ದೇಶದ ಸಂವಿಧಾನ, ಪ್ರಜಾಪ್ರಭುತ್ವ ಅಪಾಯದಲ್ಲಿ
ಬೆಂಗಳೂರು: ಬೆಂಗಳೂರಿನ ಅರಮನೆ ಮೈದಾನದಲ್ಲಿ ಯುವ ಕಾಂಗ್ರೆಸ್ ಆಯೋಜಿಸಿದ್ದ ಯುವ ಜನೋತ್ಸವ ಕಾರ್ಯಕ್ರಮದಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮಾತನಾಡಿ ಬಿಜೆಪಿ ಮತ್ತು ಆರ್ ಎಸ್ ಎಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಇಂದು ದೇಶದ ಯುವಕರ ಮೇಲೆ ದೊಡ್ಡ ಜವಾಬ್ದಾರಿ ಇದೆ. ಯುವ ಜನರು ರಾಜಕೀಯ, ಆರ್ಥಿಕ, ಸಾಮಾಜಿಕ ಕ್ಷೇತ್ರಗಳಲ್ಲಿ ಬದಲಾವಣೆ ತರುವ ಶಕ್ತಿ ಹೊಂದಿದ್ದಾರೆ. ದೇಶದ ಜನಸಂಖ್ಯೆಯಲ್ಲಿ 35 ವಯಸಿನ ಒಳಗಿನ ಯುವಜನರ ಪ್ರಮಾಣ ಶೇ.65 ಇದೆ, ದೇಶದ ಒಟ್ಟು ಜನಸಂಖ್ಯೆಯಲ್ಲಿ 107 ಕೋಟಿ ಜನರು ದುಡಿಯುವ ಶಕ್ತಿ ಹೊಂದಿದ್ದಾರೆ, ಆದರೆ ಇವರಲ್ಲಿ ಉದ್ಯೋಗ ಹೊಂದಿರುವ ಜನರ ಪ್ರಮಾಣ ಕೇವಲ 37- 38% ಇದೆ. ದೇಶದ ಯುವಕರ ಸರಾಸರಿ ವಯಸ್ಸು 28.3 ವರ್ಷ. ಜಗತ್ತಿನ ಬೇರೆ ಯಾವ ದೇಶದಲ್ಲಿ ಇಷ್ಟು ದೊಡ್ಡ ಪ್ರಮಾಣದ ಯುವಶಕ್ತಿ ಇಲ್ಲ. ಇದನ್ನು ಬಳಸಿಕೊಂಡು ದೇಶ ಕಟ್ಟುವ ಕೆಲಸ ಆಗಬೇಕಿದೆ. ದುರದೃಷ್ಟವಶಾತ್ ನರೇಂದ್ರ ಮೋದಿ ಅವರು ಪ್ರಧಾನಿಯಾದ ಮೇಲೆ ಯುವಕರ ಶಕ್ತಿಯನ್ನು ಸದುಪಯೋಗ ಮಾಡಿಕೊಂಡು ದೇಶ ಕಟ್ಟುವ ಕೆಲಸ ಆಗಿಲ್ಲ. ದೇಶದ ಯುವಶಕ್ತಿ ದುರುಪಯೋಗ ಆಗುತ್ತಿದೆ. ನಿರುದ್ಯೋಗ ತಾಂಡವವಾಡುತ್ತಿದೆ. ಗ್ರಾಮೀಣ ಪ್ರದೇಶದಲ್ಲಿ ನಿರುದ್ಯೋಗದ ಪ್ರಮಾಣ 7% ಮತ್ತು ನಗರ ಪ್ರದೇಶದಲ್ಲಿ 9% ಆಗಿದೆ. ಒಟ್ಟು ನಿರುದ್ಯೋಗ 8% ಇದೆ. ಇಷ್ಟು ಪ್ರಮಾಣದ ನಿರುದ್ಯೋಗ ಹಿಂದೆಂದೂ ಇರಲಿಲ್ಲ, ಹಾಗಾಗಿ ನಾವೆಲ್ಲರೂ ನರೇಂದ್ರ ಮೋದಿ ಅವರ ಕೇಂದ್ರ ಸರ್ಕಾರದ ವಿರುದ್ಧ ಧ್ವನಿ ಎತ್ತುವ ಕೆಲಸ ಮಾಡಬೇಕು ಎಂದು ಸಿದ್ದರಾಮಯ್ಯ ಹೇಳಿದರು.
