ಬಿಜೆಪಿ ಎಂದಿಗೂ ಮಹಿಳಾ ಮೀಸಲಾತಿ ಪರ ಇಲ್ಲ; ಅವರದ್ದು ಬೂಟಾಟಿಕೆ ಮಾತು: ಕಾಂಗ್ರೆಸ್ ನಾಯಕಿ ಅಮೃತ್ ಧವನ್ ವಾಗ್ದಾಳಿ

Prasthutha|

ಬೆಂಗಳೂರು: ‘ಬಿಜೆಪಿಯವರು ಎಂದಿಗೂ ಮಹಿಳಾ ಮೀಸಲಾತಿ ಪರ ಇಲ್ಲ. ಅವರ ಹೇಳಿಕೆಗಳು, ಮಾಡುವ ಕೆಲಸಗಳೆಲ್ಲಾ ಮಹಿಳಾ ವಿರೋಧಿಯಾಗಿವೆ. ಮಹಿಳಾ ಸಮಾನತೆ ಬಗ್ಗೆ ಕೇವಲ ಬೂಟಾಟಿಕೆಯ ಮಾತುಗಳನ್ನು ಆಡುತ್ತಲೇ ಇರುತ್ತಾರೆ’ ಎಂದು ಎಐಸಿಸಿ ಕಾರ್ಯದರ್ಶಿ ಹಾಗೂ ದೆಹಲಿ ಮಹಿಳಾ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಅಮೃತ್ ಧವನ್ ವಾಗ್ದಾಳಿ ನಡೆಸಿದರು.

- Advertisement -

ನಗರದ ಕೆಪಿಸಿಸಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮಹಿಳಾ ಮೀಸಲಾತಿ ಮಸೂದೆ ಮತ್ತೆ ಮುನ್ನೆಲೆಗೆ ಬಂದಿತು ಎಂದು ಮಹಿಳೆಯರಾದ ನಾವೆಲ್ಲ ಸಂಭ್ರಮದಿಂದ ಇದ್ದೆವು. ಆದರೆ, ಆ ಸಂಭ್ರಮವನ್ನು ಬಿಜೆಪಿ (BJP) ಸರ್ಕಾರ ಕಸಿದುಕೊಂಡಿದೆ. ಕಳೆದ ಒಂಬತ್ತೂವರೆ ವರ್ಷಗಳ ಕಾಲ ಮೌನವಾಗಿದ್ದ ಪ್ರಧಾನಿ ಮೋದಿ ಅವರಿಗೆ ದಿಢೀರ್ ಎಂದು ಮಹಿಳೆಯರ ಮೇಲೆ ಪ್ರೀತಿ ಹುಟ್ಟಲು ಕಾರಣವೇನು? ಕೇವಲ ಚುನಾವಣೆ ದೃಷ್ಟಿಯಿಂದ ಮಾತ್ರ ಈ ಸಿಂಪತಿ ಹುಟ್ಟಿದೆ’ ಎಂದು ಆರೋಪಿಸಿದರು.

‘ಮಹಿಳಾ ಮೀಸಲಾತಿ ವಿಚಾರ ತಳಮಟ್ಟದ ಸಮಸ್ಯೆಯಾಗಿ ಉಳಿದಿಲ್ಲ. ಪಂಚಾಯಿತಿಯಿಂದ ಹಿಡಿದು ಪಾರ್ಲಿಮೆಂಟ್ ತನಕ ಇದರ ಬೇರುಗಳು ಹರಡಿವೆ. ಮಹಿಳೆಯರಿಗೆ ರಾಜಕೀಯದಲ್ಲಿ ಸೂಕ್ತ ಸ್ಥಾನಮಾನ ದೊರೆಯಲು ಈ ಮಸೂದೆ ಸಹಾಯ ಮಾಡುತ್ತದೆ ಎಂದುಕೊಂಡಿದ್ದೆವು. ಆದರೆ, ಅದು ಕನಸಾಗಿ ಉಳಿದಿದೆ. ಬಿಜೆಪಿಯವರು ಎಂದಿಗೂ ಮಹಿಳಾ ಮೀಸಲಾತಿ ಪರ ಇಲ್ಲ. ಅವರ ಹೇಳಿಕೆಗಳು, ಮಾಡುವ ಕೆಲಸಗಳೆಲ್ಲಾ ಮಹಿಳಾ ವಿರೋಧಿಯಾಗಿವೆ. ಮಹಿಳಾ ಸಮಾನತೆ ಬಗ್ಗೆ ಕೇವಲ ಬೂಟಾಟಿಕೆಯ ಮಾತುಗಳನ್ನು ಆಡುತ್ತಲೇ ಇರುತ್ತಾರೆ’ ಎಂದರು.

