ಕರ್ನಾಟಕ ಕಾಶ್ಮೀರ ಕೊಡಗನ್ನು ಜಮ್ಮು – ಕಾಶ್ಮೀರ ಮಾಡುತ್ತಿರುವ ಬಿಜೆಪಿ, ಕಾಂಗ್ರೆಸ್: ಎಚ್.ಡಿ.ಕುಮಾರಸ್ವಾಮಿ ಕಿಡಿ

Prasthutha|

ಬೆಂಗಳೂರು: ಕೊಡಗಿನಲ್ಲಿ ಎರಡೂ ರಾಷ್ಟ್ರೀಯ ಪಕ್ಷಗಳು ಅಲ್ಲಿನ ಜನರ ಬದುಕಿನ ಜತೆ ಚೆಲ್ಲಾಟ ಆಡುತ್ತಿದ್ದು, ಪ್ರಕೃತಿ ಸೌಂದರ್ಯದ ಕರ್ನಾಟಕದ ಕಾಶ್ಮೀರವನ್ನು ಜಮ್ಮು ಮತ್ತು ಕಾಶ್ಮೀರವನ್ನಾಗಿ ಮಾಡಲು ಹೊರಟಿವೆ ಎಂದು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪಕ್ಷದ ಕಚೇರಿ ಜೆಪಿ ಭವನದಲ್ಲಿ ಇಂದು ಕೊಡಗು ಜಿಲ್ಲೆಯ ಮುಖಂಡರ ಜೊತೆ ಪಕ್ಷ ಸಂಘಟನೆ ಕುರಿತು ಸಭೆ ನಡೆಸಿದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು ಅವರು, ಕೊಡಗಿನಲ್ಲಿ ಶಾಂತಿ ಕಾಪಾಡಲು ನಮ್ಮ ಕಾರ್ಯಕರ್ತರಿಗೆ ಸೂಚನೆ ನೀಡಿದ್ದೇನೆ. ಜತೆಗೆ ಜಾಗೃತಿ ಮೂಡಿಸುವ ಕೆಲಸ ಮಾಡಿ ಎಂದಿದ್ದೇನೆ. ಸರಕಾರ ಜಾರಿ ಮಾಡಿರುವ ನಿಷೇಧಾಜ್ಞೆ ತೆರವಾದ ನಂತರ ಮಡಿಕೇರಿಯಲ್ಲಿ ಸರ್ವಜನಾಂಗದ ಶಾಂತಿಯ ತೋಟ ಸಮಾವೇಶ ಹಮ್ಮಿಕೊಳ್ಳಲಾಗುವುದು ಎಂದು ಮಾಜಿ ಮುಖ್ಯಮಂತ್ರಿಗಳು ಹೇಳಿದರು.

- Advertisement -

ಕರಾವಳಿಯ ರೀತಿಯಲ್ಲೇ ಕೊಡಗಿನಲ್ಲಿಯೂ ಸಾಮರಸ್ಯಕ್ಕೆ ಧಕ್ಕೆ ತರುವ ಕೆಲಸ ಆಗುತ್ತಿದೆ. ಇದಕ್ಕೆ ಪ್ರೋತ್ಸಾಹ ಕೊಡಬೇಡಿ ಎಂದು ನಮ್ಮ ಪಕ್ಷದ ಕಾರ್ಯಕರ್ತರಿಗೆ ಹೇಳಿದ್ದೇನೆ ಎಂದರು ಅವರು.
ಸೌಹಾರ್ದಯುತ ನಾಡಿನ ಜನತೆಗೆ ಜಾಗೃತಿ ಮೂಡಿಸಬೇಕು. ಜನ ಶಾಂತಿಯಿಂದ ಬದುಕಲು ಕಾಪಾಡಬೇಕು. ಕೊಡಗಿನಲ್ಲಿ 144 ಸೆಕ್ಷನ್ ಮುಗಿದ ನಂತರ ನಾನು ಮತ್ತು ನಮ್ಮ ಪಕ್ಷದ ಅಧ್ಯಕ್ಷರಾದ ಸಿಎಂ ಇಬ್ರಾಹಿಂ ಸೇರಿ ಕೊಡಗಿಗೆ ಹೋಗುತ್ತೇವೆ. ಶಾಂತಿ ಸಭೆ ನಡೆಸುತ್ತಿವೆ ಎಂದು ಹೇಳಿದರು.

ಕೊಡಗಿನಲ್ಲಿ ಇತಿಹಾಸ ಕೆದಕಿ ಕಚ್ಚಾಡುವುದು ಬೇಡ. ಹಿಂಸೆ ಯಾರಿಗೂ ಒಳ್ಳೆಯದಲ್ಲ.

