ಯಡಿಯೂರಪ್ಪ ಬದಲಿಗೆ ಸಿಎಂ ಸ್ಥಾನಕ್ಕೆ ಮತ್ತೊಬ್ಬ ನಾಯಕ ಬಿಜೆಪಿಯಲ್ಲಿ ಇಲ್ಲ : ಸಿದ್ದರಾಮಯ್ಯ

Prasthutha|

ಬಿ ಎಸ್ ಯಡಿಯೂರಪ್ಪ ನವರು ಮುಖ್ಯಮಂತ್ರಿಯಾಗಿ ತಮ್ಮ ಕರ್ತವ್ಯ, ಜವಾಬ್ದಾರಿಗಳನ್ನು ನಿರ್ವಹಿಸುವಲ್ಲಿ ಸಂಪೂರ್ಣವಾಗಿ ವಿಫಲರಾಗಿದ್ದಾರೆ. ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಬದಲಾವಣೆ ಮಾಡಬೇಕೆಂದು ಹೈಕಮಾಂಡ್ ಬಹಳ ಹಿಂದೆಯೇ ತೀರ್ಮಾನ ಮಾಡಿದ್ದು ಜೊತೆಗೆ ಹಲವು ಮಂದಿ ಶಾಸಕರು ಕೂಡ ಬದಲಾವಣೆ ಬಯಸಿದ್ದಾರೆ, ಆದರೆ ಕೊರೋನಾ ಬಂದಿರುವುದರಿಂದ ಯಡಿಯೂರಪ್ಪನವರನ್ನು ಹೈಕಮಾಂಡ್ ಮುಖ್ಯಮಂತ್ರಿಯಾಗಿ ಉಳಿಸಿಕೊಂಡಿದೆಯಷ್ಟೆ ಎಂದು ಮಾಜಿ ಮುಖ್ಯಮಂತ್ರಿ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

- Advertisement -

ಇಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು, ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆ ಬಗ್ಗೆ ಬೀದಿ ಕಾಳಗ ನಡೆಯುತ್ತಿದೆ. ಅವರ ಪಕ್ಷದ ಶಾಸಕರೇ ಯಡಿಯೂರಪ್ಪ ವಿರುದ್ಧವಾಗಿ ಮಾತನಾಡಿದ್ದಾರೆ.ನಾಯಕತ್ವ ಬದಲಾವಣೆಯಾದ ತಕ್ಷಣ ಸರ್ಕಾರ ಹೋಗುತ್ತದೆ ಎಂದು ಅಂದುಕೊಳ್ಳುವುದಿಲ್ಲ, ಅಲ್ಲಿ ಸಮರ್ಥ ಬದಲಿ ನಾಯಕರೇ ಇಲ್ಲ ಎಂದು ಹೇಳಿದ್ದಾರೆ.
ಯಡಿಯೂರಪ್ಪನವರನ್ನು ಮುಖ್ಯಮಂತ್ರಿ ಸ್ಥಾನದಿಂದ ತೆಗೆದರೆ ಮತ್ತೊಬ್ಬ ಸಮರ್ಥ ನಾಯಕರು ಹೈಕಮಾಂಡ್ ಗೆ ಸಿಗುತ್ತಿಲ್ಲ, ಅಲ್ಲಿ ಸೂಕ್ತ ವ್ಯಕ್ತಿ ಬೇರೆ ಯಾರೂ ಇಲ್ಲ, ಹೀಗಾಗಿ ಹೈಕಮಾಂಡ್ ಸುಮ್ಮನೆ ಕುಳಿತಿದೆ ಎಂದರು.

ಬಿಜೆಪಿಗೆ 2018ರ ಚುನಾವಣೆಯಲ್ಲಿ ಸಂಪೂರ್ಣ ಬಹುಮತ ಇರಲಿಲ್ಲ, 104 ಜನ ಶಾಸಕರಿದ್ದರು, ಕಾಂಗ್ರೆಸ್ ಮತ್ತು ಜೆಡಿಎಸ್ ನಿಂದ ಶಾಸಕರಿಗೆ ರಾಜೀನಾಮೆ ಕೊಡಿಸಿ ಬಿಜೆಪಿಯಿಂದ ಟಿಕೆಟ್ ಕೊಡಿಸಿ ಅವರನ್ನು ಗೆಲ್ಲಿಸಿ ಯಡಿಯೂರಪ್ಪ ಮುಖ್ಯಮಂತ್ರಿಯಾದರು. ಹೀಗಾಗಿ ಈ ಅರ್ಥದಲ್ಲಿ ಸಚಿವ ಸಿ ಪಿ ಯೋಗೇಶ್ವರ್ ಇದು ಮೂರು ಪಕ್ಷದ ಸರ್ಕಾರ ಎಂದು ಹೇಳಿರಬಹುದು ಎಂದು ಸಿದ್ದರಾಮಯ್ಯ ವ್ಯಾಖ್ಯಾನಿಸಿದರು.

- Advertisement -

ಅತ್ಯಾಚಾರ ಪ್ರಕರಣದಲ್ಲಿ ಕೇಸು ಹಾಕಿ ಶಾಸಕ ರಮೇಶ್ ಜಾರಕಿಹೊಳಿಯವರಿಗೆ ಶಿಕ್ಷೆಯಾಗಬೇಕೆಂದು ಸಿದ್ದರಾಮಯ್ಯ ಒತ್ತಾಯಿಸಿದರು. ಗೃಹ ಸಚಿವ ಬಸವರಾಜ್ ಬೊಮ್ಮಾಯಿಯವರು ರಮೇಶ್ ಜಾರಕಿಹೊಳಿಯವರಿಗೆ ರಕ್ಷಣೆ ನೀಡುತ್ತಿದ್ದು ಇದು ಅನೈತಿಕ, ಹೀಗಾಗಿ ಸಚಿವ ಬೊಮ್ಮಾಯಿಯವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು, ರಮೇಶ್ ಜಾರಕಿಹೊಳಿಯವರನ್ನು ತಕ್ಷಣವೇ ಬಂಧಿಸಬೇಕು ಎಂದು ಒತ್ತಾಯಿಸಿದರು.



Join Whatsapp