ಜಿಎಸ್ ಟಿ ಮೂಲಕ ಬಿಜೆಪಿ ಸರ್ಕಾರ ಜನರನ್ನು ಜೀವಂತವಾಗಿ ಸಾಯಿಸುತ್ತಿದೆ: ಡಿ.ಕೆ. ಶಿವಕುಮಾರ್

Prasthutha|

ಬೆಂಗಳೂರು: ಬಿಜೆಪಿ ಸರ್ಕಾರ ಜಿಎಸ್ ಟಿ ಮೂಲಕ ಜೀವಂತವಾಗಿರುವಾಗಲೇ ಜನರಿಗೆ ವಿಷ ಕೊಟ್ಟು ಸಾಯಿಸಲು ಮುಂದಾಗಿದೆ. ಇದರ ವಿರುದ್ಧ ತಾಲೂಕು ಹಾಗೂ ಹೊಬಳಿ ಮಟ್ಟದಲ್ಲಿ ಪಕ್ಷ ಹೋರಾಟ ಮಾಡಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

- Advertisement -

ಕೆಪಿಸಿಸಿ ಕಚೇರಿಯಲ್ಲಿ ಮಾಧ್ಯಮದವರ ಜತೆ ಬುಧವಾರ ಮಾತನಾಡಿದ ಅವರು, ಸರ್ಕಾರ ಇರುವುದು ಜನ ಸಂತೋಷವಾಗಿರುವಂತೆ ನೋಡಿಕೊಳ್ಳಲು. ಆದರೆ ಸರ್ಕಾರಿ ಉದ್ಯೋಗಿಗಳು, ವ್ಯಾಪಾರಸ್ಥರು, ಜನಸಾಮಾನ್ಯರ ಆದಾಯ ಹೆಚ್ಚು ಮಾಡದೆ, ಎಲ್ಲ ಅಗತ್ಯವಸ್ತುಗಳ ಬೆಲೆ ಏರಿಕೆ ಮಾಡಿ ಅವರನ್ನು ದಿನನಿತ್ಯ ಪಿಕ್ ಪಾಕೆಟ್ ಮಾಡುತ್ತಿದೆ. ಜಿಎಸ್ ಟಿ ಹಾಕಿ ಜನರನ್ನು ಜೀವಂತವಾಗಿ ಸಾಯಿಸುತ್ತಿದೆ. ಪೆಟ್ರೋಲ್, ಡೀಸೆಲ್, ಹಾಲು ಮೊಸರು ಎಲ್ಲವೂ ದುಬಾರಿಯಾಗಿದೆ. ಇದರ ಹೊರೆಯನ್ನು ಜನರು ಹೇಗೆ ಹೊರುತ್ತಾರೆ ಎಂದು ಪ್ರಶ್ನಿಸಿದರು.

ಹಾಲು ಉತ್ಪಾದನೆ ಮಾಡುವ ರೈತರಿಗೆ ಪ್ರತಿ ಲೀಟರ್ ಗೆ 28 ರೂ. ನೀಡುತ್ತಿದ್ದಾರೆ. ಹಾಲಿಗೆ 5 ರೂ. ಹೆಚ್ಚು ಮಾಡಲಿಲ್ಲ. ಆದರೆ ಹಸುಗಳಿಗೆ ಹಾಕುವ ಮೇವು, ನೀಡುವ ಚಿಕಿತ್ಸೆ ಬೆಲೆ ಹೆಚ್ಚಿದೆ. ರೈತ ಪಶುಸಂಗೋಪನೆ ಮೂಲಕ ತಾನೇ ಉದ್ಯೋಗ ಸೃಷ್ಟಿಸಿಕೊಂಡು ಬದುಕುತ್ತಿದ್ದರೂ ಈ ಸರ್ಕಾರ ಆತನ ಬಗ್ಗೆ ಯೋಚಿಸುತ್ತಿಲ್ಲ. ಸಹಕಾರಿ ಸಂಸ್ಥೆಗಳು ಎಂದರೆ ಅದು ರೈತರ ಸಂಸ್ಥೆ. ಸರ್ಕಾರದ ಈ ತೀರ್ಮಾನದಿಂದ ಜನ ಮುಂದೆ ಯಾವುದೇ ಪ್ಯಾಕೇಜ್ ಮಾಡುವಂತಿಲ್ಲ. ಕಳ್ಳ ದಾರಿಯಲ್ಲಿ ವ್ಯಾಪಾರ ಮಾಡಲಿ ಎಂದು ಈ ರೀತಿ ಮಾಡುತ್ತಿದೆಯೇ? ಎಂದು ಕೇಳಿದರು.

