ಸಮಾಜದ ಯಾವುದೇ ವರ್ಗದ ಬಗ್ಗೆ ಮಾತನಾಡುವ ನೈತಿಕತೆ ಬಿಜೆಪಿಗೆ ಇಲ್ಲ: ವಿ.ಎಸ್. ಉಗ್ರಪ್ಪ

Prasthutha|

ಬೆಂಗಳೂರು: ದಲಿತರ ಬಗ್ಗೆಯಾಗಲಿ ಅಥವಾ ಸಮಾಜದ ಯಾವುದೇ ವರ್ಗದ ಬಗ್ಗೆ ಮಾತನಾಡುವ ನೈತಿಕತೆ ಬಿಜೆಪಿಯವರಿಗೆ ಇಲ್ಲ. ಲೋಕಸಭಾ ಚುನಾವಣೆ ನಡೆದರೆ ಬಿಜೆಪಿ ಸೋಲುವುದು ಖಚಿತ, ಬಿಜೆಪಿ ಕರ್ನಾಟಕದಲ್ಲಿ ಒಡೆದ ಮನೆ, ಚುನಾವಣೆ ನಡೆದು 3 ತಿಂಗಳಾದರೂ ವಿರೋಧ ಪಕ್ಷದ, ವಿಧಾನಪರಿಷತ್  ನಾಯಕನಿಲ್ಲ. ಇದೆಲ್ಲಾ ನೋಡಿದರೆ ಬಿಜೆಪಿಯಲ್ಲಿ ಏನೂ ಸರಿಯಿಲ್ಲ ಎಂದು ಮಾಜಿ ಸಂಸದರಾದ ಉಗ್ರಪ್ಪ ಹೇಳಿದರು.

- Advertisement -

ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಅವರು ಮಾತನಾಡಿದರು.

 ಬಸವಣ್ಣ ಅವರು ಶ್ರೇಣಿಕೃತ ವ್ಯವಸ್ಥೆಯ ವಿರುದ್ಧ ದನಿ ಎತ್ತಿದವರು. ವರ್ಗರಹಿತ, ಜಾತಿ ರಹಿತ ಸಮಾಜದ ನಿರ್ಮಾಣಕ್ಕೆ ಲಿಂಗಾಯತ ಧರ್ಮವನ್ನು ಸ್ಥಾಪಿಸಿದವರು. ಆದರೆ ಇಂದು ಭಾರತೀಯ  ಜನತಾ ಪಾರ್ಟಿಯವರು ಲಿಂಗಾಯುತ ಹಾಗೂ ದಲಿತರ ಬಗ್ಗೆ ಮಾತನಾಡಲು ಪ್ರಾರಂಭ ಮಾಡಿದ್ದಾರೆ ಎಂದು ಅವರು ಟೀಕಿಸಿದ್ದಾರೆ.

- Advertisement -

RSS ನ ಎರಡನೇ ಸರಸಂಚಾಲಕರಾದ ಗೋಳವಾಳ್ಕರ್ ಅವರ “ಬಂಚ್ ಆಫ್ ಥಾಟ್ಸ್” ಅಲ್ಲಿ ಶ್ರೇಣೀಕೃತ ಸಮಾಜದ ಬಗ್ಗೆ ಉಲ್ಲೇಖ ಮಾಡಿದ್ದಾರೆ. ಬಿಜೆಪಿಯವರಿಗೂ ಬಸವಣ್ಣನವರ, ದಲಿತರ ವಿಚಾರಧಾರೆಗೂ ಯಾವುದೇ ಸಂಬಂಧವಿಲ್ಲ. ಕಾಂಗ್ರೆಸ್ ನಲ್ಲಿ ವೀರಶೈವರಿಗೆ ಸ್ಥಾನಮಾನ ಕೊಟ್ಟಿಲ್ಲ ಎಂದು ಹೇಳುತ್ತಾರೆ. ವಿರೇಂದ್ರ ಪಾಟೀಲರು ನಮ್ಮ ರಾಜ್ಯದ ಗೌರವಾನ್ವಿತ ನಾಯಕರು, ಇಂದಿರಾ ಗಾಂಧಿ ಅವರ ವಿರುದ್ಧ ಚಿಕ್ಕಮಗಳೂರಿನಲ್ಲಿ ಸೋತ ನಂತರ ಕಾಂಗ್ರೆಸ್ ಪಕ್ಷಕ್ಕೆ ಸೇರಿಸಿಕೊಂಡು, ಕೇಂದ್ರದ ಮಂತ್ರಿ ಮಾಡಲಾಯಿತು. ರಾಜ್ಯ ಕಾಂಗ್ರೆಸ್ ಅಧ್ಯಕ್ಷರನ್ನಾಗಿ, ಮುಖ್ಯಮಂತ್ರಿಗಳನ್ನಾಗಿ ಮಾಡಿದ್ದು ಕಾಂಗ್ರೆಸ್ ಪಕ್ಷ ಎಂದು ಉಗ್ರಪ್ಪ ಹೇಳಿದರು.

