ನವದೆಹಲಿ : ಖಾಸಗಿ ವಾಹಿನಿಯೊಂದರ ಕಾರ್ಯಕ್ರಮದಲ್ಲಿ ಮಾತನಾಡಿದ ಪಶ್ಚಿಮ ಬಂಗಾಳ ಬಿಜೆಪಿ ಅಧ್ಯಕ್ಷ ದಿಲೀಪ್ ಘೋಷ್, ಅಲ್ಲಿನ ಜನರ ಪೂಜ್ಯನೀಯ ದೇವರಾದ ದುರ್ಗಾ ಮಾತೆ ಬಗ್ಗೆ ಅವಮಾನ ಮಾಡಿದ್ದಾರೆ ಎಂದು ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ‘ಇಂಡಿಯಾ ಟುಡೇ ಕಾನ್ಕ್ಲೇವ್ ಈಸ್ಟ್ 2021’ ಕಾರ್ಯಕ್ರಮದಲ್ಲಿ ಮಾತನಾಡಿದ ದಿಲೀಪ್ ಘೋಷ್, ದುರ್ಗಾ ಮಾತೆ ಬಗ್ಗೆ ನೀಡಿರುವ ಹೇಳಿಕೆ ವಿವಾದಾತ್ಮಕವಾಗಿದೆ. ಅಲ್ಲದೆ, ‘ಅಮಿತ್ ಶಾಗೆ ವರುಷ, ಘೋಷ್ ಗೆ ನಿಮಿಷ’ ಎಂಬ ವ್ಯಂಗ್ಯ ವ್ಯಾಪಕ ವೈರಲ್ ಆಗಿದೆ.
ಕಾರ್ಯಕ್ರಮದಲ್ಲಿ ‘ರಾಮ್ ವರ್ಸಸ್ ದುರ್ಗಾ’ ವಿಷಯವಾಗಿ ಚರ್ಚಿಸುವಾಗ, ತೃಣಮೂಲ ಕಾಂಗ್ರೆಸ್ ಭಗವಾನ್ ರಾಮ್ ವಿರುದ್ಧ ‘ದುರ್ಗಾ ಮಾತೆ’ಯನ್ನು ಹೇಗೆ ತಂದಿತು ಎಂಬುದು ಆಶ್ಚರ್ಯವಾಯಿತು ಎಂದು ದಿಲೀಪ್ ಘೋಷ್ ಹೇಳಿದರು.
ಯಾರೂ ಹಿಂದೂ ಧರ್ಮದ ಪೋಷಕರಲ್ಲ, ಕೇವಲ ಬಿಜೆಪಿ ಜೈ ಶ್ರೀರಾಮ್ ಅನ್ನು ಚುನಾವಣಾ ವಿಷಯವನ್ನಾಗಿ ಮಾಡಿದೆ ಎಂದು ಕಾಕೋಲಿ ಘೋಷ್ ಟೆನೆದಾರ್ ಹೇಳಿದರು.
ಅದಕ್ಕೆ ಪ್ರತಿಕ್ರಿಯಿಸಿದ ದಿಲೀಪ್ ಘೋಷ್, “ಗಾಂಧೀಜಿಯವರು ರಾಮ ರಾಜ್ಯದ ಕಲ್ಪನೆ ಮಾಡಿದ್ದರು. ಆದರೆ, ಇದೀಗ ದುರ್ಗೆ ಎಲ್ಲಿಂದ ಬಂದಿದ್ದಾಳೆ. ಅವಳು ಕೂಡ ರಾಮನನ್ನು ಪೂಜಿಸುತ್ತಿದ್ದಳು. ದುರ್ಗಾ ಮತ್ತು ರಾಮನನ್ನು ನೀವು ಹೇಗೆ ಹೋಲಿಸಬಹುದು. ದುರ್ಗಾ ಎಲ್ಲಿಂದ ಬಂದಳೋ ಗೊತ್ತಿಲ್ಲ” ಎಂದು ಹೇಳಿದ್ದಾರೆ.
ಇದು ಬಂಗಾಳಿಗರಲ್ಲಿ ಆಕ್ರೋಶವನ್ನುಂಟು ಮಾಡಿದೆ. ದುರ್ಗೆಯನ್ನು ಭಾರೀ ಪೂಜ್ಯನೀಯವಾಗಿ ಕಾಣುವ ಬಂಗಾಳಿಗಳಿಗೆ ಬಿಜೆಪಿ ರಾಜ್ಯಾಧ್ಯಕ್ಷನ ಈ ಮಾತು ಆಕ್ರೋಶಕ್ಕೆ ಕಾರಣವಾಗಿದೆ. ಇದು ಚುನಾವಣೆಯಲ್ಲಿ ಬಿಜೆಪಿಗೆ ದೊಡ್ಡ ಹಿನ್ನಡೆಯನ್ನುಂಟು ಮಾಡಲಿದೆ ಎನ್ನಲಾಗುತ್ತಿದೆ.