ಸಾಧನೆಗಳಿಲ್ಲದ ಬಿಜೆಪಿ ಸರ್ಕಾರ ವೈಫಲ್ಯ ಮರೆಮಾಚಲು ಜನೋತ್ಸವ ಬದಲಿಗೆ ಸಾರ್ವಕರ್ ಉತ್ಸವ ಮಾಡುತ್ತಿದೆ: ಪ್ರಿಯಾಂಕ್ ಖರ್ಗೆ ವಾಗ್ದಾಳಿ

Prasthutha|

ಬೆಂಗಳೂರು: ‘ಹೇಳಿಕೊಳ್ಳಲು ಯಾವುದೇ ಜನಪರ ಸಾಧನೆಗಳನ್ನು ಮಾಡದ ಬಿಜೆಪಿ ಸರ್ಕಾರ ಜನೋತ್ಸವ ಬದಲಿಗೆ, ತಮ್ಮ ವೈಫಲ್ಯ ಮುಚ್ಚಿಕೊಳ್ಳಲು ಸಾರ್ವಕರ್ ಉತ್ಸವವನ್ನು ಮಾಡುತ್ತಿದೆ’ ಎಂದು ಕೆಪಿಸಿಸಿ ಸಂವಹನ ವಿಭಾಗದ ಮುಖ್ಯಸ್ಥ ಪ್ರಿಯಾಂಕ್ ಖರ್ಗೆ ಅವರು ವಾಗ್ದಾಳಿ ನಡೆಸಿದ್ದಾರೆ.

- Advertisement -

ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಬುಧವಾರ ಮಾಧ್ಯಮಗೋಷ್ಠಿ ನಡೆಸಿದ ಅವರು ಸಾರ್ವಕರ್ ಅವರ ವಿಚಾರಧಾರೆಗಳನ್ನು ಮುಂದಿಟ್ಟು ಬಿಜೆಪಿಗೆ ಪಂಚ ಪ್ರಶ್ನೆಗಳನ್ನು ಹಾಕಿದರು.

1 . ಸಾವರ್ಕರ್ ಅವರು ಸ್ವಾತಂತ್ರ್ಯ ಹೋರಾಟ ಮಾಡುವ ಉದ್ದೇಶ ಇದ್ದಿದ್ದರೆ ಅವರು ವಿದೇಶದಲ್ಲಿ ಬಂಧನವಾದಾಗ ಭಾರತಕ್ಕೆ ಬರಲು ಯಾಕೆ ಒಪ್ಪಲಿಲ್ಲ?

- Advertisement -

2. ಸಾವರ್ಕರ್ ಅವರು ಸೆರೆವಾಸದಲ್ಲಿದ್ದಾಗ ಅವರು ಬ್ರಿಟೀಷರಿಗೆ ಆರು ಬಾರಿ ಕ್ಷಮಾಪಣಾ ಪತ್ರ ಬರೆದಿದ್ದು ಯಾಕೆ?

3. ಈ ಕ್ಷಮಾಪಣಾ ಪತ್ರಗಳನ್ನು ಬಿಜೆಪಿಯವರು ಮಾಸ್ಟರ್ ಸ್ಟ್ರೋಕ್ ಎನ್ನುತ್ತಿದ್ದು, ಇವುಗಳು ಮಾಸ್ಟರ್ ಸ್ಟ್ರೋಕ್ ಎಂದು ಭಾವಿಸಿದರೂ ಅವರು ಜೈಲಿಂದ ಬಿಡುಗಡೆಯಾದ ನಂತರ ಅವರು ಎಷ್ಟು ಹೋರಾಟ ಮಾಡಿದರು? ಅದರ ಪರಿಣಾಮಗಳೇನು?

4. ಮುಸ್ಲೀಂ ಲೀಗ್ ಜತೆ ಅವರು ದೇಶದ ಹಲವು ಕಡೆಗಳಲ್ಲಿ ಸರ್ಕಾರ ರಚಿಸಿದ್ದು ಯಾಕೆ? ಅವರು ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ಭಾಗವಹಿಸಲಿಲ್ಲ ಯಾಕೆ?

5. ಸಾರ್ವಕರ್ ಹಿಂದುತ್ವದ ಪಿತಾಮಹ ಎಂಬುದು ನಿಜವಾಗಿದ್ದರೆ, ಅವರು ಗೋಮಾತೆಯ ಪೂಜೆ ಮಾಡಬೇಡಿ ಎಂದಿದ್ದರು. ಅವರ ಮಾತಿನಂತೆ ಗೋಮಾತೆ ಪೂಜೆ ಬಿಡುತ್ತೀರಾ? ಧರ್ಮದ ಆಧಾರದ ಮೇಲೆ ನಮ್ಮ ದೇಶ ವಿಭಜನೆ ಮಾಡಬೇಕು ಎಂದು ಮೊದಲು ಧ್ವನಿ ಎತ್ತಿದವರ ಪೂಜೆ ಯಾಕೆ ಮಾಡುತ್ತಿದ್ದೀರಿ? ಸಾವರ್ಕರ್ ನಾಸ್ತಿಕರಾಗಿದ್ದರು, ಈಗ ಪ್ರತಿ ಗಣೇಶೋತ್ಸವದ ಪೆಂಡಾಲ್ ನಲ್ಲಿ ಸಾವರ್ಕರ್ ಫೋಟೋ ಇಡುತ್ತಿರುವುದೇಕೆ? ಆ ಮೂಲಕ ದೇವರು ಮತ್ತು ಸಾವರ್ಕರ್ ಗೆ ಅಪಮಾನ ಮಾಡುತ್ತಿರುವುದೇಕೆ? ಎಂದು ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದ್ದಾರೆ.