- Advertisement -

ಆಸ್ಪತ್ರೆ ಕೊಠಡಿಯಲ್ಲಿ 5 ಸಾವಿರಕ್ಕಿಂತ ಕಡಿಮೆ ಇದ್ದರೆ ಶೇ.5ರಷ್ಟು ತೆರಿಗೆ, ಹೊಟೇಲ್ ಕೊಠಡಿ 1000 ರೂ. ಮೇಲಿದ್ದರೆ ಅದಕ್ಕೆ ಶೇ.12 ರಷ್ಟು ಜಿಎಸ್ ಟಿ ಹಾಕಲಾಗಿದೆ. ಹಳ್ಳಿ ಹಾಗೂ ಟೌನ್ ಗಳಲ್ಲಿ ಸಣ್ಣ ಪುಟ್ಟ ಹೊಟೇಲ್ ನಡೆಸುವವರು ಸಾವಿರ ರೂ ಮೊತ್ತದ ಕೊಠಡಿ ಇಟ್ಟುಕೊಂಡಿರುತ್ತಾರೆ. ಅವರಿಗೆ ಈ ರೀತಿ ತೆರಿಗೆ ಬರೆ ಹಾಕುವುದೇ? ಎಂದು ಡಿಕೆಶಿ ಪ್ರಶ್ನಿಸಿದರು.

ಇನ್ನು ಬ್ಯಾಂಕ್ ಚೆಕ್ ಬುಕ್ ತೆಗೆದುಕೊಳ್ಳಲು 18% ಜಿಎಸ್ ಟಿ ಹಾಕಲಾಗಿದೆ. ಆ ಮೂಲಕ ನಿಮ್ಮ ದುಡ್ಡು ನೀವು ತೆಗೆದುಕೊಳ್ಳಲು ತೆರಿಗೆ ನೀಡಬೇಕು. ರೈತರ ಪಂಪ್, ಮೋಟರ್ ಗಳಿಗೆ ಶೇ.18 ರಷ್ಟು, ಮಕ್ಕಳ ಕಲಿಕೆ ಸಾಮಾಗ್ರಿಗಳಾದ ನಕ್ಷೆ, ಪೆನ್ಸಿಲ್, ಶಾರ್ಪನರ್ ಸೇರಿದಂತೆ ಇತರೆ ವಸ್ತುಗಳ ಮೇಲೆ ಶೇ.12ರಷ್ಟು ತೆರಿಗೆ ಹಾಕಲಾಗಿದೆ. ಶವ ಸುಡಲು ತೆರಿಗೆ ಕಟ್ಟುವ ಸ್ಥಿತಿ ನಿರ್ಮಾಣವಾಗಿದೆ. ಕೋವಿಡ್ ನಲ್ಲಿ ಯಾರಿಗೂ ಪರಿಹಾರ ನೀಡಲಿಲ್ಲ. ಹೊರ ದೇಶಗಳಲ್ಲಿ ಜನರು ಸಾಯುವ ಮುನ್ನವೇ ಹಣ ಕಟ್ಟಬೇಕು ಎಂದು ಕೇಳಿದ್ದೆ. ಈಗ ಇಲ್ಲೂ ಶವಸಂಸ್ಕಾರಕ್ಕೂ ತೆರಿಗೆ ವಸೂಲಿ ಮಾಡುತ್ತಿದ್ದೀರಿ. ಜನರಿಗೆ ಇಷ್ಟು ಕಿರುಕುಳ ನೀಡುತ್ತಿರುವುದು ಸರಿಯೇ?.

