ಬೆಂಗಳೂರು: ಜಾಗತಿಕ ಹಸಿವಿನ ಸೂಚ್ಯಂಕದಲ್ಲಿ ಭಾರತ ಕುಸಿತ ಕಂಡಿದ್ದು ಅತಿ ಆತಂಕಕಾರಿ. ನಿರಂತರ ಬೆಲೆ ಏರಿಕೆ ಇನ್ನಷ್ಟು ಬಡವರ ಮನೆಯ ಒಲೆಗಳನ್ನು ಆರಿಸುತ್ತದೆ. ನಿರುದ್ಯೋಗ ಇನ್ನಷ್ಟು ಹಸಿದವರನ್ನು ಹೆಚ್ಚಿಸುತ್ತದೆ. ಕುಸಿದ ಆರ್ಥಿಕತೆ ಇನ್ನಷ್ಟು ಬಡತನ ಹೆಚ್ಚಿಸುತ್ತದೆ. ಇದನ್ನು ಗಮನಿಸದೆ, ಬಣ್ಣದ ಬಟ್ಟೆಯಲ್ಲಿ ಮಿಂಚುವುದಷ್ಟೇ ಪ್ರಧಾನಿಯ ಆದ್ಯತೆಯಾಗಿದೆ! ಎಂದು ಕರ್ನಾಟಕ ಕಾಂಗ್ರೆಸ್ ವ್ಯಂಗ್ಯವಾಡಿದೆ.
ಪಾಕ್, ಬಾಂಗ್ಲಾ, ನೇಪಾಳದಂತಹ ಸಣ್ಣಪುಟ್ಟ ದೇಶಗಳಿಗಿಂತಲೂ ಭಾರತವನ್ನು ಕಳಪೆ ಹಂತಕ್ಕೆ ಕೊಂಡೊಯ್ದಿದ್ದೇ ಮೋದಿ ಸಾಧನೆ. ಒಂದು ಕಡೆ ಅದಾನಿ-ಅಂಬಾನಿಗಳ ಸಂಪತ್ತು ಏರಿಕೆಯಾಗುತ್ತಿದೆ, ಮತ್ತೊಂದು ಕಡೆ ಜನಸಾಮಾನ್ಯರ ಬಡತನ ಹೆಚ್ಚುತ್ತಿದೆ. ಬಹುಶಃ ನರೇಂದ್ರ ಮೋದಿ ಅವರು ಅದಾನಿ-ಅಂಬಾನಿಗಳನ್ನೇ ದೇಶವೆಂದು ತಿಳಿದು 18 ಗಂಟೆ ಕೆಲಸ ಮಾಡುತ್ತಿರಬಹುದು! ಎಂದು ಕಾಂಗ್ರೆಸ್ ವ್ಯಂಗ್ಯವಾಡಿದೆ.
ಆಹಾರ ಭಾರತದ ಪ್ರತಿ ನಾಗರಿಕನ ಹಕ್ಕು ಎಂದು ನಿರ್ಧರಿಸಿದ ಮಹತ್ತರವಾದ ಆಹಾರ ಭದ್ರತಾ ಕಾಯ್ದೆಯನ್ನು ಯುಪಿಎ ಸರ್ಕಾರ ಜಾರಿಗೊಳಿಸಿತ್ತು. ಕಾಯ್ದೆಯ ಪ್ರಕಾರ ಪ್ರತಿ ನಾಗರಿಕನೂ ಆಹಾರ ಪಡೆಯುವ ಹಕ್ಕು ಹೊಂದಿದ್ದಾನೆ, ಯಾರೂ ಹಸಿದಿರುವಂತೆ ನೋಡಿಕೊಳ್ಳುವುದು ಸರ್ಕಾರದ ಜವಾಬ್ದಾರಿ. ಆದರೆ ಈಗ ಬಿಜೆಪಿ ಸರ್ಕಾರ ಹಸಿವನ್ನೇ ದೇಶಕ್ಕೆ ಕೊಡುಗೆಯಾಗಿ ನೀಡಿದೆ! ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.