ಬೆಂಗಳೂರು: ಬಿಜೆಪಿ ಸರ್ವಸ್ಪರ್ಶಿ ಸರ್ವವ್ಯಾಪಿ ಮತ್ತು ಸರ್ವರ ಅಭಿವೃದ್ಧಿಗೆ ಯತ್ನಿಸುವ ಪಕ್ಷ ಎಂದು ತಿಳಿಸುವ ಮೂಲಕ ಅದು ಅಲ್ಪಸಂಖ್ಯಾತರ ವಿರೋಧಿ ಎಂಬ ತಪ್ಪು ಮಾಹಿತಿಯನ್ನು ದೂರಮಾಡಲು ಮೋರ್ಚಾ ಯತ್ನಿಸಬೇಕಿದೆ. ಈ ಮೂಲಕ ಸಬ್ ಕಾ ವಿಕಾಸ್ ಚಿಂತನೆಯನ್ನು ಸಾಕಾರಗೊಳಿಸಬೇಕಿದೆ ಎಂದು ಬಿಜೆಪಿ ಅಲ್ಪಸಂಖ್ಯಾತರ ಮೋರ್ಚಾದ ರಾಷ್ಟ್ರೀಯ ಅಧ್ಯಕ್ಷ ಜಮಾಲ್ ಸಿದ್ದಿಕಿ ತಿಳಿಸಿದರು.
ನಗರದ ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಇಂದು ನಡೆದ ಅಲ್ಪಸಂಖ್ಯಾತರ ಮೋರ್ಚಾದ ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿದ ಅವರು, ಕೇಂದ್ರ ಸರಕಾರ ಮಾಡಿದ ಉತ್ತಮ ಕಾರ್ಯಗಳಿಂದಾಗಿ ಬಿಜೆಪಿ ಇನ್ನೂ 50 ವರ್ಷ ಅಧಿಕಾರದಲ್ಲಿ ಮುಂದುವರಿಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಆದರೆ, ಕೇಂದ್ರದ ಸರ್ವತೋಮುಖ ಅಭಿವೃದ್ಧಿ ಕಾರ್ಯಗಳ ಕುರಿತು ನಾವು ಜನರಿಗೆ ತಿಳಿಸುವ ಅಗತ್ಯವಿದೆ ಎಂದರು.
ಬಿಜೆಪಿ ದೇಶದ ಮಾತ್ರವಲ್ಲ; ಜಗತ್ತಿನ ಅತಿ ದೊಡ್ಡ ರಾಜಕೀಯ ಪಕ್ಷವಾಗಿದೆ. ಬಿಜೆಪಿಯಲ್ಲಿ ವಿಶ್ವಕ್ಕೇ ನೇತೃತ್ವ ನೀಡಬಲ್ಲ ಮಹಾನ್ ನಾಯಕ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವ ಇದೆ. ಈ ಪಕ್ಷದಡಿ ಮೋರ್ಚಾದ ಪದಾಧಿಕಾರಿಗಳಾದ ನಾವೆಲ್ಲರೂ ಧನ್ಯತಾ ಭಾವವನ್ನು ಹೊಂದಿರಬೇಕು ಎಂದು ತಿಳಿಸಿದರು.
ಅಲ್ಪಸಂಖ್ಯಾತರು ಸೇರಿದಂತೆ ಎಲ್ಲರನ್ನು ಸಮಾನವಾಗಿ ನೋಡುವ ಬಿಜೆಪಿ ಸರಕಾರ ಕೇಂದ್ರದ್ದು. ಕ್ರಿಶ್ಚಿಯನ್, ಮುಸ್ಲಿಮರು ಹೆಚ್ಚು ಸಂಖ್ಯೆಯಲ್ಲಿ ಇರುವ ಕಡೆ ವಿದ್ಯುತ್, ಮನೆ ಮತ್ತು ರಸ್ತೆ ಸಂಪರ್ಕ ನೀಡುವುದಿಲ್ಲ ಎಂಬ ಮಾತು ಯಾವತ್ತೂ ಬಂದಿಲ್ಲ ಎಂದು ಅವರು ನುಡಿದರು.
ರಾಷ್ಟ್ರೀಯ ಉಪಾಧ್ಯಕ್ಷರಾದ ಡಾ. ಅಬ್ದುಲ್ ಸಲಾಂ, ನೋಬಲ್ ಮ್ಯಾಥ್ಯೂ, ಅಲ್ಪಸಂಖ್ಯಾತರ ಮೋರ್ಚಾದ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ಅನಿಶ್, ಅಲ್ಪಸಂಖ್ಯಾತರ ಮೋರ್ಚಾದ ರಾಜ್ಯ ಅಧ್ಯಕ್ಷ ಸೈಯದ್ ಸಲಾಂ, ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ಮುಕ್ತಾರ್ ಪಠಾಣ್, ಕರ್ನಾಟಕ ಕ್ರೈಸ್ತ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಶಾಂತಕುಮಾರ್, ಕರ್ನಾಟಕ ರಾಜ್ಯ ಹಜ್ ಮಂಡಳಿ ಅಧ್ಯಕ್ಷ ರವೂಫುದ್ದೀನ್ ಕಛೇರಿವಾಲಾ ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು.