ಜನರ ಜೀವದೊಂದಿಗೆ ಚೆಲ್ಲಾಟವಾಡುತ್ತಿರುವ ರಾಜ್ಯ ಬಿಜೆಪಿ ಸರ್ಕಾರ: ದಿನೇಶ್ ಗುಂಡೂರಾವ್

Prasthutha|

ಬೆಂಗಳೂರು: ರಾಜ್ಯದ ಹದಗೆಟ್ಟ ರಸ್ತೆಗಳ ಬಗ್ಗೆ ನೆರೆ ರಾಜ್ಯದವರೂ ಅಪಹಾಸ್ಯ ಮಾಡುವ ಹೀನಾಯ ಸ್ಥಿತಿಗೆ  ನಾವು ತಲುಪಿದ್ದೇವೆ ಎಂದು ಕಾಂಗ್ರೆಸ್ ನಾಯಕ ದಿನೇಶ್ ಗುಂಡೂರಾವ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

- Advertisement -

ಕರ್ನಾಟಕದ ರಸ್ತೆಗಳ ಸ್ಥಿತಿ ಅತ್ಯಂತ ಕೆಟ್ಟದಾಗಿದೆ ಎಂದ ಗೋವಾ ಮುಖ್ಯಮಂತ್ರಿಯವರ ಹೇಳಿಕೆಗೆ ಟ್ವೀಟ್  ಮೂಲಕ ಪ್ರತಿಕ್ರಿಯಿಸಿರುವ ಅವರು, ರಾಜ್ಯದ ಹದಗೆಟ್ಟ ರಸ್ತೆಗಳ ಬಗ್ಗೆ ನೆರೆರಾಜ್ಯದವರೂ ಅಪಹಾಸ್ಯ ಮಾಡುವ ಹೀನಾಯ ಸ್ಥಿತಿಗೆ ತಲುಪಿದ್ದೇವೆ. ಗೋವಾ CM ಬೆಳಗಾವಿಯ ರಸ್ತೆಗಳ ಬಗ್ಗೆ ಬೊಮ್ಮಾಯಿ ಸರ್ಕಾರವನ್ನು ಛೇಡಿಸಿದ್ದಾರೆ. ಗೋವಾ CM ನೋಡಿರುವುದು ಕೇವಲ ಬೆಳಗಾವಿ ರಸ್ತೆಗಳನಷ್ಟೆ. ಅವರೇನಾದರೂ ಬೆಂಗಳೂರಿನ ರಸ್ತೆಗಳನ್ನು ನೋಡಿದ್ದರೆ ಹೃದಯಾಘಾತಕ್ಕೆ ಒಳಗಾಗುತ್ತಿದ್ದರೇನೋ  ಎಂದು ಹೇಳಿದ್ದಾರೆ.

ಯಮಸ್ವರೂಪಿ ಗುಂಡಿಗಳಿಂದ ಬೆಂಗಳೂರು ಸಾವಿನ ಮನೆಯಾಗಿದೆ. ಜನ ರಸ್ತೆಯಲ್ಲಿ ಓಡಾಡಬೇಕಾದರೆ ಜೀವ ಕೈಯಲ್ಲಿ ಹಿಡಿದುಕೊಂಡು ಸಾಗಬೇಕು. ಅದರಲ್ಲೂ ದ್ವಿಚಕ್ರ ವಾಹನ ಸವಾರರು ಗುಂಡಿಗಳ ಅಪಾಯದಿಂದ ಪಾರಾಗಿ ಸುರಕ್ಷಿತವಾಗಿ ತಲುಪಿದರೆ ಅವರೇ ಅದೃಷ್ಟವಂತರು. ರಸ್ತೆ ಗುಂಡಿ ಮುಚ್ಚದೆ ಜನರ ಜೀವದೊಂದಿಗೆ ಚೆಲ್ಲಾಟವಾಡುತ್ತಿರುವ ಈ ಸರ್ಕಾರಕ್ಕೆ ಏನನ್ನಬೇಕು ಎಂದು ಕಿಡಿಕಾರಿದರು.

- Advertisement -

BBMP ವ್ಯಾಪ್ತಿಯ ರಸ್ತೆ ಗುಂಡಿ ಮುಚ್ಚಲು ಕಳೆದ 5 ವರ್ಷದಲ್ಲಿ 20.060 ಕೋಟಿ ಖರ್ಚು ಮಾಡಿದ್ದೇವೆ ಎಂದು ಕಳೆದ ಅಧಿವೇಶನದಲ್ಲಿ ಬೊಮ್ಮಾಯಿ ಹೇಳಿದ್ದರು. ಹಾಗಾದರೆ ಆ ಹಣ ಎಲ್ಲಿ ಹೋಯಿತು? ಅದರಲ್ಲೂ 40% ಕಮಿಷನ್ ನುಂಗಲಾಯಿತೇ? 20 ಸಾವಿರ ಕೋಟಿ ಖರ್ಚು ಮಾಡಿದರೂ ರಸ್ತೆಗಳು ಅಧ್ವಾನವಾಗಿರುವ ಅರ್ಥವೇನು? ಸಾರ್ವಜನಿಕರ ಹಣಕ್ಕೆ ಬೆಲೆಯಿಲ್ಲವೇ? ಎಂದು ಕುಟುಕಿದರು.



Join Whatsapp