ಬೆಂಗಳೂರು: ಬಲ್ಕ್ ಡೀಸೆಲ್ ಖರೀದಿಯ ಮೇಲೆ ರಾಜ್ಯ ಸಾರಿಗೆ ನಿಗಮಗಳಿಂದ ಹೆಚ್ಚುವರಿಯಾಗಿ 25 ರೂ. ಹಣ ವಸೂಲಿ ಮಾಡುತ್ತಿರುವ ಕೇಂದ್ರ ಸರ್ಕಾರದ ಕ್ರಮಕ್ಕೆ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಈ ಹಗಲು ದರೋಡೆಯನ್ನು ಕೂಡಲೇ ನಿಲ್ಲಿಸುವಂತೆ ರಾಜ್ಯ ಬಿಜೆಪಿ ಸರ್ಕಾರ ಮತ್ತು ಸಂಸದರು ಕೇಂದ್ರದ ಮೇಲೆ ಒತ್ತಡ ಹೇರಬೇಕು ಎಂದು ಆಗ್ರಹಿಸಿದ್ದಾರೆ.
ಇಡೀ ದೇಶದಲ್ಲಿಯೇ ಅತ್ಯುತ್ತಮ ಸರ್ಕಾರಿ ಸಾರಿಗೆ ವ್ಯವಸ್ಥೆಯನ್ನುಳ್ಳ ರಾಜ್ಯ ಕರ್ನಾಟಕವಾಗಿತ್ತು. 2013 -18 ವರೆಗಿನ ನಮ್ಮ ಸರ್ಕಾರದ ಅವಧಿಯಲ್ಲಿ ರಾಜ್ಯ ಸಾರಿಗೆಯ ಜನಸ್ನೇಹಿ ಆಡಳಿತಕ್ಕಾಗಿ ಕೇಂದ್ರ ಸರ್ಕಾರವೆ ಹಲವು ಬಾರಿ ಪ್ರಶಸ್ತಿಗಳನ್ನು ನೀಡಿತ್ತು. ಸುವ್ಯವಸ್ಥೆಯಲ್ಲಿದ್ದ ರಾಜ್ಯದ ಸಾರಿಗೆ ವ್ಯವಸ್ಥೆಗೆ ಬಿಜೆಪಿ ಸರ್ಕಾರ ನಿಧಾನ ವಿಷ ಕೊಟ್ಟು ಕೊಲ್ಲುತ್ತಿದೆ ಎಂದು ಹೇಳಿದರು.
ರಾಜ್ಯದ ಕೆಎಸ್ ಆರ್ಟಿ ಸಿಯ 3 ನಿಗಮಗಳು ಹಾಗೂ ಬಿಎಂಟಿಸಿಯಲ್ಲಿ ಸುಮಾರು 26 ಸಾವಿರ ಬಸ್ ಗಳಿವೆ. ಪ್ರತಿ ದಿನ ಲಕ್ಷಾಂತರ ಕಾರ್ಮಿಕರು, ವಿದ್ಯಾರ್ಥಿಗಳು, ರೈತರು ಹಾಗೂ ಜನಸಾಮಾನ್ಯರು ಸರ್ಕಾರಿ ಬಸ್ಸುಗಳಲ್ಲಿ ಓಡಾಡುತ್ತಿದ್ದಾರೆ. ಸುಮಾರು 130000 [1.3 ಲಕ್ಷ] ನೌಕರರಿಗೆ ಸರ್ಕಾರದ ನಾಲ್ಕೂ ಸಾರಿಗೆ ನಿಗಮಗಳು ಉದ್ಯೋಗ ನೀಡಿವೆ. ಪ್ರತಿ ದಿನ ಸುಮಾರು 20-25 ಕೋಟಿ ರೂಗಳ ಆದಾಯವಿದೆ. ಇಷ್ಟಿದ್ದರೂ ಬಿಜೆಪಿ ಸರ್ಕಾರವು ಸಮರ್ಥವಾಗಿ ಸಾರಿಗೆ ವ್ಯವಸ್ಥೆಯನ್ನು ನಿಭಾಯಿಸಲು ವಿಫಲವಾಗಿದೆ ಎಂದರು.