- Advertisement -

‘ಇತಿಹಾಸದಲ್ಲಿ ಯಾವುದೇ ಮಸೂದೆಗಳು ಇಷ್ಟು ಕೆಟ್ಟ ಪರಿಸ್ಥಿತಿಯಲ್ಲಿ ಜಾರಿಗೆ ಬಂದಿಲ್ಲ. ಮೀಸಲಾತಿ ಮಸೂದೆ ಜಾರಿ ಮಾಡಿದ್ದೇವೆ ಎನ್ನುವುದು ಕಣ್ಕಟ್ಟಿನ ಸಂಗತಿ, ಏಕೆಂದರೆ ಇದು ಸರಿಯಾಗಿ ಜಾರಿಯಾಗಲು ಇನ್ನೂ 8- 10 ವರ್ಷಗಳು ಕಾಯಲೇಬೇಕು. ಕೂಡಲೇ ಜಾರಿ ಮಾಡಲು ನಿಮಗೆ (ಬಿಜೆಪಿ ಸರ್ಕಾರ) ಆಗುವುದಿಲ್ಲವೇ ಅಥವಾ ಮಹಿಳಾ ಮೀಸಲಾತಿ ಪರವಾಗಿ ಕೇವಲ ಬಾಯಿ ಮಾತಿನ ಉಪಚಾರವೇ ನಿಮ್ಮದು. ಇಡೀ ಮೀಸಲಾತಿ ಮಸೂದೆ ಅನೇಕ ದೌರ್ಬಲ್ಯಗಳಿಂದ ಕೂಡಿದೆ. ಯಾವ ಮಹಿಳೆಯರಿಗೆ ಇದರ ಉಪಯೋಗ ಸಿಗುತ್ತದೆ, ಯಾವಾಗಿನಿಂದ ಎನ್ನುವ ಸ್ಪಷ್ಟತೆ ಇಲ್ಲ. ಜನಗಣತಿ ಹಾಗೂ ಕ್ಷೇತ್ರ ಪುನರ್ವಿಂಗಣೆ ಆದ ನಂತರ ಮಸೂದೆ ಜಾರಿಗೆ ಬರುತ್ತದೆ ಎಂದು ಹೇಳಲಾಗಿದೆ. ಮಹಿಳಾ ಮೀಸಲಾತಿ ಎನ್ನುವ ಪದಗಳನ್ನು ಹೇಳುವ ಮೂಲಕ ಕೇವಲ ಪ್ರಧಾನಿ ಮೋದಿ ಅವರು ಕಣ್ಣೊರೆಸುವ ತಂತ್ರ ಮಾಡಿದ್ದಾರೆ’ ಎಂದು ವಾಗ್ದಾಳಿ ನಡೆಸಿದರು.

