ಬೆಂಗಳೂರು: ಭ್ರಷ್ಟಾಚಾರಕ್ಕೆ ಪರ್ಯಾಯವಾದ ಹೆಸರೇ ಬಿಜೆಪಿ. ಅವರು ನಡೆದುಕೊಂಡು ಬಂದ ರೀತಿ ನೋಡಿದರೆ ಅವರು ಸದನದ ಒಳಗೆ ಉತ್ತರ ಪ್ರದೇಶ ಮಾದರಿಯನ್ನು ಜಾರಿಗೊಳಿಸುವುದಾಗಿ ಹೇಳುತ್ತಾರೆ. ಕರ್ನಾಟಕದ ಇತಿಹಾಸದಲ್ಲಿ ಒಂದೇ ದಿನ ಐಎಎಸ್ ಹಾಗೂ ಐಪಿಎಸ್ ಅಧಿಕಾರಿಗಳು ಭ್ರಷ್ಟಾಚಾರ ಮಾಡಿ ಜೈಲಿಗೆ ಹೋಗುತ್ತಾರೆ ಎಂದರೆ ಈ ಸರ್ಕಾರ ಎಂತಹ ಇತಿಹಾಸ ಸೃಷ್ಟಿಸಿದೆ ಎಂಬುದು ತಿಳಿಯುತ್ತದೆ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಬಿ.ಕೆ. ಹರಿಪ್ರಸಾದ್ ವ್ಯಂಗ್ಯವಾಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಿ ಎಸ್ ಐ ಹಗರಣ ಆರಂಭದಲ್ಲಿ ಕೇಳಿ ಬಂದಾಗ ವಿಧಾನ ಪರಿಷತ್ ನಲ್ಲಿ ಸುದೀರ್ಘವಾಗಿ ಚರ್ಚೆ ಮಾಡಿದೆವು. ಆಗ ಗೃಹ ಸಚಿವರು ಈ ನೇಮಕಾತಿಯಲ್ಲಿ ಯಾವುದೇ ಹಗರಣ ನಡೆದಿಲ್ಲ ಎಂದು ಆರೋಪವನ್ನು ಸಾರಾಸಗಟಾಗಿ ತಿರಸ್ಕರಿಸಿದ್ದರು. ಆ ಮೂಲಕ ಈ ಭ್ರಷ್ಟಾಚಾರದಲ್ಲಿ ಗೃಹ ಸಚಿವರು ನೇರವಾಗಿ ಭಾಗಿಯಾಗಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಐಪಿಎಸ್ ಅಧಿಕಾರಿ ಸೇರಿದಂತೆ 38 ಪೊಲೀಸ್ ಅಧಿಕಾರಿಗಳು ಅಮಾನತುಗೊಂಡಿದ್ದು ಭ್ರಷ್ಟ ಸಚಿವರ ಕುರಿತು ಯಾವುದೇ ಚಕಾರ ಎತ್ತುತ್ತಿಲ್ಲ ಎಂದು ವಾಗ್ದಾಳಿ ನಡೆಸಿದರು.
ಶಿಕ್ಷಣ ಇಲಾಖೆಯಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ತರುವುದಾಗಿ ತಿಳಿಸಿದ್ದು, ಎಷ್ಟು ಶಿಕ್ಷಣ ಸಂಸ್ಥೆಗಳಲ್ಲಿ ಇದು ಆರಂಭವಾಗಿದೆ ಎಂದು ಹೇಳಲು ಸಾಧ್ಯವಾಗುತ್ತಿಲ್ಲ. ಕನ್ನಡ ಭಾಷೆ ನಿರ್ಲಕ್ಷ, ಹಲವು ಸಚಿವರು ಹಿಂದಿಯೆ ರಾಷ್ಟ್ರಭಾಷೆ ಎಂದು ಹೇಳಿಕೊಂಡು ಕನ್ನಡವನ್ನು ಎರಡನೇ ದರ್ಜೆಯ ಭಾಷೆಯನ್ನಾಗಿ ಕಾಣುತ್ತಿದ್ದಾರೆ. ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಸರ್ಕಾರಕ್ಕೆ ಜನರ ಸಮಸ್ಯೆ ಕೇಳುವ ಸಮಯಾವಕಾಶ ಇಲ್ಲವಾಗಿದೆ. ಬೆಂಗಳೂರಿನಲ್ಲಿ ಹೈ ಕೋರ್ಟ್ ಚಾಟಿ ಬೀಸಿದ ನಂತರವಷ್ಟೇ ಅವರು ಕೆಲಸ ಮಾಡಲು ಆರಂಭಿಸುತ್ತಾರೆ ಎಂದು ಹೇಳಿದರು.