ಮುಖ್ಯಮಂತ್ರಿಗಳೂ ಇಂದೇ ಸಭೆ ಕರೆದು, ಸರ್ಕಾರದಿಂದಲೇ ಈ ತೆರಿಗೆ ಭರಿಸಿ ಈ ಹೊರೆಯನ್ನು ಜನರಿಗೆ ಹಾಕದಂತೆ ತಡೆಯಬೇಕು. ಆ ಮೂಲಕ ಬಡವರ ಪಿಕ್ ಪಾಕೆಟ್ ಮಾಡುವುದನ್ನು ನಿಲ್ಲಿಸಬೇಕು. ಇಲ್ಲದಿದ್ದರೆ ಪ್ರತಿ ತಾಲೂಕು ಮಟ್ಟದಿಂದ ಹೋಬಳಿ ಮಟ್ಟದವರೆಗೂ ಈ ಬಗ್ಗೆ ಪ್ರತಿಭಟನೆ ಹಮ್ಮಿಕೊಳ್ಳುತ್ತೇವೆ. ಬಿಜೆಪಿ ಸರ್ಕಾರ ಈಗಾಗಲೇ ಭ್ರಷ್ಟ ಸರ್ಕಾರ ಎಂದು ಹೆಸರು ಪಡೆದುಕೊಂಡಿದೆ ಎಂದು ಶಿವಕುಮಾರ್ ಹೇಳಿದರು.

ಸೋನಿಯಾ ಗಾಂಧಿ ಅವರ ವಿಚಾರಣೆ ಸಂಬಂಧ ನಾಳೆ ಬೆಂಗಳೂರಿನಲ್ಲಿ ಪ್ರತಿಭಟನೆ ಇಟ್ಟುಕೊಂಡಿದ್ದು, ಇದರ ಜತೆಗೆ ಜು. 22 ರಂದು ಜಿ ಎಸ್ ಟಿ ವಿಚಾರವಾಗಿಯೂ ಜಿಲ್ಲಾ ಮಟ್ಟದಲ್ಲಿ ನಾವು ಹೋರಾಟ ಮಾಡುತ್ತೇವೆ. ನಂತರ ತಾಲೂಕು ಮಟ್ಟದಲ್ಲಿ ಹೋರಾಟ ಮಾಡುತ್ತೇವೆ. ಸರ್ಕಾರ ಜನರಿಗೆ ಉದ್ಯೋಗ, ವೃತ್ತಿ ನೀಡಲಿಲ್ಲ. ಅವರೇ ತಮ್ಮ ಕಾಲ ಮೇಲೆ ತಾವೇ ನಿಂತು ಬದುಕುತ್ತೇವೆ ಎಂದರೂ ಅದಕ್ಕೆ ಅವಕಾಶ ನೀಡದೇ, ಕಿರುಕುಳ ನೀಡಿ ಸಾಯಿಸುತ್ತಿದ್ದೀರಿ. ಇದನ್ನು ಕೂಡಲೇ ನಿಲ್ಲಿಸಿ, ಸರ್ಕಾರದ ಬೊಕ್ಕಸದಿಂದ ಈ ಹಣ ಭರಿಸಬೇಕು. ಭ್ರಷ್ಟಾಚಾರ ಗಗನ ಮುಟ್ಟಿದೆ. ನಿನ್ನೆ ಗುಂಡ್ಲುಪೇಟೆಯಲ್ಲಿ ರೈತರನ್ನು ಭೇಟಿಯಾದಾಗ ತೋಟಗಾರಿಕಾ ಸಚಿವನಿಗೆ ಶೇ. 8.5 ರಷ್ಟು ಲಂಚ ನೀಡಬೇಕಂತೆ. ಈ ವಿಚಾರವಾಗಿ ರೈತರು ಪ್ರಧಾನಮಂತ್ರಿಗಳಿಗೆ ಪತ್ರ ಬರೆದಿದ್ದು, ಎಲ್ಲ ಮಾಹಿತಿಯನ್ನು ಪಡೆದಿದ್ದೇವೆ. ಆ ಮೂಲಕ ರಾಜ್ಯದಲ್ಲಿ ಭ್ರಷ್ಟಾಚಾರ, ಬೆಲೆ ಏರಿಕೆ ಗಗನಕ್ಕೇರಿದರೆ, ಜನರ ಆದಾಯ ಪಾತಾಳಕ್ಕೆ ಕುಸಿದಿದೆ ಎಂದು ಹೇಳಿದರು.