ದಲಿತರ ವಿಚಾರವಾಗಿ ಬಿಜೆಪಿಯವರು ಸುಳ್ಳು ಹೇಳುತ್ತಾರೆ. ನಮ್ಮ ಹಿರಿಯ ನಾಯಕರಾದ ಮಲ್ಲಿಕಾರ್ಜುನ್ ಖರ್ಗೆ ಅವರನ್ನು ಎಐಸಿಸಿ ಅಧ್ಯಕ್ಷರನ್ನಾಗಿ, ಕೇಂದ್ರ ಸಚಿವರನ್ನಾಗಿ, ವಿರೋಧ ಪಕ್ಷದ ನಾಯಕನ್ನಾಗಿ ಮಾಡಿದ್ದು ಕಾಂಗ್ರೆಸ್ ಪಕ್ಷ. ಮಹಾರಾಷ್ಟ್ರದಲ್ಲಿ, ಪಂಜಾಬಿನಲ್ಲಿ ದಲಿತರನ್ನು ಮುಖ್ಯಮಂತ್ರಿಗಳಾನ್ನಾಗಿ ಮಾಡಿದ್ದು ಕಾಂಗ್ರೆಸ್ ಪಕ್ಷ. ದೇಶದಲ್ಲಿ ಇರುವ ಪ್ರಮುಖ ದಲಿತ ನಾಯಕರ ಹೆಸರು ಹೇಳುತ್ತಾ ಹೋದರೆ ಅವರೆಲ್ಲಾ ಕಾಂಗ್ರೆಸ್ ಪಕ್ಷದಿಂದ ಬಂದವರು. ರಾಜ್ಯಪಾಲರನ್ನಾಗಿ, ಲೋಕಸಭಾ ಸ್ಪೀಕರ್ಗಳನ್ನಾಗಿ ಮಾಡಿ ಕಾಂಗ್ರೆಸ್ ಪಕ್ಷ ದಲಿತರಿಗೆ ಗೌರವ ನೀಡಿದೆ ಎಂದು ಅವರು ಹೇಳಿದರು.

ಬಿಜೆಪಿಯುವರು ಬಂಗಾರು ಲಕ್ಷ್ಮಣ್ ಅವರನ್ನು ರಾಷ್ಟ್ರೀಯ ಅಧ್ಯಕ್ಷರನ್ನಾಗಿ ಮಾಡಿದರು. ಅವರು ಯಾರ ಬಳಿಯೋ 5 ಲಕ್ಷ ಹಣ ಪಡೆದರು ಎಂದು ರಾಜಕೀಯವಾಗಿ ಅವರನ್ನು ಮುಗಿಸಲಾಯಿತು. ಗೋವಿಂದ ಕಾರಜೋಳ ಅವರೇ ನಿಮಗೆ ಸಾಮಾಜಿಕ ನ್ಯಾಯದ ಬಗ್ಗೆ ಬದ್ದತೆ ಇಲ್ಲ. ನೀವು ಸಮಾಜ ಕಲ್ಯಾಣ ಸಚಿವರಾಗಿದ್ದಾಗ ಏಕೆ ಕಾಂತರಾಜು ಆಯೋಗದ ಜಾತಿ ಗಣತಿ ವರದಿಯನ್ನು ಜಾರಿಗೆ ತರಲಿಲ್ಲ. ಬಿಜೆಪಿಯವರ ನಾಯಕತ್ವ ಕರ್ನಾಟಕದಲ್ಲಿ ವಿಫಲಾಗಿದೆ, ಒಡೆದ ಮನೆಯಾಗಿ ಯಾರು ನಾಯಕರಿಲ್ಲದೇ, ಕಾಂಗ್ರೆಸ್ ಸರ್ಕಾರದ ವಿರುದ್ದ ಜನರನ್ನು ಎತ್ತಿಕಟ್ಟುವ ಕೆಲಸ ಮಾಡುತ್ತಿದ್ದಾರೆ. ಆದರೆ ನಮ್ಮ ಜನ ಬುದ್ದಿವಂತರಿದ್ದು ಬಿಜೆಪಿಯವರ ಮಾತನ್ನು ನಂಬುವುದಿಲ್ಲ, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಹೀನಾಯವಾಗಿ ಬಿಜೆಪಿಯನ್ನು ರಾಷ್ಟ- ರಾಜ್ಯದಲ್ಲಿ ಸೋಲಿಸಲಿದ್ದಾರೆ ಎಂದು ಉಗ್ರಪ್ಪ ಎಚ್ಚರಿಕೆ ನೀಡಿದ್ದಾರೆ.

ಅಧಿಕಾರಕ್ಕೆ ಬಂದು 9 ವರ್ಷಗಳಾದರೂ ಮೋದಿಯವರು ಒಂದೇ ಒಂದು ಆಶ್ವಾಸನೆ ಈಡೇರಿಸಿಲ್ಲ. ಅದಕ್ಕೆ ಇಂಡಿಯಾವನ್ನು ಭಾರತ ಎಂದು ಬದಲಾಯಿಸಲು ಹೊರಟಿದ್ದಾರೆ. ಬಿಜೆಪಿಗೆ ಕಾರ್ಯಕ್ರಮಗಳನ್ನು ನೀಡಲು ತಾಕತ್ತಿಲ್ಲ ಅದಕ್ಕೆ ಹೆಸರು ಬದಲಾವಣೆ ರಾಜಕೀಯ ಮಾಡುತ್ತಿದ್ದಾರೆ.  ಬಹಳ ಶಿಸ್ತು ಇರುವ ಪಕ್ಷ ಎಂದು ಹೇಳುತ್ತಾರೆ ಆದರೆ ಅಶಿಸ್ತಿನಿಂದ ಬಿಜೆಪಿ ಮೂಲೆ ಸೇರುತ್ತದೆ ಎಂದರು.



Join Whatsapp