1906ರಲ್ಲಿ ಸಾರ್ವಕರ್ ಅವರು ಬಾಲಗಂಗಾಧರ ತಿಲಕರ ನೆರವಿನ ಮೇರೆಗೆ ಲಂಡನ್ ನಲ್ಲಿ ಕಾನೂನು ವಿದ್ಯಾಭ್ಯಾಸಕ್ಕೆ ಹೋಗುತ್ತಾರೆ. ಇದಕ್ಕೂ ಮುನ್ನ ಅಭಿನವ ಭಾರತ್ ಸೊಸೈಟಿ ಎಂಬ ಸಂಸ್ಥೆಯನ್ನು ಹುಟ್ಟುಹಾಕುತ್ತಾರೆ. 1909ರಲ್ಲಿ ನಾಸಿಕ್ ಕಲೆಕ್ಟರ್ ಆಗಿದ್ದ ಎಎಂಟಿ ಜಾಕ್ಸನ್ ಎಂಬುವವರನ್ನು ಈ ಸೊಸೈಟಿಯ ಸದಸ್ಯರು ಗುಂಡಿಟ್ಟು ಹತ್ಯೆ ಮಾಡುತ್ತಾರೆ. ಇದರ ತನಿಖೆ ಮಾಡಿದಾಗ ಇದರ ಅಧ್ಯಕ್ಷರು ಸಾವರ್ಕರ್ ಆಗಿದ್ದು, ಹತ್ಯೆಗೆ ಬಳಸಿದ ಪಿಸ್ತೂಲ್ ಇಂಗ್ಲೆಂಡ್ ನಿಂದ ರವಾನೆಯಾಗಿದ್ದು, ಇದನ್ನು ಸಾವರ್ಕರ್ ಕಳುಹಿಸಿದ್ದಾರೆ ಎಂದು ತಿಳಿಯುತ್ತದೆ. ಹೀಗಾಗಿ ಕೊಲೆಗೆ ನೆರವು ನೀಡಿದ ಹಿನ್ನೆಲೆಯಲ್ಲಿ ಸಾವರ್ಕರ್ ಅವರನ್ನು ಬಂಧಿಸಿ ಕರೆತರಲು ಆದೇಶಿಸಲಾಗುತ್ತದೆ.

ವಿ.ಡಿ. ಸಾರ್ವಕರ್ ಅವರ ಸಹೋದರ ಗಣೇಶ್ ದಾಮೋದರ್ ಸಾವರ್ಕರ್ ಅವರನ್ನು ಸಿಡಿಮದ್ದು, ಸ್ಫೋಟಕ ಪ್ರಕರಣದಲ್ಲಿ ಬಂಧಿಸಿದರು ಎಂಬ ದ್ವೇಷಕ್ಕೆ ಜಾಕ್ಸನ್ ಅವರನ್ನು ಹತ್ಯೆ ಮಾಡಲಾಗುತ್ತದೆ. ಈ ಪ್ರಕರಣದ ತೀರ್ಪಿನಲ್ಲಿ ಈ ಹತ್ಯೆಗೆ ಸಾವರ್ಕರ್ ಪ್ರೇರಣೆ ಇದೆ ಎಂದು ಆರೋಪ ಪಟ್ಟಿ ಸಲ್ಲಿಸಿ ಅವರನ್ನು ಇಂಗ್ಲೆಂಡ್ ನಿಂದ ಕರೆ ತರಲು ಆದೇಶಿಸುತ್ತಾರೆ. ನಂತರ ಸಾವರ್ಕರ್ ಅವರನ್ನು ಬಂಧಿಸುತ್ತಾರೆ. ಆಗ ಸಾವರ್ಕರ್ ಅವರು ನೇರವಾಗಿ ಭಾರತಕ್ಕೆ ಬರಲು ಒಪ್ಪದೇ ಇಂಗ್ಲೆಂಡ್ ನ್ಯಾಯಾಲಯದಲ್ಲಿ ರಿಟ್ ಅರ್ಜಿ ಹಾಕಿ ಭಾರತದಲ್ಲಿನ ಕಾನೂನು ಹಾಗೂ ಅದರ ಪ್ರಕ್ರಿಯೆ ಭಿನ್ನವಾಗಿದ್ದು, ಹಸ್ತಾಂತರ ಮಾಡುವುದು ನ್ಯಾಯಸಮ್ಮತವಲ್ಲ. ಹೀಗಾಗಿ ನಾನು ಬರುವುದಿಲ್ಲ ಎಂದು ಆಕ್ಷೇಪ ಎತ್ತುತ್ತಾರೆ ಎಂದು ಖರ್ಗೆ ವಿವರಿಸಿದರು.

ಬಿಜೆಪಿಯವರು ದೇಶಕ್ಕಾಗಿ ಸಾವರ್ಕರ್ ಬಹಳ ತ್ಯಾಗ ಮಾಡಿದರು ಎಂದು ಹೇಳುತ್ತಾರೆ. ಆದರೆ ಸಾವರ್ಕರ್ ಭಾರತಕ್ಕೆ ಮರಳಲು ನಿರಾಕರಿಸಿದ್ದು ಯಾಕೆ?

1910ರ ಜುಲೈನಲ್ಲಿ ಭಾರತಕ್ಕೆ ಕರೆ ತರಲು ತೀರ್ಮಾನಿಸುತ್ತಾರೆ. ಹಡಗಿನಲ್ಲಿ ಬರುವಾಗ ಫ್ರಾನ್ಸ್ ನಲ್ಲಿ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆಗ ಸಾವರ್ಕರ್ ಸಿಕ್ಕಿ ಬೀಳುತ್ತಾರೆ. ನಂತರ ಅವರನ್ನು ಭಾರತಕ್ಕೆ ಕರೆತರುತ್ತಾರೆ. ಈ ಕೊಲೆ ಪ್ರಕರಣ ತನಿಖೆ ಸಂದರ್ಭದಲ್ಲಿ ನಾನು ತನಿಖೆಗೆ ಸಹಕರಿಸುವುದಿಲ್ಲ, ನನ್ನನ್ನು ಕಾನೂನು ಬಾಹಿರವಾಗಿ ಕರೆತರಲಾಗಿದೆ ಎಂದು ಹೇಳುತ್ತಾರೆ. ಆಗ ಅವರ ಪರವಾಗಿ ವಾದ ಮಾಡಿದ್ದು ಜೋಸೆಫ್ ಬ್ಯಾಟಿಸ್ಟಾ ಎಂಬ ಕ್ರೈಸ್ತ ವಕೀಲರು.  ಸಾರ್ವಕರ್ ಅವರು ನಾಸ್ತಿಕರಾಗಿದ್ದು, ವಿಚಾರವಾದಿಯೂ ಆಗಿದ್ದರು. ಅವರು ಕ್ರಾಂತಿಕಾರಿ ಆಗಲು ಬಯಸಿದ್ದರು. ಆದರೆ ಕ್ರಾಂತಿಕಾರಿ ಆದ ನಂತರ ತ್ಯಾಗ ಮಾಡಬೇಕಾದ ಸಂದರ್ಭದಲ್ಲಿ ಅವರು ಹಿಂದೇಟು ಹಾಕಿದರು. ನಂತರ ಬ್ರಿಟೀಷ್ ಸರ್ಕಾರಕ್ಕೆ ನಿಷ್ಠರಾಗಿ ಸೇವೆ ಸಲ್ಲಿಸಿದರು. ಆದರೆ ಭಗತ್ ಸಿಂಗ್, ನೇತಾಜಿ ಸುಭಾಷ್ ಚಂದ್ರ ಬೋಸ್ ಹಾಗೂ ಚಂದ್ರಶೇಖರ್ ಅವರು ಕ್ರಾಂತಿಕಾರಿಯಾಗಿ ತಮ್ಮ ಪ್ರಾಣವನ್ನು ದೇಶಕ್ಕಾಗಿ ಅರ್ಪಿಸಿ ಕೊನೆ ಗಳಿಗೆವರೆಗೂ ಕ್ರಾಂತಿಕಾರಿಯಾಗಿ ಉಳಿದರು. ಈ ಬೆಲೆಯನ್ನು ತೆರಲು ಸಾವರ್ಕರ್ ಸಿದ್ಧರಿರಲಿಲ್ಲ ಎಂದು ಪ್ರಿಯಾಂಕ್ ಖರ್ಗೆ ಹೇಳಿದರು.