ನರೇಂದ್ರ ಮೋದಿಯವರ ಸರ್ಕಾರ ಈ ನಿಗಮಗಳು ಖರೀದಿಸುವ ಪ್ರತಿ ಲೀಟರ್ ಡೀಸೆಲ್ ಮೇಲೆ ಖಾಸಗಿಯವರಿಗಿಂತ 25 ರೂಪಾಯಿಗಳಷ್ಟು ಹೆಚ್ಚು ಸಂಗ್ರಹಿಸುತ್ತಿದೆ. ಬಲ್ಕ್ ಆಗಿ ಖರೀದಿಸುವವರು ಪ್ರತಿ ಲೀಟರ್ ಮೇಲೆ 25 ರೂಗಳನ್ನು ಹೆಚ್ಚು ಪಾವತಿಸಬೇಕು ಎಂಬ ನಿಯಮದಿಂದಾಗಿ ಈ ಸಮಸ್ಯೆ ಬಂದೊದಗಿದೆ. ಖಾಸಗಿಯವರಿಗೆ ಪ್ರತಿ ಲೀಟರ್ ಡೀಸೆಲ್ 88 ರೂಪಾಯಿಗೆ ಲಭಿಸಿದರೆ, ಸರ್ಕಾರದ ನಿಗಮಗಳು 113 ರೂ ಪಾವತಿಸಬೇಕಾಗಿದೆ. ಇದು ಮೋದಿಯವರ ಬಿಜೆಪಿ ಸರ್ಕಾರ ಜನ ಸಾಮಾನ್ಯರ ಸಾರಿಗೆಗೆ ಮಾಡುತ್ತಿರುವ ಕ್ಷಮಿಸಲಾಗದ ದ್ರೋಹ ಎಂದು ಸಿದ್ದರಾಮಯ್ಯ ತಿಳಿಸಿದರು.
ರಾಜ್ಯದ ನಾಲ್ಕೂ ಸಾರಿಗೆ ನಿಗಮಗಳ ಬಸ್ಸುಗಳು ಪ್ರತಿ ದಿನ ಸುಮಾರು 13 ಲಕ್ಷ ಲೀಟರ್ ಡೀಸೆಲ್ ಬಳಸುತ್ತವೆ ಲೀಟರ್ ಮೇಲೆ 25 ರೂ ಹೆಚ್ಚಿಗೆ ಪಾವತಿಸಬೇಕಾಗಿರುವುದರಿಂದ ಪ್ರತಿ ದಿನ 3.25 ಕೋಟಿ ರೂಪಾಯಿಗಳನ್ನು, ವರ್ಷಕ್ಕೆ 1187 ಕೋಟಿ ರೂಪಾಯಿಗಳಿಗೂ ಹೆಚ್ಚಿನ ಮೊತ್ತವನ್ನು ಪಾವತಿಸಬೇಕಾಗಿದೆ. ಬಿಜೆಪಿ ಸರ್ಕಾರದ ಈ ನೀತಿಯಿಂದಾಗಿ ರಾಜ್ಯದ ಸರ್ಕಾರಿ ಸಾರಿಗೆ ವ್ಯವಸ್ಥೆಯು ವಿಪರೀತ ಸಂಕಷ್ಟಕ್ಕೆ ಸಿಲುಕಿಕೊಂಡಿದೆ ಎಂದು ಅವರು ತಿಳಿಸಿದರು.
ಸಾರಿಗೆ ನಿಗಮಗಳಲ್ಲಿ ಕೆಲಸ ಮಾಡುತ್ತಿರುವ ನೌಕರರಿಗೆ ಕಳೆದ ಎರಡೂವರೆ ವರ್ಷಗಳಿಂದ ವೇತನ ಪರಿಷ್ಕರಣೆ ಆಗಿಲ್ಲ. ಈ ನೌಕರರು ರಾಜ್ಯದ ಇತರೆ ಸರ್ಕಾರಿ ನೌಕರರು ಪಡೆಯುತ್ತಿರುವ ವೇತನಗಳಿಗಿಂತ ಶೇ.40 ರಷ್ಟು ಕಡಿಮೆ ಪಡೆಯುತ್ತಿದ್ದಾರೆ. ಕಾರ್ಮಿಕರನ್ನು 10-12 ಗಂಟೆಗಳಷ್ಟು ಕಾಲ ದುಡಿಸುತ್ತಿದ್ದಾರೆ. ಸರ್ಕಾರದ ಈ ಶೋಷಣೆಯನ್ನು ವಿರೋಧಿಸಿ ಕಳೆದ ವರ್ಷ ನಡೆಸಿದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರೆಂದು ವಜಾ ಮಾಡಿದ್ದ ಸಿಬ್ಬಂದಿಗಳಲ್ಲಿ 1500 ಜನರನ್ನು ಇದುವರೆಗೂ ಕೆಲಸಕ್ಕೆ ಸೇರಿಸಿಕೊಂಡಿಲ್ಲ.
