ಲಖನೌ: ಬಡತನ,ಬೆಲೆ ಏರಿಕೆ ಮತ್ತು ನಿರುದ್ಯೋಗದಂತಹ ಸಮಸ್ಯೆಗಳನ್ನು ಮರೆಮಾಚಲು ಬಿಜೆಪಿ ಧಾರ್ಮಿಕ ಕ್ಷೇತ್ರಗಳನ್ನು ಗುರಿಯಾಗಿಸಿ ಜನರ ದಾರಿ ತಪ್ಪಿಸುತ್ತಿದೆ. ಇದುವೇ ರಾಷ್ಟ್ರ ದುರ್ಬಲಗೊಳ್ಳಲು ಕಾರಣ ಎಂದು ಎಂದು ಬಹುಜನ ಸಮಾಜ ಪಕ್ಷ (ಬಿಎಸ್‌ಪಿ) ಅಧ್ಯಕ್ಷೆ ಮಾಯಾವತಿ ಆರೋಪಿಸಿದ್ದಾರೆ.
ಹೆಚ್ಚುತ್ತಿರುವ ನಿರುದ್ಯೋಗ ಬಡತನ ಮತ್ತು ಹಣದುಬ್ಬರಗಳಂತಹ ಸಮಸ್ಯೆಗಳಿಂದ ಜನರನ್ನು ವಿಮುಖರಾಗಿಸಲು ಬಿಜೆಪಿ ಮತ್ತು ಅದರ ಸಹ ಸಂಘಟನೆಗಳು ಪ್ರಮುಖವಾಗಿ ಧಾರ್ಮಿಕ ಸ್ಥಳಗಳನ್ನು ಗುರಿಯಾಗಿಸಿಕೊಂಡಿವೆ. ಇದನ್ನು ರಾಜಾರೋಷವಾಗಿ ಮಾಡಲಾಗುತ್ತಿದೆ ಎಂದು ಮಾಯಾವತಿ ಆರೋಪಿಸಿದರು.
ಜ್ಞಾನವಾಪಿ, ಮಥುರ, ತಾಜ್ ಮಹಲ್ ಮತ್ತಿತರ ಸ್ಥಳಗಳಲ್ಲಿ ಧಾರ್ಮಿಕ ಭಾವನೆಗಳಿಗೆ ಧಕ್ಕೆಯನ್ನುಂಟು ಮಾಡುವ ಪಿತೂರಿ ನಡೆಯುತ್ತಿದೆ.ಇಂತಹ ಬೆಳವಣಿಗೆ ಸ್ವಾತಂತ್ರ್ಯ ಭಾರತದ ಪರಿಸ್ಥಿತಿಯನ್ನು ಯಾವ ಹಂತದಲ್ಲಿ ಬೇಕಿದ್ದರೂ ಹದಗೆಡಿಸಬಹುದು ಮತ್ತು ಇದರಿಂದ ದೇಶವು ದುರ್ಬಲಗೊಳ್ಳಲಿದೆ. ಈ ವಿಚಾರವನ್ನು ಬಿಜೆಪಿ ಗಂಭೀರವಾಗಿ ಪರಿಗಣಿಸಬೇಕು’ ಎಂದು ಮಾಯಾವತಿ ಆಗ್ರಹಿಸಿದ್ದಾರೆ.
ನಿರ್ದಿಷ್ಟ ಧರ್ಮದ ಕ್ಷೇತ್ರವಿರುವ ಸ್ಥಳಗಳ ಹೆಸರನ್ನು ಒಬ್ಬರಾದ ಮೇಲೆ ಒಬ್ಬರಂತೆ ಬದಲಾಯಿಸಲಾಗುತ್ತಿದೆ. ಇಂತಹ ಬದಲಾವಣೆಯಿಂದ ಶಾಂತಿ ಮತ್ತು ಸೌಹಾರ್ದತೆಯ ಸ್ಥಾಪನೆ ಅಸಾಧ್ಯ. ಇದು ಸಮುದಾಯಗಳ ಮಧ್ಯೆ ದ್ವೇಷವನ್ನಷ್ಟೇ ಹುಟ್ಟುಹಾಕುತ್ತದೆ. ಇಂತಹ ವಿಚಾರಗಳನ್ನು ಮುನ್ನೆಲೆಗೆ ತರುವ ಮೊದಲು ಸಾಮಾನ್ಯ ಜನರಿಗೆ ಅಥವಾ ರಾಷ್ಟ್ರಕ್ಕೆ ಇದರಿಂದ ಏನು ಲಾಭವಿದೆ ಎಂಬುದಕ್ಕೆ ಪ್ರಾಮುಖ್ಯತೆ ನೀಡಬೇಕು ಎಂದರು.
ರಾಷ್ಟ್ರದ ಹಿತದೃಷ್ಟಿಯಿಂದ ಬಿಎಸ್‌ಪಿಯ ಸಲಹೆ ಇದು ಎಂದು ಮಾಯಾವತಿ ಒತ್ತಿ ಹೇಳಿದರು.