ಸಾವರ್ಕರ್ ಅವರಿಗೆ ಎರಡು ಪ್ರಕರಣದಲ್ಲಿ ತಲಾ 25 ವರ್ಷ ಜೈಲು ಶಿಕ್ಷೆ ಸಿಕ್ಕಾಗ ಅವರು ಕುಗ್ಗಿಹೋದರು. ಕ್ರಾಂತಿಕಾರಿ ಹೋರಾಟದಿಂದ ಹಿಂದೆ ಸರಿದರು. ಅಂಡಮಾನ್ ಜೈಲಿನಲ್ಲಿ ಹಾಕಿದರು. ಅಲ್ಲಿ ಖೈದಿಗಳಿಗೆ ಅತ್ಯಂತ ಕಠಿಣ ಶಿಕ್ಷೆ ನೀಡಲಾಗಿತ್ತು. ಆದರೆ ಸಾವರ್ಕರ್ ಅವರು ಬ್ರಿಟೀಷರ ಜತೆ ಉತ್ತಮ ಬಾಂಧವ್ಯ ಹೊಂದಿದ್ದರು ಎಂದು ಕ್ಲರ್ಕ್ ಕೆಲಸ ನೀಡಿದ್ದರು. ಈ ಜೈಲಿನಲ್ಲಿ 698 ಸೆಲ್ ಗಳಿದ್ದವು. ಸಾವರ್ಕರ್ ಜತೆಗೆ ಉಳಿದ 697 ಖೈದಿಗಳು ಅದೇ ಕಠಿಣ ಶಿಕ್ಷೆ ಅನುಭವಿಸುತ್ತಿದ್ದರು. ಆದರೆ ಇವರಲ್ಲಿ ಹೆಚ್ಚಿನ ಕ್ಷಮಾಪಣಾ ಪತ್ರ ಬರೆದಿದ್ದು ಸಾವರ್ಕರ್ ಮಾತ್ರ. ಅದೇ ಸತ್ಯ ಎಂದು ಪ್ರಿಯಾಂಕ್ ಖರ್ಗೆ ಹೇಳಿದರು.

ಜೈಲಿಗೆ ಹೋದ 2 ತಿಂಗಳಲ್ಲೇ 1911ರ ಆ.30ರಂದು ಮೊದಲ ಕ್ಷಮಾಪಣಾ ಪತ್ರ ಬರೆಯುತ್ತಾರೆ. ಆ ವರ್ಷ ಕ್ಷಮಾಪಣಾ ಪತ್ರ ಬರೆದ ಮೂವರಲ್ಲಿ ಬರೀಂದ್ರ ಘೋಷ್ ಹಾಗೂ ಸಾವರ್ಕರ್ ಸಹೋದರರು. ಇದರಲ್ಲಿ ಸಾವರ್ಕರ್ ಅವರು ‘ನಾನು ಬ್ರಿಟೀಷ್ ಸರ್ಕಾರದ ಸೇವೆ ಸಲ್ಲಿಸಲು ಸಿದ್ಧನಿದ್ದೇನೆ. ದಾರಿ ತಪ್ಪಿದೆ ಮಗ ಮನೆಗೆ ಬಾರದೆ ಎಲ್ಲಿಗೆ ಹೋಗಬೇಕು. ಹೀಗಾಗಿ ನಾನು ಕ್ಷಮೆ ಕೋರುತ್ತೇನೆ’ ಎಂದು ಕೇಳುತ್ತಾರೆ.

1913ರಲ್ಲಿ ಎರಡನೇ ಕ್ಷಮಾಪಣಾ ಪತ್ರ ಬರೆಯುತ್ತಾರೆ. ಈ ವರ್ಷ 6  ಜನ ಬ್ರಿಟೀಷ್ ಸರ್ಕಾರಕ್ಕೆ ಪತ್ರ ಬರೆಯುತ್ತಾರೆ. ಆದರೆ ಸಾವರ್ಕರ್ ಸಹೋದರರು ಮಾತ್ರ ಕ್ಷಮೆ ಕೋರುತ್ತಾರೆ. ಉಳಿದವರು ಈ ಜೈಲಿನಲ್ಲಿನ ಶಿಕ್ಷೆ ಅಮಾನವೀಯವಾಗಿದ್ದು, ನಮ್ಮನ್ನು ಮಾನವೀಯತೆಯಿಂದ ನಡೆಸಿಕೊಳ್ಳಿ ಎಂದು ಕೇಳಿ ಬರೆಯುತ್ತಾರೆ.