‘ಬಿಜೆಪಿಯ ಪ್ರಮುಖ ಹುದ್ದೆಗಳಲ್ಲಿ ಒಬ್ಬರೂ ಮಹಿಳೆಯರಿಲ್ಲ. ದೊಡ್ಡ ಪಕ್ಷ ಎಂದು ಹೇಳಿಕೊಳ್ಳುವ ಬಿಜೆಪಿಯಲ್ಲಿ ರಾಷ್ಟ್ರೀಯ ಅಧ್ಯಕ್ಷರ ಹುದ್ದೆಗೆ ಮಹಿಳೆಯರು ಸಿಗಲಿಲ್ಲವೇ? ಮಹಿಳಾ ಮೋರ್ಚಾಕ್ಕೂ ಕೂಡ ಪುರುಷರನ್ನೇ ಅಧ್ಯಕ್ಷರಾನ್ನಾಗಿ ಕೂರಿಸಿದ್ದಾರೆ. ಆರ್‌ಎಸ್‌ಎಸ್‌ ಸೇರಿದಂತೆ ಇತರೇ ಬಿಜೆಪಿ ಸೋದರ ಸಂಘಟನೆಗಳು ಮಹಿಯರಿಗೆ ಸೂಕ್ತ ಸ್ಥಾನಮಾನಗಳನ್ನು ನೀಡಿಯೆ ಇಲ್ಲ. ಕಾಂಗ್ರೆಸ್ ಪಕ್ಷ ಇದುವರೆಗೂ 5 ಜನ ಮಹಿಳೆಯರನ್ನು ರಾಷ್ಟ್ರೀಯ ಅಧ್ಯಕ್ಷರನ್ನಾಗಿ ನೇಮಕ ಮಾಡಿದೆ. ಮೊದಲ ಮಹಿಳಾ ರಾಜ್ಯಪಾಲರನ್ನಾಗಿ ಸರೋಜಿನಿ ನಾಯ್ಡು, ಮೊದಲ ಮುಖ್ಯಮಂತ್ರಿಯಾಗಿ ಸುಚೇತ ಕೃಪಲಾನಿ, ಮೀರಾ ಕುಮಾರಿ ಅವರನ್ನು ಮೊದಲ ಮಹಿಳಾ ಸಭಾಪತಿಯಾಗಿ, ಪ್ರತಿಭಾ ಪಾಟೀಲ್ ಅವರನ್ನು ರಾಷ್ಟ್ರಪತಿಗಳನ್ನಾಗಿ ಮಾಡಿದ ಹೆಗ್ಗಳಿಕೆ ಕಾಂಗ್ರೆಸ್ ಪಕ್ಷದ್ದು’ ಎಂದು ವಿವರಿಸಿದರು.

‘ಮಹಿಳಾ ಮೀಸಲಾತಿ ಮಸೂದೆ ಬಗ್ಗೆ ಮಾತನಾಡುವ ಕಿಂಚಿತ್ತೂ ನೈತಿಕತೆ ಬಿಜೆಪಿಗಿಲ್ಲ. 16 ರಾಜ್ಯಗಳಲ್ಲಿ ಅಧಿಕಾರದಲ್ಲಿದೆ. ಆದರೆ, ಮಹಿಳೆಯರಿಗೆ ಒಂದೇ ಒಂದು ಉನ್ನತ ಸ್ಥಾನಗಳಿಲ್ಲ. ಮಹಿಳಾ ಮೀಸಲಾತಿಯ ಕಲ್ಪನೆ ಬಂದಿದ್ದೇ ಕಾಂಗ್ರೆಸ್ ಪಕ್ಷದಿಂದ, 1989 ರಲ್ಲಿ ಪ್ರಧಾನಿಗಳಾಗಿದ್ದ ರಾಜೀವ್ ಗಾಂಧಿ ಅವರ ಕನಸಿನ ಕೂಸು. ಸ್ಥಳೀಯ ಸಂಸ್ಥೆಗಳಲ್ಲಿ ಧೈರ್ಯದಿಂದ ಮಹಿಳಾ ಮೀಸಲಾತಿ ತಂದವರು. ಮಸೂದೆ ಜಾರಿಯಾಗಿ ಕೇವಲ ಮೂರೇ ವರ್ಷಗಳಲ್ಲಿ ಅನುಷ್ಠಾನಕ್ಕೆ ಬಂದಿತು’ ಎಂದರು.

Join Whatsapp