ಬಿಜೆಪಿ- ಕಾಂಗ್ರೆಸ್ ಡಬಲ್ ಗೇಮ್ ನಿಂದ ಮುಸ್ಲಿಮರು ಅತಂತ್ರ: ಬಿ.ಎಂ.ಫಾರೂಕ್

Prasthutha|

ಬೆಂಗಳೂರು : ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಪಕ್ಷಗಳೂ ಮುಸ್ಲಿಮರ ಹಿತಾಸಕ್ತಿಯನ್ನು ರಕ್ಷಿಸಲು ವಿಫಲವಾಗಿವೆ. ಬಿಜೆಪಿ ಕೋಮುವಾದ ಮತ್ತು ಮತೀಯವಾದಿ ಶಕ್ತಿಗಳನ್ನು ಮುಸ್ಲಿಮರ ವಿರುದ್ಧ ಎತ್ತಿ ಕಟ್ಟುತ್ತಿದ್ದರೆ, ಕಾಂಗ್ರೆಸ್ ಮುಸ್ಲಿಮರನ್ನು ಎತ್ತಿ ಕಟ್ಟಿ ರಾಜಕೀಯ ಮಾಡುತ್ತಿದೆ ಎಂದು ವಿಧಾನ ಪರಿಷತ್ ಸದಸ್ಯ ಬಿ.ಎಂ.ಫಾರೂಕ್ ವಾಗ್ದಾಳಿ ನಡೆಸಿದ್ದಾರೆ.

- Advertisement -


ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಫಾರೂಕ್, ಕಾಂಗ್ರೆಸ್ ಮತ್ತು ಬಿಜೆಪಿಗೆ ವ್ಯತ್ಯಾಸವೇನೂ ಇಲ್ಲ. ಆರೆಸ್ಸೆಸ್ ಬೆಳೆದರೆ ಕಾಂಗ್ರೆಸ್ ಗೆ ಹೆಚ್ಚು ಲಾಭ. ಆರೆಸ್ಸೆಸ್ ಎಂಬ ಗುಮ್ಮವನ್ನು ತೋರಿಸಿ ಕಾಂಗ್ರೆಸ್ ನವರು ಮುಸ್ಲಿಮರ ಮತಗಳನ್ನು ಸುಲಭವಾಗಿ ಪಡೆಯುತ್ತಾರೆ. ಆರೆಸ್ಸೆಸ್ ಇಲ್ಲ ಎ೦ದರೆ ಕಾಂಗ್ರೆಸ್‌ಗೆ ಬೆಲೆಯೇ ಇಲ್ಲ. ಅದಕ್ಕಾಗಿ ಕಾಂಗ್ರೆಸ್ ಕೂಡ ಆರೆಸ್ಸೆಸ್ ಗೆ ಪರೋಕ್ಷವಾಗಿ ಬೆಂಬಲ ಕೊಡುತ್ತಾ ಬಂದಿದೆ ಎಂದು ಈಗ ಮುಸ್ಲಿಮರ ವಿರುದ್ಧ ಮೊಸಳೆ ಕಣ್ಣೀರು ಸುರಿಸುತ್ತಿರುವ ಕಾಂಗ್ರೆಸ್ ನಾಯಕರು ಇತಿಹಾಸವನ್ನು ಒಮ್ಮೆ ತಿರುಗಿ ನೋಡಿದರೆ ಮುಸ್ಲಿಮರಿಗೆ ರಾಜಕೀಯವಾಗಿ ಮೋಸ ಮಾಡಿದ ಎಷ್ಟೊಂದು ಪ್ರಕರಣಗಳಿವೆ ಎನ್ನುವುದು ಗೊತ್ತಾಗುತ್ತದೆ ಎಂದು ಹೇಳಿದರು.


ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಮತ್ತು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿಯವರು ಹಿಂದೆ ನನ್ನನ್ನು ಜೆಡಿಎಸ್ ನ ರಾಜ್ಯಸಭಾ ಅಭ್ಯರ್ಥಿಯನ್ನಾಗಿಸಿದಾಗ ಇದೇ ಸಿದ್ದರಾಮಯ್ಯ ನೇತೃತ್ವದಲ್ಲಿ ಜಮೀರ್ ಅಹ್ಮದ್ ಮತ್ತು ಅವರ ಇತರ ಶಾಸಕ ಮಿತ್ರರು ಪಕ್ಷಾಂತರ ಮಾಡಿ ಸೋಲಿಸಿದ್ದು ಎಲ್ಲರಿಗೂ ಗೊತ್ತಿರುವ ಸಂಗತಿ. ಈಗ ನನ್ನ ಬಗ್ಗೆ ಜಮೀರ್ ಅಹ್ಮದ್ ಅವರು ಅನುಕಂಪ ವ್ಯಕ್ತಪಡಿಸುವುದಕ್ಕೆ ಅರ್ಥವಿಲ್ಲ. ಆರಂಭದಲ್ಲಿ ಎರಡೇ ಅಭ್ಯರ್ಥಿಗಳನ್ನು ನಿಲ್ಲಿಸಲು ಕಾಂಗ್ರೆಸ್ ನಿರ್ಧರಿಸಿತ್ತು. ಆಗ ನಾನು ರಾಜ್ಯಸಭೆ ಸದಸ್ಯನಾದರೆ ಮುಸ್ಲಿಮರಿಗೆ ಏನಾದರೂ ಸ್ವಲ್ಪ ಹೆಚ್ಚು ನೆರವಾಗಬಹುದು ಎಂದು ರಾಜ್ಯ ಸಭಾ ಚುನಾವಣೆಗೆ ಜೆಡಿಎಸ್ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕಿಳಿಸಿದರು. ಆದರೆ ಕಾಂಗ್ರೆಸ್ ನವರು ಬಿಡಲಿಲ್ಲ. ನನ್ನನ್ನು ಸೋಲಿಸಲು 100 ಕೋಟಿ ಖರ್ಚು ಮಾಡಿದರಂತೆ. ನಾನು ಏನು ಅಂತಹ ತಪ್ಪು ಮಾಡಿದ್ದೆ? ಅವರ ಪಕ್ಷದಲ್ಲಿ ಮುಸ್ಲಿಮರಿಗೆ ರಾಜ್ಯಸಭಾ ಟಿಕೆಟ್ ಕೊಡಲಿಲ್ಲ. ಜೆಡಿಎಸ್ ಕೊಟ್ಟರೆ ಸಹಿಸುವುದಿಲ್ಲ ಅಂದರೆ ಏನರ್ಥ ? ಎಂದು ಫಾರೂಕ್ ಪ್ರಶ್ನಿಸಿದರು.

- Advertisement -


ಒಬ್ಬ ಮುಸ್ಲಿಂ ಅಭ್ಯರ್ಥಿ ರಾಜ್ಯಸಭೆಗೆ ಹೋಗದಂತೆ ಪಿತೂರಿ ಮಾಡಿದ್ದು ಸಿದ್ದರಾಮಯ್ಯ ಮತ್ತು ಜಮೀರ್ ಅಹ್ಮದ್, ನನ್ನ ವಿರುದ್ಧವಾಗಿ ಅವರು ರಾಜ್ಯಸಭೆಗೆ ಟಿಕೆಟ್ ಕೊಟ್ಟು ಗೆಲ್ಲಿಸಿದ ಅಭ್ಯರ್ಥಿ ಕೆ.ಸಿ.ರಾಮಮೂರ್ತಿ ಅವರು ಮಧ್ಯದಲ್ಲೇ ಕಾಂಗ್ರೆಸ್ ಗೆ ರಾಜೀನಾಮೆ ಕೊಟ್ಟು ಬಿಜೆಪಿಗೆ ಸೇರಿದ್ದು ಈಗ ಬಿಜೆಪಿಯಿಂದ ರಾಜ್ಯಸಭಾ ಸದಸ್ಯರಾಗಿದ್ದಾರೆ.

ಇದು ಏನನ್ನು ಸೂಚಿಸುತ್ತದೆ? ಕಾಂಗ್ರೆಸ್ ಪಕ್ಷವೇ ಬಿಜೆಪಿ ಗೆ ಅನುಕೂಲ ಮಾಡಿಕೊಡುತ್ತದೆ ಎನ್ನುವುದು ಇದರಿಂದ ಗೊತ್ತಾಗುವ ಸತ್ಯ. ನಾನು ಹಿಂದೆಯೂ ಜೆಡಿಎಸ್ ಪಕ್ಷ ನಿಷ್ಠೆಯಿದ್ದವನು. ರಾಜ್ಯಸಭಾ ಚುನಾವಣೆ ವೇಳೆ ಕಾಂಗ್ರೆಸ್ ನಲ್ಲಿ ಸ್ವತಃ ನನ್ನ ಅಣ್ಣ ಮೊಯ್ದಿನ್ ಬಾವಾ ಶಾಸಕರಾಗಿದ್ದರೂ ನಾನು ಅವರ ಮತವನ್ನು ಕ್ರಾಸ್ ವೋಟ್ ಮಾಡಿಸಲಿಲ್ಲ. ಈಗಲೂ ನಾನು ಜೆಡಿಎಸ್ ನಲ್ಲಿ ದೇವೇಗೌಡರು ಮತ್ತು ಕುಮಾರಸ್ವಾಮಿ ಅವರ ಜೊತೆಗೆ ಗಟ್ಟಿಯಾಗಿ ನಿಂತಿದ್ದೇನೆ. ಜಮೀರ್ ಮತ್ತು ಇತರರ ಹಾಗೆ ಅಧಿಕಾರಕ್ಕಾಗಿ ಪಕ್ಷಾಂತರ ಮಾಡುವವನು ನಾನಲ್ಲ. ಕಾಂಗ್ರೆಸ್‌ನಲ್ಲಿ ಇರುವವರೆಲ್ಲ ದೊಡ್ಡ ಮುಸ್ಲಿಂ ಇವರು ಮುಸ್ಲಿಮರಿಗಾಗಿ ಮಾಡಿದ್ದೇನು? ಎಂದು ಪ್ರಶ್ನಿಸಿದರು.