1914ರಲ್ಲಿ ಮೂರನೇ ಪತ್ರ ಬರೆದು ‘ಮೊದಲ ವಿಶ್ವ ಯುದ್ಧದಲ್ಲಿ ನಾನು ಬ್ರಿಟೀಷರ ಪರವಾಗಿ ಯಾವುದೇ ಹುದ್ದೆ ನಿಭಾಯಿಸಲು ಸಿದ್ಧ. ನಿಮ್ಮ ಸೇವೆಗೆ ನಿಷ್ಠೆಯಾಗಿ ಇರುತ್ತೇನೆ. ಇದು ನನ್ನ ಕರ್ತವ್ಯ’ ಎಂದು ತಿಳಿಸುತ್ತಾರೆ.

ನಂತರ 1918ರಲ್ಲಿ ನಾಲ್ಕನೇ, 1920ರಲ್ಲಿ ಎರಡು ಬಾರಿ ಅಂದರೆ ಒಟ್ಟು ಆರು ಬಾರಿ ಕ್ಷಮಾಪಣಾ ಪತ್ರ ಬರೆಯುತ್ತಾರೆ. ಅವರು ತಮ್ಮ ಕಡೇ ಪತ್ರದಲ್ಲಿ, ‘ಪ್ರತಿಯೊಬ್ಬ ಬುದ್ಧಿವಂತ ಭಾರತೀಯ ದೇಶದ ಹಿತಕ್ಕಾಗಿ ಹೃದಯಪೂರ್ವಕವಾಗಿ ಬ್ರಿಟೀಷ್ ಸರ್ಕಾರಕ್ಕೆ ನಿಷ್ಠೆಯಿಂದ ಸಹಕಾರ ನೀಡುತ್ತಾನೆ. ’ ಆದರೆ ಈ ಕ್ಷಮಾಪಣಾ ಪತ್ರವನ್ನು ಬಿಜೆಪಿಯವರು ಮಾಸ್ಟರ್ ಸ್ಟ್ರೋಕ್ ಎಂದು ಬಣ್ಣಿಸುತ್ತಾರೆ. ಸೆರೆವಾಸದಿಂದ ಹೊರ ಬಂದು ದೇಶ ಸೇವೆ ಮಾಡಲು ಈ ಕ್ಷಮಾಪಣಾ ಪತ್ರ ಬರೆದಿದ್ದರು ಎಂದು ಹೇಳುತ್ತಾರೆ. ಬೇರೆಯವರು ಈ ರೀತಿಯಾಗಿ ಕ್ಷಮಾಪಣೆ ಪತ್ರ ಬರೆಯಲಿಲ್ಲ ಏಕೆ? ಎಂದು ಅವರು ಪ್ರಶ್ನಿಸಿದರು.

ಭಗತ್ ಸಿಂಗ್ ಅವರಿಗೆ ಬ್ರಿಟೀಷರು ಮರಣದಂಡನೆ ಶಿಕ್ಷೆ ವಿಧಿಸಿದಾಗ ಅವರ ತಂದೆ ಕೂಡ ಬ್ರಿಟೀಷರಿಗೆ ಕ್ಷಮಾಪಣೆ ಪತ್ರ ಬರೆದು ಬಿಡುಗಡೆ ನಂತರ ದೇಶ ಸೇವೆ ಮುಂದುವರಿಸಿ ಎಂದು ಭಗತ್ ಸಿಂಗ್ ಅವರಿಗೆ ಹೇಳುತ್ತಾರೆ. ಆಗ ಭಗತ್ ಸಿಂಗ್ ಅವರು ತಮ್ಮ ತಂದೆಗೆ, ನಿಮ್ಮಿಂದ ನಾನು ಇದನ್ನು ನಿರೀಕ್ಷಿಸಿರಲಿಲ್ಲ. ನಾನು ಸತ್ತರೆ ನನ್ನಿಂದ ಇನ್ನು ನೂರು ಜನ ಸ್ವಾತಂತ್ರ್ಯ ಹೋರಾಟಗಾರರು ಹುಟ್ಟುತ್ತಾರೆ ಎಂದು ಹೇಳುತ್ತಾರೆ. ಅಷ್ಟೇ ಅಲ್ಲ, ನನ್ನನ್ನು ಗಲ್ಲಿಗೇರಿಸುವಾಗ ನನ್ನ ಮುಖ್ಯ ಮುಚ್ಚಲಾಗುತ್ತದೆ, ಹೀಗಾಗಿ ನನ್ನನ್ನು ನೇರವಾಗಿ ಬಂದೂಕಿನಿಂದ ಸುಟ್ಟು ಹಾಕಿ ಎಂದು ಧೈರ್ಯವಾಗಿ ಆಗ್ರಹಿಸುತ್ತಾರೆ.

ಸಾರ್ವಕರ್ ತಮ್ಮ ಜೀವನವನ್ನು ದೇಶಕ್ಕಾಗಿ ಮುಡಿಪಿಟ್ಟರು ಎಂದು ಹೇಳುವುದಾದರೆ ಅವರು ಬಿಡುಗಡೆ ಆದ ನಂತರ ಎಷ್ಟು ಹೋರಾಟ ಮಾಡಿದ್ದಾರೆ? ಇದರ ಪರಿಣಾಮ ಏನಾಯ್ತು? ಬ್ರಿಟೀಷರ ವಿರುದ್ಧ ಎಷ್ಟು ಬಾರಿ ಕೂಗಿದ್ದಾರೆ? ಇನ್ನು ಇತ್ತೀಚೆಗೆ ರಾಜನಾಥ್ ಸಿಂಗ್ ಅವರು ತಮ್ಮ ಹೇಳಿಕೆಯಲ್ಲಿ ಮಹಾತ್ಮ ಗಾಂಧಿ ಅವರೇ ಸಾವರ್ಕರ್ ಅವರಿಗೆ ಕ್ಷಮಾಪಣಾ ಪತ್ರ ಬರೆಯುವಂತೆ ತಿಳಿಸಿದರು ಎಂದು ಹೇಳಿದ್ದಾರೆ. ಆದರೆ ಇದು ಶುದ್ಧ ಸುಳ್ಳು.