ಜಿಎಸ್ ಟಿ ಸಭೆಯಲ್ಲಿ ಎಲ್ಲ ರಾಜ್ಯಗಳು ಒಪ್ಪಿವೆ ಎಂಬ ಪ್ರಶ್ನೆಗೆ, ‘ಜಿಎಸ್ ಟಿ ಸಭೆ ಆನ್ ಲೈನ್ ನಲ್ಲಿ ಮಾಡಿದ್ದು, ಬೇರೆ ರಾಜ್ಯದಲ್ಲಿ ಒಪ್ಪಿದರು ಎಂಬ ಮಾತ್ರಕ್ಕೆ ನಮ್ಮ ರಾಜ್ಯದಲ್ಲಿ ಒಫ್ಪಲು ಸಾಧ್ಯವಿಲ್ಲ’ ಎಂದರು.

ಈ ಸಂದರ್ಭದಲ್ಲಿ ಪ್ರಶ್ನೆಗೆ ಉತ್ತರ ನೀಡಿದ ಪ್ರಿಯಾಂಕ್ ಖರ್ಗೆ ಅವರು, ‘ಈ ವಿಚಾರವಾಗಿ ಜೈರಾಮ್ ರಮೇಶ್ ಅವರು ಸ್ಪಷ್ಟನೆ ನೀಡಿದ್ದು, ಪಶ್ಟಿಮ ಬಂಗಾಳ ಹಾಗೂ ರಾಜಸ್ಥಾನ ಆರ್ಥಿಕ ಸಚಿವರು ಈ ವಿಚಾರವಾಗಿ ಕೇಂದ್ರ ಸರ್ಕಾರ ಯಾವುದೇ ಚರ್ಚೆ ನಡೆಸಿಲ್ಲ ಎಂದು ಹೇಳಿದ್ದಾರೆ. ಈ ಕುರಿತ ಶಿಫಾರಸ್ಸನ್ನು ನಾವು ವಿರೋಧಿಸಿದ್ದೆವು. ವಿತ್ತ ಸಚಿವರು ಮೊದಲು ಸರ್ವಾನುಮತದಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ನಂತರ ಬಹುತೇಕರ ಒಪ್ಪಿಗೆ ಪಡೆಯಲಾಗಿದೆ ಎಂದು ಹೇಳಿದ್ದಾರೆ. ಇವೆರಡಕ್ಕೂ ವ್ಯತ್ಸಾಸಇದ್ದು, ಆ ಮೂಲಕ ಬಿಜೆಪಿ ಸುಳ್ಳು ಹೇಳುತ್ತಿದೆ ಎಂಬುದು ಸ್ಪಷ್ಟವಾಗಿದೆ’ ಎಂದು ತಿಳಿಸಿದರು

ಒಕ್ಕಲಿಗರ ಬೆಂಬಲ ಕೇಳುವುದರಲ್ಲಿ ತಪ್ಪೇನಿದೆ?:

ಒಕ್ಕಲಿಗರು ಜೆಡಿಎಸ್ ಪರವಾಗಿ ನಿಲ್ಲಬೇಕು ಎಂದು ಶಿವಕುಮಾರ್ ಅವರು ಹೇಳಿರುವ ಬಗ್ಗೆ ಕುಮಾರಸ್ವಾಮಿ ಅವರು ವ್ಯಂಗ್ಯವಾಡಿರುವ ಬಗ್ಗೆ ಕೇಳಿದಾಗ, ‘ಅವರು ಕನಸು ಕಾಣಲಿ, ಅದರಲ್ಲಿ ತಪ್ಪೇನಿದೆ. ನನಗೆ ನನ್ನ ಪಕ್ಷ ಮುಖ್ಯ. ಬೇರೆ ಪಕ್ಷದ ವಿಚಾರ ನಮಗೆ ಬೇಡ. ನಾನು ಒಂದು ಸಮುದಾಯದ ಪ್ರತಿನಿಧಿಯಾಗಿದ್ದು, ಸೋನಿಯಾ ಗಾಂಧಿ ಅವರು ನನಗೆ ಪಕ್ಷದ ಅಧ್ಯಕ್ಷರನ್ನಾಗಿ ಮಾಡಿದ್ದಾರೆ. 20 ವರ್ಷಗಳ ನಂತರ ಈ ಸಮುದಾಯದವರಿಗೆ ಉನ್ನತ ಜವಾಬ್ದಾರಿ ನೀಡಿದ್ದಾರೆ. ಈ ಅವಕಾಶ ಕಳೆದುಕೊಳ್ಳಬೇಡಿ. ಎಲ್ಲರಿಗೂ ನೀವು ಒಂದು ಅವಕಾಶ ನೀಡಿದ್ದೀರಿ. ನನಗೂ ಒಂದು ಅವಕಾಶ ನೀಡಿ ಎಂದು ಕೇಳಿದ್ದೇನೆ. ಎಲ್ಲರಿಗೂ ಅವರದೇ ಆದ ಸ್ವಾಭಿಮಾನ ಇರುತ್ತದೆಯಲ್ಲವೇ? ದಲಿತರು ಎಲ್ಲರೂ ಒಟ್ಟಾಗಿ ದಲಿತ ಸಿಎಂ ಆಗಬೇಕು ಎನ್ನುತ್ತಾರೆ ಅದರಲ್ಲಿ ತಪ್ಪೇನಿದೆ? ಅದೇ ರೀತಿ ನಮ್ಮ ಸಮುದಾಯದವರೂ ಒಂದಾಗಲಿ ಎಂದು ನಾನು ಹೇಳಿದ್ದೇನೆ’ ಎಂದು ತಿಳಿಸಿದ್ದಾರೆ.

ಒಕ್ಕಲಿಗ ಸಮಾಜಕ್ಕೆ ಶಿವಕುಮಾರ್ ಕೊಡುಗೆ ಏನು ಎಂದು ಕುಮಾರಸ್ವಾಮಿ ಅವರ ಪ್ರಶ್ನೆ ವಿಚಾರವಾಗಿ ಕೇಳಿದಾಗ, ‘ನಾನು ಕುಮಾರಸ್ವಾಮಿಗೆ ಉತ್ತರ ಕೊಡಬೇಕಿಲ್ಲ. ರಾಜ್ಯದ ಜನರಿಗೆ ಉತ್ತರ ನೀಡುವ ಜವಾಬ್ದಾರಿ ಇದೆ. ನಾನು ಕೊಡುತ್ತೇನೆ. ಜನ ನನ್ನನ್ನು ಸುಮ್ಮನೆ 7 ಬಾರಿ ಗೆಲ್ಲಿಸಿದ್ದಾರಾ? ಕುಮಾರಸ್ವಾಮಿ ಅವರ ಧರ್ಮಪತ್ನಿ ವಿರುದ್ಧ ನನ್ನ ತಮ್ಮನನ್ನು ನಿಲ್ಲಿಸಿದ್ದೆ. ಎರಡೂ ಪಕ್ಷ ಆಗ ಒಂದಾಗಿತ್ತಲ್ಲ, ಆಗ ಜನ ನಮ್ಮನ್ನು ಸುಮ್ಮನೆ ಗೆಲ್ಲಿಸಿದರಾ? ಕುಮಾರಣ್ಣ ಸಂಸದರಾಗಿದ್ದಾಗ ನನ್ನ ವಿರುದ್ಧ ಸ್ಪರ್ಧಿಸಿದ್ದರು. ನಾನು ಕೊಡುಗೆ ನೀಡಿದ್ದಕ್ಕೆ, ಅವರಿಗಿಂತ ನಾನು ಉತ್ತಮ ಎಂಬ ಕಾರಣಕ್ಕೆ ಅಲ್ಲವೇ ಜನ ನನ್ನನ್ನು ಗೆಲ್ಲಿಸಿದ್ದು’ ಎಂದರು.

