ಬೆಂಗಳೂರು: ಭಾರತೀಯ ಜನತಾ ಪಕ್ಷದ ಸರ್ಕಾರ ಭ್ರಷ್ಟಾಚಾರದ ಮೂಲಕ ಶಾಸಕರನ್ನು ಖರೀದಿಸಿ ಆಪರೇಷನ್ ಕಮಲ ಮಾಡಿ ಅಧಿಕಾರಕ್ಕೆ ಬಂದಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ.
ಈ ಬಗ್ಗೆ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಸರ್ಕಾರ ಇಂದು ಭ್ರಷ್ಟಾಚಾರದಲ್ಲಿ ಮುಳುಗಿಹೋಗಿದೆ. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಹಾಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕೋಟ್ಯಂತರ ರೂಪಾಯಿ ಖರ್ಚು ಮಾಡಿ ನಮ್ಮ ಪಕ್ಷದ ಹಾಗೂ ಜೆಡಿಎಸ್ ಶಾಸಕರನ್ನು ಖರೀದಿಸಿ ಸರ್ಕಾರ ರಚನೆ ಮಾಡಿದ್ದಾರೆ ಎಂದು ದೂರಿದರು.
ಈ ಸರ್ಕಾರವನ್ನು 40% ಕಮಿಷನ್ ಸರ್ಕಾರ ಎಂದು ಗುತ್ತಿಗೆದಾರರ ಸಂಘದವರು ಲಿಖಿತವಾಗಿ ಪ್ರಧಾನಿಗಳಿಗೆ ಹೇಳಿದ್ದಾರೆ. ಈ ವಿಚಾರವನ್ನು ನಾವು ಬೆಳಗಾವಿ ಮತ್ತು ಬೆಂಗಳೂರಿನ ಅಧಿವೇಶನದಲ್ಲಿ ಪ್ರಸ್ತಾಪ ಮಾಡಲು ನಿಲುವಳಿ ಸೂಚನೆಗೆ ಅವಕಾಶ ಕೇಳಿದರೂ ಕೂಡ ಸರ್ಕಾರ ಸಭಾಧ್ಯಕ್ಷರ ಮೇಲೆ ಒತ್ತಡ ಹಾಕಿ ಅವಕಾಶ ಸಿಗದಂತೆ ಮಾಡಿದೆ ಎಂದು ಹೇಳಿದರು.
ಮುಖ್ಯಮಂತ್ರಿಗಳು ದೀಪಾವಳಿ ಹಬ್ಬಕ್ಕೆ ನೀಡಿರುವ ಉಡುಗೊರೆಯಲ್ಲಿ 1, 2, 3 ಲಕ್ಷ ಹಾಕಿ ಕಳಿಸಿದ್ದಾರೆ. ಇದು ಯಾವ ದುಡ್ಡು ಗೊತ್ತಾ? ಇದು ಭ್ರಷ್ಟಾಚಾರದ ಹಣ. ತಮ್ಮ ಭ್ರಷ್ಟಾಚಾರವನ್ನು ಬಯಲು ಮಾಡುತ್ತಾರೆ ಎಂದು ಲಂಚ ಕೊಟ್ಟಿರುವುದು. ಈ ಹಿಂದೆ ಪತ್ರಿಕೆಯೊಂದರಲ್ಲಿ ಪೊಲೀಸ್ ಇಲಾಖೆಯಲ್ಲಿ ಯಾವ ಹುದ್ದೆಯ ವರ್ಗಾವಣೆಗೆ ಎಷ್ಟು ಎಂದು ಹೊಟೇಲ್ ಗಳ ತಿಂಡಿ ಮೆನ್ಯುವಿನಂತೆ ಲಂಚ ನಿಗದಿ ಮಾಡಿರುವುದು ಪ್ರಕಟವಾಗಿತ್ತು, ಈ ರೀತಿ ಬರೆಯಬಾರದು ಎಂಬುದು ಅವರ ಉದ್ದೇಶ. ಆಗ ಪ್ರಕಟವಾದ ಸುದ್ದಿ ಈಗ ಎಂಟಿಬಿ ನಾಗರಾಜ್ ಅವರಿಂದ ಸಾಬೀತಾಗಿದೆ ಎಂದು ವಾಗ್ದಾಳಿ ನಡೆಸಿದರು.