1920ರಲ್ಲಿ ಗಾಂಧಿಜಿ ಅವರು ಯಂಗ್ ಇಂಡಿಯಾ ಪತ್ರಿಕೆಯಲ್ಲಿ ಬರೆದ ಲೇಖನದಲ್ಲಿ ‘ಸಾವರ್ಕರ್ ಸಹೋದರರು ತಮ್ಮ ರಾಜಕೀಯ ಅಭಿಪ್ರಾಯವನ್ನು ಘೋಷಿಸಿದ್ದು, ಇನ್ನು ಮುಂದೆ ಅವರು ಬ್ರಿಟೀಷ್ ಸರ್ಕಾರದ ವಿರುದ್ಧ ಯಾವುದೇ ಕ್ರಾಂತಿಕಾರಿ ಹೋರಾಟ ಮಾಡುವುದಿಲ್ಲ. ಅವರನ್ನು ಬಿಡುಗಡೆ ಮಾಡಿದರೆ ಅವರಿಗೆ ಸುಧಾರಣಾ ಕಾಯ್ದೆ ಅಡಿಯಲ್ಲಿ ಬ್ರಿಟೀಷರ ಪರವಾಗಿ ಕೇಲಸ ಮಾಡಲು ಬಯಸಿದ್ದಾರೆ. ಅವರ ಪ್ರಕಾರ ಭಾರತ ಬ್ರಿಟೀಷರ ಜತೆಯಲ್ಲೇ ಇದ್ದರೆ ಉತ್ತಮ ಭವಿಷ್ಯವಿದೆ ಎಂದು ನಂಬಿದ್ದಾರೆ. ಹೀಗಾಗಿ ಅವರ ಕ್ಷಮಾಪಣಾ ಪತ್ರ ಅಂಗೀಕರಿಸಿ’ ಎಂದು ತಿಳಿಸುತ್ತಾರೆ.

ಇನ್ನು ಬಿಜೆಪಿಯವರಿಗೆ ಸರ್ದಾರ್ ಪಟೇಲರ ನಂತರ ಸುಭಾಷ್ ಚಂದ್ರಬೋಸ್ ಅವರ ಮೇಲೆ ವಿಶೇಷ ಪ್ರೀತಿ ಹುಟ್ಟಿದೆ. ಎರಡನೇ ವಿಶ್ವ ಯುದ್ಧ ಸಂದರ್ಭದಲ್ಲಿ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರು ಜರ್ಮನಿ, ಜಪಾನ್ ದೇಶಗಳಿಗೆ ತೆರಳಿ, ದೇಶದ ಸ್ವಾತಂತ್ರ್ಯಕ್ಕೆ ಸೇನೆ ಕಟ್ಟಲು ಮುಂದಾದರು. ಆದರೆ ಈ ಸಮಯದಲ್ಲಿ ಸಾವರ್ಕರ್ ಅವರು ಬ್ರಿಟೀಷರ ಸೇನೆಗೆ ಲಕ್ಷಾಂತರ ಭಾರತೀಯರನ್ನು ಸೇರಿಸಿದರು. ಈ ಬ್ರಿಟೀಷ್ ಸೇನೆಗೆ ಸೇರಿದ ಭಾರತೀಯರು ಕೊಂದಿದ್ದು ಇದೇ ನೇತಾಜಿ ಅವರ ಆಜಾದ್ ಹಿಂದ್ ಫೌಜ್  ಪಡೆಯ ಯೋಧರನ್ನು. ಅಂದು ನಿಮ್ಮ ನಾಯಕ ನೇತಾಜಿ ಅವರ ಪ್ರಾಮಾಣಿಕ ಪ್ರಯತ್ನಕ್ಕೆ ವಿರುದ್ಧವಾಗಿ ನಡೆದುಕೊಂಡಿದ್ದು, ಇಂದು ನೀವು ನೇತಾಜಿ ಜಪ ಮಾಡುತ್ತಿದ್ದೀರಾ? ಎಂದು ಖರ್ಗೆ ಪ್ರಶ್ನಿಸಿದರು.

1940ರ ಮಥುರಾದಲ್ಲಿ ನಡೆದ ಹಿಂದು ಮಹಾಸಭಾ ಅಧಿವೇಶನದಲ್ಲಿ ಸಾರ್ವಕರ್ ಅವರು ನಾನು ಬ್ರಿಟೀಷರ ಸೇನೆಗೆ 1 ಲಕ್ಷ ಯೋಧರನ್ನು ಸೇರಿಸಿದ್ದೇನೆ ಎಂದು ಬಹಿರಂಗವಾಗಿ, ಹೆಮ್ಮೆಯಿಂದ ಹೇಳಿಕೊಂಡಿದ್ದರು.

ಎರಡನೇ ವಿಶ್ವ ಯುದ್ಧಕ್ಕೂ ಮುನ್ನ 1939ರಲ್ಲೀ ಬ್ರಿಟೀಷರು ನಮ್ಮ ದೇಶದ ಪಕ್ಷಗಳಿಗೆ ಸಹಕಾರ ಕೇಳಿದರು. ಆಗ ಕಾಂಗ್ರೆಸ್ ಹಾಗೂ ಇತರ ಪಕ್ಷ ಪೂರ್ಣ ಸ್ವರಾಜ್ಯ ಕೇಳಿದರು. ಆದರೆ ಬ್ರಿಟೀಷರು ಅರೆ ಸ್ವಾಯತ್ತ ನೀಡಿ ಆಡಳಿತ ನಿಯಂತ್ರಣ ನಾವು ಮಾಡುತ್ತೇವೆ ಎಂದು ಹೇಳಿದರು. ಇದನ್ನು ಒಪ್ಪದ ಕಾಂಗ್ರೆಸ್ ಎಲ್ಲಾ ಪ್ರಾಂತೀಯ ಸರ್ಕಾರಗಳಿಗೆ ರಾಜೀನಾಮೆ ನೀಡಿದರು. ಆದರೆ ಈ ಸಮಯದಲ್ಲಿ ಸಾವರ್ಕರ್ ಅವರು ಬ್ರಿಟೀಷರಿಗೆ ಸಹಕಾರ ನೀಡುವುದಾಗಿ ಅಂದಿನ ವೈಸರಾಯ್ ಗಿಲ್ ಲಿತ್ ಗೌ ಅವರಿಗೆ ತಿಳಿಸಿದರು. ಆಗ ಅವರು ಇಂಗ್ಲೆಂಡ್ ಗೆ ಪತ್ರ ಬರೆದು, ‘ಬ್ರಿಟೀಷ್ ಸರ್ಕಾರ ಹಿಂದೂಗಳ ಬೆಂಬಲದೊಂದಿಗೆ ಕೆಲಸ ಮಾಡಬೇಕು. ಹಿಂದೂ ಮಹಾಸಭಾ ಬ್ರಿಟೀಷರ ಜತೆ ಕೆಲಸ ಮಾಡಲು ತೀರ್ಮಾನಿಸಿದ್ದು, ಎರಡನೇ ವಿಶ್ವ ಯುದ್ಧ ನಂತರ ಇವರಿಗೆ ಅರೆ ಸ್ವಾಯತ್ತ ನೀಡೋಣ’ ಎಂದು ತಿಳಿಸುತ್ತಾರೆ.