ನೂರು ಜನ ಶಿವಕುಮಾರ್ ಬಂದರೂ ನಾನು ಹೆದರುವುದಿಲ್ಲ ಎಂಬ ಕುಮಾರಸ್ವಾಮಿ ಅವರ ಹೇಳಿಕೆ ಬಗ್ಗೆ ಕೇಳಿದಾಗ, ‘ಅವರು ನನಗೆ ಹೆದರುತ್ತಾರೆ ಎಂದು ನಾನು ಹೇಳಿದ್ದೀನಾ? ಕೇವಲ ನೂರಲ್ಲ ಸಾವಿರ ಜನಕ್ಕೂ ಅವರು ಹೆದರುವುದಿಲ್ಲ’ ಎಂದರು.

ರಾಮನಗರ ಅಭ್ಯರ್ಥಿ ಯಾರು? ಸಂಸದ ಸುರೇಶ್ ಅವರು ಸ್ಪರ್ಧಿಸುತ್ತಾರಾ ಎಂದು ಕೇಳಿದಾಗ, ‘ಈ ವಿಚಾರವಾಗಿ ಸೋನಿಯಾ ಗಾಂಧಿ ಅವರು ಏನು ತೀರ್ಮಾನ ಮಾಡುತ್ತಾರೋ ನೋಡೋಣ. ಪಕ್ಷ ತೀರ್ಮಾನ ಮಾಡಿದಾಗ ತಿಳಿಯುತ್ತದೆ’ ಎಂದು ಉತ್ತರಿಸಿದರು.

ಶಿವಕುಮಾರ್ ಅವರೇ ರಾಮನಗರಕ್ಕೆ ಬರಲಿ ಎಂದು ಕುಮಾರಸ್ವಾಮಿ ಅವರ ಸವಾಲಿನ ವಿಚಾರವಾಗಿ ಕೇಳಿದ ಪ್ರಶ್ನೆಗೆ, ‘ನನ್ನ ಹಾಗೂ ಅವರ ಮಧ್ಯೆ ದೊಡ್ಡ ಕುಸ್ತಿಗಳೇ ಆಗಿವೆ. ನಾನು ಅವರ ವಿರುದ್ಧ ಇನ್ನು ಎಷ್ಟು ಕುಸ್ತಿ ಮಾಡಲಿ. ಅವರ ವಿರುದ್ಧ ಕುಸ್ತಿ ಮಾಡಿಯೂ ಆಗಿದೆ, ಅವರ ಜತೆಯಲ್ಲಿ ಕೈ ಹಿಡಿದು ಸರ್ಕಾರ ಮಾಡಿದ್ದೂ ಆಗಿದೆ. ಮಾಧ್ಯಮಗಳು ನಮ್ಮ ಕುಸ್ತಿ ಮಾಡಿಸಲು ಸಿದ್ಧರಿದ್ದೀರಿ. ಅವರಿಗೆ ಇಚ್ಛೆ ಇಲ್ಲದಿದ್ದರೂ ನೀವೇ ಮಾಡಿಸುತ್ತಿದ್ದೀರಿ’ ಎಂದರು.

Join Whatsapp