ಮೇಯರ್ ಪಟ್ಟಕ್ಕೆ ಕಚ್ಚಾಡಿದ ಕೈ-ದಳ | ಮೈಸೂರು ಪಾಲಿಕೆಯಲ್ಲಿ ಅರಳಿದ ‘ಕಮಲ’

Prasthutha|

ಮೈಸೂರು: ಮೈಸೂರು ಮಹಾನಗರ ಪಾಲಿಕೆಯಲ್ಲಿ ಕಾಂಗ್ರೆಸ್ – ಜೆಡಿಎಸ್ ಸದಸ್ಯರ ಜಗಳದಿಂದಾಗಿ ಬಿಜೆಪಿ ಅಧಿಕಾರಕ್ಕೆ ಬಂದಿದೆ.
ನೂತನ ಮೇಯರ್ ಆಗಿ ಬಿಜೆಪಿಯ ಸುನಂದಾ ಪಾಲನೇತ್ರ ಆಯ್ಕೆಯಾಗಿದ್ದಾರೆ. ಬಿಜೆಪಿಯ ಸುನಂದಾ ಪಾಲನೇತ್ರ ಪರವಾಗಿ 26 ಮತಗಳು, ಕಾಂಗ್ರೆಸ್ ಅಭ್ಯರ್ಥಿ ಶಾಂತಕುಮಾರಿ ಪರ 22 ಮತಗಳು ಚಲಾವಣೆಯಾದವು. ಬಿಜೆಪಿ ಮೈಸೂರು ಪಾಲಿಕೆ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಅಧಿಕಾರಕ್ಕೆ ಬಂದಿದೆ.


ಜೆಡಿಎಸ್ ಸದಸ್ಯರು ಧಿಕ್ಕಾರ ಕೂಗುತ್ತಾ ಸಭೆಯಿಂದ ಹೊರನಡೆದರು. ಎಲ್ಲಾ ಅಧಿಕಾರ ನಮಗೇ ಬೇಕು ಎಂಬುದು ಕಾಂಗ್ರೆಸ್ ಧೋರಣೆ, ಉಪ ಮೇಯರ್ ಕಾಂಗ್ರೆಸ್ ನವರಿದ್ದರೂ ಮೇಯರ್ ಸ್ಥಾನ ಕೂಡ ನಮಗೇ ಬೇಕು ಎಂದು ಕಾಂಗ್ರೆಸ್ ಅಧಿಕಾರಕ್ಕೆ ಅಂಟಿಕೊಂಡ ಪರಿಣಾಮ ಪಾಲಿಕೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿದೆ ಎಂದು ಜೆಡಿಎಸ್ ಸದಸ್ಯರು ಆರೋಪಿಸಿದರು.

- Advertisement -


ಕಳೆದ ಒಂದು ತಿಂಗಳಿಂದ ನಡೆಯುತ್ತಿದ್ದ ರಾಜಕೀಯ ಹಗ್ಗಜಗ್ಗಾಟದಲ್ಲಿ ಕೊನೆಗೂ ಮೇಯರ್ ಹುದ್ದೆ ಪಡೆದುಕೊಳ್ಳುವಲ್ಲಿ ಬಿಜೆಪಿ ಯಶಸ್ವಿಯಾಗಿದೆ. ಈ ಮೂಲಕ ಬಿಜೆಪಿಯ ಸುನಂದಾ ಪಾಲನೇತ್ರ ಅವರು ನೂತನ ಮೇಯರ್ ಆಗಿ ಆಯ್ಕೆಯಾಗಿದ್ದಾರೆ.
ಕಳೆದ ವಾರ ಹಿಂದಷ್ಟೆ ಜೆಡಿಎಸ್ ಮುಖಂಡರಾದ ಹಾಗೂ ಶಾಸಕರಾದ ಸಾ.ರಾ. ಮಹೇಶ್ ಅವರ ಜತೆ ಉಸ್ತುವಾರಿ ಸಚಿವರಾದ ಸೋಮಶೇಖರ್ ಅವರು ಸಂಸದರು, ಶಾಸಕರು, ಬಿಜೆಪಿ ನಗರಾಧ್ಯಕ್ಷರು, ಮುಡಾ ಅಧ್ಯಕ್ಷರ ಜೊತೆಗೂಡಿ ಭೇಟಿಯಾಗಿ ಮೇಯರ್ ಚುನಾವಣೆ ಬಗ್ಗೆ ಮಾತುಕತೆ ನಡೆಸಿದ್ದರು.


ಮೈಸೂರು ಪಾಲಿಕೆಯ 38 ವರ್ಷದ ಇತಿಹಾದಲ್ಲೇ ಪ್ರಥಮ


160ಕ್ಕೂ ಹೆಚ್ಚು ವರ್ಷದ ಇತಿಹಾಸ ಹೊಂದಿರುವ ಮೈಸೂರು ಪೌರ ಸಂಸ್ಥೆಯು 1983ರಲ್ಲಿ ಮಹಾನಗರ ಪಾಲಿಕೆಯಾಗಿ ಹೊರಹೊಮ್ಮಿತು. ಅಲ್ಲಿಂದ ಇಲ್ಲಿಯವರೆಗಿನ 38 ವರ್ಷದ ಅವಧಿಯಲ್ಲಿ ಬಿಜೆಪಿ ಒಂದು ಬಾರಿಯೂ ಮೇಯರ್ ಪಟ್ಟವನ್ನು ಅಲಂಕರಿಸಿರಲಿಲ್ಲ. ಇದೀಗ ಸಚಿವರಾದ ಸೋಮಶೇಖರ್ ಅವರ ಕಾರ್ಯತಂತ್ರದ ಫಲವಾಗಿ ಬಿಜೆಪಿ ಸಾಧನೆ ತೋರಿದೆ.

ದೂರವಾಣಿ ಕರೆ ಮಾಡಿ ಅಭಿನಂದನೆ ಸಲ್ಲಿಸಿದ ಮಾಜಿ ಮುಖ್ಯಮಂತ್ರಿಗಳು


ಕಳೆದ 1 ವರ್ಷದಿಂದ ಅತ್ಯಂತ ಚುರುಕಿನಿಂದ 24×7 ಪಕ್ಷದ ನಿರ್ದೇಶನಗಳನ್ನು ಮತ್ತು ಸರ್ಕಾರದ ಜನಪ್ರಿಯ ಯೋಜನೆಗಳನ್ನು ತಲುಪಿಸುವಲ್ಲಿ ಯಶಸ್ಸನ್ನು ಈಗಾಗಲೇ ಸಾಧಿಸಿದ್ದೀರಿ. ಇದೀಗ ಮೈಸೂರಿನ ಮಹಾಪೌರರು ಹಾಗೂ ಉಪ ಮಹಾಪೌರರನ್ನು ಆಯ್ಕೆ ಮಾಡಿಸುವಲ್ಲಿ ಯಶಸ್ವಿಯಾಗಿದ್ದಕ್ಕೆ ಅಭಿನಂದನೆಗಳು ಎಂದು ದೂರವಾಣಿ ಕರೆ ಮಾಡಿ ಅಭಿನಂದನೆ ಸಲ್ಲಿಸಿದ್ದಾರೆ.


ಮೈಸೂರು ಮಹಾನಗರ ಪಾಲಿಕೆಯ 38 ವರ್ಷಗಳ ಇತಿಹಾಸದಲ್ಲಿ ಬಿಜೆಪಿ ಪ್ರಥಮ ಬಾರಿಗೆ ಮೇಯರ್ ಪಟ್ಟವನ್ನು ಹೊಂದಿದೆ. ಇದಕ್ಕೆ ಸಹಕಾರ ಸಚಿವರಾಗಿರುವ ಎಸ್.ಟಿ.ಸೋಮಶೇಖರ್ ಅವರ ಪಾತ್ರ ಬಹಳ ದೊಡ್ಡದಿದೆ. ಪಕ್ಷಕ್ಕಾಗಿ ಅವರ ದುಡಿಮೆ, ಶ್ರಮ ನಿಜಕ್ಕೂ ಸಾರ್ಥಕವಾಗಿದೆ. ಈ ಅವಕಾಶವನ್ನು ಪಕ್ಷ ಸದುಪಯೋಗಪಡಿಸಿಕೊಂಡು ಮೈಸೂರಿನಲ್ಲಿ ಮತ್ತಷ್ಟು ಅಭಿವೃದ್ಧಿಯನ್ನು ಮಾಡಿ ತೋರಿಸಲಿ ಎಂದು ಹಾರೈಸುವೆ ಎಂದು ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.


ಮೇಯರ್ – ಪಟ್ಟ ಬಿಜೆಪಿಗೆ ಒಲಿಯುತ್ತಿದ್ದಂತೆ ದೂರವಾಣಿ ಕರೆ ಮಾಡಿ ಅಭಿನಂದನೆ ತಿಳಿಸಿದ ಬಿಜೆಪಿ ರಾಜ್ಯಾಧ್ಯಕ್ಷರಾದ ನಳಿನ್ ಕುಮಾರ್ ಕಟೀಲ್ ಅವರು, ಮೈಸೂರಿನಲ್ಲಿ ಬಿಜೆಪಿ ಪಾಲಿಗೆ ಹೊಸ ಇತಿಹಾಸ ಸೃಷ್ಟಿ ಮಾಡಿದ್ದಕ್ಕೆ ಶ್ಲಾಘನೆ ವ್ಯಕ್ತಪಡಿಸಿದ್ದಲ್ಲದೆ, ಪಕ್ಷಕ್ಕಾಗಿ ಸೇವೆ ಹೀಗೆಯೇ ಮುಂದುವರಿಯಲಿ ಎಂದು ತಿಳಿಸಿದ್ದಾರೆ.

- Advertisement -