ಇಡೀ ದೇಶ ಪೂರ್ಣ ಸ್ವರಾಜ್ಯ ಕೇಳಿದಾಗ ಸಾವರ್ಕರ್ ಅವರು ಬ್ರಿಟೀಷರ ಬೆಂಬಲ ನೀಡಿದ್ದು ಯಾಕೆ? ಸಾವರ್ಕರ್ ಅವರು ಕ್ವಿಟ್ ಇಂಡಿಯಾ ಚಳುವಳಿಗೆ ಸಹಕಾರ ನೀಡಲಿಲ್ಲ ಯಾಕೆ?. ದೇಶದ ವಿವಿಧ ಪ್ರಾಂತ್ಯಗಳಲ್ಲಿ ಮುಸ್ಲಿಂ ಲೀಗ್ ಜತೆ ಸರ್ಕಾರ ಮಾಡಿದ್ದು ಯಾಕೆ? ಕಾಂಗ್ರೆಸ್ ನಾಯಕರ ಮೇಲೆ ಮುಸಲ್ಮಾನರ ಓಲೈಕೆ ಆರೋಪ ಮಾಡುವ ಬಿಜೆಪಿಗರು ಅವರ ನಾಯಕ ಅಂದು ಸ್ವಾತಂತ್ರ್ಯ ಹೋರಾಟದಲ್ಲಿ ರಾಜಿಯಾಗಿ ಮುಸ್ಲಿಂ ಲೀಗ್ ಜತೆ ಸರ್ಕಾರ ಮಾಡಿದ್ದು ಯಾಕೆ? ಎಂದು ಪ್ರಿಯಾಂಕ್ ಖರ್ಗೆ ಕೇಳಿದರು.

ಸಾರ್ವಕರ್ ಅವರಿಗೆ ವೀರ ಸಾರ್ವಕರ್ ಎಂಬ ಬಿರುದು ಕೊಟ್ಟಿದ್ದು ಯಾರು? ಎಂದು ಬಿಜೆಪಿ ನಾಯಕರಿಗೆ ಕೇಳಿದ್ದೆ. ಗಾಂಧೀಜಿ ಅವರಿಗೆ ಮಹಾತ್ಮ ಎಂಬ ಬಿರುದು ಕೊಟ್ಟಿದ್ದು, ರವೀಂದ್ರ ನಾಥ ಠಾಗೋರ್, ಸುಭಾಷ್ ಚಂದ್ರ ಬೋಸ್ ಅವರಿಗೆ ನೇತಾಜಿ ಎಂಬ ಬಿರುದು ಕೊಟ್ಟಿದ್ದು ಅಜಾದ್ ಹಿಂದ್ ಫೌಜ್ ನ ಸದಸ್ಯರು. ಆದರೆ ಸಾವರ್ಕರ್ ಅವರಿಗೆ ವೀರ್ ಎಂದು ಬಿರುದು ಕೊಟ್ಟವರು ಯಾರು ಎಂದು ಹುಡುಕಿದಾಗ, 1923ರಲ್ಲಿ ‘ಲೈಫ್ ಆಫ್ ಬ್ಯಾರಿಸ್ಟರ್ ಸಾವರ್ಕರ್’ ಎಂಬ ಪುಸ್ತಕ ಹೊರಬರುತ್ತದೆ. ಅದರ ಲೇಖಕರು ಚಿತ್ರಗುಪ್ತ. ಅದರಲ್ಲಿ ಸಾವರ್ಕರ್ ಅವರನ್ನು ಇಂದ್ರ, ಚಂದ್ರ, ಹೋರಾಟದ ಮನೋಭಾವ, ಕಿಚ್ಚು, ದೇಶಪ್ರೇಮದ ಬಗ್ಗೆ ಮಿತಿಮೀರಿ ವರ್ಣನೆ ಮಾಡಲಾಗಿತ್ತು. ಈ ಪುಸ್ತಕದಲ್ಲಿ ಸಾವರ್ಕರ್ ಅವರನ್ನು ವೀರ್ ಸಾವರ್ಕರ್ ಎಂದು ತಿಳಿಸಿರುತ್ತಾರೆ. 1966ರಲ್ಲಿ ಸಾವರ್ಕರ್ ಅವರು ಸತ್ತ ನಂತರ, 1987ರಲ್ಲಿ ಈ ಪುಸ್ತಕ 2ನೇ ಆವೃತ್ತಿ ಮುದ್ರಣಕ್ಕೆ ಹೋದಾಗ ಮೊದಲ ಆವೃತ್ತಿಯ ಮುದ್ರಣಕಾರರಾದ ರವೀಂದ್ರ ರಾಮದಾಸ್ ಅವರು ಮುನ್ನುಡಿ ಬರೆದಾಗ ಈ ಪುಸ್ತಕದ ಲೇಖಕ ಚಿತ್ರಗುಪ್ತ ಬೇರಾರೂ ಅಲ್ಲ, ಸ್ವತಃ ಸಾವರ್ಕರ್ ಎಂಬ ಅಂಶವನ್ನು ತಿಳಿಸುತ್ತಾರೆ. ಅಲ್ಲಿಗೆ ಸಾವರ್ಕರ್  ಅವರೇ ತಮಗೆ ತಾವೇ ವೀರ್ ಎಂದು ಬಿರುದು ಕೊಟ್ಟುಕೊಂಡಿದ್ದಾರೆ.