- Advertisement -

ದೇಶಕ್ಕೆ ಮಹಾವೀರರನ್ನು ಕೊಟ್ಟ ನೆಲದಲ್ಲಿ ಕ್ಷುಲ್ಲಕ ವಿಷಯಗಳ ವಿಜೃಂಭಣೆ ನಡೆಯುತ್ತಿದೆ. ಕಾಂಗ್ರೆಸ್, ಬಿಜೆಪಿ ಪಕ್ಷಗಳು ರಾಜಕೀಯಕ್ಕಾಗಿ ಇಂಥ ಒಡಕು ಮೂಡಿಸುತ್ತಿವೆ ಎಂದು ಕುಮಾರಸ್ವಾಮಿ ಅವರು ಆರೋಪಿಸಿದರು.

ಕೊಡಗು ಪ್ರತಿ ವರ್ಷ ಮಳೆ, ನೆರೆಯಿಂದ ಸಂಕಷ್ಟ ಅನುಭವಿಸುತ್ತಿದೆ. ಪ್ರವಾಸೋದ್ಯಮಕ್ಕೆ ದೊಡ್ಡ ಹೊಡೆತ ಬಿದ್ದಿದೆ. ಹೋಂ ಸ್ಟೇ ಗಳು ಖಾಲಿ ಬಿದ್ದಿವೆ. ಜನರ ಬದುಕು ಕಷ್ಟದಲ್ಲಿದೆ. ಇದಕ್ಕೆ ಪರಿಹಾರ ಕಂಡುಕೊಳ್ಳುವುದು ಸರಕಾರದ ಕರ್ತವ್ಯ. ಆದರೆ, ಆಡಳಿತಾರೂಢ ಬಿಜೆಪಿ, ಪ್ರತಿಪಕ್ಷ ಕಾಂಗ್ರೆಸ್ ಕೇವಲ ಕೊಡಗನ್ನು ಕೋಮು ದಳ್ಳುರಿಗೆ ತಳ್ಳುವ ಕೆಲಸ ಮಾಡುತ್ತಿವೆ ಎಂದು ಮಾಜಿ ಮುಖ್ಯಮಂತ್ರಿಗಳು ಕಿಡಿ ಕಾರಿದರು.

ಕೊಡಗಿನಲ್ಲಿ ಪಕ್ಷ ಸಂಘಟನೆ ಬಗ್ಗೆ ಚರ್ಚೆ:

ಸದ್ಯದ ಪರಿಸ್ಥಿತಿ ಬಗ್ಗೆ ಕೊಡಗು ಜಿಲ್ಲೆಯ ಮುಖಂಡರ ಸಭೆ ನಡೆಸಿದ್ದೇನೆ. ಮುಂದೆ ಪಕ್ಷ ಸಂಘಟನೆ ಹೇಗೆ ಮಾಡಬೇಕೆಂದು ಚರ್ಚೆ ಮಾಡಿದ್ದೇನೆ. ಸದ್ಯದ ಪರಿಸ್ಥಿತಿ, ಮೂರುವರೆ ವರ್ಷಗಳಿಂದ ಕುಂಠಿತಗೊಂಡಿದ್ದ ಸಂಘಟನೆ ಬಗ್ಗೆ ಪ್ರತಿಯೊಬ್ಬರಿಂದ ಅಭಿಪ್ರಾಯ ಸಂಗ್ರಹ ಮಾಡಿರುವುದಾಗಿ ಕುಮಾರಸ್ವಾಮಿ ತಿಳಿಸಿದರು.
ಶಾಂತಿ ಸೌಹಾರ್ದತೆಯ ನೆಲದಲ್ಲಿ ನಡೆದ ಒಂದು ಮೊಟ್ಟೆಯ ಕಥೆ ಹಿಡಿದ ಕಾಂಗ್ರೆಸ್. 2009-10 ರಲ್ಲಿ ಮಲ್ಲಯುದ್ದದಂತೆ ಕೈ ಕೈ ಮಿಲಾಯಿಸುವ ಹಂತ ತಲುಪಿತ್ತಲ್ಲ ಅದು ನೆನಪಾಯಿತು.
ಬಳ್ಳಾರಿ ಪಾದಯಾತ್ರೆಯಂತೆ ಇಲ್ಲಿ ಪಾದಯಾತ್ರೆ ನಡೆಸಿ ಕಾಂಗ್ರೆಸ್ ಅಧಿಕಾರ ಹಿಡಿಯುವ ಭ್ರಮೆಯಲ್ಲಿದ್ದಾರೆ ಎಂದು ಕುಮಾರಸ್ವಾಮಿ ಅವರು ಲೇವಡಿ ಮಾಡಿದರು.