ಪ್ರಧಾನಿಯಾಗಿದ್ದ ರಾಜೀವ್ ಗಾಂಧಿ ಅಯೋಧ್ಯೆಯಲ್ಲಿ ಬಾಬರಿ ಮಸೀದಿಯ ವಿವಾದಿತ ಸ್ಥಳದ ಬೀಗ ತೆಗೆದಾಗ ಈ ಮುಸ್ಲಿಂ ನಾಯಕರು ತುಟಿ ಬಿಚ್ಚಲಿಲ್ಲ. ಆಮೇಲೆ ಇದೇ ಕಾಂಗ್ರೆಸ್ ನ ಪ್ರಧಾನಿ ನರಸಿಂಹರಾಯರು ಬಾಬರಿ ಮಸೀದಿಯನ್ನು ಆರೆಸ್ಸೆಸ್ ನವರು ಹಾಡಹಗಲೇ ಒಡೆದು ಹಾಕಿದಾಗ ಬಾಯಿ ಮುಚ್ಚಿಕೊಂಡು ಸುಮ್ಮನೆ ಕುಳಿತಿದ್ದರು. ಆರೆಸ್ಸೆಸ್ ಮತ್ತು ಬಿಜೆಪಿ ಜೊತೆಗೂಡಿ ಹೂಡಿದ ಸಂಚು ಅದು. ಆಗ ಇದೇ ಕಾಂಗ್ರೆಸ್ ನ ನಾಯಕ ಜಾಫರ್ ಷರೀಫ್ ಕೇಂದ್ರ ಮಂತ್ರಿ ಮಂಡಲದಲ್ಲಿ ಸಚಿವರಾಗಿದ್ದರು. ಅವರೇನಾದರೂ ಇದನ್ನು ಪ್ರತಿಭಟಿಸಿ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟರೆ? ಅವರೂ ಕಣ್ಣು ಮುಚ್ಚಿಕೊಂಡು ಕುಳಿತಿದ್ದರು ಎಂದು ಫಾರೂಕ್ ವಾಗ್ದಾಳಿ ನಡೆಸಿದರು.


ಒಬ್ಬ ಮುಸ್ಲಿಂ ನಾಯಕರು 4 ದಶಕಗಳ ಕಾಲ ಕೇಂದ್ರ ಸರಕಾರದಲ್ಲಿ ಅಧಿಕಾರ ಹಿಡಿದು ಕೂತಿದ್ದರಲ್ಲ. ಮುಸ್ಲಿಮರಿಗೆ ಇವರು ಮಾಡಿರುವ ಉಪಕಾರ ಏನಿದೆ? ಕಾಂಗ್ರೆಸ್ ನ ಮುಸ್ಲಿಂ ನಾಯಕರ ಆಸ್ತಿ ಹೆಚ್ಚಾಯಿತೇ ಹೊರತು ಮುಸ್ಲಿಂ ಸಮುದಾಯಕ್ಕೆ ಏನಾದರೂ ಲಾಭ ಆಗಿದೆಯೆ? ಅಮಾನತ್ ಬ್ಯಾಂಕ್ ದಿವಾಳಿಯಾದಾಗ, ಐಎಂಎ ಪ್ರಕರಣದಲ್ಲಿ ಬಡ ಮತ್ತು ಮಧ್ಯಮ ವರ್ಗದ ಮುಸ್ಲಿಮರ ಕೋಟ್ಯಂತರ ರೂಪಾಯಿ ಹಣ ವಂಚನೆಯಾಗಲು ಇದೇ ಕಾಂಗ್ರೆಸ್ನ ಮುಸ್ಲಿಂ ನಾಯಕರು ಕಾರಣ ಎಂದು ಆರೋಪಿಸಿದರು.