ಬಿಜೆಪಿ ನಾಯಕರು ವಾಟ್ಸಪ್ ಯೂನಿವರ್ಸಿಟಿಯಿಂದ ಹೊರ ಬಂದು ಅವರ ನಾಯಕರ ಬಗ್ಗೆ ತಿಳಿದುಕೊಳ್ಳಬೇಕು. ಬಿಜೆಪಿ ಹಾಗೂ ಆರ್ ಎಸ್ಎಸ್ ನವರು ಸಾವರ್ಕರ್ ಅವರನ್ನು ಹಿಂದುತ್ವದ ಪಿತಾಮಹ ಎಂದು ನಂಬಿದ್ದಾರೆ. ಇದೇ ಸಾವರ್ಕರ್ ಅವರು ಗೋಮಾತೆಯನ್ನು ಪೂಜಿಸಬಾರದು. ಗೋವು ಪವಿತ್ರ ಪ್ರಾಣಿ ಅಲ್ಲ ಉಪಯೋಗದ ಪ್ರಾಣಿ ಎಂದು ಹೇಳಿದ್ದಾರೆ. ಅವರ  ಸ್ವಂತ ಲೇಖನದಲ್ಲಿ ‘ಗೋವು ಎತ್ತುಗಳಿಗೆ ಮಾತ್ರ ಮಾತೆಯಾಗಿರುತ್ತದೆಯೇ ಹೊರತು ಹಿಂದೂಗಳಿಗಲ್ಲ. ಹಿಂದುತ್ವ ಕೇವಲ ಗೋವಿನ ನಾಲ್ಕು ಕಾಲುಗಳ ಮೇಲೆ ನಿಲ್ಲುವುದಿಲ್ಲ. ಹೀಗಾಗಿ ಗೋವಿನ ಹೊಟ್ಟೆಯೊಳಗೆ 33 ಕೋಟಿ ದೇವತೆಗಳನ್ನು ತುಂಬಲಾಗಿದೆ. ಹಿಂದೂಗಳು ಗೋವು ಪೂಜೆ ಬಿಟ್ಟು ಅಪಾರ ಶಕ್ತಿ ಹೊಂದಿರುವ ಮನುಷ್ಯರ ಪೂಜೆ ಮಾಡಿ. ಗೋ ಮೂತ್ರ ಕುಡಿದರೆ ಬುದ್ಧಿ ಹತ್ಯೆಯಾಗುತ್ತದೆ’ ಎಂದು ಸಾವರ್ಕರ್ ಹೇಳಿದ್ದಾರೆ. ಆದರೆ ಈ ಸರ್ಕಾರ ಕೋವಿಡ್ ಸಮಯದಲ್ಲಿ ಗೋ ಮೂತ್ರ ಕುಡಿಯಿರಿ ಎಂದರು.

ಸಾವರ್ಕರ್ ಅವರು ಗೋಮಾಂಸ ತಿಂದಿದ್ದರು. ಬ್ರಿಟನ್ ನಲ್ಲಿ ಇದ್ದಾಗ ಅವರು ಸೇವನೆ ಮಾಡಿದ್ದರು. ಇದಕ್ಕೆ ಬಿಜೆಪಿಯವರು ವಾದ ಮಾಡುವುದು ಅವರು ಜೆರ್ಸಿ ಗೋವನ್ನು ತಿಂದಿದ್ದರು ಅದಕ್ಕೂ ಇದಕ್ಕೂ ಸಂಬಂಧವಿಲ್ಲ ಎಂದು ಹೇಳುತ್ತಾರೆ. ಸಾವರ್ಕರ್ ಗೋ ಮಾತೆ ಪೂಜೆ ಮಾಡಬಾರದು ಎಂದು ಹೇಳಿರುವಾಗ ಇವರು ಗೋಹತ್ಯೆ ನಿಷೇಧ ಹಿಂಪಡೆಯುತ್ತಾರಾ? ಗೋಮೂತ್ರ ಕುಡಿಯುವುದು ನಿಲ್ಲಿಸುತ್ತಾರಾ? ಗೋ ಮಾತೆ ಹೆಸರಲ್ಲಿ ನಡೆಯುತ್ತಿರುವ ಥಳಿತ ಪ್ರಕರಣ ನಿಲ್ಲಿಸುತ್ತಾರಾ? ಎಂದು ಪ್ರಿಯಾಂಕ್ ಪ್ರಶ್ನಿಸಿದರು.