ಕಾಂಗ್ರೆಸ್ ನಾಯಕರು ಬಿಜೆಪಿ ವಿರುದ್ದ ದಂಗೆ ಎಬ್ಬಿಸುವ ಭ್ರಮೆಯಲ್ಲಿ ಇದ್ದಾರೆ ಎಂದು ವ್ಯಂಗ್ಯವಾಡಿದ ಹೆಚ್ ಡಿಕೆ, ಇದಕ್ಕೆ ಪ್ರತಿಯಾಗಿ ಬಿಜೆಪಿಯವರು ಜನಾಂದೋಲನ ಅಂದರು. ಸದ್ಯ 144 ಸೆಕ್ಷನ್ ಜಾರಿಯಲ್ಲಿದೆ. ಆದರೆ, ಕಾಂಗ್ರೆಸ್ ಅಶಾಂತಿ ಮೂಡಿಸಿ, ವಾತವರಣ ಕಲುಷಿತಗೊಳಿಸುವ ಹುನ್ನಾರದ ಬಗ್ಗೆ ನಾವು ಜನಜಾಗೃತಿ ಮೂಡಿಸಲು ಹೇಳಿದ್ದೇವೆ. ಕೊಡಗಿನ ಸಾಮರಸ್ಯಕ್ಕೆ ಧಕ್ಕೆ ತರುವ ಕೆಲಸ ಎರಡೂ ಪಕ್ಷಗಳು ಮಾಡುತ್ತಿವೆ. ಈ ಬಗ್ಗೆ ಜನಜಾಗೃತಿ ಮೂಡಿಸಿ ಸಂಘಟನೆ ಮಾಡಲು ನಮ್ಮ ಕಾರ್ಯಕರ್ತರಿಗೆ ಸೂಚನೆ ನೀಡಿದ್ದೇವೆ ಎಂದು ಹೇಳಿದರು.

ಪಾದಯಾತ್ರೆಯಿಂದ ಏನು ಸಾಧನೆ ಮಾಡ್ತಾರೆ, ಇದೇನು ಸಾರ್ವಜನಿಕರಿಗೆ ಆಗಿರುವ ತೊಂದರೆನಾ?. ಹಿಂದೆ ಟೊಮೊಟೊ,ಚಪ್ಪಲಿ ತೂರಿರುವ ಉದಾಹರಣೆ ಇಲ್ಲವೇ. ಪಾದಯಾತ್ರೆಯಿಂದ ಯುದ್ದ ಸಾರಿದ ಉದಾಹರಣೆ ನೋಡಿಲ್ಲ. ಪಾದಯಾತ್ರೆ ಮೂಲಕ ಯುದ್ಧ ಸಾರಿದ್ದು ಎಲ್ಲೂ ನೋಡಿಲ್ಲ.

ದೇನು ಪಾಕಿಸ್ತಾನ-ಭಾರತ ಯುದ್ಧವೇ? ಉಕ್ರೇನ್- ರಷ್ಯಾ ಯುದ್ಧವೇ? ಮೊಟ್ಟೆ ಎಸೆತ ಅಂತ ಪ್ರತಿಷ್ಠೆಗೆ ತೆಗದುಕೊಂಡು ಸಂಘರ್ಷ ಮಾಡುವ ಬದಲು ಅಭಿವೃದ್ಧಿ ಬಗ್ಗೆ ಮಾತಾಡಿ, ಸರ್ಕಾರದ ವೈಪಲ್ಯಗಳ ಬಗ್ಗೆ ಮಾತಾಡಿ. ಇದರಿಂದ ಸಾರ್ವಜನಿಕರಿಗೆ ಆದ ಸಮಸ್ಯೆ ಏನು?. ಬೆಳೆ ಹಾನಿ ಪರಿಹಾರ ಇಲ್ಲ, ಒಂದು ಮನೆ ಕಟ್ಟಲಿಲ್ಲ, ಕೊರೊನಾ ಪರಿಹಾರ ಏನಾಗಿದೆ. ಈ ವಿಚಾರವಾಗಿ ಪಾದಯಾತ್ರೆ ಮಾಡಿ. ಸರ್ಕಾರದ ವೈಫಲ್ಯದ ವಿರುದ್ದ ಮೈಸೂರಿನಿಂದ ಪಾದಯಾತ್ರೆ ಮಾಡಿ ನಾವು ಕೈ ಜೋಡಿಸುತ್ತೇವೆ ಎಂದು ಕಾಂಗ್ರೆಸ್ ನಾಯಕರಿಗೆ ಸಲಹೆ ನೀಡಿದರು.
ಪಕ್ಷದ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಅವರು ಹಾಜರಿದ್ದರು.



Join Whatsapp