ಜಗತ್ತಿನ ಒಟ್ಟು 193 ದೇಶಗಳಲ್ಲಿ ವೇಗವಾಗಿ ಬೆಳವಣಿಗೆ ಹೊಂದುತ್ತಿರುವ ದೇಶಗಳ ಪೈಕಿ ಭಾರತ 164 ಸ್ಥಾನದಲ್ಲಿ ಇದೆ ಎಂದು ಮೋದಿ ಅವರು ಹೇಳಿದ್ದಾರೆ. ಇದಕ್ಕೆ ಬಿಜೆಪಿಯ ಸುಬ್ರಮಣ್ಯಮ್ ಸ್ವಾಮಿ ಅವರು ಇಂದು ಟ್ವೀಟ್ ಮಾಡಿ, 2011 ರಲ್ಲಿ ಆರ್ಥಿಕ ಅಭಿವೃದ್ಧಿಯಲ್ಲಿ ಜಾಗತಿಕವಾಗಿ ನಮ್ಮ ದೇಶ 3ನೇ ಸ್ಥಾನದಲ್ಲಿತ್ತು, ಮೋದಿ ಅವರು ಪ್ರಧಾನಿಯಾದ ಮೇಲೆ ಅದು 164ನೇ ಸ್ಥಾನಕ್ಕೆ ಕುಸಿದುಹೋಗಿದೆ ಎಂದಿದ್ದಾರೆ. ಪ್ರತೀ ವರ್ಷ 2 ಕೋಟಿ ಉದ್ಯೋಗ ಸೃಷ್ಟಿ ಮಾಡುತ್ತೇನೆ ಎಂದು ಮೋದಿ ಅವರು ಹೇಳಿದ್ದರು. ಅವರು ಪ್ರಧಾನಿಯಾಗಿ 8 ವರ್ಷ ಆಗಿದೆ, ಈಗ 16 ಕೋಟಿ ಉದ್ಯೋಗ ಸೃಷ್ಟಿ ಆಗಬೇಕಿತ್ತು. ನೋಟು ರದ್ದತಿ, ಕೊರೊನಾ, ಜಿಎಸ್ ಟಿ ಜಾರಿಗೆ ಮೊದಲು ದೇಶದ ಸಣ್ಣ ಮತ್ತು ಮಧ್ಯಮ ಗಾತ್ರದ ಕೈಗಾರಿಕೆಗಳಲ್ಲಿ 10 ಕೋಟಿ ಉದ್ಯೋಗಗಳು ಇದ್ದವು, ಈಗದು 2.5 ಕೋಟಿಗೆ ಇಳಿದಿದೆ. ಇದಕ್ಕೆ ಹೊಣೆ ಯಾರು? ಯುವಕರಿಗೆ ದೊಡ್ಡ ಅನ್ಯಾಯ ಮಾಡಿದ್ದರೆ ಅದು ಮೋದಿ ಮತ್ತು ಕೇಂದ್ರದ ಬಿಜೆಪಿ ಸರ್ಕಾರ ಎಂದು ಅವರು ವಾಗ್ದಾಳಿ ನಡೆಸಿದರು.
ಅಗ್ನಿಪಥ ಯೋಜನೆ ಜಾರಿಗೆ ತಂದು ಯುವಕರಿಗೆ ಕೇವಲ 4 ವರ್ಷ ಸೈನ್ಯದಲ್ಲಿ ಉದ್ಯೋಗ ನೀಡಲು ಹೊರಟಿದ್ದಾರೆ, ಈ ಅವಧಿ ಮುಗಿದ ಮೇಲೆ ಸೈನ್ಯದಲ್ಲಿ ಇದ್ದವರು ಏನು ಮಾಡಬೇಕು? 17 ವರ್ಷಕ್ಕೆ ಕೆಲಸಕ್ಕೆ ಸೇರಿದವರು 21 ವರ್ಷಕ್ಕೆ ನಿವೃತ್ತಿಯಾಗುತ್ತಾರೆ, ಆಮೇಲೆ ಆತ ಬದುಕಿರುವವರೆಗೆ ಏನು ಕೆಲಸ ಮಾಡಬೇಕು. ಶಿಕ್ಷಣವೂ ಪೂರೈಸಿರುವುದಿಲ್ಲ, ಇತ್ತು ಉದ್ಯೋಗವೂ ಸಿಗುವುದಿಲ್ಲ. ಕೊನೆಗೆ ಯಾವ ದಾರಿ ಸಿಗದೆ ಯುವಕರು ತಪ್ಪು ದಾರಿ ಹಿಡಿಯುತ್ತಾರೆ ಎಂದು ಸಿದ್ದರಾಮಯ್ಯ ಆತಂಕ ವ್ಯಕ್ತಪಡಿಸಿದರು.
