ರಾಯಚೂರು: ನನ್ನಿಂದಾಗಿ ದಕ್ಷಿಣ ಭಾರತದಲ್ಲಿ ಬಿಜೆಪಿಗೆ ಹೆಬ್ಬಾಗಿಲು ತೆರೆಯುವಂತಾಯಿತು. ಆದರೆ ಈಗ ನಾನು ಹೊಸ ಪಕ್ಷ ಸ್ಥಾಪಿಸುತ್ತಿದ್ದಂತೆ ಬಿಜೆಪಿ ಸರ್ಕಾರ ಮತ್ತೆ ನನ್ನ ಮೇಲೆ ದಾಳಿ ನಡೆಸುವ ಬೆದರಿಕೆ ಹಾಕುತ್ತಿದೆ ಎಂದು ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಸಂಸ್ಥಾಪಕ ಜನಾರ್ದನ ರೆಡ್ಡಿ ಆರೋಪಿಸಿದ್ದಾರೆ.
ರಾಯಚೂರು ಜಿಲ್ಲೆಯ ಸಿಂಧನೂರು ಪಟ್ಟಣದ ಸ್ತ್ರೀಶಕ್ತಿ ಭವನದಲ್ಲಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ವತಿಯಿಂದ ನಡೆದ ಕಾರ್ಯಕರ್ತರ ಬೃಹತ್ ಸಭೆ ಹಾಗೂ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಉತ್ತರ ಕರ್ನಾಟಕದ 110 ಕ್ಷೇತ್ರಗಳಲ್ಲಿ 40 ಅಭ್ಯರ್ಥಿಗಳನ್ನು ನನ್ನ ಶ್ರಮದಿಂದ ಗೆಲ್ಲಿಸಿದ್ದೆ. 2018ರಲ್ಲೇ ಪಕ್ಷ ಸ್ಥಾಪಿಸಲು ಕಾರ್ಯಯೋಜನೆ ಹಾಕಿಕೊಂಡಿದ್ದೆ. ಆಗ ಯಡಿಯೂರಪ್ಪ ಅವರಿಗೆ ಮುಖ್ಯಮಂತ್ರಿ ಸ್ಥಾನ ಕೈ ತಪ್ಪಲು ಅಡ್ಡಿಯಾಗುತ್ತೇನೆಂಬ ದೃಷ್ಟಿಯಿಂದ ಈ ನಿರ್ಧಾರದಿಂದ ಹಿಂದೆ ಸರಿದಿದ್ದೆ ಎಂದು ಹೇಳಿದರ.
ನನ್ನ ಜೀವನದಲ್ಲಿ ಕಷ್ಟಪಟ್ಟು ದುಡಿದು ಈ ಹಂತದವರೆಗೆ ಬೆಳೆದಿದ್ದೇನೆ. ಆದರೆ ಪ್ರಾಮಾಣಿಕವಾಗಿ ದುಡಿದು ಅಧಿಕಾರಕ್ಕೆ ತಂದ ಬಿಜೆಪಿ ಪಕ್ಷ ಹಾಗೂ ನನ್ನ ಜೊತೆಯಲ್ಲೇ ಇದ್ದ ಕೆಲ ಸ್ನೇಹಿತರು ಕುತಂತ್ರ ರೂಪಿಸಿ ಬೆನ್ನಿಗೆ ಚೂರಿ ಹಾಕಿ ದ್ರೋಹ ಬಗೆದ್ದಾರೆ ಎಂದು ಅವರು ದೂರಿದರು.
ನಾನು ಯಾವ ರಾಜಕಾರಣಿಯನ್ನೂ ನಂಬಿ ಪಕ್ಷ ಸ್ಥಾಪಿಸಿಲ್ಲ, ಜನರು ನನ್ನನ್ನು ನಂಬಿದ್ದಾರೆ, ಅವರು ಕೈಬಿಡುವುದಿಲ್ಲ ಎಂಬ ಅಚಲ ವಿಶ್ವಾಸವಿದೆ ಎಂದು ಹೇಳಿದರು.
ನಾನು ಮುಖ್ಯಮಂತ್ರಿ ಆಗತ್ತೇನೆಂಬ ಭಯದಿಂದ ನನ್ನನ್ನು ಜೈಲಿಗೆ ತಳ್ಳಿದರು. ಆದರೆ 12 ವರ್ಷಗಳಿಂದ ನಾನು ಕೈಲಾಗದೆ ಕುಳಿತುಕೊಂಡಿಲ್ಲ ಎಂದರು.