ಹಿಜಾಬ್ ವಿವಾದದಲ್ಲಿ ಸಂಘಟನೆಯ ವಿರುದ್ಧ ಬಿಜೆಪಿ ಸರಕಾರ ಸುಪ್ರೀಂ ಕೋರ್ಟ್ ಗೆ ನೀಡಿರುವ ಹೇಳಿಕೆ ಹಾಸ್ಯಾಸ್ಪದ: ಪಾಪ್ಯುಲರ್ ಫ್ರಂಟ್

Prasthutha|

ಬೆಂಗಳೂರು: ಹಿಜಾಬ್ ವಿವಾದದ ಹಿಂದೆ ಪಾಪ್ಯುಲರ್ ಫ್ರಂಟ್ ಪಿತೂರಿ ಇದೆ ಎಂದು ಬಿಜೆಪಿ ಸರಕಾರವು ಸುಪ್ರೀಂ ಕೋರ್ಟ್ ಗೆ ನೀಡಿರುವ ಹೇಳಿಕೆ ಹಾಸ್ಯಾಸ್ಪದವಾಗಿದೆ ಎಂದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ರಾಜ್ಯಾಧ್ಯಕ್ಷ ನಾಸಿರ್ ಪಾಶ ಹೇಳಿದ್ದಾರೆ.