ಮೋದಿ ಅವರು ಮೈಸೂರು, ಬೆಂಗಳೂರಿಗೆ ಬಂದಾಗ ನಿರುದ್ಯೋಗ, ಬೆಲೆಯೇರಿಕೆ, ರೈತರ ಸಮಸ್ಯೆಗಳ ಬಗ್ಗೆ ಮಾತನಾಡಿದ್ದಾರ? ಇದನ್ನು ಯುವಜನರು ಗಂಭೀರವಾಗಿ ಪರಿಗಣಿಸಬೇಕು. ವಿದ್ಯಾವಂತ ಯುವಕರು ಕೆಲಸ ಕೇಳಿದರೆ ಪಕೋಡ ಮಾರೋಕೆ ಹೋಗಿ ಎನ್ನುತ್ತಾರೆ, ಇದಕ್ಕಿಂತ ನೋವಿನ ಸಂಗತಿ ಬೇರೆ ಇಲ್ಲ. ಒಮ್ಮೆ ಬಾದಾಮಿಯ ರಥೋತ್ಸವ ಕಾರ್ಯಕ್ರಮಕ್ಕೆ ಹೋಗಿದ್ದೆ ಆಗ ಕಾಂಗ್ರೆಸ್ ನ ಹುಡುಗರು ನನ್ನ ಪರ ಘೋಷಣೆ ಕೂಗಿದರು, ಆ ನಂತರ ಬಿಜೆಪಿಯವರು ಒಟ್ಟುಸೇರಿ ಮೋದಿ, ಮೋದಿ ಎಂದು ಕೂಗಿದರು. ಅದಕ್ಕೆ ನಾನು ಮೋದಿ ನಿಮ್ಮ ಮನೆ ಹಾಳು ಮಾಡಿ, ನಿಮ್ಮ ಭವಿಷ್ಯಕ್ಕೆ ಕತ್ತರಿ ಹಾಕಿದ್ದಾರೆ. ಯಾಕಪ್ಪ ಅವರ ಹೇಸರು ಕೂಗ್ತೀರ ಎಂದೆ. ಈಗ ಈ ರೀತಿ ಕೂಗುವವರ ಸಂಖ್ಯೆ ಕಡಿಮೆಯಾಗಿದೆ ಎಂದು ಸಿದ್ದರಾಮಯ್ಯ ಹೇಳಿದರು.
1988ರಲ್ಲಿ ಚೀನಾ 100 ಕೋಟಿ ಜನಸಂಖ್ಯೆ ದಾಟಿತು, ನಾವು 100 ಕೋಟಿ ಆಗಿದ್ದು 2000 ದಲ್ಲಿ. 1988ರಲ್ಲಿ ಚೀನಾದ ತಲಾ ಆದಾಯ 328 ಡಾಲರ್. ಆಗ ಭಾರತದ ತಲಾ ಆದಾಯ 355 ಡಾಲರ್ ಇತ್ತು. ಇಂದು ಚೀನಾದ ತಲಾ ಆದಾಯ 12,000 ಡಾಲರ್ ಆಗಿದೆ, ಭಾರತದ ತಲಾ ಆದಾಯ ಇಂದು 1877 ಡಾಲರ್ ಇದೆ. ಜನಸಂಖ್ಯೆ ನಮಗಿಂತ ಜಾಸ್ತಿ ಇರುವ ದೇಶದ ತಲಾ ಆದಾಯ ಹೆಚ್ಚಿದೆ. ಜನಸಂಖ್ಯೆ ಏರಿಕೆ ಆದಂತೆ ಚೀನಾದವರು ಅದನ್ನು ಬಳಸಿಕೊಂಡು ಅಭಿವೃದ್ಧಿ ಸಾಧಿಸಿದ್ದಾರೆ, ನಮ್ಮಲ್ಲಿ ಅಗಾಧವಾದ ಮಾನವ ಸಂಪತ್ತು ಇದ್ದರೂ ಕೂಡ ಅಭಿವೃದ್ಧಿ ಸಾಧ್ಯವಾಗಿಲ್ಲ. ಇದರಿಂದ ದೇಶದ ಆರ್ಥಿಕತೆ ಅಧೋಗತಿಗೆ ಇಳಿದಿದೆ ಎಂದು ಅವರು ತಿಳಿಸಿದರು.
