ಮಡಿಕೇರಿ: ಅಭಿವೃದ್ಧಿ ಬಗ್ಗೆ ಚಿಂತಿಸದೆ ಕೋಮು ಭಾವನೆ ಕೆರಳಿಸುವುದರೊಂದಿಗೆ ಅಮಾಯಕ ಜೀವಗಳನ್ನು ಬಲಿ ಕೊಟ್ಟು ಜಾತಿ ರಾಜಕಾರಣ ಮಾಡುವ ಮೂಲಕ ಹಿಡನ್ ಅಜೆಂಡಾದೊಂದಿಗೆ ಅಶಾಂತಿ ಸೃಷ್ಟಿ ಮಾಡಲು ಬೆಜಿಪಿ ಮುಂದಾಗಿದೆ ಎಂದು ಕೊಡಗು ಕಾಂಗ್ರೆಸ್ ವಕ್ತಾರೆ ಸರಿತಾ ಪೂಣಚ್ಚ ಆರೋಪಿಸಿದರು.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪೊಳ್ಳು ಭರವಸೆಗಳನ್ನು ನೀಡಿ ಅಧಿಕಾರಕ್ಕೆ ಬಂದ ಬಿಜೆಪಿ ನುಡಿದಂತೆ ನಡೆದುಕೊಳ್ಳದೆ ಭ್ರಷ್ಟಾಚಾರದಲ್ಲಿ ಮುಳುಗಿದ್ದು, ಆರೋಪಗಳನ್ನು ಮರೆಮಾಚಲು ಪಕ್ಷದ ಕಾರ್ಯಕರ್ತರನ್ನು ಬಲಿ ಕೊಡಲು ಮುಂದಾಗಿರುವುದು ಟೈಲರ್ ಕನ್ನಯ್ಯಲಾಲ್ ಹತ್ಯೆಯಿಂದ ಬಹಿರಂಗಗೊಂಡಿದೆ. ಶಾಂತಿ ಸಹಬಾಳ್ವೆಯ ನೆಮ್ಮದಿಯ ಜೀವನ ನಡೆಸುತ್ತಿದ್ದ ಜನರ ಮಧ್ಯೆ ವಿಷಬೀಜವನ್ನು ಬಿತ್ತಿ ಕೋಮುಭಾವನೆಯೊಂದಿಗೆ ಅಶಾಂತಿ ಸೃಷ್ಟಿ ಮಾಡಲು ಮುಂದಾಗಿರುವ ಷಡ್ಯಂತ್ರದಿಂದ ದೇಶವೇ ತಲೆತಗ್ಗಿಸುವಂತಾಗಿದೆ. ಪೆಟ್ರೋಲ್, ಡೀಸೆಲ್, ಗ್ಯಾಸ್ ಸೇರಿದಂತೆ ಇತರ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಸಾಮಾನ್ಯ ಜನರು ಸಂಕಷ್ಟದಲ್ಲಿದ್ದು, ನೆಮ್ಮದಿಯ ಜೀವನ ನಡೆಸಲು ಸಾಧ್ಯವಾಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಅಭಿವೃದ್ಧಿ ಬಗ್ಗೆ ಚಿಂತನೆ ನಡೆಸಬೇಕಾದ ಜನಪ್ರತಿನಿಧಿಗಳು ಒಂದು ವರ್ಗವನ್ನು ಗುರಿಯಾಗಿಸಿಕೊಂಡು ದ್ವೇಷ ಹರಡುವ ಮೂಲಕ ಕೀಳುಮಟ್ಟದ ರಾಜಕೀಯ ಮಾಡುತ್ತಿರುವುದು ದುರದೃಷ್ಟಕರ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದ ರಾಜಕೀಯ ಹತ್ಯೆ ಘಟನೆಗಳಿಂದ ಅಮಾಯಕ ಮೂರು ಜೀವಗಳು ಬಲಿಯಾಗಿವೆ. ಕುಟುಂಬಗಳಿಗೆ ಆಧಾರವಾಗಿದ್ದವರನ್ನು ಕಳೆದುಕೊಂಡ ಕುಟುಂಬ ಅನಾಥವಾಗಿದೆ. ಶಾಂತಿ ಸುವ್ಯವಸ್ಥೆಯನ್ನು ಕಾಪಾಡಬೇಕಾದ ಬಿಜೆಪಿ ಜನಪ್ರತಿನಿಧಿಗಳು ಮತ್ತಷ್ಟು ಪ್ರಚೋದನಕಾರಿ ಹೇಳಿಕೆ ನೀಡುವ ಮೂಲಕ ರಾಜ್ಯದಲ್ಲಿ ಕೋಮುಗಲಭೆ ಸೃಷ್ಟಿಸಲು ಮುಂದಾಗಿದ್ದಾರೆ ಎಂದು ಆರೋಪಿಸಿದರು.