ಇನ್ನು ಬಿಜೆಪಿಯವರು ದೇಶ ವಿಭಜನೆ ಮಾಡಿದ್ದು ನೆಹರೂ ಹಾಗೂ ಗಾಂಧಿ ಎಂದು ಹೇಳುತ್ತಾರೆ. ಆದರೆ ಸ್ವಾತಂತ್ರ್ಯ ಪೂರ್ವದಲ್ಲಿ ಧರ್ಮದ ಆಧಾರದ ಮೇಲೆ ದೇಶ ವಿಭಜನೆ ಆಗಬೇಕು ಎಂದು ಮೊದಲು ಧ್ವನಿ ಎತ್ತಿದ್ದು ಸಾವರ್ಕರ್ ಅವರು. 1937ರಲ್ಲಿ ಅಹಮದಾಬಾದ್ ನಲ್ಲಿ ನಡೆದ ಹಿಂದೂ ಮಹಾಸಭಾ ಅಧಿವೇಶನದಲ್ಲಿ ಸಾವರ್ಕರ್ ಅವರು ‘ಭಾರತ ಹಿಂದೂ ಹಾಗೂ ಮುಸಲ್ಮಾನರಾಗಿ ವಿಭಜಿತವಾಗಿದೆ. ಈ ದೇಶ ಒಟ್ಟಾಗಿರಲು ಸಾಧ್ಯವಿಲ್ಲ’ ಎಂದು ಹೇಳಿದ್ದಾರೆ. ಅದಕ್ಕೆ ಅಂಬೇಡ್ಕರ್ ಅವರು ‘ಸಾವರ್ಕರ್ ಹಾಗೂ ಜಿನ್ನಾ ಅವರು ಪರಸ್ಪರ ವಿರೋಧವಿದ್ದರೂ ಒಂದು ದೇಶದ ಬದಲು ಎರಡು ದೇಶದ ವಿಚಾರದಲ್ಲಿ ಒಮ್ಮತ ಹೊಂದಿದ್ದಾರೆ. ಮುಸಲ್ಮಾನ ದೇಶ ಹಾಗೂ ಹಿಂದೂ ದೇಶ ಇದೆ. ಇದಕ್ಕೆ ರೂಪು ರೇಷ ಹಾಕುವುದಷ್ಟೇ ಬಾಕಿ ಎಂದು ಇಬ್ಬರೂ ಒಪ್ಪಿಕೊಂಡಿದ್ದಾರೆ’ ಎಂದು ತಿಳಿಸಿದ್ದಾರೆ. ಸಾವರ್ಕರ್ ಅಖಂಡ ಭಾರತ ಹಾಗೂ ದೇಶ ವಿಭಜನೆ ಎರಡರ ಬಗ್ಗೆಯೂ ಮಾತನಾಡುತ್ತಾರೆ. ಸಾವರ್ಕರ್ ಹೇಳಿಕೆ ನಂತರ 1940ರಲ್ಲಿ ಲಾಹೋರ್ ನಲ್ಲಿ ನಡೆದ ಮುಸ್ಲಿಂ ಲೀಗ್ ಸಮಾವೇಶದಲ್ಲಿ ಜಿನ್ನಾ ಅವರು ಈ ವಿಚಾರ ಪ್ರಸ್ತಾಪಿಸುತ್ತಾರೆ. 1943ರ ಆಗಸ್ಟ್ 15ರ ನಾಗಪುರದಲ್ಲಿ ಸಾವರ್ಕರ್ ಅವರು, ‘ಎರಡು ದೇಶದ ವಿಚಾರವಾಗಿ ಜಿನ್ನಾ ಅವರ ಅಭಿಪ್ರಾಯವನ್ನು ನಾನು ಸಂಪೂರ್ಣವಾಗಿ ಒಪ್ಪುತ್ತೇನೆ. ಹಿಂದೂಗಳು ಪ್ರತ್ಯೇಕ ರಾಷ್ಟ್ರ ಹೊಂದಬೇಕು’ ಎಂದು ಹೇಳಿದ್ದರು. ಇಷ್ಟಾಗಿಯೂ ಸಾರ್ವಕರ್ ಬೆಂಬಲಿಗರು ಅಫ್ಘಾನಿಸ್ತಾನದಿಂದ ಅಖಂಡ ಭಾರತ ಕಟ್ಟುತ್ತೇವೆ ಎಂದು ಹೊರಟಿದ್ದಾರೆ. 

ಪಂಜಾಬ್ ಅವರು ಪ್ರತ್ಯೇಕ ಸಿಖ್ ರಾಷ್ಟ್ರ ಬೇಕು ಎಂದಾಗ ಅದಕ್ಕೆ ಬೆಂಬಲ ನೀಡಿದವರು ಸಾವರ್ಕರ್. ಹೀಗಿರುವಾಗ ಇವರಲ್ಲಿ ಭಾರತ ಒಗ್ಗೂಡಿಸುವ ಬದ್ಧತೆ ಎಲ್ಲಿದೆ. ಇತ್ತೀಚೆಗೆ ಬಿಜೆಪಿಯ ರವಿ ಕುಮಾರ್ ಅವರು ನೆಹರೂ ಅವರು ದೇಶ ವಿಭಜನೆ ಮಾಡಿದ್ದರು ಹೀಗಾಗಿ ಅವರ ಫೋಟೋ ಕೈ ಬಿಡಲಾಗಿದೆ ಎಂದು ಹೇಳಿದ್ದರು. ಬಿಜೆಪಿ ನಾಯಕರು ಮೊದಲು ನಿಮ್ಮ ನಾಯಕರ ಇತಿಹಾಸ ತಿಳಿದುಕೊಳ್ಳಬೇಕು. ಗಾಂಧಿ, ನೆಹರೂ ಅವರು ದೇಶ ವಿಭಜನೆ ಆಗಬಾರದು ಎಂದು ಹೋರಾಡಿದವರು.

ಕಪೂರ್ ಸಮಿತಿಯ ವರದಿಯಲ್ಲಿ ಮಹಾತ್ಮಾ ಗಾಂಧಿ ಅವರ ಹತ್ಯೆಗೆ ಪ್ರೇರಣೆ ನೀಡಿದ್ದು, ಸಾವರ್ಕರ್ ಎಂದು ಸ್ಪಷ್ಟವಾಗಿ ತಿಳಿಸಲಾಗಿದೆ. 

ಸಾವರ್ಕರ್ ಅವರ ಕ್ಷಮಾಪಣಾ ಪತ್ರ ಮಾಸ್ಟರ್ ಸ್ಟ್ರೋಕ್ ಆದರೆ ಅವರು 1929 ಆ.1ರಿಂದ 1947ರ ವರೆಗೆ 60 ರೂ. ಪಿಂಚಣಿ ಪಡೆದಿದ್ದು ಯಾಕೆ? ಈ ಅವಧಿಯಲ್ಲಿ ಅವರು ಹೆಚ್ಚಾಗಿ ಬರೆದ ಪತ್ರಗಳು ತಮ್ಮ ಪಿಂಚಣಿ ಹೆಚ್ಚಳಕ್ಕೆ ಸಂಬಂಧಿಸಿದಂತೆ. ಇನ್ನು ಸಾವರ್ಕರ್ ರಥಯಾತ್ರೆಗೆ ಕಾರ್ಯಕರ್ತರಿಗೆ ಹಣಕೊಟ್ಟು ಕರೆದುಕೊಂಡು ಬರಲಾಗಿದೆ. 500 ರೂ. ಕೊಡುತ್ತೇವೆ ಎಂದು ಹೇಳಿ, 200 ರೂ ಕೊಟ್ಟಿದ್ದಾರೆ. ಈ ಬಗ್ಗೆ ಕಾರ್ಯಕರ್ತರು ಅಸಮಾಧಾನ ವ್ಯಕ್ತಪಡಿಸಿದಾಗ ಮಾಧ್ಯಮದವರಿಗೆ ಈ ವಿಚಾರ ತಿಳಿದಿದೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದರು.

 ಈ ಸಂದರ್ಭದಲ್ಲಿ ಕೆಪಿಸಿಸಿ ಸಂವಹನ ವಿಭಾಗದ ಉಪಾಧ್ಯಕ್ಷರಾದ ರಮೇಶ್ ಬಾಬು ಉಪಸ್ಥಿತರಿದ್ದರು..

Join Whatsapp