2019ರಲ್ಲಿ ರೈಲ್ವೇ ಇಲಾಖೆಯ ಸಿ ಮತ್ತು ಡಿ ದರ್ಜೆಯ 35,000 ಹುದ್ದೆಗಳಿಗೆ ಅರ್ಜಿ ಕರೆದಿದ್ದರು. ಇದಕ್ಕೆ ಅರ್ಜಿ ಹಾಕಿದವರು 1 ಕೋಟಿ 26 ಲಕ್ಷ ಜನ. ಎಸ್ ಎಸ್ ಎಲ್ ಸಿ, ಪಿಯುಸಿ, ಡಿಗ್ರಿ, ಮಾಸ್ಟರ್ ಡಿಗ್ರಿ, ಪಿಹೆಚ್ ಡಿ ಆದವರು ಹೀಗೆ ಎಲ್ಲರೂ ಅರ್ಜಿ ಹಾಕಿದ್ದರು. ಒಂದು ಹುದ್ದೆಗೆ ಸರಾಸರಿ 350 ಜನ ಅರ್ಜಿ ಹಾಕಿದ್ದರು. ಇದರಿಂದ ನಿರುದ್ಯೋಗ ಸಮಸ್ಯೆ ಯಾವ ಪ್ರಮಾಣದಲ್ಲಿದೆ ಎಂಬುದು ಅರ್ಥವಾಗುತ್ತದೆ ಎಂದು ಸಿದ್ದರಾಮಯ್ಯ ಅಂಕಿಅಂಶ ಸಮೇತ ವಿವರಿಸಿದರು.
ಸ್ವಾತಂತ್ರ್ಯ ಬಂದ ನಂತರದಿಂದ ಮನಮೋಹನ್ ಸಿಂಗ್ ಅವರು ಪ್ರಧಾನಿ ಸ್ಥಾನದಿಂದ ಇಳಿಯುವವರೆಗೆ ಇದ್ದ ದೇಶದ ಒಟ್ಟು ಸಾಲ 53 ಲಕ್ಷದ 11 ಸಾವಿರ ಕೋಟಿ. ಇದು ಈ ವರ್ಷದ ಮಾರ್ಚ್ ಕೊನೆಗೆ 155 ಲಕ್ಷ ಕೋಟಿ ಆಗಿದೆ. ಕೇವಲ ಎಂಟು ವರ್ಷಗಳಲ್ಲಿ ಮೋದಿ ಸರ್ಕಾರ ಮಾಡಿರುವ ಒಟ್ಟು ಸಾಲ 102 ಲಕ್ಷ ಕೋಟಿ. ಇದರಿಂದ ದೇಶ ಆರ್ಥಿಕವಾಗಿ ದಿವಾಳಿಯಾಗಲ್ವಾ? ಇದನ್ನು ಸಹಿಸಿಕೊಂಡು ಇರ್ತೀರಾ? ಎಂದು ಪ್ರಶ್ನಿಸಿದರು.
ನರೇಂದ್ರ ಮೋದಿ ಅವರು ನೋಟು ರದ್ದತಿ ಘೋಷಿಸಿ, ರಾತ್ರಿ 12 ಗಂಟೆಗೆ ಮಾಡಿದ ಭಾಷಣದಲ್ಲಿ ಇನ್ನುಮುಂದೆ ಕಪ್ಪು ಹಣ ಇರಲ್ಲ ಎಂದಿದ್ದರು. ಈಗ ಗೋವಾದಲ್ಲಿ 50 ಕೋಟಿ ಕೊಟ್ಟು ಶಾಸಕರ ಖರೀದ ಮಾಡುತ್ತಿದ್ದಾರಲ್ಲ ಅದು ಯಾರಪ್ಪನ ಮನೆ ಹಣ? ಇಲ್ಲಿ ಯಡಿಯೂರಪ್ಪ 30 – 40 ಕೋಟಿ ಕೊಟ್ಟು ಶಾಸಕರನ್ನು ಕೊಂಡುಕೊಂಡಿದ್ದು ಯಾವ ಹಣದಲ್ಲಿ? ಮಹಾರಾಷ್ಟ್ರದಲ್ಲಿ ಶಾಸಕರಿಗೆ ತಲಾ 50 ಕೋಟಿ ಕೊಟ್ಟಿದ್ದು ಯಾರಪ್ಪನ ಮನೆ ದುಡ್ಡು? ಕಪ್ಪು ಹಣ ಇರಲ್ಲ ಎಂದಿದ್ದರು, ಇದಕ್ಕೇನಂತಾರೆ? ಎಂದು ಪ್ರಶ್ನಿಸಿದರು.
