ಬೆಂಗಳೂರು: ಹೆಚ್‌ಡಿ ಕುಮಾರಸ್ವಾಮಿ ಅವರಿಗೆ ನಾಯಕತ್ವ ನೀಡುವ ದಾರಿದ್ರ್ಯ ಬಿಜೆಪಿಗಿಲ್ಲ ಎಂದು ಮಾಜಿ ಸಚಿವ ಸುನೀಲ್ ಕುಮಾರ್ ಹೇಳಿದ್ದಾರೆ.
ಈ ಸಂಬಂಧ ಟ್ವೀಟ್ ಮಾಡಿರುವ ಅವರು, ಜೆಡಿಎಸ್ (JDS) ಜತೆ ಮೈತ್ರಿಯ ಅನಿವಾರ್ಯತೆ ಬಿಜೆಪಿಗಿಲ್ಲ, ಲೋಕಸಭೆಯಲ್ಲಿ ಕಳೆದ ಸಲದಷ್ಟೇ ಸೀಟು ಗೆಲ್ಲುತ್ತೇವೆ. ಹೆಚ್‌ಡಿಕೆಗೆ ನಾಯಕತ್ವ ನೀಡುವ ದಾರಿದ್ರ್ಯ ಬಿಜೆಪಿಗಿಲ್ಲ ಎಂದಿದ್ದಾರೆ.
ವಿಧಾನಸಭೆಯಲ್ಲಿ ಪ್ರತಿಪಕ್ಷ ನಾಯಕನ ಸ್ಥಾನಕ್ಕೆ ಇನ್ನೂ ಯಾರನ್ನು ಹೈಕಮಾಂಡ್ ಆಯ್ಕೆ ಮಾಡದ ಹಿನ್ನೆಲೆಯಲ್ಲಿ ಜೆಡಿಎಸ್ ಜೊತೆ ಮೈತ್ರಿಕೊಂಡು ಕುಮಾರಸ್ವಾಮಿ ಅವರಿಗೆ ಪ್ರತಿಪಕ್ಷ ಸ್ಥಾನ ನೀಡಲು ಬಿಜೆಪಿ ಮುಂದಾಗಿದೆ ಎಂದು ಕಾಂಗ್ರೆಸ್ ಆರೋಪಿಸಿತ್ತು.
ಕಾಂಗ್ರೆಸ್ ಸರ್ಕಾರದ ವಿರುದ್ಧ ವಿಧಾನಸೌಧದಲ್ಲಿ ಕುಮಾರಸ್ವಾಮಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಭಾಗವಹಿಸಿದ್ದರು. ಅಷ್ಟೇ ಅಲ್ಲದೇ ಬಿಜೆಪಿ ಶಾಸಕರನ್ನು ಸದನದಿಂದ ಅಮಾನತು ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಡೆದ ಪ್ರತಿಭಟನೆಯಲ್ಲಿ ಕುಮಾರಸ್ವಾಮಿ ಭಾಗವಹಿಸಿದ್ದರು. ಹೀಗಾಗಿ ಎದ್ದಿದ್ದ ಹಲವು ಅನುಮಾನಗಳಿಗೆ ಈಗ ಸುನೀಲ್ ಕುಮಾರ್ ಉತ್ತರ ನೀಡಿದ್ದಾರೆ.
ಎರಡು ದಿನಗಳ ಹಿಂದೆ ಬೆಂಗಳೂರಿನಲ್ಲಿ ಮಾತನಾಡಿದ ಜೆಡಿಎಸ್ ವರಿಷ್ಠ ಹೆಚ್‌ಡಿ ದೇವೇಗೌಡ, ಲೋಕಸಭೆ ಚುನಾವಣೆಯಲ್ಲಿ ನಾವು ಯಾರೊಂದಿಗೂ ಮೈತ್ರಿ ಮಾಡಿಕೊಳ್ಳುವುದಿಲ್ಲ. ಸ್ವತಂತ್ರವಾಗಿಯೇ ಸ್ಪರ್ಧೆ ಮಾಡುತ್ತೇವೆ. ಸದನದಲ್ಲಿ ಮಾತಾಡಿದ ಮಾತ್ರಕ್ಕೆ ಎರಡು ಪಕ್ಷಗಳು ಒಂದುಗೂಡಬೇಕೆಂದೇನೂ ಇಲ್ಲ ಎಂದು ಹೇಳಿದ್ದರು.