ಲಭ್ಯವಿರುವ ಇಂಧನ ಕೇವಲ 3-4 ದಿನಕ್ಕೆ ಮಾತ್ರ ಸಾಕಾಗುತ್ತದೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಆ ನಂತರ ಏನು ಮಾಡಬೇಕೆಂಬ ಬಗ್ಗೆ ಸರ್ಕಾರ ಉಸಿರುಬಿಡುತ್ತಿಲ್ಲ. ಇದನ್ನೆಲ್ಲ ನೋಡಿದರೆ ಜನಸಾಮಾನ್ಯರ ಸಾರಿಗೆ ವ್ಯವಸ್ಥೆಯನ್ನು ಖಾಸಗಿಯವರಿಗೆ ವಹಿಸಿಕೊಡಲು ಸಿದ್ಧತೆ ನಡೆಯುತ್ತಿರುವ ಹಾಗೆ ಕಾಣುತ್ತಿದೆ. ಈಗಾಗಲೆ ಬೆಂಗಳೂರಿನ ಬಿಜೆಪಿಯ ಎಡಬಿಡಂಗಿ ಮನಸ್ಥಿತಿಯ ಸಂಸದರೊಬ್ಬರು ಸಾರಿಗೆ ವ್ಯವಸ್ಥೆಯನ್ನು ಖಾಸಗಿಯರಿಗೆ ಒಪ್ಪಿಸಬೇಕು ಎಂದು ಹೇಳಿದ್ದರು.
ಸರ್ಕಾರಿ ಬಸ್ಸುಗಳಿಗೆ ರಿಯಾಯಿತಿ ದರದಲ್ಲಿ ಡೀಸೆಲ್ ವಿತರಿಸಬೇಕಾದ ಹಾಗೂ ಡೀಸೆಲ್ ಮೇಲೆ ತೆರಿಗೆ ಮನ್ನಾ ಮಾಡಬೇಕಾದ ಮೋದಿ ಮತ್ತು ಬೊಮ್ಮಾಯಿಯವರ ಬಿಜೆಪಿ ಸರ್ಕಾರ ಜನರನ್ನು ಸುಲಿಗೆ ಮಾಡಲು ನಿಂತಿವೆ. ಜನಪರವಾಗಿ ಯೋಚಿಸುವವರು, ಸಾಮಾನ್ಯ ತಿಳುವಳಿಕೆ ಇರುವವರು ಮಾಡುವ ಕೆಲಸವೆ ಇದು? ಸರ್ಕಾರಿ ಉದ್ದೇಶಕ್ಕೆ ಬಳಕೆಯಾಗುತ್ತಿರುವ ಇಂಧನಕ್ಕೆ ಸಂಪೂರ್ಣವಾಗಿ ತೆರಿಗೆ ವಿನಾಯಿತಿ ನೀಡಬೇಕು ಎಂದು ಸಿದ್ದರಾಮಯ್ಯ ಹೇಳಿದರು.
ರಾಜ್ಯ ಸಾರಿಗೆ ನಿಗಮಗಳ ಸಿಬ್ಬಂದಿಗಳಿಗೆ ನೀಡಬೇಕಾದ ಸವಲತ್ತುಗಳನ್ನು ಕೂಡಲೆ ಬಿಡುಗಡೆ ಮಾಡಬೇಕು. ವಜಾ ಮಾಡಿರುವ ಸಿಬ್ಬಂದಿಗಳನ್ನು ಮತ್ತೆ ಕೆಲಸಕ್ಕೆ ತೆಗೆದುಕೊಳ್ಳಬೇಕು ಹಾಗೂ ಹೆದ್ದಾರಿಗಳಲ್ಲಿ ಅವ್ಯಾಹತವಾಗಿ ನಡೆಯುತ್ತಿರುವ ಶುಲ್ಕ ವಸೂಲಿಯಿಂದ ಸಂಪೂರ್ಣ ವಿನಾಯಿತಿ ನೀಡಬೇಕು ಹಾಗೂ ವಿದ್ಯಾರ್ಥಿ, ಕಾರ್ಮಿಕ ಹಾಗೂ ಇತರೆ ಎಲ್ಲಾ ಜನ ಸಾಮಾನ್ಯರಿಗೆ ಉತ್ತಮ ಸೇವೆಯನ್ನು ಕಡಿಮೆ ದರದಲ್ಲಿ ನೀಡಬೇಕೆಂದು ಸಿದ್ದರಾಮಯ್ಯ ಆಗ್ರಹಿಸಿದರು.