ನಿರುದ್ಯೋಗ, ಬಡತನ, ರೈತರು. ಮಹಿಳೆಯರು, ಮಕ್ಕಳ ಸಮಸ್ಯೆಗಳು ಜನರಿಗೆ ಗೊತ್ತಾಗಬಾರದು ಎಂದು ಧರ್ಮದ ವಿಚಾರವನ್ನು ಮುನ್ನೆಲೆಗೆ ತಂದಿದ್ದಾರೆ. ಆರ್ ಎಸ್ ಎಸ್ ನವರು ಬರೀ ಇಂಥಾ ಕೆಲಸಗಳನ್ನೇ ಮಾಡೋದು. ರೋಹಿತ್ ಚಕ್ರತೀರ್ಥ ಎಂಬುವವನು ಪಠ್ಯದಲ್ಲಿರುವ ಚರಿತ್ರೆಯನ್ನು ತಿರುಚಿ, ಕೇಸರಿಕರಣ ಮಾಡಿ ಎಳೆಯ ಮಕ್ಕಳಿಗೆ ವಿಷ ಕೊಡುವ ಕೆಲಸ ಮಾಡಿದ್ದ. ಸಂವಿಧಾನ ರಚನೆ ಮಾಡಿದ್ದು ಬಾಬಾ ಸಾಹೇಬರು ಎಂದು ಎಲ್ಲರಿಗೂ ಗೊತ್ತಿದೆ. ಆದರೆ ಪಠ್ಯದಲ್ಲಿ ಸಂವಿಧಾನ ಶಿಲ್ಪಿ ಎಂಬ ಪದವನ್ನೇ ತೆಗೆದು ಹಾಕಲಾಗಿದೆ. ಕಾರಣ ಬಿಜೆಪಿಯವರಿಗೆ ಸಂವಿಧಾನದ ಬಗ್ಗೆ ಗೌರವ ಇಲ್ಲ, ಇವರು ಚತುರ್ವರ್ಣ ವ್ಯವಸ್ಥೆಯಲ್ಲಿ ನಂಬಿಕೆ ಇಟ್ಟುಕೊಂಡವರು. ದೇವನೂರು ಮಹಾದೇವ ಅವರು ಆರ್ ಎಸ್ ಎಸ್ ಆಳ ಮತ್ತು ಅಗಲ ಎಂಬ ಪುಸ್ತಕ ಬರೆದಿದ್ದಾರೆ. ಇದನ್ನು ಪ್ರತಿಯೊಬ್ಬರೂ ಓದಬೇಕು. ಇವರ ಬಹಿರಂಗ ಅಜೆಂಡಾ ಮತ್ತು ಹಿಡನ್ ಅಜೆಂಡಾ ಏನು ಎಂಬುದನ್ನು ದೇಶದ ಪ್ರತಿಯೊಬ್ಬರು ಅರ್ಥಮಾಡಿಕೊಳ್ಳಬೇಕು. ಯುವಕರು, ಯುವತಿಯರ ದಾರಿ ತಪ್ಪಿಸುತ್ತಿದ್ದಾರೆ. ಮೂಲ ಆರ್ ಎಸ್ ಎಸ್ ನ ಒರಿಜಿನಲ್ ಗಿರಾಕಿಗಳು ಯಾವುದಕ್ಕೂ ಮುಂದುಗಡೆ ಬರಲ್ಲ, ಪರಿಶಿಷ್ಟ ಜಾತಿ, ವರ್ಗದ ಹಾಗೂ ಹಿಂದುಳಿದ ಜಾತಿಗಳ, ಬಡವರ ಮಕ್ಕಳನ್ನು ಮುಂದೆ ತಳ್ಳುತ್ತಾರೆ ಎಂದು ಸಿದ್ದರಾಮಯ್ಯ ಆರ್ ಎಸ್ ಎಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಶಿಕ್ಷಣ ಸಚಿವ ನಾಗೇಶ್ ಅವರ ಮನೆ ಮುಂದೆ ಒಂದು ಚಡ್ಡಿ ಸುಟ್ಟದಕ್ಕೆ ಎನ್ ಎಸ್ ಯು ಐ ಅಧ್ಯಕ್ಷ ಕೀರ್ತಿಯನ್ನು ಜೈಲಿಗೆ ಹಾಕಿದ್ರು. ಆಮೇಲೆ ಒರಿಜಿನಲ್ ಆರ್ ಎಸ್ ಎಸ್ ನವರ್ಯಾರು ಚಡ್ಡಿ ಹೊತ್ತುಕೊಂಡು ನಮ್ಮ ಮನೆಗೆ ಬರಲಿಲ್ಲ, ಅವರ ಬದಲು ಕಳಿಸಿದ್ದು ದಲಿತ ಜಾತಿಗೆ ಸೇರಿದ ನಾರಾಯಣ ಸ್ವಾಮಿಯನ್ನು. ಚಡ್ಡಿ ಹೊತ್ತುಕೊಂಡು ಬಂದ ಇವರ ಮೇಲೆ ಯಾವ ಕ್ರಮ ಕೈಗೊಂಡಿಲ್ಲ. ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಕಿತ್ತುಕೊಳ್ಳಲಾಗಿದೆ. ಬೆಲೆಯೇರಿಕೆ, ನಿರುದ್ಯೋಗ ಮುಂತಾದ ನೈಜ ಸಮಸ್ಯೆಗಳ ಬಗ್ಗೆ ಮಾತನಾಡದಂತೆ ತಡೆದು, ದೇಶವನ್ನು ಕತ್ತಲಲ್ಲಿ ಇಡುವ ಕೆಲಸ ಆಗುತ್ತಿದೆ. ಇದನ್ನು ಯುವ ಜನರು ಅರ್ಥ ಮಾಡಿಕೊಂಡು ಹೋರಾಟ ಮಾಡಬೇಕು ಎಂದು ಅವರು ಹೇಳಿದರು.
