ಯಾದಗಿರಿ: ಬಿಜೆಪಿ ಮತ್ತು ಕಾಂಗ್ರೆಸ್ ಕಾರ್ಯಕರ್ತರ ನಡುವೆ ಘರ್ಷಣೆ ಸಂಭವಿಸಿ ಕಲ್ಲು ತೂರಾಟ ನಡೆಸಿದ ಘಟನೆ ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ಕೋಡೆಕಲ್ಲ ಗ್ರಾಮದಲ್ಲಿ ನಡೆದಿದ್ದು, ಏಪ್ರಿಲ್ 6 ರಿಂದ 8ರ ಸಂಜೆ 8ರ ವರಗೆ ಸುರಪುರ ಕ್ಷೇತ್ರದಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ.
ಕೋಡೆಕಲ್ಲ ಗ್ರಾಮದಲ್ಲಿ ಗುರುವಾರ ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕ ಸೇರಿದಂತೆ ಬೆಂಬಲಿಗರು ಕಾರಿನ ಜೋರಾಗಿ ಹಾರ್ನ್ ಮಾಡಿಕೊಂಡು ತೆರಳುತ್ತಿದ್ದರು. ಇದನ್ನು ಬಿಜೆಪಿ ಕಾರ್ಯಕರ್ತರು ಆಕ್ಷೇಪಿಸಿದ್ದರಿಂದ ಗಲಾಟೆ ನಡೆದಿತ್ತು. ಬಿಜೆಪಿ- ಕಾಂಗ್ರೆಸ್ ಕಾರ್ಯಕರ್ತರು ಪರಸ್ಪರ ಕಲ್ಲು ತೂರಾಟ ನಡೆಸಿದ್ದರು. ಈ ಸಂಬಂಧ ಈಗಾಗಲೇ 18 ಜನರ ವಿರುದ್ಧ ಪ್ರಕರಣ ದಾಖಲಾಗಿದೆ. ಗಲಾಟೆ ಸಂಬಂಧ ನಾಲ್ಕು ಪ್ರಕರಣಗಳನ್ನು ದಾಖಲಿಸಲಾಗಿದೆ. ಪ್ರಕರಣದಲ್ಲಿ 120 ಜನ ಆರೋಪಿಗಳು ಭಾಗಿಯಾಗಿದ್ದು, ಬಂಧನ ಕಾರ್ಯ ಮುಂದುವರಿದಿದೆ. ಸದ್ಯಕ್ಕೆ ಸ್ಥಳದಲ್ಲಿ ಪರಿಸ್ಥಿತಿ ಶಾಂತವಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಿ.ಬಿ.ವೇದಮೂರ್ತಿ ತಿಳಿಸಿದ್ದಾರೆ.
ಕಲಬುರಗಿ ಈಶಾನ್ಯ ವಲಯ ವಿಭಾಗೀಯ ಐಜಿಪಿ ಅನುಪಮ ಅಗರ್ವಾಲ್ ನಿನ್ನೆ ರಾತ್ರಿಯಿಂದಲೂ ಕೊಡೆಕಲ್’ನಲ್ಲೇ ಮೊಕ್ಕಾಂ ಹೂಡಿದ್ದಾರೆ.
ಮೂರು ಕೆಎಸ್ ಆರ್ ಪಿ ಮತ್ತು ಒಂದು ಪ್ಯಾರಾ ಮಿಲಿಟರಿ ಫೋರ್ಸ್ ಕಂಪನಿ, ಇಬ್ಬರು ಡಿಎಸ್ ಪಿ, 100 ಕಾನ್ ಸ್ಟೆಬಲ್, ಐದು ಸಿಪಿಐ ಮತ್ತು 10 ಪಿಎಸ್ ಐ ಅವರನ್ನು ಭದ್ರತೆಗೆ ನಿಯೋಜಿಸಲಾಗಿದೆ.