ರಾಜ್ಯದ ಜನರಿಗೆ ಮುಖ್ಯಮಂತ್ರಿಯಾಗಿ ಇರಬೇಕಾದವರು ಬಿಜೆಪಿಗೆ ಮಾತ್ರ ಸೀಮಿತವಾಗಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಗೆ ಭೇಟಿ ನೀಡಿ ಶಾಂತಿ ಸುವ್ಯವಸ್ಥೆ ಕಾಪಾಡಬೇಕಾದ ಮುಖ್ಯಮಂತ್ರಿಗಳು ಕೇವಲ ಒಂದು ವರ್ಗಕ್ಕೆ ಸೀಮಿತವಾಗಿ ನಡೆದುಕೊಳ್ಳುವುದರ ಮೂಲಕ ಮತ್ತೊಂದು ವರ್ಗವನ್ನು ಸೌಜನ್ಯಕ್ಕೂ ಸಾಂತ್ವನ ಹೇಳದೆ ತೆರಳಿರುವುದು ನಾಚಿಕೆಗೇಡಿನ ವಿಷಯವಾಗಿದೆ. ಪರಿಹಾರ ನೀಡುವ ವಿಷಯದಲ್ಲೂ ಜಾತಿರಾಜಕಾರಣ ಮಾಡುತ್ತಿದ್ದು, ಸರ್ಕಾರ ನೀಡುವ ಹಣ ಬಿಜೆಪಿಯವರದಲ್ಲ ರಾಜ್ಯದ ಪ್ರತಿಯೊಬ್ಬರ ತೆರಿಗೆ ಹಣವಾಗಿರುತ್ತದೆ. ಬಿಜೆಪಿಯ ಕೀಳುಮಟ್ಟದ ಅಧಿಕಾರದ ಆಸೆಗಾಗಿ ಶಾಂತಿಯತ್ತ ಜಿಲ್ಲೆಯಲ್ಲಿ ದೇವರ ಹೆಸರುಗಳನ್ನು ಬಳಸಿಕೊಂಡು ಅಶಾಂತಿ ಸೃಷ್ಟಿಸಲು ಪ್ರಯತ್ನಿಸುತ್ತಿದ್ದಾರೆ. ಕೊಡಗು ಜಿಲ್ಲೆಯಲ್ಲಿ ಪ್ರವಾಹ, ಪ್ರಕೃತಿ ವಿಕೋಪ, ಮಳೆ ಹಾನಿ, ಕಾಡು ಪ್ರಾಣಿಗಳ ಹಾವಳಿ, ಹದಗೆಟ್ಟ ರಸ್ತೆಗಳು ಸೇರಿದಂತೆ ಹಲವಾರು ಬಗೆಹರಿಯದ ಸಮಸ್ಯೆಗಳಿದ್ದರೂ ಇದರ ಬಗ್ಗೆ ಗಂಭೀರವಾಗಿ ಚಿಂತಿಸದೆ ಭ್ರಷ್ಟಾಚಾರದೊಂದಿಗೆ ಜಾತಿ ರಾಜಕಾರಣದಲ್ಲಿ ಕಾಲ ಕಳೆದಿದ್ದಾರೆ. ಮುಂಬರುವ ಚುನಾವಣೆಗಳಲ್ಲಿ ಅಭಿವೃದ್ಧಿ ಹೆಸರಿನಲ್ಲಿ ಮತ ಕೇಳಲು ಸಾಧ್ಯವಾಗದೆ ಕೋಮುಭಾವನೆಯೊಂದಿಗೆ ಅಶಾಂತಿ ಸೃಷ್ಟಿ ಮಾಡಲು ಯತ್ನಿಸುತ್ತಿದೆ. ಬಿಜೆಪಿಯ ಭ್ರಷ್ಟ ಆಡಳಿತ ವ್ಯವಸ್ಥೆಯನ್ನ ದೂರ ಇಡಲು ಪ್ರಜ್ಞಾವಂತರು ಮುಂದಾಗಿದ್ದಾರೆ ಎಂದರು.