ಬೆಂಗಳೂರಿಗೆ ಮೂಲಭೂತ ಸೌಕರ್ಯ ಒದಗಿಸುವಲ್ಲಿ ಬಿಜೆಪಿ ಸರ್ಕಾರ ಸಂಪೂರ್ಣ ವಿಫಲ: ಬಿ.ಕೆ.ಹರಿಪ್ರಸಾದ್

Prasthutha|

ಬೆಂಗಳೂರು: ಬೆಂಗಳೂರು ನಗರ ಮೂಲಭೂತ ಸೌಕರ್ಯ ವಿಚಾರದಲ್ಲಿ ಬಿಜೆಪಿ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ. ಕಳೆದ ಎರಡು ವರ್ಷಗಳಿಂದ ಬಿಬಿಎಂಪಿ ಚುನಾವಣೆ ನಡೆಸಿಲ್ಲ. ಹೊಸದಾಗಿ ಸೇರ್ಪಡೆಯಾದ 108 ಹಳ್ಳಿಗಳು ಹಾಗೂ ಅಭಿವೃದ್ಧಿ ಹೊಂದಿದ ಪ್ರದೇಶಗಳಲ್ಲಿ ಮೂಲಭೂತ ಸೌಕರ್ಯ ಹೇಗಿದೆ ಎಂದು ಎಲ್ಲರಿಗೂ ಗೊತ್ತಿದೆ. ಬೆಂಗಳೂರು ಚಿನ್ನದ ಮೊಟ್ಟೆ ಇಡುವ ಕೋಳಿ ಆಗಿದ್ದು, ಇದರ ಅಭಿವೃದ್ಧಿ ವಿಚಾರದಲ್ಲಿ ಸರ್ಕಾರ ನಿರ್ಲಕ್ಷ ವಹಿಸಿದೆ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್ ಟೀಕಿಸಿದ್ದಾರೆ.

- Advertisement -


ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಂಗಳೂರಿನ ಹಳೆಯ 12 ಕ್ಷೇತ್ರಗಳನ್ನು 28 ಕ್ಷೇತ್ರ ಮಾಡಲಾಗಿದೆ. ಈ ಕ್ಷೇತ್ರಗಳಲ್ಲಿ ಮೂಲಭೂತ ಸೌಕರ್ಯ ಅಭಿವೃದ್ಧಿ ವಿಚಾರದಲ್ಲಿ ಯಾವುದೇ ರೀತಿಯ ಯೋಜನೆ ರೂಪಿಸಿಲ್ಲ. ಮಲ್ಲೇಶ್ವರಂ ಸ್ಯಾಂಕಿ ಟ್ಯಾಂಕ್ ರಸ್ತೆ ವಿಸ್ತರಣೆ ಹಾಗೂ ಫ್ಲೈ ಓವರ್ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಟ್ಯಾಂಕ್ ರಸ್ತೆಯಲ್ಲಿ ಹಲವು ವಿದ್ಯಾಸಂಸ್ಥೆಗಳು ಇವೆ. ಇಲ್ಲಿ ಏಕಾಏಕಿ ರಸ್ತೆ ಅಗಲೀಕರಣ ಮಾಡುತ್ತೇವೆ ಎನ್ನುತ್ತಿದ್ದಾರೆ. ಸ್ಯಾಂಕಿ ಟ್ಯಾಂಕ್ ಹಳೆ ಟ್ಯಾಂಕ್ ಆಗಿದೆ. ಈ ಕೆರೆ ಉಳಿಸುವ ಕೆಲಸ ಮಾಡಬೇಕು. ಇಲ್ಲಿ ರಸ್ತೆ ಅಗಲೀಕರಣ ಮಾಡಿದರೆ ಈ ಕೆರೆಗೆ ತೊಂದರೆ ಆಗಲಿದೆ. 2011ರಿಂದ ನಿರಂತರವಾಗಿ ಈ ಪ್ರಯತ್ನ ನಡೆಯುತ್ತಿದೆ. ಯಾವುದೇ ಮುಂದಾಲೋಚನೆ ಇಲ್ಲದೆ ರಸ್ತೆ ಈ ಯೋಜನೆಗೆ ಮುಂದಾಗಿದ್ದಾರೆ. ಅಲ್ಲಿ 100ರಿಂದ 150 ವರ್ಷಗಳ ಹಳೆ ಮರಗಳಿವೆ. ಅವುಗಳನ್ನು ತೆಗೆದು ರಸ್ತೆ ಅಗಲೀಕರಣ ಮಾಡುವ ಅಗತ್ಯವಿಲ್ಲ ಎಂದರು.

Join Whatsapp