ಕೊಪ್ಪಳ: ಬಿಜೆಪಿಗರು ಹಣ ಇದ್ದವರನ್ನು, ರೌಡಿಗಳನ್ನು, ಗೂಂಡಾಗಳನ್ನು ಪಕ್ಷದೊಳಗೆ ಸೇರಿಸಿಕೊಳ್ಳುತ್ತಿದ್ದಾರೆ. ರೌಡಿಗಳ ಸೇರ್ಪಡೆ ಬಿಜೆಪಿಗೆ ಶೋಭೆ ತರುವುದಿಲ್ಲ ಎಂದು ಶ್ರೀರಾಮಸೇನೆಯ ಸಂಸ್ಥಾಪಕ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಗೆ ರೌಡಿಗಳು, ದುಡ್ಡಿರುವವರು ಕಾಣುತ್ತಾರೆ ಹೊರತು ತ್ಯಾಗ, ಬಲಿದಾನ ಮಾಡಿ ಶ್ರಮ ವಹಿಸಿ ದುಡಿದ ಹಿಂದೂ ಕಾರ್ಯಕರ್ತರು ಕಾಣುವುದಿಲ್ಲ. ಶ್ರೀರಾಮಸೇನೆಯ ಸಿದ್ಧಲಿಂಗ ಶ್ರೀ ಹಾಗೂ ಹಿಂದುತ್ವಕ್ಕಾಗಿ ದುಡಿದ ನನ್ನಂತಹವರು ರಾಜಕೀಯ ಪ್ರವೇಶಕ್ಕೆ ನಿರ್ಧಾರ ಮಾಡಿದರೆ ಅದು ಅವರಿಗೆ ಅಸಹ್ಯ ಎಂದು ಬಿಜೆಪಿ ವಿರುದ್ಧ ಗುಡುಗಿದರು.
ಇದಕ್ಕೆಲ್ಲ ಸೆಡ್ಡು ಹೊಡೆಯಲು ನಿರ್ಧರಿಸಲಾಗಿದ್ದು, ಹಿಂದೂ ಸಂಘಟನೆಗಳ ಒಕ್ಕೂಟದಿಂದ 25 ಪ್ರಖರ ಹಿಂದೂವಾದಿ ಅಭ್ಯರ್ಥಿಗಳನ್ನು ಈ ಬಾರಿಯ ಚುನಾವಣೆಯಲ್ಲಿ ಕಣಕ್ಕಿಳಿಸುತ್ತೇವೆ. ಇದರಲ್ಲಿ ಐದು ಜನ ಸ್ವಾಮೀಜಿಗಳು ಈಗಾಗಲೇ ತಯಾರಿ ಮಾಡಿಕೊಂಡಿದ್ದಾರೆ ಎಂದು ತಿಳಿಸಿದರು.