ಪಿಎಸ್ಐ ಅಕ್ರಮದಲ್ಲಿ ಬಿಜೆಪಿ- ಕಾಂಗ್ರೆಸ್ ನದ್ದು ಜಂಟಿ ದರೋಡೆ: SDPI ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್

Prasthutha|

ಮಂಗಳೂರು: ಪಿಎಸ್ ಐ ನೇಮಕಾತಿಯಲ್ಲಿ ಅಕ್ರಮ ನಡೆದಿರುವ ವಿಚಾರವಾಗಿ ಪ್ರತಕ್ರಿಯಿಸಿರುವ SDPI ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್, ಪಿಎಸ್ಐ ಅಕ್ರಮದಲ್ಲಿ ಬಿಜೆಪಿ- ಕಾಂಗ್ರೆಸ್ ನದ್ದು ಜಂಟಿ ದರೋಡೆ ನಡೆಸಿದೆ ಎಂದು ಆರೋಪಿಸಿದ್ದಾರೆ. ರಾಜ್ಯವನ್ನು ಎರಡು ರಾಷ್ಟ್ರೀಯ ಪಕ್ಷಗಳು ಲೂಟಿ ಮಾಡಲು ಹೊರಟಿದ್ದು, ಪ್ರಕರಣದಲ್ಲಿ ಎರಡು ಪಕ್ಷಗಳೂ ಒಪ್ಪಂದ ಮಾಡಿಕೊಂಡಿರುವ ಶಂಕೆಯಿದೆ ಎಂದು ಹೇಳಿದ್ದಾರೆ.

- Advertisement -

ಮಂಗಳೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಲಂಚ ಕೊಟ್ಟು ಬಂದ ಪಿಎಸ್ಐ ನ್ಯಾಯದ ಪರ ನಿಲ್ಲಲು ಸಾಧ್ಯವಿಲ್ಲ, ಸುಧಾರಿತ ಕ್ರಮಗಳಿದ್ದರೂ ಇನ್ನೂ OMR ಶೀಟ್ ಪದ್ಧತಿ ಯಾಕೆ ಎಂದು ಪ್ರಶ್ನಿಸಿದ್ದಾರೆ. ರಾಜ್ಯದಲ್ಲಿನ ಬೊಮ್ಮಾಯಿ ಸರಕಾರ ಜನರ ನಂಬಿಕೆಗೆ ಅನರ್ಹವಾಗಿದ್ದು,ರಾಜ್ಯ ಬಿಜೆಪಿ ಸರಕಾರದ ವಿರುದ್ಧ ಇಂದಿನಿಂದ ಮೇ 10 ರ ವರೆಗೆ ರಾಜ್ಯಾದ್ಯಂತ ಅಭಿಯಾನ ನಡೆಸುತ್ತೇವೆ ಎಂದರು. ಅಲ್ಲದೇ ಬಿಜೆಪಿ ಸರಕಾರವನ್ನು ವಜಾಗೊಳಿಸಿ ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಹೇರುವಂತೆ ಮಜೀದ್ ಒತ್ತಾಯಿಸಿದ್ದಾರೆ.

ರಾಜ್ಯದಲ್ಲಿ PFI, SDPI ಬ್ಯಾನ್ ಸಾಧ್ಯತೆ ವಿಚಾರದ ಕುರಿತಾದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಬಿಜೆಪಿ, ಸಂಘ ಪರಿವಾರದವರು ಅಜ್ಞಾನಿಗಳು ಅವರು ಬ್ಯಾನ್ ಗೆ ಒತ್ತಾಯಿಸುವುದರಲ್ಲಿ ಅಚ್ಚರಿಯಿಲ್ಲ, ಆದರೆ ಸಿದ್ದರಾಮಯ್ಯನವರು ಯಾಕಾಗಿ ಇಂತಹದ್ದಕ್ಕೆ ಧ್ವನಿಗೂಡಿಸುತ್ತಿದ್ದಾರೆ ಎಂದು ತಿಳಿದಿಲ್ಲ, ಸಿದ್ದರಾಮಯ್ಯ ರಾಜ್ಯದ ಮುಖ್ಯಮಂತ್ರಿಯಾಗಿದ್ದವರು, SDPI, PFI ಅನ್ನು ಯಾಕೆ ಬ್ಯಾನ್ ಮಾಡ್ಬೇಕು ಅನ್ನೋದನ್ನು ಸಿದ್ದರಾಮಯ್ಯ ಹೇಳಲಿ ಎಂದು ಸವಾಲೆಸೆದಿದ್ದಾರೆ.

- Advertisement -

ಕೇಂದ್ರದಲ್ಲಿ ಕಾಂಗ್ರೆಸ್ ಸರಕಾರವಿದ್ದಾಗಲೇ ಗುಜರಾತ್ ಹತ್ಯಾಕಾಂಡ ನಡೆದಿತ್ತು. ಮಾಯಾ ಕೊಡ್ನಾನಿ, ಬಾಬು ಬಜರಂಗಿಯಂತವರಿಗೆ ಜೈಲು ಶಿಕ್ಷೆಯಾಗಿತ್ತು. ಆ ಸಂದರ್ಭ ಯುಪಿಎ ಸರಕಾರ ಯಾಕಾಗಿ ಬ್ಯಾನ್‌ ಬಗ್ಗೆ ಮಾತಾಡಿಲ್ಲ, 1984ರ ಸಿಖ್ಖರ ದಂಗೆಗೆ ಕಾಂಗ್ರೆಸನ್ನು ಬ್ಯಾನ್ ಮಾಡಬೇಕೆ ಎಂದು ಪ್ರಶ್ನಿಸಿದ್ದಾರೆ. ಜವಾಬ್ದಾರಿಯುತ ಸ್ಥಾನದಲ್ಲಿರುವವರು ಜವಾಬ್ದಾರಿಯನ್ನರಿತು ಹೇಳಿಕೆ ನೀಡಲಿ ಎಂದು ಹೇಳಿದ್ದಾರೆ.

ಜ್ಯುವೆಲ್ಲರಿ ಬಹಿಷ್ಕಾರಕ್ಕೆ ಪ್ರಮೋದ್ ಮುತಾಲಿಕ್ ಕರೆ ನೀಡಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅಬ್ದುಲ್ ಮಜೀದ್, ವ್ಯಾಪಾರ ನಿಷೇಧ ಕರೆ ನೀಡಲು ಪ್ರಮೋದ್ ಮುತಾಲಿಕ್ ಯಾರು ? ಮುತಾಲಿಕ್ ಗೆ ಯಾಕಾಗಿ ಅಷ್ಟೊಂದು ಪ್ರಚಾರ ಎಂದು ಪ್ರಶ್ನಿಸಿದ್ದಾರೆ. ಮುತಾಲಿಕ್ ದೇಶ ವಿರೋಧಿ, ಮನುಷ್ಯ ವಿರೋಧಿ ವ್ಯಕ್ತಿ, ಮುಸ್ಲಿಂ ದ್ವೇಷವೇ ಇವನ ರಾಜಕೀಯ ಅಜೆಂಡಾ. ಮಾಧ್ಯಮಗಳು ಇಂತವರಿಗೆ ಪ್ರಚಾರ ನೀಡಬಾರದು.ಇಂತಹವರ ವಿರುದ್ಧ ರಾಜ್ಯ ಪೊಲೀಸ್ ಸುಮೊಟೋ ಕೇಸ್ ದಾಖಲಿಸಬೇಕು ಎಂದು ಆಗ್ರಹಿಸಿದ್ದಾರೆ.



Join Whatsapp