲಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ಎಚ್ಚರಿಕೆ ನೀಡಿದ್ದರು. 2200 ಕೋಟಿ ರೂಪಾಯಿಗಳ ಹಗರಣವನ್ನು ಉಲ್ಲೇಖಿಸಿದ ಅವರು ದುರುಪಯೋಗವಾದ ಈ ಹಣವನ್ನು ವಾಪಸ್ ಪಡೆಯುವುದು ವಕ್ಫ್ ಮಂಡಳಿಯ ಕರ್ತವ್ಯ ಎಂದು ಹೇಳಿದ್ದರು.  ಎರಡು ಲಕ್ಷ ಮೂವತ್ತು ಸಾವಿರ ಕೋಟಿ (2,30,000) ರೂಪಾಯಿ ಬೆಲೆಬಾಳುವ ಆಸ್ತಿ ಅದಕ್ಕೆ ಸಂಬಂಧಿಸಿದ ಏಳು ಕುರುಹುಗಳನ್ನು ಅರ್ಥೈಸಿ ಅದಕ್ಕೆ ಸಂಬಂಧಪಟ್ಟವರನ್ನ ಶಿಕ್ಷಿಸುವುದು, ವಕ್ಫ್ ಆಸ್ತಿಗಳನ್ನ ವಾಪಸ್ ತರುವ ಜವಾಬ್ದಾರಿಯು ನಿಮ್ಮ ಸರಕಾರದ್ದು ಎಂದು ಅವರು ಕುಟುಕಿದ್ದಾರೆ.

ಬೊಮ್ಮಾಯಿಯವರೇ, ಮುಖ್ಯ ಮಂತ್ರಿ ಆಗಿರುವ ನೀವು ಎರಡು ಲಕ್ಷ ಮೂವತ್ತು ಸಾವಿರ (2,30,000) ಕೋಟಿ ರೂಪಾಯಿಗಳ ವಕ್ಫ್ ಹಗರಣಕ್ಕೆ ಸಂಬಂಧಿಸಿದ ಅನ್ವರ್ ಮಾಣಿಪ್ಪಾಡಿ ವರದಿಯನ್ನು ಸದನದಲ್ಲಿ ಮಂಡಿಸಿ ಅದರ ಮೇಲೆ ಸೂಕ್ತ ಕ್ರಮ ಜರಗಿಸಬೇಕೆಂಬ ಸುಪ್ರೀಂ ಕೋರ್ಟು ಆದೇಶವನ್ನು ಪಾಲಿಸಬೇಕಿತ್ತು ಎಂಬುದನ್ನು ನೀವು ಅರ್ಥ ಮಾಡಿ ಕೊಳ್ಳಬೇಕು. ಹೈಕೋರ್ಟಿನ ಪ್ರಸಿದ್ಧ ಇಬ್ಬರು ನಿವೃತ್ತ ನ್ಯಾಯಾಧೀಶರು ವರದಿಯನ್ನು ಪರಿಶೀಲಿಸಿದ ಬಳಿಕ ಅವರು ವರದಿಯಲ್ಲಿ ಸತ್ಯಾಂಶ ಇಲ್ಲ ಎಂದು ಹೇಳಿದರೆ ನೀವು ವರದಿಯನ್ನು ತಯಾರಿಸಿದವರಿಗೆ ಅದೆಂತಹ ದೊಡ್ಡ ಶಿಕ್ಷೆಯನ್ನು ಬೇಕಾದರೂ ಕೊಡಿ ಎಂದು ಕೇಳಿಕೊಂಡಿದ್ದಾರೆ.  

Join Whatsapp