ಕರಾವಳಿ ಭಾಗದಲ್ಲಿ ನೈತಿಕ ಪೊಲೀಸ್ ಗಿರಿ ಹೆಚ್ಚಾಗಿದೆ. ನೈತಿಕ ಪೊಲೀಸ್ ಗಿರಿ ಹೆಸರಲ್ಲಿ ಮದ್ಯಪಾನ ಕೇಂದ್ರಗಳಿಗೆ ಕಿರುಕುಳ ನೀಡಲಾಗುತ್ತಿದೆ. ಸರ್ಕಾರಕ್ಕೆ ಪ್ರತಿ ವರ್ಷ 24,000 ಕೋಟಿ ಆದಾಯ ಈ ಮೂಲಕವಾಗಿ ಹರಿದು ಬರುತ್ತಿದ್ದು ಸರ್ಕಾರ ಯಾವುದೇ ರಕ್ಷಣೆ ನೀಡುತ್ತಿಲ್ಲ. ನಿನ್ನ ಪ್ರತಿವರ್ಷ 10ನೇ ತರಗತಿ ಪರೀಕ್ಷಾ ಫಲಿತಾಂಶ ಪಟ್ಟಿಯಲ್ಲಿ ಸದಾ ಅಗ್ರಸ್ಥಾನದಲ್ಲಿ ಕಾಣಿಸಿಕೊಳ್ಳುತ್ತಿದ್ದ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆ ಈ ಬಾರಿ 18 ನೇ ಸ್ಥಾನಕ್ಕೆ ಕುಸಿದಿದೆ. ಕರಾವಳಿ ಪ್ರದೇಶವನ್ನು ಹಿಂದುತ್ವದ ಪ್ರಯೋಗಾಲಯವಾಗಿ ಪರಿವರ್ತಿಸಲಾಗುತ್ತಿದೆ. ಇವರ ಸಾಧನೆ ಎಂದು ಕಿಡಿಕಾರಿದರು.
ಸಂಘಪರಿವಾರದ ಗುಪ್ತ ಕಾರ್ಯ ಸೂಚಿಯನ್ನು ಜಾರಿಗೆ ತರುವತ್ತ ಸರ್ಕಾರ ಗಮನಹರಿಸುತಿದೆಯೇ ಹೊರತು ಜನರ ಸಂಕಷ್ಟಗಳಿಗೆ ಸ್ಪಂದಿಸುವತ್ತ ಗಮನಹರಿಸುತ್ತಿಲ್ಲ. 40% ಭ್ರಷ್ಟಾಚಾರದ ಮೂಲಕ ಬಿಜೆಪಿ ದೇಶದಲ್ಲಿ ಅತ್ಯಂತ ಶ್ರೀಮಂತ ಪಕ್ಷವಾಗಿ ಹೊರಹೊಮ್ಮಿದೆ. ADR ಎಂಬ ಸಂಸ್ಥೆ ಈ ವರದಿಯನ್ನು ನೀಡಿದ್ದು ವಿಶ್ವದಲ್ಲೇ ಅತ್ಯಂತ ಶ್ರೀಮಂತ ಸರ್ಕಾರೇತರ ಸಂಸ್ಥೆ ಇದ್ದರೆ ಅದು ಆರ್ ಎಸ್ ಎಸ್, ಅತ್ಯಂತ ಶ್ರೀಮಂತ ಪಕ್ಷ ಬಿಜೆಪಿ ಎಂದು ತಿಳಿಸಿದೆ. ಬಿಜೆಪಿ ಸರ್ಕಾರ ಈ ಜನೋತ್ಸವ ಕಾರ್ಯಕ್ರಮದಲ್ಲಿ 40% ಕಮಿಷನ್ ನಲ್ಲಿ ಯಾರಿಗೆಲ್ಲ ಪಾಲು ಹೋಗಿದೆ ಎಂದು ತಿಳಿಸಬೇಕು. ಆ ಮೂಲಕ ರಾಜ್ಯದಲ್ಲಿ ಬಿಜೆಪಿ ಹೇಗೆ ಭ್ರಷ್ಟೋತ್ಸವ ಮಾಡಿದೆ ಇಂದು ಜನರಿಗೆ ತಿಳಿಸಬೇಕು ಎಂದು ಬಿ.ಕೆ.ಹರಿಪ್ರಸಾದ್ ಹೇಳಿದರು.