ಇಂದು ದೇಶದ ಸಂವಿಧಾನ, ಪ್ರಜಾಪ್ರಭುತ್ವ ಅಪಾಯದಲ್ಲಿದೆ. ಇದನ್ನು ಉಳಿಸುವ ಕೆಲಸ ಕಾಂಗ್ರೆಸ್ ನ ಜವಾಬ್ದಾರಿ. ಕಾರಣ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿ ಪ್ರಾಣ ಕಳೆದುಕೊಂಡವರು ಕಾಂಗ್ರೆಸ್ ನವರು. ಆರ್ ಎಸ್ ಎಸ್ ನವರಾಗಲೀ ಸಂಘ ಪರಿವಾರದವರಾಗಲೀ ದೇಶಕ್ಕಾಗಿ ಪ್ರಾಣಾರ್ಪಣೆ ಮಾಡಿದ್ದಾರ? ಮೋದಿ ಅವರು ಸ್ವಾತಂತ್ರ್ಯ ಬಂದ ಮೇಲೆ ಹುಟ್ಟಿದ್ದು. 1942 ರಲ್ಲಿ ಕ್ವಿಟ್ ಇಂಡಿಯಾ ಚಳವಳಿ ಸಂದರ್ಭದಲ್ಲಿ ಆರ್ ಎಸ್ ಎಸ್ ನವರು ಬ್ರಿಟೀಷರಿಗೆ ಬೆಂಬಲ ನೀಡಿದ್ದರು. ಇವರು ಯಾವತ್ತೂ ಬ್ರಿಟೀಷರು ಭಾರತದಿಂದ ಹೋಗಿ ದೇಶಕ್ಕೆ ಸ್ವತಂತ್ರ ಸಿಗಬೇಕು ಎಂದು ಹೋರಾಟ ಮಾಡಿಲ್ಲ. ದೇಶದ ಸ್ವಾತಂತ್ರ್ಯದ ಬೆಲೆ ಗೊತ್ತಿರುವುದು ಕಾಂಗ್ರೆಸ್ ಗೆ ಮಾತ್ರ. ಶ್ರೇಣೀಕೃತ ವ್ಯವಸ್ಥೆ ಮುಂದುವರೆಯಬೇಕು ಎಂಬುದು ಬಿಜೆಪಿ ಅವರ ಉದ್ದೇಶ. 1991 ರಲ್ಲಿ ವಿಪಿ ಸಿಂಗ್ ಅವರು ಮಂಡಲ್ ಕಮಿಷನ್ ವರದಿ ಜಾರಿ ಮಾಡಿ ಮೀಸಲಾತಿ ನೀಡುತ್ತೇವೆ ಎಂದಾಗ ಅದನ್ನು ವಿರೋಧ ಮಾಡಿದವರು ಬಿಜೆಪಿಯವರು. ಬಿಜೆಪಿಯ ಅಡ್ವಾಣಿಯವರು ರಥಯಾತ್ರೆ ಹೊರಟರು. ಕೇಂದ್ರ ಸಚಿವ ಅರ್ಜುನ್ ಸಿಂಗ್ ಐಐಟಿ ಗಳಲ್ಲಿ ಮೀಸಲಾತಿ ಕೊಡಬೇಕು ಎಂದು ತೀರ್ಮಾನ ಮಾಡಿದಾಗ ಅದನ್ನು ವಿರೋಧ ಮಾಡಿದ್ದು ಇದೇ ಬಿಜೆಪಿ ನಾಯಕರು. ಕರ್ನಾಟಕದಲ್ಲಿ ಅನಂತ್ ಕುಮಾರ್, ಯಡಿಯೂರಪ್ಪ, ಈಶ್ವರಪ್ಪ ಪ್ರತಿಭಟನೆ ಮಾಡಿದ್ದರು. ಬಿಜೆಪಿಯವರು ಯಾವತ್ತೂ ಸಾಮಾಜಿಕ ನ್ಯಾಯ, ಮೀಸಲಾತಿ ಪರ ಇದ್ದವರಲ್ಲ ಎಂದು ಬಿಜೆಪಿ ವಿರುದ್ಧ ಹರಿಹಾಯ್ದರು.