- Advertisement -

ಹಿಜಾಬ್, ಬಿಜೆಪಿ ತನ್ನ ರಾಜಕೀಯ ದುರುದ್ದೇಶಕ್ಕಾಗಿ ಹುಟ್ಟು ಹಾಕಿದ್ದ ಅನಗತ್ಯ ವಿವಾದವಾಗಿತ್ತು. ಪದವಿಪೂರ್ವ ಕಾಲೇಜುಗಳಲ್ಲಿ ಸಮವಸ್ತ್ರ ಸಂಹಿತೆ ಇಲ್ಲದ ಹೊರತಾಗಿಯೂ ಹಿಜಾಬ್ ಗೆ ನಿಷೇಧ ಹೇರಿ ಮುಸ್ಲಿಮ್ ವಿದ್ಯಾರ್ಥಿನಿಯರನ್ನು ತರಗತಿಯಿಂದ ಹೊರಹಾಕಲಾಯಿತು. ಬಿಜೆಪಿ ಶಾಸಕರು, ಸಚಿವರು ಮತ್ತು ಸ್ಥಳೀಯ ನಾಯಕರ ನಿರಂತರ ಪ್ರಚೋದನೆಯೊಂದಿಗೆ ಈ ವಿವಾದವನ್ನು ರಾಜ್ಯಾದ್ಯಂತ ಹರಡಲಾಯಿತು. ನಂತರ ತರಾತುರಿಯಲ್ಲಿ ಬಿಜೆಪಿ ಸರಕಾರವು ಶೈಕ್ಷಣಿಕ ಅವಧಿಯ ನಡುವೆಯೇ ಸಮವಸ್ತ್ರ ನೀತಿಯನ್ನು ಜಾರಿಗೊಳಿಸಿತ್ತು. ಕಾಲೇಜು ಕ್ಯಾಂಪಸ್ ಗಳಲ್ಲಿ ಕೋಮು ಧ್ರುವೀಕರಣ ನಡೆಸುವ ಭಾಗವಾಗಿ ಬಿಜೆಪಿಯೇ ಹಿಜಾಬ್ ವಿವಾದವನ್ನು ಹುಟ್ಟು ಹಾಕಿತ್ತು ಎಂಬ ವಿಚಾರ ಜಗಜ್ಜಾಹೀರಾಗಿದ್ದರೂ, ತನ್ನ ವೈಫಲ್ಯವನ್ನು ಮುಚ್ಚಿ ಹಾಕಲು ಅದು ಪಾಪ್ಯುಲರ್ ಫ್ರಂಟ್ ಹೆಸರನ್ನು ಅನಗತ್ಯವಾಗಿ ಎಳೆದು ತಂದಿದೆ. ಪಾಪ್ಯುಲರ್ ಫ್ರಂಟ್ ಮೇಲೆ ಸುಳ್ಳಾರೋಪ ಹೊರಿಸುವ ಪ್ರವೃತ್ತಿ ಇದು ಮೊದಲೇನಲ್ಲ. ಕಪೋಲಕಲ್ಪಿತ ಲವ್ ಜಿಹಾದ್ ಅನ್ನು ಜೀವಂತವಾಗಿಡಲು, ಸಿಎಎ/ಎನ್.ಆರ್.ಸಿ ಹೋರಾಟದ ದಿಕ್ಕು ತಪ್ಪಿಸಲು ಬಿಜೆಪಿ ಪಾಪ್ಯುಲರ್ ಫ್ರಂಟ್ ಹೆಸರನ್ನು ಎಳೆದು ತಂದಿತು.  ಮಾತ್ರವಲ್ಲ, ದೇಶದ ಯಾವುದೇ ಮೂಲೆಯಲ್ಲೂ ಯಾವುದೇ ಅಹಿತಕರ ಘಟನೆಗಳು ನಡೆದರೂ ಸಂಘಟನೆಯ ಹೆಸರನ್ನು ದುರ್ಬಳಕೆ ಮಾಡಿಕೊಳ್ಳುವುದು ಬಿಜೆಪಿಗೆ ಚಾಳಿಯಾಗಿ ಬಿಟ್ಟಿದೆ. ಬಿಜೆಪಿಯ ಈ ನಡೆಯನ್ನು ಪಾಪ್ಯುಲರ್ ಫ್ರಂಟ್ ತೀವ್ರವಾಗಿ ಖಂಡಿಸುತ್ತದೆ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಧಾರ್ಮಿಕ ಆಚರಣೆ ಪ್ರಜೆಗಳ ಸಂವಿಧಾನದತ್ತ ಹಕ್ಕು. ಈ ನಿಟ್ಟಿನಲ್ಲಿ ಹಿಜಾಬ್ ಮಾತ್ರವಲ್ಲ, ಇತರ ಧರ್ಮಗಳ ಧಾರ್ಮಿಕ ಆಚರಣೆಗಳ ಮೇಲೆ ದಾಳಿ ನಡೆದಾಗಲೂ ಅದಕ್ಕೆ ಸಂಬಂಧಿಸಿದ ನ್ಯಾಯಯುತ ಹೋರಾಟಗಳಲ್ಲಿ ಪಾಪ್ಯುಲರ್ ಫ್ರಂಟ್ ಮುಂಚೂಣಿಯಲ್ಲಿ ನಿಲ್ಲುತ್ತದೆ. ಹಿಜಾಬ್ ಮುಸ್ಲಿಮ್ ವಿದ್ಯಾರ್ಥಿನಿಯರ ಧಾರ್ಮಿಕ ಅಸ್ಮಿತೆ. ಈ ನಿಟ್ಟಿನಲ್ಲಿ ನ್ಯಾಯಾಂಗವು ಬಿಜೆಪಿ ಸರಕಾರದ ಸುಳ್ಳು ದಾವೆಗಳನ್ನು ತಳ್ಳಿ ಹಾಕಬೇಕು ಮತ್ತು ಹಿಜಾಬ್ ಧರಿಸಲು ಅವಕಾಶ ಕಲ್ಪಿಸಿ ವಿದ್ಯಾರ್ಥಿನಿಯರ ಧಾರ್ಮಿಕ ಹಾಗೂ ಸಂವಿಧಾನದತ್ತವಾದ ಮೂಲಭೂತ ಹಕ್ಕನ್ನು ಎತ್ತಿಹಿಡಿಯಬೇಕೆಂದು ನಾಸಿರ್ ಪಾಶ ಒತ್ತಾಯಿಸಿದ್ದಾರೆ.



Join Whatsapp