ಕರಾವಳಿಯ ಕೆಲವು ಮುಸ್ಲಿಮ್ ನಾಯಕರು ಆರೆಸ್ಸೆಸ್ ಜೊತೆಗೆ ಕಣ್ಣಾಮುಚ್ಚಾಲೆ ಆಟ ನಡೆಸುತ್ತಿದ್ದಾರೆ. ಈಗ ಕುಮಾರಸ್ವಾಮಿಯವರು ಆರೆಸ್ಸೆಸ್ ಅನ್ನು ಟೀಕಿಸಿದಾಗ ಅವರು ಎಚ್ಚರವಾಗಿ ಕುಮಾರಸ್ವಾಮಿಯವರನ್ನು ಟೀಕಿಸುತ್ತಾರೆ. ಕರಾವಳಿಯಲ್ಲಿ ಆರೆಸ್ಸೆಸ್ ಬಲಗೊಳ್ಳಲು ಕಾಂಗ್ರೆಸ್ ನಾಯಕರೇ ಕಾರಣ, ನನಗೆ ರಾಜಕೀಯವಾಗಿ ನಾಟಕ ಮಾಡಲು ಬರುವುದಿಲ್ಲ. ನನ್ನನ್ನು ಮಂತ್ರಿ ಮಾಡಿ ಎಂದು ಮುಖ್ಯಮಂತಿಯಾಗಿದ್ದ ಕುಮಾರಸ್ವಾಮಿಯವರಿಗೆ ನಾನು ಯಾವತ್ತೂ ಕೇಳಿಕೊಂಡಿಲ್ಲ. ರಾಜಕೀಯದಲ್ಲಿ ಏನೇನೋ ನಡೆಯುತ್ತದೆ. ಅದಕ್ಕಲ್ಲ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ.

ಈಗ ನನ್ನ ಪರವಾಗಿ ಜಮೀರ್ ಬ್ಯಾಟಿಂಗ್ ಮಾಡುವ ಅಗತ್ಯವಿಲ್ಲ. ದೇವರು ಇಚ್ಛಿಸಿದರೆ ನಾನು ಯಾವತ್ತಾದರೂ ಮಂತ್ರಿಯಾಗುತ್ತೇನೆ. ಅದಕ್ಕಾಗಿ ಪಕ್ಷಾಂತರ ಮಾಡಿಸುವುದು. ಸುಳ್ಳು ಹೇಳುವುದು ಇದೆಲ್ಲ ನನಗೆ ಬರುವುದಿಲ್ಲ. ರಾಜ್ಯಸಭೆ ಟಿಕೆಟ್ ಕೊಡುತ್ತೇವೆ ಎಂದು ಮುಂಬೈಯಲ್ಲಿ ಇದ್ದ ನನ್ನನ್ನು ಕುಮಾರಣ್ಣ ಅವರು ಫೋನ್ ಮಾಡಿ ಕರೆಸಿಕೊಂಡಿದ್ದರು. ಜಮೀರ್ ಮತ್ತು ಇತರರು ಮುಸ್ಲಿಂ ಅಭ್ಯರ್ಥಿಯಾದ ನನಗೆ ದೋಖಾ ಮಾಡಿ ಕಾಂಗ್ರೆಸ್ ಗೆ ಹೋದರು. ಆಮೇಲೆ 2018 ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನ ಮುಸ್ಲಿಂ ಮುಖಂಡರ ಮೋಸದಿಂದಾಗಿ ನಾವು 30-35 ಸೀಟುಗಳನ್ನು ಕಳೆದುಕೊಂಡೆವು. ಹಿರಿಯ ಐಎಎಸ್ ಮತ್ತು ಕೆಲವು ನಿವೃತ್ತ ಅಧಿಕಾರಿಗಳ ಜೊತೆಗೂಡಿ ಸಿದ್ದರಾಮಯ್ಯ ಇದಕ್ಕೆ ಪಿತೂರಿ ನಡೆಸಿದರು. ಅಲ್ಪಸಂಖ್ಯಾತರನ್ನು ತಪ್ಪು ದಾರಿಗೆ ಎಳೆದರು. ಇದರಿಂದಾಗಿ ಬಿಜೆಪಿ ಆಗ 105 ಸ್ಥಾನ ಗೆಲ್ಲಲು ಕಾರಣವಾಯಿತು. ಈಗ ಮುಸ್ಲಿಮರ ಬಗ್ಗೆ ಇಷ್ಟು ಮಾತನಾಡುವ ಕಾಂಗ್ರೆಸ್ ನವರು ಮುಸ್ಲಿಮರನ್ನು ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಮಾಡಿದ್ದಾರೆಯೇ ? ಎಂದು ಪ್ರಶ್ನಿಸಿದರು.



Join Whatsapp