ಸಂವಿಧಾನದ ಆರ್ಟಿಕಲ್ 15 ಮತ್ತು 16ರಲ್ಲಿ ಆರ್ಥಿಕವಾಗಿ ಹಿಂದುಳಿದವರಿಗೆ ಮೀಸಲಾತಿ ಕೊಡಬೇಕು ಎಂದು ಇಲ್ಲ. ಸಾಮಾಜಿಕವಾಗಿ ಹಾಗೂ ಶೈಕ್ಷಣಿಕವಾಗಿ ಹಿಂದುಳಿದವರಿಗೆ ಮಾತ್ರ ಮೀಸಲಾತಿ ಕೊಡಬೇಕು ಎಂದು ಇದೆ. ನರೇಂದ್ರ ಮೋದಿ ಅವರು ಒಂದೇ ದಿನದಲ್ಲಿ ಸಂವಿಧಾನ ತಿದ್ದುಪಡಿ ಮಾಡಿ ಆರ್ಥಿಕವಾಗಿ ಹಿಂದುಳಿದ ಮೇಲ್ಜಾತಿಯವರಿಗೆ 10% ಮೀಸಲಾತಿ ನೀಡಿದ್ರು. ಇದನ್ನು ನಾವು ಸಹಿಸಿಕೊಳ್ಳಬೇಕ? ಇದು ಸಾಮಾಜಿಕ ನ್ಯಾಯದ ಪಾಲನೆಯಾ? ಇಂಥಾ ಅನೇಕ ವಿಚಾರಗಳನ್ನು ಯುವ ಜನರು ಕೈಗೆತ್ತಿಕೊಂಡು ಹೋರಾಟ ಮಾಡಬೇಕು. ರಾಜ್ಯದಲ್ಲಿ 40% ಕಮಿಷನ್ ಪಡೆಯುವ ಭ್ರಷ್ಟ ಸರ್ಕಾರ ಇದೆ. ಇಷ್ಟು ಭ್ರಷ್ಟ ಸರ್ಕಾರವನ್ನು ನನ್ನ 40 ವರ್ಷಗಳ ರಾಜಕೀಯ ಜೀವನದಲ್ಲೇ ಕಂಡಿಲ್ಲ. ಗುತ್ತಿಗೆದಾರರ ಸಂಘದವರು ಮೋದಿ ಅವರಿಗೆ ಪತ್ರ ಬರೆದು ಇದು 40% ಕಮಿಷನ್ ಪಡೆಯುವ ಸರ್ಕಾರ ರಾಜ್ಯದಲ್ಲಿ ಇದೆ ಎಂದು ದೂರು ನೀಡಿದ್ದಾರೆ. ಇದೊಂದು ವಿಚಾರ ಸಾಕು ಜನರ ಬಳಿಗೆ ತೆಗೆದುಕೊಂಡು ಹೋಗಲು. ಇಂಥಾ ಸರ್ಕಾರ ಇರಬೇಕಾ? ಎಂದು ಪ್ರಶ್ನಿಸಿದರು.
ಪಿಎಸ್ ಐ ನೇಮಕಾತಿಯ 545 ಜನರಲ್ಲಿ 300 ಜನರ ಬಳಿ ದುಡ್ಡು ವಸೂಲಿ ಮಾಡಿದ್ದಾರೆ. ಈ ಅಕ್ರಮದಲ್ಲಿ ಅಶ್ವತ್ಥ ನಾರಾಯಣ, ಆರ್. ಅಶೋಕ್, ಬಸವರಾಜ ಬೊಮ್ಮಾಯಿ, ಯಡಿಯೂರಪ್ಪನವರ ಮಗ ಎಲ್ಲಾ ಸೇರಿಕೊಂಡು ಪ್ರಾಮಾಣಿಕವಾಗಿ ಪರೀಕ್ಷೆ ಬರೆದವರ ಭವಿಷ್ಯ ಹಾಳು ಮಾಡಿದ್ದಾರೆ. ಆಝಾನ್ ವಿಚಾರ ನಿರುದ್ಯೋಗ, ಬೆಲೆಯೇರಿಕೆಗೆ ಸಂಬಂಧಪಟ್ಟಿದೆಯಾ? ಹಲಾಲ್, ಜಾತ್ರೆಗಳಲ್ಲಿ ವ್ಯಾಪಾರ ಇಂಥವನ್ನು ಮುಂದೆ ತಂದು ಯುವಕರ ಮನಸ್ಸು ಹಾಳು ಮಾಡುತ್ತಿದ್ದಾರೆ. ನಾವು ಹಿಂದೂ ಧರ್ಮದ ವಿರುದ್ಧ ಇಲ್ಲ. ನಾವು ಹಿಂದುತ್ವದ ವಿರುದ್ಧ. ನಾವು ಎಲ್ಲ ಧರ್ಮದ ಪರವಾಗಿ ಇರುವವರು. ಇದನ್ನು ನಮ್ಮ ಸಂವಿಧಾನ ಹೇಳಿಕೊಟ್ಟಿದೆ ಎಂದು ಹೇಳಿದರು.
ಸಹನೆ, ಸಹಬಾಳ್ವೆ ನಮ್ಮ ಮಂತ್ರವಾಗಬೇಕು. ಇದನ್ನು ನಮ್ಮ ಸಂವಿಧಾನದ ಮೂಲ ಆಶಯ. ಇಂದು ಸಂವಿಧಾನ ಬದಲಾವಣೆ ಮಾಡುತ್ತೇವೆ ಎಂದು ಮಾತನಾಡುತ್ತಿದ್ದಾರೆ. ಈ ಅನಂತ ಕುಮಾರ್ ಹೆಗ್ಡೆ ಎನ್ನುವವರು ಕೊಪ್ಪಳದಲ್ಲಿ ಒಮ್ಮೆ ನಾವು ಅಧಿಕಾರಕ್ಕೆ ಬಂದಿರುವುದೇ ಬಾಬಾ ಸಾಹೇಬರ ಸಂವಿಧಾನ ಬದಲಾವಣೆ ಮಾಡಲು ಎಂದಿದ್ದರು. ಈಗ ಆತ ಮಾತನಾಡುತ್ತಿಲ್ಲ, ಯಾಕಾಗಿ ಎಂದು ನನಗೂ ಗೊತ್ತಿಲ್ಲ. ಈ ಸಂವಿಧಾನ ಹೋದರೆ ಬಡವರು, ದಲಿತರು, ಅಲ್ಪಸಂಖ್ಯಾತರು ಉಳಿಯಲು ಸಾಧ್ಯವೇ? ಬಿಜೆಪಿಯವರು ಸರ್ವಾಧಿಕಾರದಲ್ಲಿ ನಂಬಿಕೆ ಇಟ್ಟವರು. ಸಾವರ್ಕರ್, ಗೋಲ್ವಾಲ್ಕರ್ ಮುಂತಾದವರು ಹಿಟ್ಲರ್ ನೀತಿಯನ್ನು ಹೊಗಳಿದ್ದಾರೆ. ಇವರಿಗೆ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇದೆಯಾ? ಎಂದು ಪ್ರಶ್ನಿಸಿದರು.
ಇಂದು ಬೆಲೆಯೇರಿಕೆ ಗಗನಕ್ಕೆ ಮುಟ್ಟಿದೆ. ಮನಮೋಹನ್ ಸಿಂಗ್ ಅವರ ಸರ್ಕಾರದ ಅವಧಿಯಲ್ಲಿ ಗ್ಯಾಸ್ ಬೆಲೆ 414 ರೂಪಾಯಿ, ಡೀಸೆಲ್ ಬೆಲೆ 46 ಹಾಗೂ ಪೆಟ್ರೋಲ್ 68 ರೂಪಾಯಿ ಇತ್ತು. ಇಂದು ಪೆಟ್ರೋಲ್ 113. ಡೀಸೆಲ್ 95 ಹಾಗೂ ಗ್ಯಾಸ್ ಬೆಲೆ 1050 ರೂಪಾಯಿ ಆಗಿದೆ. ಹೀಗಾದರೆ ಹಿಂದುಳಿದ ಜಾತಿಯ, ಅಲ್ಪಸಂಖ್ಯಾತ, ದಲಿತ ಜಾತಿಯ ಬಡವರು ಜೀವನ ಮಾಡೋಕೆ ಆಗುತ್ತಾ? ಎಂದು ಪ್ರಶ್ನಿಸಿದರು.
ಎಷ್ಟು ಬೇಗ ನರೇಂದ್ರ ಮೋದಿ ಅವರ ಸರ್ಕಾರ ಮತ್ತು ರಾಜ್ಯದ ಬಿಜೆಪಿ ಸರ್ಕಾರ ತೊಲಗುತ್ತದೋ ಅಷ್ಟು ಬೇಗ ದೇಶಕ್ಕೆ ಒಳ್ಳೆಯದಾಗುತ್ತದೆ. ಯುವಕರ ದ್ವನಿ ನಿಜವಾದ ಸಮಸ್ಯೆಗಳನ್ನು ಜನರಿಗೆ ತಲುಪಿಸುವತ್ತ, ಅನ್ಯಾಯಗಳ ವಿರುದ್ಧ ಇರಬೇಕು. ಈ ಕೆಲಸವನ್ನು ನಾವು ನೀವೆಲ್ಲ ಸೇರಿ ಮಾಡೋಣ ಎಂದು ಸಿದ್ದರಾಮಯ್ಯ ಹೇಳಿದರು.